ಉಡುಪಿ

ಶೋಷಿತರ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ದ ಕಾಂಗ್ರೆಸ್ ‌ನ ಹೋರಾಟ ಮುಂದುವರಿಯಲಿದೆ: ವಿಕಾಸ್ ಹೆಗ್ಡೆ

ಶೋಷಿತರ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ದ ನಮ್ಮ ಹೋರಾಟ ಸದಾ ಮುಂದುವರಿಯಲಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಮಹಿಳೆಯರ ಮೇಲೆ ಬಿಜೆಪಿ ಶಾಸಕ ಸುಕುಮಾರ ಶೆಟ್ಟರ ಅಣತಿಯಂತೆ ನಡೆದಿರುವ ದೌರ್ಜನ್ಯವನ್ನು ನಾವು ಕಾಂಗ್ರೆಸ್ ಪಕ್ಷದವರು ಖಂಡಿಸಿದ್ದೇವೆ ಮತ್ತು ಈಗಲೂ ಖಂಡಿಸುತ್ತಿದ್ದೇವೆ, ಮುಂದೆಯೂ ಖಂಡಿಸಲಿದ್ದೇವೆ. ನ್ಯಾಯ ಸಿಗುವ ತನಕವೂ ಈ ಹೋರಾಟ ಮುಂದುವರಿಯಲಿದೆ. ಕುಂದಾಪುರದವರು ಬಂದು ಇಲ್ಲಿ ಭಾಷಣ ಬಿಗಿಯುತ್ತಾರೆ ಎಂದು ಶಾಸಕ ಬಿಎಮ್ ಸುಕುಮಾರ ಶೆಟ್ಟರು ನೀಡಿರುವ ಹೇಳಿಕೆ ಖಂಡನೀಯ, ಬೈಂದೂರು ವಿಧಾನಸಭಾ ಕ್ಷೇತ್ರ ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನದಲ್ಲಿ ಇಲ್ಲ. ಅನ್ಯಾಯದ ವಿರುದ್ದ ಯಾರು, ಎಲ್ಲಿ ಬೇಕಾದರೂ ಮಾತನಾಡಬಹುದು. ಅನ್ಯಾಯ, ಅಕ್ರಮಗಳ ವಿರುದ್ಧ ಮಾತನಾಡಲು ಕುಂದಾಪುರ, ಬೈಂದೂರು ಎಂಬ ಯಾವುದೇ ಗಡಿರೇಖೆಗಳು ಇಲ್ಲ. ಗಡಿಗಳಿರುವುದು ಕೇವಲ ರಾಜಕೀಯ ಮತ್ತು ಆಡಳಿತಕ್ಕೆ ಮಾತ್ರ. ಸುಕುಮಾರ ಶೆಟ್ಟರು ಬೈಂದೂರು ಕ್ಷೇತ್ರದ ಶಾಸಕರು ಮಾತ್ರವೇ ಹೊರತು ಅವರೇನು ಆ ಕ್ಷೇತ್ರವನ್ನು ಖರೀದಿ ಮಾಡಿಲ್ಲ ಅಥವಾ ಗುತ್ತಿಗೆ ಪಡೆದಿಲ್ಲ. ಭಾರತೀಯ ಪ್ರಜೆಯಾದ ಪ್ರತಿಯೊಬ್ಬರಿಗೂ ದೇಶದ ಯಾವುದೇ ಭಾಗದಲ್ಲಿ ದೀನ ದಲಿತರ ಮೇಲೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ದ ಮಾತನಾಡುವ, ಪ್ರಶ್ನಿಸುವ, ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ರೈತ ಸಂಘದ ವಕ್ತಾರ, ಯುವ ನ್ಯಾಯವಾದಿ ವಿಕಾಸ್ ಹೆಗ್ಡೆ ಹೇಳಿದ್ದಾರೆ.ಕೆಲವು ದಿನಗಳ ಹಿಂದೆ ಕೆಲವು ಅಧಿಕಾರಿಗಳು ರಾತ್ರೋರಾತ್ರಿ ವಂಡ್ಸೆ ಮಹಿಳಾ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರವನ್ನು ಬೀಗ ಒಡೆದು ಅಲ್ಲಿನ ಲಕ್ಷಾಂತರ ಬೆಲೆಯ ಟೈಲರಿಂಗ್ ಮೆಷಿನ್, ಬಟ್ಟೆ ಮತ್ತಿತರ ಬೆಲೆಬಾಳುವ ಸಾಮಾನುಗಳನ್ನು ಬೇರೆಡೆ ಸ್ಥಳಾಂತರಿಸಿರುವ ಕುರಿತು ಬೈಂದೂರು ಶಾಸಕರ ವಿರುದ್ದ ನಡೆಯುತ್ತಿರುವ ಸರಣಿ ಪ್ರತಿಭಟನಾ ಸಭೆಯಲ್ಲಿ ಅವರು ಇಂದು ಸಿದ್ದಾಪುರದಲ್ಲಿ ಮಾತನಾಡುತ್ತಿದ್ದರು.

