ರಾಷ್ಟ್ರೀಯ

ಕೇಂದ್ರದೆದುರು ರಾಜ್ಯಗಳನ್ನು ಒತ್ತೆಯಿಡುತ್ತಿರುವುದೇಕೆ: ಜಿಎಸ್‌ಟಿ ಸಾಲದ ಕುರಿತು ರಾಹುಲ್ ಪ್ರಶ್ನೆ

ಕೇಂದ್ರದಿಂದ ರಾಜ್ಯಗಳಿಗೆ ಪಾವತಿಯಾಗಬೇಕಿರುವ ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಪಾವತಿಸದ ಹಿನ್ನಲೆಯಲ್ಲಿ ರಾಜ್ಯಗಳು ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆಯುವ ಕುರಿತಾದ ಕೇಂದ್ರ ಸರ್ಕಾರದ ಸಲಹೆಗೆ ಸಹಮತ ವ್ಯಕ್ತಪಡಿಸಿರುವ ಸುಮಾರು 21 ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳ ತೀರ್ಮಾನವನ್ನು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.‘ನಿಮ್ಮ ನಿಮ್ಮ ರಾಜ್ಯಗಳ ಭವಿಷ್ಯವನ್ನು ನೀವು ಮತನೀಡಿ ಆಯ್ಕೆಗೊಳಿಸಿರುವ ಸರ್ಕಾರದ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಏಕೆ ಒತ್ತೆ ಇಡುತ್ತಿದ್ದಾರೆ?’ ಎಂದವರು ಮೋದಿ ಸರ್ಕಾರದ ಸಲಹೆಯನ್ನು ಸ್ವೀಕರಿಸಿ ಸಹಮತ ವ್ಯಕ್ತಪಡಿಸಿರುವ ರಾಜ್ಯಗಳ ಜನತೆಗೆ ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್‌ ಗಾಂಧಿ ರಾಜ್ಯಗಳ ಜಿಎಸ್‌ಟಿ ಹಣ ಪಾವತಿಗೆ ಸಂಬಂಧಿಸಿದಂತೆ ಕೆಲವು ಅಂಶಗಳನ್ನು ಪ್ರಸ್ತಾಪಿಸಿ ಜನರಿಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಜಿಎಸ್‌ಟಿ ಆದಾಯವನ್ನು ರಾಜ್ಯಗಳಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಪ್ರಧಾನಿ ಮೋದಿಯವರ ಆರ್ಥಿಕ ನೀತಿ ಹಾಗೂ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನಾಶವಾಯಿತು. ಆದರೆ ಕಾರ್ಪೊರೇಟ್ ಕಂಪನಿಗಳಿಗೆ ರೂಪಾಯಿ 1.4 ಲಕ್ಷ ಕೋಟಿ ತೆರಿಗೆ ಕಡಿತದ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಮತ್ತು ಮೋದಿಯವರ ತಿರುಗಾಟಕ್ಕೆ ರೂಪಾಯಿ 8,400 ಕೋಟಿ ವೆಚ್ಚದಲ್ಲಿ ಎರಡು ವಿಮಾನಗಳ ಖರೀದಿ ಮಾಡಲಾಗಿದೆ. ಇದೆಲ್ಲವನ್ನೂ ಮಾಡುವ ಮೋದಿ ಸರ್ಕಾರಕ್ಕೆ ರಾಜ್ಯಗಳಿಗೆ ಕೊಡಲು ಅವರ ಖಜಾನೆಯಲ್ಲಿ ಹಣವಿಲ್ಲ. ಆ ಕಾರಣಕ್ಕಾಗಿ ರಾಜ್ಯಗಳಿಗೆ ಸಾಲ ಪಡೆಯಲು ಮೋದಿ ಸರ್ಕಾರದ ಹಣಕಾಸು ಸಚಿವರು ಸಲಹೆ ನೀಡುತ್ತಾರೆ ಎಂಬ ವಿಚಾರಗಳನ್ನು ರಾಹುಲ್‌ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ಜಿಎಸ್‌ಟಿ ಪರಿಹಾರದ ಬದಲಿಯಾಗಿ ಕೇಂದ್ರ ಸರ್ಕಾರದ ಈ ಸಾಲದ ಸಲಹೆಗೆ ಮುಖ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಸರ್ಕಾರಗಳು ಈಗಾಗಲೇ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದು ಜಿಎಸ್‌ಟಿ ಪರಿಹಾರದ ಬದಲಿಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಇದೀಗ ರೂಪಾಯಿ 1.10 ಲಕ್ಷ ಕೋಟಿ ಸಾಲ ಪಡೆಯಲು ಮುಂದಾಗಿರುವ ವಿಚಾರದ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ.⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ

⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares