Advertisement

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಬಹಿರಂಗ ಪತ್ರ!

Advertisement

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಇಂದು ಸಮಯ ನಿಗದಿಯಾಗಿರುವ ಹಿನ್ನಲೆಯಲ್ಲಿ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಗಳಿಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್‌ಬುಕ್‌ ಗಳ ಮೂಲಕ ಬಹಿರಂಗ ಪತ್ರ ಬರೆದು ಈ ಭೇಟಿಯನ್ನು ಕೇವಲ ಸಂಪುಟ ವಿಸ್ತರಣೆ ಆ ಮೂಲಕ ಭಿನ್ನಮತಕ್ಕೆ ಕಡಿವಾಣ ಹಾಕುವ ಮಟ್ಟಕಷ್ಟೆ ಉಪಯೋಗಿಸಿಕೊಳ್ಳದೆ ಈ ಭೇಟಿಯನ್ನು ರಾಜ್ಯದ ಜನತೆಯ ಅಭ್ಯುದಯಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪತ್ರದ ಪೂರ್ಣಪಾಠ ಇಂತಿದೆ; ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಕಾಡಿಬೇಡಿ ಕೊನೆಗೂ ಪ್ರಧಾನಿಗಳ ಭೇಟಿಗೆ ಅವಕಾಶ ಪಡೆದಿದ್ದೀರಿ. ಈ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳದೆ ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಖಡಕ್ ಆಗಿ ಕೇಳಲು ಬಳಸಿಕೊಳ್ಳಿ. ರಾಜ್ಯದ ಜನ ನಿಮ್ಮ ಬೆನ್ನ ಹಿಂದಿದ್ದಾರೆ. ಕಳೆದ ವರ್ಷದ ಅತಿವೃಷ್ಟಿಗೆ ರೂ.35,000 ಕೋಟಿ ಪರಿಹಾರ ಕೇಳಿದ್ದೀರಿ,‌ ಆದರೆ ಕೇಂದ್ರ ಸರ್ಕಾರ ನೀಡಿದ್ದು ರೂ.1,869 ಕೋಟಿ‌. ಈ ಬಾರಿ ರೂ.8,000 ಕೋಟಿ ನಷ್ಟವಾಗಿದೆ ಎಂದು ಹೇಳುತ್ತಿದ್ದೀರಿ. ಕಳೆದ ವರ್ಷದ ಬಾಕಿ ಜೊತೆ ಈ ವರ್ಷದ ಪರಿಹಾರವನ್ನು ಉದಾರವಾಗಿ ಕೊಡುವಂತೆ ಕೇಳಿಕೊಳ್ಳಿ. 15ನೇ ಹಣಕಾಸು ಆಯೋಗದಿಂದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ನಷ್ಟವಾಗಿರುವುದು ಕರ್ನಾಟಕ ರಾಜ್ಯಕ್ಕೆ. ಈ ಅನ್ಯಾಯಕ್ಕೆ ಕಾರಣವಾಗಿರುವ ಮಾನದಂಡಗಳನ್ನು ಪರಿಷ್ಕರಿಸಿ ತೆರಿಗೆ ಹಂಚಿಕೆ ಮತ್ತು ಎಸ್ ಡಿ ಆರ್ ಎಫ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ಸಿಗುವಂತೆ ಮಾಡಿ. ಕೊರೊನಾ ಸೋಂಕಿನಲ್ಲಿ ವಿಶ್ವದಲ್ಲಿ ಭಾರತ, ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಗೆಲುವಿನ ಕಿರೀಟಗಳನ್ನೆಲ್ಲ ಮುಡಿಗೇರಿಸುವ ನರೇಂದ್ರ ಮೋದಿ ಅವರಿಗೆ ವೈಫಲ್ಯಗಳ ಹೊಣೆಯನ್ನು ರಾಜ್ಯಗಳ ಹೆಗಲ ಕಡೆ ಜಾರಿಸುವ ಚಾಳಿ ಇದೆ. ಪ್ರಧಾನಿಗಳಿಗೆ ಅವರಿಗೆ ಜವಾಬ್ದಾರಿ ನೆನಪಿಸಿ ರಾಜ್ಯಕ್ಕೆ ನ್ಯಾಯ ಕೊಡಿಸಿ. ಕೊರೊನಾ ನಿಯಂತ್ರಣದ ಸಾಮಗ್ರಿ ಖರೀದಿಯನ್ನು ಕೇಂದ್ರೀಕೃತಗೊಳಿಸಿರುವ ಕೇಂದ್ರ ಸರ್ಕಾರ, ಕರ್ನಾಟಕದ ಬೇಡಿಕೆಯ ಶೇಕಡಾ ಹತ್ತರಷ್ಟೂ ಪೂರೈಸಿಲ್ಲ. ವೆಂಟಿಲೇಟರ್ ಮತ್ತು ಆಮ್ಲಜನಕ ಪೂರೈಕೆಯ ಸಾಧನಗಳ ಕೊರತೆಯಿಂದ ಜನ ಸಾಯುತ್ತಿರುವುದನ್ನು ಗಮನಕ್ಕೆ ತಂದು ನರೇಂದ್ರ ಮೋದಿ ಅವರ ಕಣ್ಣು ತೆರೆಸಿ. ಕೇಂದ್ರ ಸರ್ಕಾರ ಘೋಷಿಸಿದ್ದ ರೂ.20 ಲಕ್ಷ ಕೋಟಿ ಪ್ಯಾಕೇಜ್ ರಾಜ್ಯದ ಜನರನ್ನು ಇನ್ನೂ ತಲುಪಿಲ್ಲ. ಕೊರೊನಾ ಸೋಂಕಿಗಿಂತ ಹಸಿವು ಮತ್ತು ನಿರುದ್ಯೋಗದಿಂದ ಹೆಚ್ಚು ಜನ ಸಾವು - ನೋವಿಗೀಡಾಗುವ ಮೊದಲು, ಪ್ಯಾಕೇಜ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ನೀಡಲು ಒತ್ತಾಯಿಸಿ ನ್ಯಾಯಬದ್ಧವಾಗಿ ರಾಜ್ಯಕ್ಕೆ ನೀಡಬೇಕಾಗಿರುವ ಜಿಎಸ್‌ಟಿ ಪರಿಹಾರ ರೂ.25,508 ಕೋಟಿ ನೀಡದೆ ದ್ರೋಹ ಬಗೆದಿರುವ ಕೇಂದ್ರ ಸರ್ಕಾರ, ಸಾಲ ಎತ್ತಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಗೆ ಭಿಕ್ಷಾಪಾತ್ರೆ ನೀಡಿದೆ. ಯಡಿಯೂರಪ್ಪ ಅವರೇ, ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯದೆ ಧೈರ್ಯದಿಂದ ಈ ಅನ್ಯಾಯ ಸರಿಪಡಿಸಲು ಹೇಳಿ ಎಂದವರು ಈ ಬಹಿರಂಗ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Advertisement
Advertisement
Recent Posts
Advertisement