ಮಾತು ಮುಂದುವರಿಸಿದ ಅವರು ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು, ಕಮಿಷನ್ ದಂದೆಯ ಕುರಿತು ಬಿಡಿಬಿಡಿಯಾಗಿ ವಿವರಿಸಿದರು. ಶಾಸಕರು ಹಾಗೂ ಅವರ ಕೆಲವು ಆಪ್ತರು ಅಧಿಕಾರಿಗಳನ್ನು ಬಳಸಿಕೊಂಡು ಕಮಿಷನ್‌ಗಾಗಿ ಗುತ್ತಿಗೆದಾರರಿಗೆ ನೀಡುತ್ತಿರುವ ಕಿರುಕುಳದ ಕುರಿತು ವಿವರಿಸಿದ ಅವರು ಈ ಕ್ಷೇತ್ರದಲ್ಲಿ ಇಂತಹ ಶಾಸಕರು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರಲಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಕಾಸ್ ಎಂಬ ತನ್ನ ಹೆಸರಿನ ಬಗ್ಗೆ ಟೀಕಿಸಿದ ಸುಕುಮಾರ ಶೆಟ್ಟರ ಆಪ್ತ ಉಮೇಶ್ ಕಲ್ಗೆದ್ದೆಯ ಕುರಿತು ವೈಯಕ್ತಿಕವಾಗಿ ನಾನು ಮಾತನಾಡಲು ಹೋಗೋದಿಲ್ಲ. ಆತ ನನ್ನ ಬಗೆಗೆ ಮಾಡಿರುವ ಕೆಲವು ಅವಹೇಳನಕಾರಿ ಮಾತಿಗೆ ಸುಕುಮಾರ ಶೆಟ್ಟರಿಗೆ ಕೆಲವು ವಿಚಾರಗಳನ್ನು ಪ್ರಶ್ನಿಸಲು ಇಚ್ಚಿಸುತ್ತೇನೆ. ನನ್ನ ಹೆತ್ತವರು ನನಗೆ ವಿಕಾಸ್ ಎನ್ನುವ ಒಂದು ಉತ್ತಮ ಹೆಸರನ್ನು ಇಟ್ಟಿದ್ದಾರೆ. ನಿನ್ನೆ ಪತ್ರಿಕಾ ಗೋಷ್ಠಿಯಲ್ಲಿ ಉಮೇಶ್ ನನ್ನ ಹೆಸರಿನ ಬಗೆಗೆ ಮಾತನಾಡಿದ್ದಾರೆ ಆದರೆ ಅವರದ್ದೇ ಪಕ್ಷದ ಪ್ರಧಾನಿ ಮೋದಿಯವರು ಅದೇ ನನ್ನ ಹೆಸರಾದ ವಿಕಾಸ್ ಅನ್ನು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಅವರು ಸದಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟರಿಗೆ ಅವರ ವಿಕಾಸವಾದರೆ ಸಾಕು. ಆ ಕಾರಣಕ್ಕಾಗಿ ಅವರ ಕ್ಷೇತ್ರದಲ್ಲಿ ಕಮಿಷನ್ ದಂದೆ ಮಿತಿ ಮೀರಿದೆ. ಅವರಿಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬೇಡ. ಆ ಕಾರಣಕ್ಕಾಗಿ ಅವರು ತನ್ನದೇ ಕ್ಷೇತ್ರದ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಸ್ವಾವಲಂಬನೆಯ ಬದುಕು ಕಂಡುಕೊಳ್ಳಲು ಲಕ್ಷಾಂತರ ರೂ. ಸಾಲ ಮಾಡಿ ನಡೆಸುತ್ತಿರುವ ಸ್ವಾವಲಂಬನಾ ಹೊಲಿಗೆ ಕೇಂದ್ರ ವನ್ನು ಎತ್ತಂಗಡಿ ಮಾಡಿ ಆ ಮಹಿಳೆಯರನ್ನು ಬೀದಿಪಾಲು ಮಾಡಿದ್ದಾರೆ ಎಂದು ಹೇಳಿದರು.

►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com