ರಾಷ್ಟ್ರೀಯ

ಕೃಷಿ ವಿರೋಧಿ ವಿದೇಯಕ ಜಾರಿಗೊಳಿಸುವ ಮೂಲಕ ಮೋದಿ ಸರ್ಕಾರ ರೈತರ ಮರಣ ಶಾಸನ ಬರೆದಿದೆ: ರಾಹುಲ್ ಗಾಂಧಿ ಕಿಡಿ!

‘ರೈತರು ಹೊಲದಲ್ಲಿ ಬಿಸಿಲು ಮಳೆಯನ್ನದೆ ವರ್ಷವಿಡೀ ಬೆವರು ಸುರಿಸಿ ಭೂಮಿಯಿಂದ ಬೆಳೆ ತಗೆಯುತ್ತಾರೆ, ಆದರೆ ಮೋದಿ ಸರ್ಕಾರ ಅಧಿಕಾರದ ಮದದಿಂದ ಆ ಅನ್ನದಾತರು ಕಣ್ಣಲ್ಲಿ ರಕ್ತ ಸುರಿಸುವಂತಹ ಪರಿಸ್ಥಿತಿ ತಂದೊಡ್ಡಿದೆ. ಈ ಸರ್ಕಾರ ರಾಜ್ಯ ಸಭೆಯಲ್ಲಿ ಈ ರೈತ ವಿರೋಧಿ ವಿಧೇಯಕಕ್ಕೆ ಅನುಮೋದನೆ ಪಡೆಯಲು ಹಿಡಿದ ಹಾದಿ ಅತ್ಯಂತ ಹೀನವಾದ ಹಾದಿಯಾಗಿದೆ. ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಣ್ಣುಪಾಲು ಮಾಡಿ ಅನ್ನದಾತ ರೈತರ ಮರಣ ಶಾಸನ ಬರೆಯಲಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರೈತ ವಿರೋಧಿ ಕೃಷಿ ಮಸೂದೆಗಳನ್ನು ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಬಳಿಕ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದಾರೆ.

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ‘ರೈತರ ಉತ್ಪನ್ನ ಮಾರಾಟ ಮತ್ತು ವ್ಯವಹಾರ’, ‘ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020’ ಇವುಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಗುರುವಾರ ಈ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಸಂಧರ್ಭದಲ್ಲಿ ‘ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಜಾರಿಗೊಳಿಸಲಾದ ಈ ವಿದೇಯಕಗಳು ರೈತರ ವಿರುದ್ಧದ ಮರಣದಂಡನೆ ಆದೇಶಗಳಾಗಿವೆ, ಇವುಗಳು ಪ್ರಜಾಪ್ರಭುತ್ವವೇ ನಾಚಿಸುವಂತಿದೆ’ ಎಂದು ರಾಹುಲ್ ಗಾಂಧಿಯವರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಮಾಡಿರುವ ಸರಣಿ ಟ್ವೀಟ್ ಗಳ ಸಾರಾಂಶ ಇಂತಿವೆ: ಮೋದಿ ಸರ್ಕಾರ ಜಾರಿಗೊಳಿಸಿರುವ ಈ ಕೃಷಿ ವಿರೋಧಿ ‘ಕರಾಳ ಕಾನೂನಿಂದಾಗಿ’ ಎಪಿಎಂಸಿ ಯಾ ರೈತ ಮಾರುಕಟ್ಟೆಗಳು ಮುಚ್ಚಿಹೋದ ಬಳಿಕ ರೈತರಿಗೆ MSP ಎಲ್ಲಿಂದ ದೊರಕುತ್ತದೆ? ಕನಿಷ್ಠ ಬೆಂಬಲ ಬೆಲೆಯ ಖಾತರಿ ಯಾಕೆ ಇಲ್ಲ? ಅನ್ನದಾತ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿಸುವ ನಡೆಯನ್ನು ಯಶಸ್ವಿಯಾಗಿಸಲು ದೇಶ ಅವಕಾಶ ನೀಡಲಾರದು. ಯಾವ ರೈತ ಮಣ್ಣಿಂದ ಚಿನ್ನ ಬೆಳೆಯುತ್ತಾನೋ, ಅದೇ ರೈತನನ್ನು ಮೋದಿ ಸರ್ಕಾರ ತನ್ನ ದುರಹಂಕಾರದಿಂದ ರಕ್ತ ಕಣ್ಣೀರು ಸುರಿಸುವಂತೆ ಮಾಡುತ್ತಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೋದಿ ಸರ್ಕಾರ ಕೃಷಿ ಮಸೂದೆಯ ರೂಪದಲ್ಲಿ ಬರೆದಿರುವ ರೈತರ ಮರಣ ಶಾಸನದಿಂದ ಪ್ರಜಾಪ್ರಭುತ್ವವೇ ನಾಚಿಕೆಪಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ‘ಸರ್ವಾನುಜ್ಞಾನಿ’ ಮೋದಿ ಸರ್ಕಾರದ ಇಂತಹ ಅಂತ್ಯವಿಲ್ಲದ ದುರಹಂಕಾರದ ಕಾರ್ಯಗಳು ಇಡೀ ದೇಶದ ಆರ್ಥಿಕತೆಯನ್ನು ನಾಶಗೊಳಿಸಿದೆ. ಅದಿಕಾರದ ಮದದಿಂದ ಕುರುಡಾಗಿರುವ ಮೋದಿ ಸರ್ಕಾರವು ತನ್ನ ದುರಾಡಳಿತ ಹಾಗೂ ತಪ್ಪು ನೀತಿಗಳಿಂದಾಗಿ ದೇಶವನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ. ಮತ್ತು ದೇಶದ ಈ ದುಸ್ಥಿತಿಗೆ ಒಮ್ಮೆ ದೇವರನ್ನೂ ಮತ್ತೊಮ್ಮೆ ಜನರನ್ನೂ ಹೊಣೆಗಾರರನ್ನಾಗಿಸುತ್ತಿದೆ. ಇವರ ಆಟವನ್ನು ದೇಶ ಇನ್ನೂ ಎಷ್ಟು ದಿನ ಸಹಿಸಿ ಕೊಳ್ಳಬೇಕು?0Shares