ರಾಜ್ಯ

ರೈತ ವಿರೋಧಿ ತಿದ್ದುಪಡಿ ಮಸೂದೆ ಅಂಗೀಕರಿಸದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ರಾಜ್ಯ ಕಾಂಗ್ರೆಸ್ ನಿಯೋಗ.

ರೈತರನ್ನು ಗುಲಾಮಗಿರಿಗೆ ತಳ್ಳುವ ಜನ ವಿರೋಧಿ ತಿದ್ದುಪಡಿಗಳನ್ನು ಕೈ ಬಿಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ: ಡಿ.ಕೆ ಶಿವಕುಮಾರ್ ಎಚ್ಚರಿಕೆ!ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಗಳು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣ್‌ದೀಪ್ ಸಿಂಗ್ ಸುರ್ಜಿವಾಲ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮತ್ತಿತರ ಪಕ್ಷದ ಹಿರಿಯ ಮುಖಂಡರನ್ನೊಳಗೊಂಡ ನಿಯೋಗದೊಂದಿಗೆ ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ರೈತ ವಿರೋಧಿ ತಿದ್ದುಪಡಿಗಳನ್ನು ಅಂಗೀಕರಿಸದಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ರವರು ‘ನಮ್ಮ ಹೋರಾಟ ರೈತರಿಗೆ ಮರಣ ಶಾಸನವಾಗಲಿರುವ ರೈತ ಹಾಗೂ ಕಾರ್ಮಿಕ ವಿರೋಧಿ ಮಸೂದೆಗಳ ವಿರುದ್ಧವಾಗಿದೆ’ ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಗಳ ಮೂಲಕ ನಮ್ಮ ರೈತರನ್ನು ಕೆಲವು ಉದ್ಯಮಿಗಳ ಜೀತದಾಳುಗಳನ್ನಾಗಿ ಮಾಡಲು ಹೊರಟಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ರೈತರ ಪರ, ಮುಂದೆಯೂ ರೈತರ ಹಕ್ಕಿಗಾಗಿ ಹೋರಾಡುತ್ತೇವೆ. ರೈತರನ್ನು ಗುಲಾಮರನ್ನಾಗಿಸುವ ಈ ತಿದ್ದುಪಡಿಗಳನ್ನು ಕೈ ಬಿಡುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದವರು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದ ರೈತರಿಗಷ್ಟೇ ಅಲ್ಲ ಗ್ರಾಹಕರಿಗೂ ಭವಿಷ್ಯದಲ್ಲಿ ದೊಡ್ಡ ನಷ್ಟ ಕಾದಿದೆ. ಖಾಸಗಿ ಕಂಪನಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚು ಬೆಲೆಗೆ ಮಾರಿ ಜನರ ಸುಲಿಗೆಗೆ ಇಳಿಯಲಿವೆ. ರಾಜ್ಯ ಸರ್ಕಾರ ನಿಜವಾಗಿ ರೈತ, ಕಾರ್ಮಿಕರ, ಬಡವರ ಪರವಾಗಿದ್ದರೆ ಎಪಿಎಂಸಿ ಕಾಯಿದೆ, ಭೂ ಸುಧಾರಣಾ ಕಾಯಿದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ತಪ್ಪನ್ನು ಮಾಡುತ್ತಲೇ ಇರಲಿಲ್ಲ. ಯಡಿಯೂರಪ್ಪ ಹಸಿರು ಶಾಲು ಹೊದ್ದಿರುವ ಒಬ್ಬ “ಢೋಂಗಿ ರೈತನಾಯಕ” ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.

ಮುಂದುವರಿದು ಮಾತನಾಡುತ್ತಾ ‘ಉಳುವವನನ್ನು ಭೂಮಿಯ ಒಡೆಯನಾಗಿಸಿದ್ದು ದೇವರಾಜ ಅರಸು ಅವರ ನಾಯಕತ್ವದ ಕಾಂಗ್ರೆಸ್ ಸರ್ಕಾರ. ಈಗ ಬಡವರ ಭೂಮಿಯನ್ನು ಉಳ್ಳವರ ಪಾಲು ಮಾಡಲು ಹೊರಟಿರುವುದು ಬಿಜೆಪಿ ಸರ್ಕಾರ. ಹಾಗಾದರೆ ನಿಜವಾಗಿ ಯಾರು ರೈತರ ಪರ? ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಕೃಷಿಕನಲ್ಲದವನು ಕೃಷಿ ಭೂಮಿ ಖರೀದಿಸುವಂತಿಲ್ಲ ಎಂಬ ನಿಯಮ ಹೋಗಿ, ಧನಿಕರು ಕೂಡ ಕೃಷಿ ಭೂಮಿ ಖರೀದಿ ಮಾಡಲಿದ್ದಾರೆ. ನಂತರ ಆ ಭೂಮಿಯಲ್ಲಿ ಫಾರ್ಮ್‌ಹೌಸ್‌ಗಳು, ಕಾರ್ಖಾನೆಗಳು ತಲೆಯೆತ್ತಲಿವೆ. ಅಲ್ಲಿಗೆ ಕೃಷಿ ಕ್ಷೇತ್ರ ಸರ್ವನಾಶವಾಗಲಿದೆ. ದೇಶದ ಒಟ್ಟು ರೈತರಲ್ಲಿ ಸಣ್ಣ ಹಿಡುವಳಿದಾರರ ಪ್ರಮಾಣ ಶೇ.86 ಇದೆ. ಈ ರೈತರೆಲ್ಲಾ ಧನಿಕರಿಗೆ ತಮ್ಮ ಭೂಮಿ ಮಾರಿ, ದುಡಿಮೆಗಾಗಿ ಪಟ್ಟಣ ಸೇರುತ್ತಾರೆ. ಕೃಷಿ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದ ಅಮಾಯಕ ಮಂದಿ ನಗರಗಳಲ್ಲಿ ಕೂಲಿ ಮಾಡಬೇಕಾಗುತ್ತದೆ. ಈ ಕಾಯಿದೆಗಳ ಜಾರಿ ಹಿಂದೆ ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆಯಿದೆ. ಆತ್ಮಸಾಕ್ಷಿ ಇಲ್ಲದ ಯಡಿಯೂರಪ್ಪ ಅವರು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ನಾಡನ್ನು ಗುಲಾಮಗಿರಿಗೆ ತಳ್ಳಲು ಹೊರಟಿದ್ದಾರೆ. ಈ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಈ ಬರಹ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.

ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares