Advertisement

ಕೊರೋನ ಬಹಿರಂಗಗೊಳಿಸಿದ ಮೋದಿ ಸರಕಾರದ ಟೊಳ್ಳುತನ!

Advertisement

ಬರಹ: ನಿಖಿಲ್ ಕೋಲ್ಪೆ ಇಂದು ಭಾರತ ಕೊರೋನ ರೋಗಿಗಳ ಸಂಖ್ಯೆಯಲ್ಲಿ ಬ್ರೆಜಿಲನ್ನು ಹಿಂದಿಕ್ಕಿ ಎರಡನೆಯ ಸ್ಥಾನದಲ್ಲಿದೆ ಎಂಬುದು ಯಾವುದೇ ದೇಶಕ್ಕಾಗಲೀ, ಅಥವಾ ಅದನ್ನು ಮುನ್ನಡೆಸುವ ಸರಕಾರಕ್ಕಾಗಲೀ ಗೌರವ ತರುವ ವಿಷಯವೇನಲ್ಲ. ಆದರೂ, ನರೇಂದ್ರ ಮೋದಿ, ಅವರ ಸರಕಾರ ಮತ್ತು ಕುರುಡು ಅಭಿಮಾನಿಗಳು ಗುಣಮುಖರಾದವರ ಸಂಖ್ಯೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ ರೋಗ ತಗಲಿದವರ ಪ್ರಮಾಣ ಇತ್ಯಾದಿಯಾಗಿ ಅಂಕಿಅಂಶಗಳ ಕಣ್ಕಟ್ಟು ಮಾಡುತ್ತಾ, ಸರಕಾರ ಅಂದರೆ ಮೋದಿ ಅದ್ಭುತ ಕೆಲಸ ಮಾಡುತ್ತಿದ್ದಾರೆ; ಭಾರತ ಸರಕಾರ ಕೈಗೊಂಡ ಕ್ರಮಗಳು ವಿಶ್ವಕ್ಕೇ ಮಾದರಿಯಾಗಿದೆ ಎಂಬಿತ್ಯಾದಿ ಬೊಗಳೆ ಬಿಡುತ್ತಾ, ನಾಚಿಕೆ ಬಿಟ್ಟು ತಮ್ಮ ಬೆನ್ನನ್ನು ತಾವೇ ಕೆರೆದುಕೊಳ್ಳುತ್ತಿದ್ದಾರೆ. ವಾಸ್ತವ ಏನೆಂದು ಅವರಿಗೂ ಗೊತ್ತಿದೆ. ಕೇರಳದಂತಹ ರಾಜ್ಯಗಳು, ಕೆಲವು ಸ್ವಯಂಪ್ರೇರಿತ ದಾನಿಗಳು ಮತ್ತು ಹಲವಾರು ಸ್ವಯಂಸೇವಾ ಸಂಸ್ಥೆಗಳು ತಮ್ಮ ಶಕ್ತಿ ಮೀರಿ ಕೆಲಸ ಮಾಡದೇ ಹೋಗಿದ್ದರೆ, ಭಾರತ ಯಾವತ್ತೇ ನಂ. 1 ಪಟ್ಟಕ್ಕೆ ಏರುತ್ತಿತ್ತು ಹಾಗೂ, ಹಸಿವು ಮತ್ತು ಇತರ ರೋಗಗಳಿಂದ ಸಾಯುವವರ ಸಂಖ್ಯೆ ಗಣನೆಗೆ ಮೀರಿ ಏರುತ್ತಿತ್ತು. ಈಗಲೂ ಲಕ್ಷಾಂತರ ಜನರು ಕೋವಿಡ್ ಸೋಂಕು ಹೊಂದಿದ್ದು, ಪರೀಕ್ಷೆ ಇಲ್ಲದೆಯೇ ತಿರುಗಾಡುತ್ತಿರುವ ಸಾಧ್ಯತೆಗಳಿವೆ. ಅಂದಹಾಗೆ, ಮೋದಿ ಸರಕಾರ ಕೊರೋನ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಅಷ್ಟಕ್ಕೂ ಅದು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿದೆಯೇ ಎಂಬುದನ್ನು ತೀರಾ ಸಂಕ್ಷಿಪ್ತವಾಗಿ ನೋಡೋಣ. ನೆರೆಯ ಮನೆಗೆ ಬೆಂಕಿ ಬಿದ್ದಾಗಲೇ ನಾವು ನಮ್ಮ ಮನೆಯನ್ನು ರಕ್ಷಿಸಿಕೊಳ್ಳುವ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ, ನಾವು ಮಾಡಿದ್ದೇನೆಂದರೆ ಲಕ್ಷಾಂತರ ಜನರನ್ನು ಸೇರಿಸಿ ವಿಶ್ವದ ಅತ್ಯಂತ ದೊಡ್ಡ ಎಡೆಬಿಡಂಗಿ, ವ್ಯಾಪಾರಿ ರಾಜಕಾರಣಿಯ ಪಾದಪೂಜೆ ಮಾಡಿದ್ದು. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊತ್ತಮೊದಲಾಗಿ ಕೋವಿಡ್-19 ಕಾಣಿಸಿಕೊಂಡಾಗ ಅದು ಆ ಪ್ರಾಂತ್ಯವನ್ನೇ ಸೀಲ್ ಡೌನ್ ಮಾಡಿ, ಈಗ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೆ, ಮೋದಿ ಸರಕಾರ ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನನ್ನು ಓಲೈಸಲು "ನಮಸ್ತೇ ಟ್ರಂಪ್" ಎಂಬ ಜಾತ್ರೆ ನಡೆಸಿತು. ನಂತರದ ದಿನಗಳಲ್ಲಿ ಕೊರೋನ ಪೀಡಿತರ ಸಂಖ್ಯೆಯಲ್ಲಿ ಈ ಜಾತ್ರೆ ನಡೆದ ಅಹ್ಮದಾಬಾದ್ ಎಂಬ ಚಿಕ್ಕ ನಗರವು ಮುಂಬಯಿ, ದಿಲ್ಲಿಯಂತಹ ಮಹಾನಗರಗಳ ಬೆನ್ನಿಗೇ ಮೂರನೇ ಸ್ಥಾನದಲ್ಲಿತ್ತು ಎಂಬುದು ಸರಕಾರದ ಬೇಜಾವ್ದಾರಿಯ ಹೊರತು ಬೇರೇನನ್ನೂ ಸೂಚಿಸುವುದಿಲ್ಲ. ಕೊರೋನ ಬಗ್ಗೆ ಎಚ್ಚರವಹಿಸಿ ಎಂದು ಭಾರತೀಯ ರಾಜಕೀಯ ನಾಯಕರಲ್ಲೇ ಮೊತ್ತಮೊದಲಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದಾಗ, ಅವರನ್ನು ಸಂಪೂರ್ಣವಾಗಿ ಕಡೆಗಣಿಸುವುದು ಮಾತ್ರವಲ್ಲ; ಅವಹೇಳನ ಮಾಡಲಾಯಿತು. ನಂತರ ಒಂದು ದಿನದ ಜನತಾ ಕರ್ಫ್ಯೂ ಎಂಬ ಡೊಂಬರಾಟ ನಡೆಯಿತು. ಜನರು ಸ್ವಯಂ ಇಚ್ಛೆಯಿಂದ ಕರ್ಫ್ಯೂ ಆಚರಿಸುತ್ತಾರೆ ಎಂದು ಹೇಳುತ್ತಾ, ರಾಜಕೀಯವಾಗಿ ಲಾಭ ಪಡೆಯಲು ಯತ್ನಿಸಿತು. ಬಿಜೆಪಿ ಕಾರ್ಯಕರ್ತರಂತೂ ಇಡೀ ದೇಶವೇ ಮೋದಿಯಂತಹ "ಮಹಾತ್ಮ"ನ ಹಿಂದೆ ನಿಲ್ಲಬೇಕೆಂದು ನಿರೀಕ್ಷಿಸಿ, ಬೆಂಬಲಿಸದ ಕೋಟ್ಯಂತರ ಭಾರತೀಯರಿಗೆ ದೇಶ ದ್ರೋಹಿಗಳ ಹಣೆಪಟ್ಟಿ ಕಟ್ಟಿತು. ಇದೇ ಸಂದರ್ಭದಲ್ಲಿ ಮುಂಬರಲಿರುವ ಲಾಕ್‌ಡೌನ್ ಬಗ್ಗೆ ಸೂಚನೆ ನೀಡಿ, ತಮ್ಮ ಊರುಗಳಿಗೆ ಮರಳುವುದೇ ಸೇರಿದಂತೆ ಇತರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜನರಿಗೆ ಸೂಚಿಸಬಹುದಿತ್ತು. ಅವರಿಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ರೂಪಿಸಬಹುದಿತ್ತು. ಆಸ್ಪತ್ರೆಗಳು, ಕ್ವಾರಂಟೈನ್, ಕೇಂದ್ರಗಳು, ಆರೋಗ್ಯ ಕಾರ್ಯಕರ್ತರಿಗೆ ಬೇಕಾದ ಮಾಸ್ಕ್, ಸ್ಯಾನಿಟೈಸರ್ ಮುಂತಾದ ಸಾಧನಗಳು, ಬೇಕಾಗುವ ವೆಂಟಿಲೇಟರ್‌ಗಳು, ಜನರಿಗೆ ಕೊರೋನ ಜಾಗೃತಿ ಕಾರ್ಯಕ್ರಮಗಳು, ಆಡಳಿತ ಯಂತ್ರವನ್ನು ಬಿಕಟ್ಟಿಗೆ ಸಿದ್ಧಗೊಳಿಸುವುದು ಇತ್ಯಾದಿ ತುರ್ತು ಕೆಲಸಗಳನ್ನು ಪೂರೈಸಬಹುದಿತ್ತು. ನಂತರ ಲಾಕ್‌ಡೌನ್ ಘೋಷಿಸಬಹುದಿತ್ತು. ಆದರೆ, ಮಧ್ಯರಾತ್ರಿ ಅಥವಾ ಟಿವಿ ಪ್ರೈಮ್ ಟೈಮ್‌ನಲ್ಲಿ ಜನರ ತಲೆಗೆ ಸುತ್ತಿಗೆಯಲ್ಲಿ ಹೊಡೆದಂತೆ ಆಘಾತ ನೀಡುವ ಘೋಷಣೆಗಳನ್ನು ಮಾಡಿ, ತನ್ನ ಅಧಿಕಾರ ಮತ್ತು ಮಹತ್ವದ ಪ್ರದರ್ಶನ ಮಾಡಿ ಅಭ್ಯಾಸವಾಗಿರುವ ಮೋದಿ, ಹಠಾತ್ತಾಗಿ ಕೇವಲ ಮೂರು ಗಂಟೆಗಳ ಅವಕಾಶ ನೀಡಿ ಮಧ್ಯರಾತ್ರಿಯಿಂದ ಲಾಕ್‌ಡೌನ್ ಘೋಷಿಸಿದರು. ಪರಿಣಾಮವೇನು? ರಾತ್ರಿ ಎಂಟೂವರೆಯ ಹೊತ್ತಿಗೆ ಮೋದಿಯ ಬಾಯಿಯಿಂದ ಲಾಕ್‌ಡೌನ್ ಎಂಬ ಶಬ್ದ ಹೊರಬರುತ್ತಲೇ, ಜನರು ಅಂಗಡಿ ಮಾಲ್‌ಗಳಿಗೆ ಗುಂಪುಗುಂಪಾಗಿ ನುಗ್ಗಿದರು. ಉಳ್ಳವರು ಕೈಗೆ ಸಿಕ್ಕಿದ್ದನ್ನು ದಾಸ್ತಾನು ಮಾಡಿದರು. ಲಾಭ ಏನಾಯಿತು? ನಗರ ಪಟ್ಣಣಗಳಲ್ಲಿ ಕೊರೋನ ಹರಡಲು ಅತ್ಯಂತ ಪೂರಕವಾದ ವಾತಾವರಣ ಏಕಾಏಕಿಯಾಗಿ ನಿರ್ಮಾಣವಾಯಿತು. ಹೆಚ್ಚಿನವರು ಆತನ ಪೂರ್ಣ ಭಾಷಣ ಕೇಳಲೇ ಇಲ್ಲ. ಕೇಳಿದ್ದರೂ ಅದರಲ್ಲಿ ಪೊಳ್ಳು ಘೋಷಣೆಗಳ ಹೊರತು ಬೇರೇನೂ ಇರಲಿಲ್ಲ! ನಂತರದ ದಿನಗಳಲ್ಲಿ ಉಂಟಾದ ಘೋರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಮೋದಿ ಸರಕಾರ ಊಹಿಸಿರಲಿಲ್ಲ ಎಂದರೆ, ಅದರಷ್ಟು ಅದಕ್ಷ ಸರಕಾರ ಇಡೀ ಪ್ರಪಂಚದಲ್ಲಿಯೇ ಇಲ್ಲವೆಂದಾಯಿತು. ನಗರ ಪ್ರದೇಶಗಳಲ್ಲಿ ಕೆಲಸ ಕಳೆದುಕೊಂಡ ಕೋಟ್ಯಂತರ ವಲಸೆ ಕಾರ್ಮಿಕರು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೇ, ಕೈಯಲ್ಲಿ ಹಣವಿಲ್ಲದೆ, ಆಹಾರ ನೀರಿಲ್ಲದೇ ನೂರಾರು, ಸಾವಿರಾರು ಮೈಲಿ ದೂರದ ತಮ್ಮ ಮನೆಗಳಿಗೆ ಕಾಲ್ನಡಿಗೆಯಲ್ಲಿಯೇ ಹೊರಟರು. ಅವರಿಗೂ ಕೆಲವೆಡೆ ಗಡಿಗಳನ್ನು ಮುಚ್ಚಲಾಯಿತು. ಯಾವುದೇ ಸೂಕ್ತ ವ್ಯವಸ್ಥೆ ಮಾಡದೇ ದೌರ್ಜನ್ಯಗಳನ್ನು ನಡೆಸಲಾಯಿತು. ಜನರನ್ನು ಪ್ರಾಣಿಗಳಂತೆ ಗುಂಪುಸೇರಿಸಿ ಕ್ರಿಮಿನಾಶಕಗಳನ್ನು ಸಿಂಪಡಿಸುವ ದೃಶ್ಯಗಳಿಗೂ ನಾವು ಸಾಕ್ಷಿಯಾಗಬೇಕಾಯಿತು. ಈ ಕರುಣಕತೆಗಳು ಬಹುತೇಕ ಕಣ್ಣು, ಕಿವಿಗಳಿರುವ ಎಲ್ಲರಿಗೂ ಗೊತ್ತಿರುವುದರಿಂದ ಮತ್ತೆ ವಿವರಿಸುವ ಅಗತ್ಯವಿಲ್ಲ. ನಂತರ ನಡೆದದ್ದೇ ಬಾಲ್ಕನಿಯಲ್ಲಿ ಚಪ್ಪಾಳೆ ತಟ್ಟುವ, ತಟ್ಟೆ, ಗಂಟೆ, ಜಾಗಟೆ ಬಾರಿಸುವ ಕಾರ್ಯಕ್ರಮ, ದೀಪ ಉರಿಸುವ ಕಾರ್ಯಕ್ರಮಗಳು. ಆದರೆ, ಆದುದೇನು? ಜನರು ಹುಚ್ಚು ಹಿಡಿದಂತೆ ಗುಂಪುಗುಂಪಾಗಿ ಸಿಕ್ಕಿದ್ದನ್ನು ಬಡಿಯುತ್ತಾ ಬೀದಿಗಿಳಿದರು. ಆ ಮೂಲಕ ಕೊರೋನಾವನ್ನು ಇನ್ನಷ್ಟು ಹರಡಿದರು. ಇದು ಕೊರೋನ ಎಂಬ ರೋಗಕ್ಕೆ ಆಚರಣೆಗಳ ಮೂಲಕ ಧಾರ್ಮಿಕ ಬಣ್ಣ ಹಚ್ಚುವ ಉದ್ದೇಶಪೂರ್ವಕ ಯತ್ನವಾಗಿತ್ತು. ಆದ ಲಾಭವೆಂದರೆ, ಭಯಗೊಂಡ ಜನರ ಮೂಢನಂಬಿಕೆ ಇನ್ನಷ್ಟು ಬಲಗೊಂಡು, ಮೋದಿಯ ಬೆಂಬಲಿಗರು ಹೆಚ್ಚಿದುದು. ಇದು ನಡೆದದ್ದು ಹೆಚ್ಚಾಗಿ ನಡೆದದ್ದು ಮೋದಿ ಭಾಷಣದಲ್ಲಿ ಉಲ್ಲೇಖಿಸಿದ ಬಾಲ್ಕನಿ ಕ್ಲಾಸ್‌ನಲ್ಲಿ; ಆತ ಉಲ್ಲೇಖಿಸದ ಜೋಪಡಿ ಕ್ಲಾಸಿನಲ್ಲಿ ಅಲ್ಲ ಎಂಬುದನ್ನು ಗಮನಿಸಬೇಕು. ಧಾರ್ಮಿಕ ಬಣ್ಣ ಹಚ್ಚಿ ನೆವನ ಹುಡುಕುವ ಪ್ರಯತ್ನಗಳಲ್ಲಿ ಒಂದೆಂದರೆ, ಇಡೀ ಪೀಡೆಯ ಹೊಣೆಯನ್ನು ತಬ್ಲೀಗಿ ಜಮಾತ್‌ನ ತಲೆಗೆ ಕಟ್ಟಿ, ಈ ಅತೀ ಚಿಕ್ಕ ಸಮುದಾಯದ ತಪ್ಪನ್ನು ಇಡೀ ಮುಸ್ಲಿಂ ಸಮುದಾಯದ ತಲೆಗೆ ಕಟ್ಟಿ, ಬಹುಸಂಖ್ಯಾತರು ಅವರನ್ನು ಸಂಶಯಿಸುವಂತೆ ಮಾಡಿ, ಬಿಜೆಪಿಯು ವಿಭಜನಕಾರಿ ರಾಜಕೀಯದ ತನ್ನ ಬೇಳೆಯನ್ನು ಬೇಯಿಸಿಕೊಂಡದ್ದು. ಈ ತಬ್ಲೀಗೀ ಜಮಾತ್‌ನ ದಿಲ್ಲಿ ಸಮಾವೇಶದಿಂದಲೂ ಕೊರೋನಾ ಹರಡಿದ್ದು ನಿಜವಾದರೂ, ಅದು ಲಾಕ್‌ಡೌನ್‌ಗೆ ಮೊದಲೇ ನಡೆದಿತ್ತು; ಸರಕಾರವೇ ಅದಕ್ಕೆ ಅನುಮತಿ ನೀಡಿತ್ತು. ಅದಕ್ಕೆ ಬಂದಿದ್ದ ವಿದೇಶಿ ಪ್ರತಿನಿಧಿಗಳು ಆಗಲೇ ಕೊರೋನ ಹರಡಿದ್ದ ದೇಶಗಳಿಂದ ಬಂದಿದ್ದರು. ವಿಮಾನ ನಿಲ್ದಾಣಗಳಲ್ಲಿ ಅವರನ್ನು ಯಾವುದೇ ತಪಾಸಣೆಗೆ ಒಳಪಡಿಸಲಾಗಿರಲಿಲ್ಲ. ಸರಕಾರ ಮೊದಲೇ ವಿಮಾನ ನಿಲ್ದಾಣಗಳನ್ನು ಮುಚ್ಚಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಈ ತಬ್ಲೀಗಿ ಜಮಾತ್ ಸಮಾವೇಶ ನಡೆಯುವ ಹೊತ್ತಿಗೆ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದ ಐವತ್ತಕ್ಕೂ ಹೆಚ್ಚು, ಹಿಂದೂ ಸಹಿತ ಧಾರ್ಮಿಕ ಸಮಾವೇಶಗಳು ನಡೆದಿದ್ದವು ಎಂಬುದನ್ನು ಸಂಪೂರ್ಣವಾಗಿ ಮರೆಮಾಚಲಾಯಿತು. ಇದಕ್ಕೆ ಮಾಧ್ಯಮಗಳು, ಮುಖ್ಯವಾಗಿ ದೃಶ್ಯ ಮಾಧ್ಯಮಗಳು ಘನಘೋರವಾದ ಪಕ್ಕವಾದ್ಯ ನುಡಿಸಿದವು. ಇನ್ನೊಂದು ಕಡೆಯಲ್ಲಿ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸವಿಲ್ಲದ, ಉಣ್ಣಲು ಇಲ್ಲದ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಬೀದಿಗೆ ಬಂದರೆ, ಅವರು ಬೇರೆ ದೇಶದಿಂದ ಬಂದವರೋ ಎಂಬಂತೆ ಪೊಲೀಸರು ಅವರ ಮೇಲೆ ಕ್ರೂರವಾದ ದೌರ್ಜನ್ಯ ನಡೆಸಿದರು. ಇದರಲ್ಲೂ ದೇಶಾದ್ಯಂತ ಪೊಲೀಸರು ಒಂದು ಸಮುದಾಯದವರನ್ನೇ ಗುರಿ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಾವಿರಾರು ವಿಡಿಯೋಗಳಿಂದ ಸ್ಪಷ್ಟವಾಗಿದೆ. ನಿತ್ಯದ ಗಂಜಿ ಬೇಯಿಸಲು ಅಗತ್ಯವಾದ ದಿನಗೂಲಿ; ಬಡಗಿ, ಮೇಸ್ತ್ರಿ,ಗಳಿಂದ ಹಿಡಿದು ಕ್ಷೌರಿಕರ ತನಕ ಎಲ್ಲಾ ವೃತ್ತಿಗಳು; ಮೀನು ಹಿಡಿಯುವುದರಿಂದ ಹಿಡಿದು ತಲೆಹೊರೆಯಲ್ಲಿ ಮೀನು ಮಾರುವ ತನಕ ಕಾಯಕಗಳು; ಭೂ ವ್ಯವಹಾರದಿಂದ ಹಿಡಿದು ಗುಜರಿ ವ್ಯಾಪಾರ; ರಸ್ತೆ ಬದಿ, ಗೂಡಂಗಡಿ ವ್ಯಾಪಾರದಿಂದ ಹಿಡಿದು ಅಂಗಡಿ, ಹೋಟೇಲು, ಮಾಲ್; ಇನ್ನಿತರ ಸಾವಿರಾರು ವೃತ್ತಿಗಳು ನಿಂತೇ ಹೋಗಿ ಜನರು ಪಡಬಾರದ ಪಾಡುಪಡಬೇಕಾಯಿತು. ಸರಕಾರ ಮತ್ತು ಉಳ್ಳವರ ರಾಗ ಒಂದೇ ಆಗಿತ್ತು. ಮನೆಯಲ್ಲಿ ಇರಿ, ಸುರಕ್ಷಿತವಾಗಿರಿ, ರಾಮಾಯಣ-ಮಹಾಭಾರತ ನೋಡಿ ನಮ್ಮ ಭವ್ಯ ಸಂಸ್ಕೃತಿ-ಪರಂಪರೆ ತಿಳಿದು ಪುಣ್ಯ ಕಟ್ಟಿಕೊಳ್ಳಿ. ಆದರೆ, ಉಪವಾಸ ಇರುವ ಜನರಿಗೆ ಸೂಕ್ತ ವ್ಯವಸ್ಥೆಯನ್ನು ಏಕರೂಪದಲ್ಲಿ ಮಾಡಲಿಲ್ಲ; ಭಾರತೀಯ ಆಹಾರ ನಿಗಮದಲ್ಲಿ ಕೊಳೆಯುತ್ತಿರುವ ಆಹಾರ ಧಾನ್ಯಗಳನ್ನು ಹಸಿದ ಜನರಿಗೆ ಮುಟ್ಟಿಸುವ ವ್ಯವಸ್ಥೆ ಮಾಡಲಿಲ್ಲ. ಆಹಾರ ಧಾನ್ಯಗಳಿಂದ ಆಲ್ಕೋಹಾಲ್ ತಯಾರಿಸಿ ಸ್ಯಾನಿಟೈಸರ್‌ಗೆ ಬಳಸಲು ಅವಕಾಶ ನೀಡಲಾಯಿತು. ನಾಗರಿಕ ಅಧಿಕಾರಿಗಳಿಗೆ ನೆರವಾಗಲು, ವಲಸೆ ಕಾರ್ಮಿಕರ ಸಾರಿಗೆಗೆ, ಆಹಾರ ವಿತರಣೆಗೆ, ವೈದ್ಯಕೀಯ ಸೇವೆಗೆ ಸೇನೆಯನ್ನು ಬಳಸಿ ಎಂಬ ಮಾಜೀ ದಂಡನಾಯಕರುಗಳ ಸಲಹೆಯನ್ನು ಮೂಲೆಗೆಸೆಯಲಾಯಿತು. ಚದರಿದಂತೆ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಲಾಯಿತಾದರೂ, ಸುರಕ್ಷಿತ ವಿತರಣೆಗೆ ಅಲ್ಲ! ಕೊರೋನ ನಿಯಂತ್ರಣಕ್ಕೆ ಹಳೆಯ ಯೋಜನೆಗಳನ್ನು ತೇಪೆ ಹಾಕಿದ, ಕಾರ್ಯ ಸಾಧುವಲ್ಲದ ಯೋಜನೆಗಳ, ಅಂಕಿಅಂಶಗಳ ನಗೆಪಾಟಲು ಡೊಂಬರಾಟದ ಹೊರತಾಗಿ ಮೋದಿ ಸರಕಾರ ಏನು ಮಾಡಿದೆ? ಎಲ್ಲಾ ಹೊಣೆಗಾರಿಕೆಗಳನ್ನು ರಾಜ್ಯ ಸರಕಾರಗಳ ಮೇಲೆ ಹೇರಿ, ದೊಣ್ಣೆನಾಯಕನ ಹಾಗೆ ಕೆಲಸಕ್ಕೆ ಬಾರದ ಸಲಹೆಗಳನ್ನು ನೀಡಿ ಮೆರೆಯುವುದು ಮಾತ್ರ ತನ್ನ ಕರ್ತವ್ಯ ಎಂಬಂತೆ ಮೋದಿಯ ವರ್ತನೆ ಇದೆ. ಕೊರೋನ ನೆಪ ಹೇಳಿ ರಾಜ್ಯ ಸರಕಾರಗಳಿಗೆ ಕಾನೂನು ಮತ್ತು ನ್ಯಾಯಬದ್ಧವಾಗಿ ಕೊಡಬೇಕಾದ ಜಿಎಸ್‌ಟಿ ಪಾಲನ್ನು ಕೊಡದಷ್ಟೂ ಮೋದಿ ಸರಕಾರ ದಿವಾಳಿಯೆದ್ದಿದೆ. ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೋನ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕರ್ತರಿಗೆ ಬಾಯ್ಮಾತಿನ ಹೊಗಳಿಕೆಯ ಹೊರತು ಸರಕಾರ ಏನು ನೀಡಿದೆ? ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ಒದಗಿಸುವ ಯೋಗ್ಯತೆ ಇಲ್ಲದ ಸರಕಾರ, ಕೆಲವು ಕಡೆ ಸಂಬಳವನ್ನೂ ಕೊಟ್ಟಿಲ್ಲ ಎಂಬ ವರದಿಗಳು ಬರುತ್ತಿವೆ. ಅವರ ಪ್ರತಿಭಟನೆಗಳನ್ನೂ ಬೆದರಿಸಿ ದಮನಿಸಲಾಗುತ್ತಿದೆ. ಈಗ ಸರಕಾರ ಬಹುತೇಕ ಲಾಕ್‌ಡೌನ್ ಹಿಂತೆಗೆದು ಕೊಂಡು, ನಿಮಗೆ ಬೇಕಾದದ್ದು ಮಾಡಿ ಎಂಬಂತೆ ಕೈಚೆಲ್ಲಿ ಕುಳಿತಿದೆ. ವಾಸ್ತವವಾಗಿ ಅದು ಕೈಚೆಲ್ಲಿ ಕುಳಿತಿಲ್ಲ. ಈ ಕಷ್ಟ ಕಾಲದಲ್ಲಿಯೂ ಕುತಂತ್ರದಿಂದದಾರೂ ಬಿಹಾರ ಚುನಾವಣೆಯನ್ನು ಗೆಲ್ಲುವ ಪ್ರಯತ್ನ ನಡೆಸುತ್ತಿದೆ. ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಒಂದೊಂದಾಗಿ ಖಾಸಗಿ ರಂಗಕ್ಕೆ ಅಂದರೆ, ತನಗೆ ಬೇಕಾದ ಉದ್ಯಮಿಗಳಿಗೆ ಮಾರುತ್ತಿದೆ. ಇಡೀ ರೈಲ್ವೇಯನ್ನು ಮಾರಲು ಸಿದ್ಧತೆ ನಡೆಸುತ್ತಿದೆ. ಬಿಎಸ್‌ಎನ್‌ಎಲ್ ಸೇರಿದಂತೆ ಹಲವಾರು ಸಾರ್ವಜನಿಕ ಉದ್ದಿಮೆಗಳಲ್ಲಿ ನೌಕರರನ್ನು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಮನೆಗೆ ಕಳಿಸಲಾಗಿದ್ದು, ಭಾರತೀಯ ಸ್ಟೇಟ್ ಬ್ಯಾಂಕಿನ 35,000 ಜನರಿಗೆ ಒತ್ತಾಯದ ಸ್ವಯಂ ನಿವೃತ್ತಿ ಇತ್ತೀಚಿನ ಹೆಜ್ಜೆ. ಇದೇ ಕೊರೋನ ನೀಡಿರುವ ಅವಕಾಶವನ್ನು ದುರುಪಯೋಗಪಡಿಸಿಕೊಂಡು, ಖಾಸಗಿ ರಂಗಕ್ಕೆ ಬೇಕಾದಷ್ಟು ಭೂಮಿ ಕೊಳ್ಳಲು ಅವಕಾಶವಾಗುವಂತೆ ಭೂ ಕಾಯಿದೆಗೆ ತಿದ್ದುಪಡಿ, ಶಿಕ್ಷಣ ರಂಗವನ್ನೇ ಖಾಸಗಿ ರಂಗಕ್ಕೆ ಧಾರೆಯೆರೆದು ಕೇಸರೀಕರಣಕ್ಕೆ ಅವಕಾಶ ಮಾಡಿಕೊಡುವ, ದುರ್ಬಲ ವರ್ಗದವರನ್ನು ಶಿಕ್ಷಣದಿಂದ ವಂಚಿಸುವ ಹೊಸ ಶಿಕ್ಷಣ ನೀತಿ ಇತ್ಯಾದಿಗಳನ್ನು ತರುತ್ತಿದೆ. ಇನ್ನೊಂದು ಕಡೆಯಲ್ಲಿ ಸರಕಾರದ ನೀತಿಗಳನ್ನು ವಿರೋಧಿಸುವವರಿಗೆ ದೇಶದ್ರೋಹಿಗಳ ಹಣೆಪಟ್ಟಿ ಕಟ್ಟಿ ಯುಎಪಿಎಯಂತಹ ಕರಾಳ ಕಾನೂನುಗಳ ಅಡಿಯಲ್ಲಿ ವರವರ ರಾವ್ ಅವರಂತಹ ಕವಿ, ಸುಧಾ ಭಾರಧ್ವಾಜ್ ಅವರಂತಹ ಸಾಮಾಜಿಕ ಕಾರ್ಯಕರ್ತರು, ಆನಂದ ತೇಲ್ದುಂಬ್ಡೆ ಅವರಂತಹ ಬುದ್ಧಿಜೀವಿಗಳನ್ನು ಜೈಲಿಗೆ ತಳ್ಳುತ್ತಿದೆ. ತೀರಾ ಇತ್ತೀಚಿನ ಉದಾಹಣೆಯೆಂದರೆ, ಕವಿ, ಗಾಯಕಿ, ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಜಗತಾಪ್. ನಗರ ಪ್ರದೇಶಗಳ ಪಾಡು ಬದಿಗಿಟ್ಟರೂ ಗ್ರಾಮೀಣ ಪ್ರದೇಶಗಳ ಸಮಸ್ಯೆ ವಿಶಿಷ್ಟ ಮತ್ತು ದಯನೀಯವಾಗದೆ. ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಿ ಮರಳಿಬಂದ ಅದೇ ಜನರು ಮತ್ತೆ ಮಾಡುವುದಾದರೂ ಏನು? ನಗರಗಳ ಸಾಕಷ್ಟು ಉಳ್ಳ ಜನರು ವಿದೇಶಗಳಿಂದ ವಿಮಾನಗಳಲ್ಲಿ ತಂದ ರೋಗದ ಭೀಕರ ಪರಿಣಾಮವನ್ನು ಬಡವರು, ಅದರಲ್ಲೂ ಗ್ರಾಮೀಣ ಜನರು ಅನುಭವಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಕಟ್ಟುಪಾಡು ಹಾಗೂ ತಾರತಮ್ಯ ವ್ಯವಸ್ಥೆಗಳು ಕೊರೋನ ನಿಯಂತ್ರಣದ ಸವಾಲನ್ನು ಇನ್ನಷ್ಟು ಜಟಿಲಗೊಳಿಸಿವೆ. ಆದುದರಿಂದ, ಮೋದಿ ಸರಕಾರ ಗ್ರಾಮೀಣ ಪ್ರದೇಶಗಳಿಗಾಗಿ ಏನಾದರೂ ಮಾಡಿದೆಯೇ? ಮಾತಿನ ಹೊರತು ಬೇರೇನೂ ಇಲ್ಲ. ಕೊರೋನ ಪೀಡೆ ಪಟ್ಟಣ ಪ್ರದೇಶದಲ್ಲಿ ವೇಗವಾಗಿ ಹಬ್ಬಿ ಗ್ರಾಮೀಣ ಪ್ರದೇಶಕ್ಕೆ ಹರಡುವ ಮೊದಲೇ ಸ್ಥಳೀಯ ಸರಕಾರಗಳನ್ನು ಎಚ್ಚರಗೊಳಿಸಿ ಪೀಡೆಯನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಯು, ಸ್ಥಳೀಯ ಸರಕಾರಗಳು ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಆಡಳಿತ ನಡೆಸಲು ಅಧಿಕಾರ ನೀಡುತ್ತವೆ. ಇದರಿಂದ ನಮ್ಮ ದೇಶದ ಮೂರೂ ಸ್ತರಗಳಲ್ಲಿ ಸ್ಥಳಿಯ ಸರಕಾರಗಳು ಒಂದಕ್ಕೊಂದು ಪೂರಕವಾಗಿ ತಮ್ಮ ವ್ಯಾಪ್ತಿಯಲ್ಲಿ ಸಂವಿಧಾನಬದ್ಧವಾದ ನಿರ್ವಹಣೆಯ ಅಧಿಕಾರ ಹೊಂದಿವೆ. ಸರಕಾರ ಸೂಕ್ತ ಮಾರ್ಗದರ್ಶನ ನೀಡಿ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆಯೇ? ಅದೂ ಇಲ್ಲ! ಅಧಿಕಾರ ವಿಕೇಂದ್ರೀಕರಣದ ನಿಟ್ಟಿನಲ್ಲಿ ಸ್ಥಳೀಯ ಸರಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳನ್ನು ಒಟ್ಟು ಸೇರಿಸಿ ಕೊರೋನ ಪೀಡೆಯ ನಿಯಂತ್ರಣಕ್ಕೆ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಅನುಷ್ಟಾನಗೊಳಿಸಲು, ಕಂದಾಯ, ಪೋಲೀಸ್, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಜೊತೆಗೂಡಿ ಕೆಲಸ ಮಾಡಿ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ನಿರ್ವಹಣೆ ಮಾಡಬಹುದಾಗಿತ್ತು. ಇದನ್ನು ದೇಶದಲ್ಲಿ ಪರಿಣಾಮಕಾರಿಯಾಗಿ ಮಾಡಲಾಗಿದೆಯೇ? ಅದೂ ಇಲ್ಲ! ಹಾಗಾದರೆ, ಮೋದಿ ಸರಕಾರ ಮಾಡಿರುವುದಾದರೂ ಏನನ್ನು? ಆಷ್ಟು ಕೋಟಿ ಉದ್ಯೋಗ ಸೃಷ್ಟಿ ಎಂದು ಬೊಗಳೆ ಬಿಟ್ಟ ಮೋದಿ ಕಸಿದುಕೊಂಡದ್ದು ಕೋಟ್ಯಂತರ ಉದ್ಯೋಗಗಳನ್ನು ಮತ್ತು ಜೀವನೋಪಾಯಗಳನ್ನು. ಕೊಟ್ಟದ್ದು ನಲ್ವತ್ತು ವರ್ಷಗಳಲ್ಲೇ ಅತ್ಯಂತ ಕೆಟ್ಟ ನಿರುದ್ಯೋಗ ಪರಿಸ್ಥಿತಿಯನ್ನು! ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುತ್ತೇನೆಂದು ಬೊಗಳೆಬಿಟ್ಟ ಮೋದಿ ಕೊಟ್ಟದ್ದು ಮೈನಸ್ 23.9 ಶೇಕಡಾ ಮೀರಿದ ಜಿಡಿಪಿ ಬೆಳವಣಿಗೆಯನ್ನು! ಈಗ ಎಲ್ಲವನ್ನೂ ಕೊರೋನ ತಲೆಗೆ ಕಟ್ಟಿ, ದೇವರ ಆಟವೆಂದು ನುಣುಚಿಕೊಳ್ಳಲು ಯತ್ನಿಸುತ್ತಿರುವ ಕೈಲಾಗದ ಸರಕಾರ ರಾಜೀನಾಮೆ ಕೊಟ್ಟು ತೊಲಗಬಾರದೇಕೆ? ಜನರನ್ನು ದೇವರು ನೋಡಿಕೊಳ್ಳುವುದಾದರೆ, ಇವರು ಇರುವುದಾದರೂ ಏಕೆ? ಇದು ಗಂಭೀರವಾಗಿ ಚಿಂತಿಸಬೇಕಾದ ವಿಷಯ ಮತ್ತು ಇದು ಗಂಭೀರವಾಗಿ ಚಿಂತಿಸಬೇಕಾದ ಕಾಲ!

✍️ -ನಿಕಿಲ್ ಕೊಲ್ಪೆ (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು)

ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಓದಿರಿ: www.kannadamedia.com News ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.
Advertisement
Advertisement
Recent Posts
Advertisement