ತುಮಕೂರು, ರಾಜ್ಯ

ಮದಲೂರು ಕೆರೆಗೆ ನೀರು ಹರಿಸಲು ಆರು ತಿಂಗಳು ಸಮಯ ಬೇಡ ಕೇವಲ 30ದಿನ ಸಾಕು: ಟಿ.ಬಿ ಜಯಚಂದ್ರ

‘ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಬಿಡುವ ಯೋಜನೆಗೆ ತಡೆಯೊಡ್ಡಿದ್ದ ಯಡಿಯೂರಪ್ಪ ನವರ ಬಾಯಿಂದ ಇದೀಗ ಅದೇ ಕೆರೆಗೆ ನೀರು ಹರಿಸುವ ಮಾತು ಬರುತ್ತಿರುವುದು ಆಶ್ಚರ್ಯ ತರಿಸುತ್ತಿದೆ’ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಹೇಳಿದರು.

ಶಿರಾ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಸಮ್ಮುಖದಲ್ಲಿ ಹಮಾಲರ ಸಂಘದ ಪ್ರತಿನಿಧಿಗಳು ಕಾಂಗ್ರೆಸ್ ಸೇರ್ಪಡೆಯಾದರು.

ಅವರು ಇಂದು ಶಿರಾದ ಗ್ರಹಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು. ‘ಈ ಯೋಜನೆ ಪ್ರಾರಂಭಕ್ಕೆ ಸಾಕಷ್ಟು ಅಡೆತಡೆಗಳನ್ನು ತಂದೊಡ್ಡಿದವರು ಇದೇ ಬಿಜೆಪಿಗರು ಮತ್ತು ಜೆಡಿಎಸ್ ನವರು. ಆದರೆ ನಾನು ಎದೆಗುಂದದೆ ನೀರು ಹರಿಸುವ ನಿಟ್ಟಿನಲ್ಲಿ ಹೋರಾಟ ನೀಡುವ ಜೊತೆಗೆ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿದಾಗಲೂ ಸ್ವತಃ ನಾನೇ ನ್ಯಾಯವಾದಿಯಾಗಿ ವಾದ ಮಂಡಿಸಿ ಗೆದ್ದಿದ್ದೇನೆ’ ಎಂದವರು ಹೇಳಿದ್ದಾರೆ.

‘ಮನಮೋಹನ್ ಸಿಂಗ್ ಸರ್ಕಾರದ ಅವದಿಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನವನ್ನು ಪಡೆದು ನಾಲೆ ನಿರ್ಮಾಣ ಮಾಡಿದ್ದೇನೆ ಅದರೆ ಈಗ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನಾವೆ ಮಾಡಿದ್ದು, ನಾವೇ ಮಾಡಿದ್ದು ಎನ್ನುತ್ತಿದ್ದಾರೆ ಅದರೆ ಶಿರಾ ವಿಧಾನಸಭಾ ಕ್ಷೇತ್ರದ ಜನತೆ ಜಯಚಂದ್ರ ಮುಳ್ಳಿನ ಹಾದಿಯಲ್ಲಿ ನಡೆದು ರೈತರ ಭೂಮಿಗೆ ನೀರನ್ನು ಹರಿಸಿದ್ದನ್ನು ಎಂದೂ ಮರೆಯುವುದಿಲ್ಲ’ ಎಂದರು.

‘ನನ್ನ ಅವಧಿಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿದ್ದರೂ ಕೂಡ ಇವರ ಅವಧಿಯಲ್ಲಿ ಹೇಮಾವತಿ ಜಲಾಶಯ ತುಂಬಿದ್ದರೂ ಮದಲೂರು ಗೆ ನೀರು ಬಿಡಲಾಗಿಲ್ಲ. ಯೋಜನೆಗೆ ಹಣ ಬಿಜೆಪಿ ಸರ್ಕಾರ ಬಿಡಿಗಡೆಗೊಳಿಸಿದ್ದರೆ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಸದಾನಂದಗೌಡ ಅವರು ಮದಲೂರು ಕೆರೆಗೆ ನೀರು ಹರಿಸುವ ನಾಲೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಗೈರಾಗಿದ್ದು ಯಾಕೆ ಎಂದವರು ಪ್ರಶ್ನಿಸಿದರು. ಮದಲೂರು ಕೆರೆಗೆ ನೀರು ಹರಿಸಲು ಆರು ತಿಂಗಳು ಸಮಯ ಬೇಡ ಕೇವಲ 30ದಿನ ಸಾಕು’ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಿರಾ ನಗರ ಬ್ಲಾಕ್ ಅಧ್ಯಕ್ಷ ಪಿ.ಅರ್.ಮಂಜುನಾಥ್,ಮುಖಂಡರಾದ ಕಲ್ಕೆರೆ ರವಿಕುಮಾರ್, ಷಣ್ಮುಖ ಮತ್ತಿತರರು ಇದ್ದರು.

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares