ಸಂಪಾದಕೀಯ

ಮೋದಿ ಸರ್ಕಾರದ ಪ್ರಕಾರ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರು ಭಯಭೀತರಾಗಲು ಕಾರಣವಾದ ವದಂತಿಯಾದರೂ ಏನು ಗೊತ್ತೆ?

‘ಲಾಕ್‌ಡೌನ್ ಅವಧಿಯಲ್ಲಿ ಆಹಾರ, ವಸತಿ, ಕುಡಿಯುವ ನೀರು, ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಹರಡಿದ ವದಂತಿಗಳಿಗೆ ಭಯಭೀತರಾದ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ಗಾಬರಿಗೊಂಡು ಆತಂಕದಿಂದ ತಮ್ಮ ತವರಿಗೆ ಮರಳಿದ್ದರು‌ ಮತ್ತು ಆ ಸಂಧರ್ಭದಲ್ಲಿ ಕಾಲ್ನಡಿಗೆಯಿಂದ ತೆರಳುವ ವೇಳೆ ಮೃತಪಟ್ಟವರ ಕುರಿತು ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ’ ಎಂದು ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾವ್ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.ಲಾಕ್‌ಡೌನ್ ಘೋಷಣೆಯ ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ನಗರಗಳಿಂದ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತವರಿಗೆ ನಡೆದು ತೆರಳಲು ಕಾರಣವಾದ ವಿಚಾರದ ಕುರಿತು ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರವಾಗಿತ್ತು ಇದು.

ವಿಶ್ವದಾದ್ಯಂತ ಕೊರೊನಾ ಸಾಂಕ್ರಮಿಕವಾಗಿ ಹರಡುತ್ತಿದ್ದ ಸಂಧರ್ಭದಲ್ಲಿ ಕೊರೊನಾ ಮಹಾಮಾರಿ ನಮ್ಮ ದೇಶ ಪ್ರವೇಶ ಮಾಡದಂತೆ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸುವ ಬದಲು, ಹೊರ ದೇಶದ ಕರೋನಾ ರೋಗಿಗಳನ್ನು ದೇಶದೊಳಗೆ ಒಳಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟು ಅವರುಗಳಿಗೆ ಸೂಕ್ತ ಪರೀಕ್ಷೆ, ಚಿಕಿತ್ಸೆಗೆ ಒಳಪಡಿಸದೆ, ಕ್ವಾರಂಟೈನ್‌ಗೆ ಒಳಪಡಿಸದೆ, ಅದಕ್ಕೆ ಬದಲಾಗಿ ದೇಶವಾಸಿಗಳಾದ 130 ಕೋಟಿ ಜನರನ್ನು ಲಾಕ್‌ಡೌನ್ ಗೆ ಒಳಪಡಿಸಿ ಮನೆಯಿಂದ ಹೊರಬರದಂತೆ ದಿಗ್ಬಂಧನ ವಿಧಿಸಿ , ವಿಶೇಷವಾಗಿ ಬೀದಿ ಬದಿಯಲ್ಲಿ ಟೆಂಟ್‌ಗಳಲ್ಲಿ ರಾತ್ರಿ ಕಳೆದು, ಹಗಲು ಹೊತ್ತು ಬೆವರು ಸುರಿಸಿ ದುಡಿದುಣ್ಣುವ ವಲಸೆ ಕಾರ್ಮಿಕರು ಅವರ ವೃದ್ದ ತಾಯಂದಿರು, ಗರ್ಬಿಣಿಯರು, ಎಳೆಮಕ್ಕಳು ನೂರಾರು, ಸಾವಿರಾರು ಕಿ.ಮೀ ದೂರದ ತಮ್ಮೂರಿಗೆ ನಡೆದು ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಿಸಿದ ಮೋದಿ ಸರ್ಕಾರದ ಬಳಿ ಇದೀಗ ಹಾಗೆ ಕಾರ್ಮಿಕರು ನಡೆದು ತೆರಳುವ ವೇಳೆ ಎಷ್ಟು ಜನ ಮೃತಪಟ್ಟರು ಎಂಬ ಕುರಿತು ಮಾಹಿತಿಯೇ ಇಲ್ಲವಂತೆ.

ದೇಶದ ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ವ್ಯಾವಹಾರಿಕ ಸ್ಥಿತಿಗತಿಯ ಕುರಿತು ತಜ್ಞರ ಜೊತೆ ಚರ್ಚಿಸದೆ ದೇಶದ ಬೇರೆ ಬೇರೆ ಭಾಗಗಳಿಗೆ ಉದ್ಯೋಗದ, ವ್ಯವಹಾರದ ಅಥವಾ ಇನ್ನಿತರ ನಿಮಿತ್ತ ತೆರಳಿದ ಜನರಿಗೆ ಬಹು ಮುಖ್ಯವಾಗಿ ಇತರ ರಾಜ್ಯಗಳ ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಊರು ಸೇರಿಕೊಳ್ಳಲು ಕನಿಷ್ಠ ಮರ್ನಾಲ್ಕು ದಿನಗಳ ಸಮಯಾವಕಾಶ ಕೂಡಾ ನೀಡದೆ ಮಾರ್ಚ್ 23ರ ರಾತ್ರಿ 8ಗಂಟೆಗೆ ಏಕಾಏಕಿ ಘೋಷಿಸಿದ ನಿರಂತರ 21ದಿನಗಳ ಲಾಕ್‌ಡೌನ್ ನಿಂದಾಗಿ ದೇಶದ ಜನಸಾಮಾನ್ಯರು ದಿಕ್ಕೆಟ್ಟು ಹೋಗಿದ್ದರು.

ಆ ಸಂಧರ್ಭದಲ್ಲಿ ವಿಶೇಷವಾಗಿ ವಲಸೆ ಕಾರ್ಮಿಕರು ಕೆಲಸವಿಲ್ಲದೆ, ಸಂಪಾದನೆ ಇಲ್ಲದೆ, ತಿನ್ನಲು ಆಹಾರವಿಲ್ಲದೆ ಕಂಗಾಲಾಗಿ ಸಾವಿರಾರು ಕಿ.ಮೀ ದೂರದ ತಮ್ಮ ತಮ್ಮ ತವರತ್ತ ತೆರಳಲು ನಿರ್ಧರಿಸಿದ್ದು ಸಂಚಾರಕ್ಕೆ ವಾಹನಗಳು ಇಲ್ಲವಾದ ಕಾರಣಕ್ಕೆ ನಡೆದು ತೆರಳಿದ್ದರು. ಆ ವೇಳೆ ಹಲವರು ಹಸಿವಿನಿಂದ ನಡೆಯಲಾರದೆ ಬಳಲಿ ಸತ್ತರೆ, ಇನ್ನು ಹಲವರು ಅನಾರೋಗ್ಯಕ್ಕೆ ತುತ್ತಾಗಿ ಸರಿಯಾದ ಚಿಕಿತ್ಸೆ, ಆಹಾರ, ನೀರು ಕೂಡ ಇಲ್ಲದೆ ಸತ್ತಿದ್ದರು. ಇಷ್ಟಾಗಿಯೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಬಾರತದ ಸರ್ಕಾರವೇ ಇಂತಹ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿರುವುದು ವಿಷಾಧನೀಯವಾದ ಮತ್ತು ಖಂಡನೀಯವಾದ ವಿಚಾರವಾಗಿದೆ.

0Shares