ಉಡುಪಿ

ಸ್ವಾವಲಂಬಿ ಮಹಿಳೆಯರ ಮೇಲೆ ದೌರ್ಜನ್ಯ: ಬೈಂದೂರು ಶಾಸಕರ ವಿರುದ್ಧ ಪ್ರತಿಭಟನೆ.

ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಗ್ರಾಮ ಪಂಚಾಯತ್‌ನ ಘನ ಮತ್ತು ದ್ರವ ತ್ಯಾಜ್ಯ ಸಂಸ್ಕರಣಾ ಘಟಕದ ನೇತ್ರತ್ವದಲ್ಲಿ ಕೇಂದ್ರ ಸರ್ಕಾರದ ಮಹಿಳಾ ಸ್ವ ಉದ್ಯೋಗ ಯೋಜನೆಯಡಿಯಲ್ಲಿ ಪಂಚಾಯತ್ ಕಟ್ಟಡದಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ‘ಮಹಿಳಾ ಸ್ವಾವಲಂಬಿ ಹೋಲಿಗೆ ತರಬೇತಿ ಕೇಂದ್ರ’ವನ್ನು ಯಾವುದೇ ನೋಟಿಸು ನೀಡದೇ ನಿನ್ನೆ ರಾತ್ರಿ ಬೀಗ ಒಡೆದು ಅದರೊಳಗಿನ ಸುಮಾರು 5 ಲಕ್ಷ ರೂ.ಗಳಿಗೂ ಮಿಕ್ಕಿ ಬೆಲೆ ಬಾಳುವ ವಸ್ತುಗಳನ್ನು ಬೇರೆಡೆಗೆ ವರ್ಗಾಯಿಸಿರುವುದರ ವಿರುದ್ದ ಇಂದು ಸ್ವಾವಲಂಬಿ ಹೊಲಿಗೆ ತರಬೇತಿ ಕೇಂದ್ರದ 30ಕ್ಕೂ ಹೆಚ್ಚು ಮಹಿಳಾ ತರಬೇತುದಾರರು, ಸುಮಾರು 50ಕ್ಕೂ ಹೆಚ್ಚು ತರಬೇತಿ ನಿರತ ಮಹಿಳಾ ಅಭ್ಯರ್ಥಿಗಳು ಹಾಗೂ ನೂರಾರು ಸಾರ್ವಜನಿಕರು ಈ ಘಟನೆಯ ವಿರುದ್ಧ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಆಡಳಿತಾಧಿಕಾರಿಯವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರುಈ ಸಂಧರ್ಭದಲ್ಲಿ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿಯವರು ಮಾತನಾಡಿ ‘ಅತ್ತ ಕೇಂದ್ರದ ಮೋದಿ ಸರ್ಕಾರ ಆತ್ಮನಿರ್ಭರ ಭಾರತ್ ಎನ್ನುತ್ತಿದ್ದರೆ ಇತ್ತ ಅವರದ್ದೆ ಪಕ್ಷದ ಶಾಸಕರು ಸ್ವಉದ್ಯೋಗ ಸ್ಥಾಪಿಸಿ ನೂರಾರು ಜನರಿಗೆ ಸ್ವಾವಲಂಬಿ ಬದುಕು ಒದಗಿಸಿದ್ದ ಸಂಸ್ಥೆಯನ್ನು ರಾತ್ರೋರಾತ್ರಿ ಮುಚ್ಚಿಸುವ ಮೂಲಕ ಜನವಿರೋಧಿ ಕಾರ್ಯವೆಸಗಿದ್ದಾರೆ. ಸ್ವಾವಲಂಬಿ ಮಹಿಳೆಯರ ಮೇಲಿನ ನಡೆದಿರುವ ಈ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ ಮತ್ತು ಸುಮಾರು ನಾಲ್ಕು ಲಕ್ಷ ರೂ.ಗಳಿಗೂ ಹೆಚ್ಚು ಬ್ಯಾಂಕ್ ಮತ್ತಿತರ ಸಂಸ್ಥೆಗಳಿಂದ ಸಾಲ ಪಡೆದು ಆರಂಭಗೊಂಡ ಆ ಸಂಸ್ಥೆಗೆ ಬದಲಿ ವ್ಯವಸ್ಥೆ ಮಾಡುವ ತನಕವೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತಸಂಘದ ವಕ್ತಾರ, ಯುವ ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ ‘ಸ್ಥಳೀಯ ಬಿಜೆಪಿಯ ಶಾಸಕ ಬಿಎಂ ಸುಕುಮಾರ ಶೆಟ್ಟರ ಮಾತು ಕೇಳಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತಾಧಿಕಾರಿಗಳು ಸ್ವಾವಲಂಬನೆಯ ಬದುಕು ಕಲ್ಪಿಸಿಕೊಂಡಿದ್ದ ಮಹಿಳೆಯರ ಹೊಲಿಗೆ ಮೆಷಿನ್ ಮತ್ತಿತರ ಸಲಕರಣೆಗಳನ್ನು ಸ್ಥಳಾಂತರ ಮಾಡಿರುವುದು ಅಮಾನವೀಯ. ಆ ಮಹಿಳೆಯರು ಸ್ಥಳೀಯ ಪಂಚಾಯತ್ ನೀಡಿದ ಸ್ಥಳಾವಕಾಶವನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಕಲ್ಪಿಸಿಕೊಂಡಿದ್ದರೆ ಹೊರತೂ ಅವರ‌್ಯಾರೂ ಅಲ್ಲಿ ಅಕ್ರಮವಾಗಿ ನೆಲೆ ನಿಂತಿರಲಿಲ್ಲ. ಅಂತಹ ಸ್ವಾಭಿಮಾನಿ ಮಹಿಳೆಯರಿಗೆ ನೋಟೀಸು ನೀಡಿ ಸ್ಥಳಾಂತರಕ್ಕೆ ಕಾಲಾವಕಾಶ ಕೊಡದೇ ಮಹಿಳೆಯರು ಕೆಲಸ ಮುಗಿಸಿ ಬೀಗ ಹಾಕಿ ಮನೆಗೆ ತೆರಳಿದ ನಂತರ ಕತ್ತಲಾದ ನಂತರ ಅಧಿಕಾರಿಗಳು ಬೀಗ ಒಡೆದಿರುವುದು ಅಕ್ಷಮ್ಯ. ಈ ವಿಚಾರದಲ್ಲಿ ನಾವು ಸಂತ್ರಸ್ಥ ಮಹಿಳೆಯರ ಪರ ಕಾನೂನು ಸಮರ ನಡೆಸಲಿದ್ದೇವೆ. ಬದಲಿ ವ್ಯವಸ್ಥೆ ಕಲ್ಪಿಸುವ ತನಕವೂ ಹೋರಾಟ ನಡೆಸಲಿದ್ದೇವೆ’ ಎಂದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಡಿಕೆಕೊಡ್ಲು ಉದಯ ಕುಮಾರ್ ಶೆಟ್ಟಿ, ಮಾತನಾಡಿ ‘ದೇಶದ ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು, ಸೇತುವೆಗಳನ್ನು ನಿರ್ಮಿಸುವುದು ಮಾತ್ರವೇ ಅಲ್ಲ, ಓರ್ವ ಮಹಿಳೆ ಸ್ವಾವಲಂಬಿಯಾದರೆ ಆ ಮನೆ ಅಭಿವೃದ್ಧಿಯಾದಂತೆ. ಅದೇ ರೀತಿಯಾಗಿ ಆ ಗ್ರಾಮದ ಮಹಿಳೆಯರೆಲ್ಲ ಸ್ವಾವಲಂಬಿಯಾದರೆ ಆ ಇಡೀ ಗ್ರಾಮದ ಅಭಿವೃದ್ಧಿಯಾದಂತೆ ಎಂಬ ಪರಿಕಲ್ಪನೆಯಡಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಗ್ರಾಮ ಪಂಚಾಯತ್ ನಲ್ಲಿ ಸ್ವಾವಲಂಬಿ ಹೋಲಿಗೆ ತರಬೇತಿ ಕೇಂದ್ರ ಆರಂಬಿಸಲಾಗಿತ್ತು. ಆ ಪ್ರಕಾರವಾಗಿ ಈ ತನಕ 135ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. ಆ ಪೈಕಿ 40ಜನ ಹೊಲಿಗೆ ಮೆಷಿನ್ ಖರೀದಿಸಿ ಸ್ವಾವಲಂಬಿ ಬದುಕು ಕಂಡುಕೊಂಡಿದ್ದಾರೆ. 36ಜನ ಸ್ವಾವಲಂಬಿ ಕೇಂದ್ರದಿಂದಲೇ ಬಟ್ಟೆಯ ಮಾಸ್ಕ್, ಬಟ್ಟೆಯ ಕೈಚೀಲ ಮತ್ತಿತರ ಸಾಮಾಗ್ರಿಗಳ ತಯಾರಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಮತ್ತಷ್ಟು ಜನ ತರಬೇತಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ (ಎನ್‌ಆರ್‌ಎನ್‌ಎಂ) ಯೋಜನೆಯಡಿಯಲ್ಲಿ ಸ್ವಾವಲಂಬಿ ತರಬೇತಿ ಕೇಂದ್ರಕ್ಕೆ ಸ್ಥಳಾವಕಾಶ ನೀಡಲಾಗಿತ್ತು. ಎರಡು ವರ್ಷಗಳ ಹಿಂದೆ ಸ್ವತಃ ಜಿಲ್ಲಾಧಿಕಾರಿಗಳು ಈ ಸಂಸ್ಥೆಯನ್ನು ಉದ್ಘಾಟಿಸಿದ್ದರು. ಈ ಸಂಸ್ಥೆಯ ಕಾರ್ಯವೈಖರಿಯನ್ನು ರಾಜ್ಯ ಮಟ್ಟದ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮೆಚ್ಚಿಕೊಂಡಿದ್ದರು. ಆದರೆ ಇದೀಗ ಸ್ವತಃ ಶಾಸಕರು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಜಾಗವನ್ನು ತೆರವುಗೊಳಿಸುವಂತೆ ಆದೇಶಿಸಿ ಪತ್ರ ಬರೆವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಇದರಲ್ಲಿ ರಾಜಕಾರಣ ಸಲ್ಲದು. ಈ ಕುರಿತು ಬದಲಿಯಾಗಿ ಆ ಮಹಿಳೆಯರಿಗೆ ಖಾಯಂ ಸ್ಥಳವನ್ನು ವ್ಯವಸ್ಥೆ ಮಾಡುವ ತನಕವೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ’ ಎಂದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡಿಬೆಟ್ಟು ಪ್ರದೀಪ್ ಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿ, ರೈತಸಂಘದ ಬಲಾಡಿ ಸಂತೋಷ್ ಶೆಟ್ಟಿ ಮುಂತಾದವರು ಭಾಗವಹಿಸಿದರು.

⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.

⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares