ಅಂಕಣ

ಸಂವಿಧಾನ ವಿರೋಧಿಗಳ ಆಡಳಿತದಡಿ ಈ ದೇಶದ ಭವಿಷ್ಯ ಅಪಾಯದಲ್ಲಿದೆ!

ಬರಹ: ಡಾ. ಜೆ. ಎಸ್ ಪಾಟೀಲ (ಲೇಖಕರು ಹಿರಿಯ ಚಿಂತಕರು ಹಾಗೂ ಸಮಾನತಾವಾದಿ)ಉತ್ತರಪ್ರದೇಶ ಮಾತ್ರವಲ್ಲದೆ ಇಡೀ ಉತ್ತರ ಭಾರತವೇ ಮೊದಲಿನಿಂದಲೂ ಒಂದು ಬಗೆಯ ಅನಾಗರಿಕತೆ ಮತ್ತು ಅಸಂಗತಗಳಿಗೆ ಪ್ರಸಿದ್ದವಾದಂತದ್ದು. ಅದರಲ್ಲೂ ಉತ್ತರ ಪ್ರದೇಶದಲ್ಲಿ ಅಲ್ಲಿನ ಬಹುಸಂಖ್ಯಾತ ಪಂಡಿತ ಸಮುದಾಯ ಇಡೀ ರಾಜ್ಯವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಜಮೀನ್ದಾರಿ ಸಮುದಾಯವಾದ ರಜಪೂತರನ್ನು ನಿಯಂತ್ರಿಸುತ್ತ ಅಲ್ಲಿ ಇನ್ನುಳಿದ ಬಹುಜನ ಸಮುದಾಯಗಳನ್ನು ಅಮಾನುಷವಾಗಿ ಶೋಷಿಸುತ್ತ ˌ ಬಹುಜನರು ಸಾಮಾಜಿಕವಾಗಿˌ ಸಾಂಸ್ಕೃತಿಕವಾಗಿˌ ಶೈಕ್ಷಣಿಕವಾಗಿˌ ಮತ್ತು ರಾಜಕೀಯವಾಗಿ ಮೇಲೇಳದಂತೆ ತುಳಿಯುತ್ತಲೆ ಬಂದಿದೆ. 1990ರ ನಂತರ ವಿ. ಪಿ . ಸಿಂಗ್ ಅಲ್ಲಿ ಶೂದ್ರ ಪ್ರಜ್ಞೆ ಜಾಗೃತಗೊಳಿಸಿ ಬಹುಜನ ನಾಯಕತ್ವಕ್ಕೆ ಮನ್ನಣೆ ನೀಡುತ್ತಾರೆ. ಆನಂತರ ಲಾಲುಪ್ರಸಾದ್ ಯಾದವ್ ಅವರು ವಿಶೇಷವಾಗಿ ಬಿಹಾರ ಮತ್ತು ಬಹುತೇಕ ಉತ್ತರ ಭಾರತದಾದ್ಯಂತ ಹಿಂದುಳಿದ ವರ್ಗದ ಜನರಲ್ಲಿ ರಾಜಕೀಯ ಪ್ರಜ್ಞೆ ಜಾಗ್ರತಗೊಳಿಸುವ ಮೂಲಕ ಅಲ್ಲಿನ ಪಂಡಿತ ಸಮುದಾಯಕ್ಕೆ ಬಲವಾದ ಹೊಡೆತವನ್ನು ನೀಡುತ್ತಾರೆ.

ಅದೇ ಕಾರಣದಿಂದ ಸನಾತನಿಗಳ ಕಪಿಮುಷ್ಠಿಯಲ್ಲಿರುವ ಭಾರತೀಯ ಮಾಧ್ಯಮಗಳು ಲಾಲುಪ್ರಸಾದರಂತ ಮೇಧಾವಿ ರಾಜಕಾರಣಿಯನ್ನು ಕಡುಭ್ರಷ್ಟ ಮತ್ತು ಬಫೂನ್ ಎನ್ನುವಂತೆ ಬಿಂಬಿಸಲು ಆರಂಭಿಸುತ್ತವೆ. ಲಾಲುಪ್ರಸಾದ್ ಆಳ್ವಿಕೆಯಿಂದ ಅಲ್ಲಿನ ಮೂಲನಿವಾಸಿ ಬಹುಜನರು ರಾಜಕೀಯ ಪ್ರಾತಿನಿಧ್ಯವನ್ನು ಪಡೆಯುವ ಮೂಲಕ ಆರ್ಥಿಕ ಸದೃಢತೆಯನ್ನು ಸಾಧಿಸುತ್ತಾರೆ. ಆಗ ಉತ್ತರ ಭಾರತದ ಶೂದ್ರ ಮೇಲ್ವರ್ಗಗಳಾದ ರಜಪೂತರುˌ ಕಾಯಸ್ಥರುˌ ಝಾಟರನ್ನು ಎತ್ತಿಕಟ್ಟುವ ಸಂಘಪರಿವಾರದ ಪಂಡಿತರು ತದನಂತರದಲ್ಲಿ ಅಲ್ಲಿನ ಬಹುಜನರನ್ನು ನಿಯಂತ್ರಿಸಲು ಆರಂಭಿಸುತ್ತಾರೆ. ಕಾಲಾನಂತರದಲ್ಲಿ ಕಾನ್ಸಿರಾಮ್ ಮತ್ತು ಮಾಯಾವತಿಯವರ ಬಹುಜನ ಪಕ್ಷವನ್ನು ಪರೋಕ್ಷವಾಗಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ಮತಬ್ಯಾಂಕನ್ನು ವಿಭಜಿಸುವ ಸಂಘಿ ಪಂಡಿತ ಸಮುದಾಯ ಅಲ್ಲಿನ ಇತರ ಕೆಳವರ್ಗಗಳಾದ ಕೂರ್ಮಿˌ ಸೋನಿˌ ಲೋಧ ಮುಂತಾದ ಸಮುದಾಯಗಳನ್ನು ಬುಟ್ಟಿಗೆ ಹಾಕಿಕೊಂಡು ತಮ್ಮ ಜಾತಿಯ ಹಿತಾಸಕ್ತಿ ಕಾಯಲು ಸ್ಥಾಪಿತವಾದ ಬಿಜೆಪಿಯನ್ನು ಭದ್ರವಾಗಿ ನೆಲೆಯೂರಿಸುತ್ತಾರೆ.

ಅದರ ಪ್ರತಿಫಲವೇ ಇಂದು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಎನ್ನುವ ಪಂಡಿತ ನಿಯಂತ್ರಿತ ರಜಪೂತ ಮೂಲಭೂತವಾದಿ ಸನ್ಯಾಸಿ ಆ ರಾಜ್ಯವನ್ನು ಇನ್ನಿಲ್ಲದಂತೆ ಅರಾಜಕತೆಗೆ ದೂಡಿದ್ದು. ಕಳೆದ ವಾರ ಉತ್ತರ ಪ್ರದೇಶದ ಹಥ್ರಾಸ್ ಎಂಬ ಹಳ್ಳಿಯ ಮನೀಷಾ ವಾಲ್ಮಿಕಿ ಎನ್ನುವ ತುಳಿತಕ್ಕೊಳಗಾದ ಯುವತಿಯ ಮೇಲೆ ಮೇಲ್ವರ್ಗದ ರಜಪೂತ ಯುವಕರಿಂದ ನಡೆದ ಅತ್ಯಾಚಾರ ಮತ್ತು ದೌರ್ಜನ್ಯಗಳ ನಂತರದ ಬೆಳವಣಿಗೆಗಳು ಇಂದಿನ ಉತ್ತರ ಪ್ರದೇಶ ಆಡಳಿತದ ಮೃಗೀಯ ಮುಖವಾಡವನ್ನು ತೆರೆದಿಡುತ್ತವೆ. ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 29ರ ಮಂಗಳವಾರ ಮುಂಜಾನೆ 6.30 ಕ್ಕೆ ಕೊನೆಯುಸಿರೆಳೆದ ಅತ್ಯಾಚಾರಕ್ಕೊಳಗಾದ ಆ ಯುವತಿಯ ಶವವನ್ನು ಉತ್ತರ ಪ್ರದೇಶದ ಪೋಲಿಸರು ಯುವತಿಯ ಕುಟುಂಬವನ್ನು ದೂರವಿಟ್ಟು ಅನುಮಾನಾಸ್ಪದವಾಗಿ ನಡುರಾತ್ರಿ 3.30ಕ್ಕೆ ಸಂಸ್ಕಾರ ಮಾಡುವಲ್ಲಿಗೆ ಕೊನೆಗೊಳ್ಳುತ್ತದೆ. ಮರಣೋತ್ತರ ಪರೀಕ್ಷೆಯ ನಂತರ ಯುವತಿಯ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಬೇಕಿದ್ದ ಪೋಲಿಸರು ಪಾಲಕರನ್ನು ಅವರ ಮನೆಯಲ್ಲಿ ಕೂಡಿಹಾಕಿ ಬಿಗಿ ಬಂದೋಬಸ್ತಿನಲ್ಲಿ ಯುವತಿಯ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಸ್ಮಶಾನದ ಸುತ್ತಲಿನ ರಸ್ತೆಗಳ ದೀಪಗಳನ್ನು ಆರಿಸಿ ಕತ್ತಲೆಯಲ್ಲಿಯೇ ಪೊಲೀಸರು ಶವ ಸಂಸ್ಕಾರ ಮಾಡಿ ಮುಗಿಸುತ್ತಾರೆ.

ಗ್ರಾಮದ ಜನ ಮತ್ತು ಮಾಧ್ಯಮದವರು ಯಾರೂ ಬರದಂತೆ ಪೊಲೀಸರು ಸ್ಮಶಾನದ ಪ್ರವೇಶದಲ್ಲಿ ಬ್ಯಾರಿಕೇಡ್ ಹಾಕಿ ಕಾವಲು ನಿಲ್ಲುತ್ತಾರೆ. ಇಂಥ ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಕೂಡ ತನುಶ್ರೀ ಪಾಂಡೆ ಎನ್ನುವ ಇಂಡಿಯಾ ಟುಡೆ (ಆಜ್ ತಕ್) ಚಾನಲ್ ವರದಿಗಾರ್ತಿ ಈ ಪ್ರಕರಣವನ್ನು ವರದಿ ಮಾಡುತ್ತಾಳೆ. ಈ ವರದಿ ಇಡೀ ದೇಶವನ್ನು ಬಡಿದೆಬ್ಬಿಸುತ್ತದೆ. ಬಹುಶಃ ತನುಶ್ರೀ ಈ ಪ್ರಕರಣವನ್ನು ವರದಿ ಮಾಡದೇ ಹೋಗಿದ್ದರೆ, ಯೋಗಿ ರಾಜ್ಯದಲ್ಲಿ ಮಾಮೂಲಾಗಿರುವ ಅರಾಜಕತೆಯ ಚಿತ್ರಣ ಮುಚ್ಚಿಹೋಗುತ್ತಿತ್ತು. ಯೋಗಿ ಹೆಸರಿನ ಈ ಆದಿತ್ಯನಾಥ ಸರ್ಕಾರದ ಅರಾಜಕತೆಯ ಕರಾಳತೆಯನ್ನು ತೆರೆದಿಟ್ಟ ಈ ವರದಿ ದೇಶದಾದ್ಯಂತ ಎಲ್ಲ ಸಂವೇದನಾಶೀಲ ಮನಸ್ಸುಗಳಲ್ಲಿ ತಲ್ಲಣವನ್ನೇ ಸ್ರಷ್ಠಿಸುತ್ತದೆ. ಮಾಮೂಲಿನಂತೆ ಸತ್ಯವನ್ನು ಸುಳ್ಳು ಮಾಡುವ ಮತ್ತು ಮೋದಿ ಭಜನೆಯಲ್ಲಿ ನಿರತವಾಗಿರುವ ಉಳಿದ ಮಾಧ್ಯಮಗಳು ಈ ಕರಾಳ ಘಟನೆಯ ಕುರಿತು ಉಪಚಾರಕ್ಕೆಂಬಂತೆ ಸುದ್ಧಿ ಪ್ರಸಾರ ಮಾಡಿ ಕೈತೊಳೆದು ಕೊಳ್ಳುತ್ತವೆ.

ಕಳೆದ ಆರೇಳು ವರ್ಷಗಳಲ್ಲಿ ಅದರಲ್ಲೂ ಕೇಂದ್ರದಲ್ಲಿ ಮೋದಿ ನೇತ್ರತ್ವದ ಬಿಜೆಪಿ ಸರಕಾರ ಮತ್ತು ಯುಪಿಯಲ್ಲಿ ಯೋಗಿ ನೇತ್ರತ್ವದ ಅದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಲಪಂಥೀಯ ಸನಾತನಿ ಮೂಲಭೂತವಾದಿಗಳು ಪ್ರತಿಪಾದಿಸುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪುರುಷ ಪ್ರಧಾನ ಸಮಾಜವನ್ನು ಪುನರ್ ಪ್ರತಿಷ್ಠಾಪಿಸುವ ಯತ್ನಗಳು ವೇಗ ಪಡೆಯುತ್ತಿವೆ. ದೇಶಾದ್ಯಂತ ಅಲ್ಪಸಂಖ್ಯಾತರುˌ ದಲಿತರ ಮೇಲೆ ಹಲ್ಲೆಗಳುˌ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯಗಳು ನೂರ‌್ಮಡಿಗೊಂಡಿವೆ. ಇದು ಬಿಜೆಪಿಯನ್ನು ನಿಯಂತ್ರಿಸುವ ಸನಾತನಿ ಮೂಲಭೂತವಾದಿ ಸಂಘಟನೆಗಳ ವ್ಯವಸ್ಥಿತ ಮನು ಸ್ಮೃತಿ ಮರು ಜಾರಿಗೆ ತರುವ ಹುನ್ನಾರವೆಂದು ಬೇರೆ ಹೇಳುವ ಅಗತ್ಯವಿಲ್ಲ. ಸ್ತ್ರೀಯರಿಗೆ ಧಾರ್ಮಿಕ ಸಂಸ್ಕಾರ ಮತ್ತು ಶಿಕ್ಷಣವನ್ನು ನಿರಾಕರಿಸುವ ಸನಾತನಿಗಳು ತಮ್ಮ ಪ್ರಾಚೀನ ಹೀನ ಸಂಸ್ಕಾರವನ್ನು ಈ ಅಧುನಿಕ ಕಾಲದಲ್ಲೂ ಜೀವಂತವಾಗಿಡಲು ಈಗ ತಮ್ಮದೇ ಸರಕಾರದ ಆಡಳಿತದ ಮೂಲಕ ಪ್ರಯತ್ನಿಸುತ್ತಿವೆ. ಹಿಂದೆ ಅಫಘಾನಿಸ್ಥಾನದಲ್ಲಿ ತಾಲಿಬಾನಿಗಳೆಂಬ ಮುಸ್ಲಿಂ ಮೂಲಭೂತವಾದಿಗಳು ಆಡಳಿತ ನಡೆಸುವಾಗ ಅಲ್ಲಿನ ಸ್ತ್ರೀಯರನ್ನು ಹೇಗೆಲ್ಲ ನಡೆಸಿಕೊಂಡವೊ ಅದನ್ನೇ ಈಗ ಸನಾತನಿ ಮೂಲಭೂತವಾದಿಗಳು ಭಾರತದಲ್ಲಿ ಮಾಡಲು ಹೊರಟಿವೆ.

ಈ ಎಂಟೊಂಬತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ದಿಲ್ಲಿಯಲ್ಲಿ ನಿರ್ಭಯ ಎಂಬ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ದೇಶದ ಗಮನ ಸೆಳೆದಿತ್ತು ಅಥವ ಸೆಳೆಯುವಂತೆ ಮಾಡಲಾಗಿತ್ತು. ಅದರಿಂದ ಉತ್ಪತ್ತಿಯಾದ ಜನಾಕ್ರೋಶವನ್ನು ನಗದೀಕರಿಸಿಕೊಳ್ಳಲು ದಶಕಗಳಿಂದ ಅಧಿಕಾರ ವಂಚಿತ ರಾಜಕೀಯ ಶಕ್ತಿಗಳುˌ ಅಧಿಕಾರ ಕೇಂದ್ರವನ್ನು ನಿಯಂತ್ರಿಸುವ ಅವಕಾಶದಿಂದ ವಂಚಿತವಾಗಿ ಹತಾಷೆಗೊಳಗಾಗಿದ್ದ ಧಾರ್ಮಿಕ ಮೂಲಭೂತವಾದಿಗಳುˌ ಅಂದಿನ ಸರಕಾರದಿಂದ ಗರಿಷ್ಠ ಲಾಭ ಗಳಿಸಲಾಗದೆ ಒದ್ದಾಡುತ್ತಿದ್ದ ಖದೀಮ ಕಳ್ಳೋದ್ಯಮಿಗಳು ಮತ್ತು ಜಾತಿವಾದಿ ಮಾಧ್ಯಮಗಳು ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ಕೆಲವು ನಕಲಿ ಸಾಮಾಜಿಕ ಕಾರ್ಯಕರ್ತರ ಮೂಲಕ ಜನಾಂದೋಲನವಾಗುವಂತೆ ಪ್ರಾಯೋಜಿಸಿ ಅದರ ಮೂಲಕ ಅಂದಿನ ಸರಕಾರದ ವಿರುದ್ಧ ಜನಾಭಿಪ್ರಾಯ ಕ್ರೂಡೀಕರಿಸುವಲ್ಲಿ ಸಫಲವಾಗಿದ್ದವು. ಈಗ ಅದೇ ಶಕ್ತಿಗಳು ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ಅಮಾನವೀಯ ಅತ್ಯಾಚಾರ ಪ್ರಕರಣವನ್ನು ಬಹಿರಂಗವಾಗಿ ಸಮರ್ಥಿಸುವˌ ಅಥವ ಪ್ರಕರಣ ಹೆಚ್ಚು ಪ್ರಚಾರವಾಗದಂತೆ ತಡೆಯುವ ಮತ್ತು ಅದನ್ನು ಮುಚ್ಚಿ ಹಾಕುವ ಯತ್ನದಲ್ಲಿ ನಿರತವಾಗಿವೆ. ಅಧಿಕಾರದ ಹಪಾಹಪಿತನದಿಂದ ಕಾಲಕಾಲಕ್ಕೆ ಬಣ್ಣ ಬದಲಾಯಿಸುವ ಈ ಜನತಂತ್ರ ವಿರೋಧಿˌ ಸ್ತ್ರೀ ವಿರೋಧಿˌ ಸಂವಿಧಾನ ವಿರೋಧಿ ಶಕ್ತಿಗಳು ಈ ದೇಶವನ್ನು ಸಾಂಸ್ಕ್ರತಿಕವಾಗಿˌ ಬೌದ್ಧಿಕವಾಗಿˌ ಸಾಮಾಜಿಕವಾಗಿˌ ಆರ್ಥಿಕವಾಗಿˌ ನೈತಿಕವಾಗಿˌ ದಿವಾಳಿಯ ಅಂಚಿನಲ್ಲಿ ತಂದು ನಿಲ್ಲಿಸಿವೆ. ಕಳೆದ ಆರು ವರ್ಷಗಳಲ್ಲಿ ಭಾರತದ ವರ್ತಮಾನ ಮತ್ತು ಭವಿಷ್ಯ ರಿಪೇರಿ ಮಾಡಲಾರದಷ್ಟು ಕೆಡಿಸಲಾಗಿದೆ. ಅದರ ಜೊತೆಗೆ ಭಾರತದ ಇತಿಹಾಸವನ್ನು ಕೂಡ ಕರಸೇವೆ ಮಾಡುವ ಮೂಲಕ ಕೆಡಿಸಲು ವೇದಿಕೆ ಇದೀಗ ಸಿದ್ದಗೊಂಡಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ದೇಶ ಯಾರೊಬ್ಬರೂ ಕಾಪಾಡಲಾರದ ಸ್ಥಿತಿಗೆ ತಲುಪುವುದಂತೂ ನಿಶ್ಚಿತ.

⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.

⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ E-mail ID: kannadamedia1947@gmail.com ಗೆ ಸಂಪರ್ಕಿಸಿ.

⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares