ರಾಜ್ಯ

ಪ್ರತಿ ತಾಲೂಕಿನಲ್ಲಿ ಕನಿಷ್ಠ 5ಸಾವಿರ ಯುವಕರನ್ನು ಯುವ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸುವಂತೆ ಡಿಕೆಶಿ ಕರೆ.

ರಾಜ್ಯಾಧ್ಯಂತ ಪ್ರತಿ ತಾಲೂಕಿನಲ್ಲೂ ಕನಿಷ್ಠ 5 ಸಾವಿರ ಯುವಕರನ್ನು ಯುವ ಕಾಂಗ್ರೆಸ್‌ ಸದಸ್ಯರಾಗಿ ಸೇರ್ಪಡೆಗೊಳಿಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪಕ್ಷದ ಜಿಲ್ಲಾ, ತಾಲೂಕು ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ಕರೆ ನೀಡಿದ್ದಾರೆ.ಈ ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘವಾದ ಇತಿಹಾಸ ಇದೆ. ಒಂದರ್ಥದಲ್ಲಿ ಈ ದೇಶದ ಇತಿಹಾಸವೇ ಕಾಂಗ್ರೆಸ್ ಇತಿಹಾಸವಾಗಿದೆ. ಆದರೆ ಇಂದು ದೇಶ ಗಂಡಾಂತರಕಾರಿ ಪರಿಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ದೇಶದಲ್ಲಿ ಬದಲಾವಣೆಯನ್ನು ಮೂಡಿಸುವುದು ಯುವಕರ ಜವಾಬ್ದಾರಿ ಆಗಿದೆ. ಆ ನಿಟ್ಟಿನಲ್ಲಿ ಹೋರಾಡಲು ನಾವು ಯುವ ಕಾಂಗ್ರೆಸ್ ಪಡೆಯನ್ನು ಸದೃಢ ಗೊಳಿಸಬೇಕಾಗಿದೆ.

ಆ ಕಾರಣಕ್ಕಾಗಿ ಪ್ರತಿ ತಾಲೂಕಿನಲ್ಲಿ ಕನಿಷ್ಠ 5ಸಾವಿರ ಯುವಕರನ್ನು ಯುವ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸುವ ಮೂಲಕ ಪಕ್ಷವನ್ನು ಮತ್ತು ಆ ಮೂಲಕ ದೇಶವನ್ನು ಕಟ್ಟಬೇಕಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್, ಬ್ಲ್ಯಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಪದಾದಿಕಾರಿಗಳು ಹಾಗೂ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಸಮರೋಪಾದಿಯಲ್ಲಿ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದವರು ಕರೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪಕ್ಷ ಮತ್ತು ದೇಶದೊಳಗೆ ಯುವಕರ ನಾಯಕತ್ವ ಬಲಿಷ್ಟಗೊಳಿಸಬೇಕು, ಪಂಚಾಯತ್ ಮಟ್ಟದಿಂದ ಕೇಂದ್ರದ ಮಟ್ಟದವರೆಗೂ ಯುವಕರ ನೇತೃತ್ವದಲ್ಲಿ ನಾಯಕತ್ವ ಇರಬೇಕು ಎಂಬ ಸದುದ್ದೇಶದಿಂದ ಯುವ ಕಾಂಗ್ರೆಸ್‌ನ ಚುನಾವಣೆಗೆ ಚಾಲನೆ ನೀಡಿದ್ದಾರೆ. ಈ ಅಭಿಯಾನ ಇಂದಿನಿಂದ ಒಂದು ತಿಂಗಳು ನಡೆಯಲಿದೆ. ಈ ಕಾರ್ಯದಲ್ಲಿ ಅತಿ ಹೆಚ್ಚು ಯುವಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದವನೆ ನಿಜವಾದ ನಾಯಕನಾಗಿ ಹೊರಹೊಮ್ಮಲಿದ್ದಾನೆ. ಸ್ವತಃ ನಾನು ಕೂಡ ಯುವ ಕಾಂಗ್ರೆಸ್ ಮೂಲಕವೇ ತಾಲೂಕು ಮಟ್ಟದಿಂದ ಬೆಳೆದು ಇಂದು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಆದಕಾರಣ ಎಲ್ಲರೂ ಇದರಲ್ಲಿ ಭಾಗಿಯಾಗುವಂತೆ ಅವರು ವಿನಂತಿಸಿದ್ದಾರೆ.

0Shares