Advertisement

ನಮ್ಮನ್ನಾರಿಸಿದರೆ ಉಚಿತವಾಗಿ ಕೋವಿಡ್ ವ್ಯಾಕ್ಸೀನ್, ಇಲ್ಲಾಂದರೆ....!

Advertisement

ಬರಹ: ಗ್ಲಾಡ್ಸನ್ ಅಲ್ಮೇಡಾ (ಲೇಖಕರು ಸಾಮಾಜಿಕ ಚಿಂತಕರು, ಜನಪರ ಬರಹಗಾರರು) ತಮ್ಮನ್ನು ಅಧಿಕಾರಕ್ಕೆ ತಂದರೆ, ಇನ್ನೂ ಅವಿಷ್ಕಾರವಾಗದ ಕೋವಿಡ್ ವ್ಯಾಕ್ಸೀನನ್ನು, ಬಿಹಾರದ ಜನತೆಗೆ ಉಚಿತವಾಗಿ ಕೊಡಲಾಗುವುದೆಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿರುವುದು ಒಂದು ಹೇಳಿಕೆಯಲ್ಲ ಬದಲಾಗಿ ಎಚ್ಚರಿಕೆ. 'ನಮ್ಮನ್ನಾರಿಸಿದರೆ ಉಚಿತವಾಗಿ ಕೋವಿಡ್ ವ್ಯಾಕ್ಸೀನ್, ಇಲ್ಲಾಂದರೆ....'. ಇದು ಮುಂದೆ ಚುನಾವಣೆಯನ್ನು ಎದುರಿಸಲಿರುವ ಇತರ ರಾಜ್ಯಗಳಿಗೂ ಎಚ್ಚರಿಕೆ. ಒಂದು ರೀತಿಯಲ್ಲಿ ಇಡೀ ದೇಶದ ಜನತೆಗೆ ಇದೊಂದು ಎಚ್ಚರಿಕೆ. ನಮ್ಮನ್ನು ಆರಿಸಿದರೆ ನಿಮಗೆ ಉಚಿತ ವ್ಯಾಕ್ಸೀನ್...ಇಲ್ಲಾಂದರೆ... ಸಾಂಕ್ರಾಮಿಕಕ್ಕೆ ವ್ಯಾಕ್ಸೀನ್ ಕೊಡುವುದು ಸರಕಾರ ನಮ್ಮ ಮೇಲೆ ಮಾಡುವ ಉಪಕಾರನೂ ಅಲ್ಲ ಕೃಪೆನೂ ಅಲ್ಲ. ಅದು ಅವರ ಕರ್ತವ್ಯ. ಆರೋಗ್ಯ ಹಾಗೂ ಶಿಕ್ಷಣ ಜನರ ಮೂಲಭೂತ ಹಕ್ಕಾದರೆ, ಅದೇ ಆರೋಗ್ಯ ಹಾಗೂ ಶಿಕ್ಷಣ ಜನತೆಗೆ ಲಭ್ಯವಾಗುವಂತೆ ಮಾಡುವುದು ಸರಕಾರದ ಕರ್ತವ್ಯ. ನಾವು ಸರಕಾರವನ್ನು ಆರಿಸುವುದು, ಸರಕಾರದ ಮುಖ್ಯಸ್ಥರು ದಿನಕ್ಕೆ ಐದಾರು ಬಣ್ಣ-ಬಣ್ಣದ ಬಟ್ಟೆಗಳನ್ನು ತೊಟ್ಟು ಶೋಕಿ ಮಾಡಲು ಇಲ್ಲ ವಾರಕ್ಕೊಮ್ಮೆ ಟಿವಿಯಲ್ಲಿ ಮುಖ ತೋರಿಸಿ ಮಾಡೆಲಿಂಗ್ ಮಾಡಲೂ ಅಲ್ಲ. ಅದರೆ ಕೋವಿಡನ್ನು ಎದುರಿಸುವ ಬದಲು ಅದರ ಬಗ್ಗೆ ಜನಮಾನಸದಲ್ಲಿ ಹೆದರಿಕೆಯನ್ನು ಹುಟ್ಟು ಹಾಕಿ, ಹೀಗೆ ಹೆದರಿದ ಕೋಟ್ಯಾಂತರ ಜನರನ್ನು ರಾತ್ರೋ ರಾತ್ರಿ ಬೀದಿಗಟ್ಟಿ, ಅವರಿಗೆ ಉದ್ಯೋಗ, ಆಹಾರ, ನೀರು, ಸಾರಿಗೆ ಕಲ್ಪಿಸದೆ, ಅವರನ್ನು ಬೀದಿಗಳಲ್ಲಿ ಸಾಯಲು ಬಿಟ್ಟವರಿಂದ ಹೆಚ್ಚೇನು ಅಪೇಕ್ಷಿಸಿದರೆ ನಮ್ಮ ತಪ್ಪಾದೀತು. ಉಳಿದೆಲ್ಲಾ ಸಮಯದಲ್ಲಿ ಬಿಡಿ, ಕೊನೆಪಕ್ಷ ಇಂಥದೊಂದು ಮಹಾ ಸಾಂಕ್ರಾಮಿಕದ ಹೊತ್ತಿನಲ್ಲಾದರೂ ಮನುಷ್ಯರಂತೆ ವರ್ತಿಸಬಹುದೆಂದು ನಾವು ಅದೇಗೆ ಅವರನ್ನು ನಂಬಿದೇವೋ ನಾ ಕಾಣೆ! ಕೋವಿಡನ್ನು ಎದುರಿಸಬೇಕಾದ ಸಮಯದಲ್ಲಿ ತಬ್ಲೀಗಿಗಳನ್ನು ಮುಂದಿಟ್ಟುಕೊಂಡು ದೇಶದ ಜನರಲ್ಲಿ ಒಡಕನ್ನು ಮೂಡಿಸಿ, ಸಮುದಾಯಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿ ಅಂದ ನೋಡಿದವರು, ಇದೀಗ ಪುನ: ಮತಬೇಟೆಗಾಗಿ, ವ್ಯಾಕ್ಸೀನ್ ಹೆಸರಿನಲ್ಲಿ ತಮ್ಮ ಎಂದಿನ ಮೃಗೀಯತೆಯನ್ನು ತೋರಿಸುತ್ತಿದ್ದಾರೆ. ದೇಶದಲ್ಲಿ ಇದುವರೆಗೂ ಕೋವಿಡ್‍ನಿಂದ ಭಾಧಿತರು 78 ಲಕ್ಷಕ್ಕಿಂತ ಹೆಚ್ಚು ಮಂದಿ. ಮೃತರಾದವರು ಒಂದು ಲಕ್ಷಕ್ಕಿಂತ ಹೆಚ್ಚು. ಇದರಲ್ಲಿ ಸರಕಾರವೇ ಕೊಟ್ಟಿರುವ ದಾಖಲೆಗಳ ಪ್ರಕಾರ ತಬ್ಲೀಗಿಗಳು, ಅವರಿಂದ ಭಾಧಿತರಾದವರು ಇತ್ಯಾದಿ 5000 ಕ್ಕಿಂತ ಕಡಿಮೆ ಮಂದಿ. ದೇಶದೊಳಗೆ ಕೋವಿಡ್ ಬಂದದ್ದು ತಬ್ಲೀಗಿಗಳಿಂದಲ್ಲ. ಅವರು ತಮ್ಮ ಸಭೆಗೆ ಸೇರಿದಾಗ ಸಭೆ-ಸಮಾರಂಭಗಳ ಮೇಲೆ ಸರಕಾರ ಇನ್ನೂ ಕಡಿವಾಣ ಹೇರಿದ್ದಿಲ್ಲ. ದೇಶದ ಇತರ ಎಪ್ಪತ್ತೆಂಟು ಲಕ್ಷ ಮಂದಿಗೆ ಹೇಗೆ ಸೋಂಕು ತಗಲಿತೋ, ಹೇಗೆ ಒಬ್ಬರಿಂದ ಇನ್ನೊಬ್ಬರಿಗೆ ಹರಡಿತೋ, ಅದೇ ರೀತಿಯಲ್ಲಿ ತಬ್ಲೀಗಿಗಳೂ ಕೋವಿಡ್ ಭಾಧಿತರೇ ಹೊರತು ವಾಹಕರಲ್ಲ. ಆದರೂ ವೈರಸನ್ನು ಮುಂದಿಟ್ಟುಕೊಂಡು ದೇಶದ ಇಪ್ಪತ್ತು ಕೋಟಿಯಷ್ಟಿರುವ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿರಿಸಿ, ಅವರನ್ನು ಅವಮಾನ ಹಾಗೂ ಅಪಹಾಸ್ಯಕ್ಕೀಡು ಮಾಡಿದವರು ಇವತ್ತು, ಅಸ್ತಿತ್ವದಲ್ಲೇ ಇರದ ವ್ಯಾಕ್ಸೀನನ್ನು ಮುಂದಿಟ್ಟುಕೊಂಡು ಮತಬೇಟೆಗೆ ಇಳಿದಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದರಲ್ಲಿ ಸಂಶಯನೂ ಇಲ್ಲ ಯಾಕೆಂದರೆ ನಾವು ಹಿಂಸಾರಸಿಕರು ಹಾಗೂ 'ದ್ವೇಷ'ಭಕ್ತಿಯ ವಾರಸುದಾರರು. -------------------------------- ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com.

Advertisement
Advertisement
Recent Posts
Advertisement