Advertisement

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ 25ವರ್ಷ ಪೂರೈಸಿದ ಎಸ್.ರಾಜು ಪೂಜಾರಿ

Advertisement

'ಯಾವ ಕಾರ್ಯವನ್ನು ಸಾಧಿಸುವುದು ಕಠಿಣ ಎಂಬ ಭಾವನೆ ಇರುತ್ತದೋ, ಅದನ್ನು ಪಟ್ಟುಹಿಡಿದು ಸಾಧಿಸಿ ತೋರಿಸುವುದೇ ನಿಜವಾದ ಸಾಧನೆ' ಎಂಬ ಒಂದು ಮಾತಿದೆ.‌ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ವಶ್ರೇಷ್ಠ ಸಹಕಾರಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿರುವ ಎಸ್. ರಾಜು ಪೂಜಾರಿಯವರು ಅಂತಹ ಸಾಧನೆ ಮಾಡಿದ ಓರ್ವ ಅಪೂರ್ವ ಸಾಧಕ. 25ವರ್ಷಗಳ ಹಿಂದೆ ಅಂದರೆ 1995ರಲ್ಲಿ ಇದೇ ದಿನ ಅವರು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹುದ್ದೆ ಸ್ವೀಕರಿಸಿದ್ದರು. ಆಗ ಅದು ಆರ್ಥಿಕವಾಗಿ ಅತ್ಯಂತ ಬಲಹೀನವಾಗಿತ್ತು. ಗ್ರಾಹಕರಿಗೆ ಸಣ್ಣ ಮೊತ್ತದ ಸಾಲ ನೀಡಲೂ ಕಷ್ಟಕರವಾದ ಸ್ಥಿತಿಯಲ್ಲಿ ಇದ್ದ ಆ ಸಂಸ್ಥೆ ಒಂದು ಪುಟ್ಟ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಒಬ್ಬಿಬ್ಬರು ಮಾತ್ರವೇ ನೌಕರರು ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರುಗಳಿಗೆ ಸಂಬಳ ಪಾವತಿಸಲು ಕೂಡಾ ಹೆಣಗಾಡುವ ಪರಿಸ್ಥಿತಿ ಇತ್ತು ಏಕೆಂದರೆ ಆ ಆರ್ಥಿಕ ಸಂಸ್ಥೆ ಪ್ರತಿ ವರ್ಷವೂ ನಷ್ಟದಲ್ಲೆ ನಡೆಯುತ್ತಿತ್ತು. ಆದರೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಸಂಸ್ಥೆಯ ಆ ಕೆಟ್ಟ ಪರಿಸ್ಥಿತಿಯನ್ನೆ ಬಳಸಿಕೊಂಡು ಹಂತಹಂತವಾಗಿ ಸಂಸ್ಥೆಯನ್ನು ಏಳಿಗೆಗೆ ಒಯ್ದ ಕೀರ್ತಿ ಹಾಗೂ ಸಣ್ಣ ಮೊತ್ತದ ಸಾಲ ಕೊಡಲು ಹೆಣಗಾಡುತ್ತಿದ್ದ ಸಂಸ್ಥೆಯನ್ನು ಅವಿಭಜಿತ ಜಿಲ್ಲೆಯ ಒಂದು ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಪರಿವರ್ತಿಸದ ಹಿರಿಮೆ ಎಸ್. ರಾಜು ಪೂಜಾರಿಯವರದ್ದು. ಪೂಜಾರಿಯವರು ಹಂತಹಂತವಾಗಿ ಸಾಧಿಸಿದ ಆ ಯಶಸ್ಸಿನ ಫಲವೇ ಬಹುಶಃ ಅವರು ಅಧ್ಯಕ್ಷರಾಗಿ ಸತತ 25ವರ್ಷ ಕಾರ್ಯ ನಿರ್ವಹಿಸಲು ಕಾರಣವಾಗಿದೆ ಎಂದರೆ ಅದು ಖಂಡೀತವಾಗಿಯೂ ಅತಿಶಯೋಕ್ತಿ ಅಲ್ಲ. ಮರವಂತೆ, ಬಡಾಕೆರೆ, ನಾವುಂದ ಮತ್ತು ಹೇರೂರು ಗ್ರಾಮಗಳ ಸಹಕಾರಿ ಸಂಘಗಳು ಒಗ್ಗೂಡಿ 1976ರಲ್ಲಿ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಎಂದು ಮರು ನಾಮಕರಣಗೊಂಡಿತು. ಮೇಲೆ ತಿಳಿಸಿದಂತೆ ಆಗ ಸಂಘ ಆರ್ಥಿಕವಾಗಿ ಅತ್ಯಂತ ಬಲಹೀನ ಸ್ಥಿತಿಯಲ್ಲಿತ್ತು. ಸಂಘದ ಸದಸ್ಯರಿಗೆ ಒಂದು ಸಾವಿರ ಸಾಲ ಕೊಡಲೂ ತಿಂಗಳುಗಟ್ಟಲೇ ಕಾಯಬೇಕಾದ ಸ್ಥಿತಿ ಇತ್ತು. ಇಂತಹ ಸ್ಥಿತಿಯಲ್ಲಿದ್ದ ಸಂಘಕ್ಕೆ 1995ರ ನವೆಂಬರ್ 10ರಂದು ಅಧ್ಯಕ್ಷರಾಗಿ ಆಯ್ಕೆಯಾದವರೆ ರಾಜು ಪೂಜಾರಿ. ಯಾವುದೇ ಒಂದು ಸಂಸ್ಥೆಯ ಚುಕ್ಕಾಣಿ ಹಿಡಿದರೆ ಸಾಲದು, ಚುಕ್ಕಾಣಿ ಹಿಡಿವ ಸಂಧರ್ಭದಲ್ಲಿ ಸಂಸ್ಥೆಯ ಏಳಿಗೆಯ ಕುರಿತು ರಂಗು ರಂಗಿನ ಮಾತನಾಡಿದರೆ ಸಾಲದು, ಅದನ್ನು ಸಾಧಿಸಿ ತೋರಿಸುವ ಛಲಗಾರಿಕೆ, ತಂತ್ರಗಾರಿಕೆ, ಹೋರಾಟ ಮನೋಭಾವ ಮುಂತಾದವುಗಳು ಚುಕ್ಕಾಣಿ ಹಿಡಿದವನಲ್ಲಿ ಇರಬೇಕು. ಅಂತಹ ಸಾಧನೆ ಮಾಡಿ ತೋರಿಸಿದವರೆ ರಾಜು ಪೂಜಾರಿಯವರು. ಆದರೆ ಇಂತಹ ಸಾಧನೆ ಕೇವಲ ಓರ್ವ ಅಧ್ಯಕ್ಷರಾದವರಿಂದ ಮಾತ್ರವೇ ಸಾಧ್ಯವೇ? ಎಂದರೆ, ಖಂಡೀತವಾಗಿಯೂ ಸಾಧ್ಯವಿಲ್ಲ ಎಂದೇ ಹೇಳಬೇಕಾಗುತ್ತದೆ. ಆದರೆ ಅದು ಓರ್ವ ಸಮರ್ಥ ಅಧ್ಯಕ್ಷನಿಂದ ಖಂಡೀತವಾಗಿಯೂ ಸಾಧ್ಯ! ಅದು ಹೇಗೆಂದರೆ ರಾಜು ಪೂಜಾರಿ ಕೇವಲ ಓರ್ವ ಸಮರ್ಥ ಸಹಕಾರಿ ಮಾತ್ರವೇ ಅಲ್ಲ. ಅವರೊಬ್ಬ ಸಮರ್ಥ ಆಡಳಿಗಾರ, ಸಮರ್ಥ ಸಂಘಟಕ. ಹಾಗಿರುವ ಕಾರಣಕ್ಕಾಗಿ ಆ ಸಂಸ್ಥೆಯ ಸಕಲ ಸಿಬ್ಬಂದಿಗಳು ರಾಜು ಪೂಜಾರಿಯವರ ಬೆನ್ನಿಗೆ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ, ಅವರ ಸೂಚನೆಗಳನ್ನು ಪಾಲಿಸುತ್ತಿದ್ದಾರೆ. ಆದರೆ 'ಇಂದು ಸಂಘ ಬಲಿಷ್ಠಗೊಳ್ಳಲು ಅಂದಿನಿಂದ ಇಂದಿನತನಕ ಹಗಲಿರುಳೆನ್ನದೇ, ಮಳೆ ಬಿಸಿಲೆನ್ನದೇ ಸಂಘದ ಯಶಸ್ಸಿಗಾಗಿ ದುಡಿದ ಸಿಬ್ಬಂದಿಗಳ ಸಹಕಾರವೇ ಕಾರಣ' ಎಂಬುವುದು ರಾಜು ಪೂಜಾರಿ ದೊಡ್ಡತನದ ಮಾತು. ರಾಜು ಪೂಜಾರಿಯವರ ಅಧ್ಯಕ್ಷ ಅವಧಿಯ ಆರಂಭಿಕ ಹಂತದಲ್ಲಿ ಸಂಸ್ಥೆಯ ಸದಸ್ಯ ಸಂಖ್ಯೆ 1156, ಪಾಲು ಬಂಡವಾಳ ರೂ 5,61,125. ಠೇವಣಿ ರೂ.‌28,52,318. ಕ್ಷೇಮನಿಧಿ ಸೇರಿದಂತೆ ಒಟ್ಟು ನಿಧಿ ರೂ. 45,238. ಹೊರಬಾಕಿ ಸಾಲ ರೂ. 27,84,363 ಮತ್ತು ಜಿಲ್ಲಾ ಕೇಂದ್ರ ಬ್ಯಾಂಕ್ ಸಾಲ ರೂ. 14,89,134 ಇತ್ತು. ಆದರೆ ಇದೀಗ ಆ ಸಂಸ್ಥೆಯ ಸದಸ್ಯ ಸಂಖ್ಯೆ 4359. ಪಾಲು ಬಂಡವಾಳ ರೂ. 1,70,51,560. ಠೇವಣಿ ಮೊತ್ತ ರೂ. 35,24,72,320. ನಿಧಿ ರೂ. 3,28,71,323. ಹೊರಬಾಕಿ ಸಾಲ ರೂ. 33,03,87,001 ಮತ್ತು ಜಿಲ್ಲಾ ಕೇಂದ್ರ ಬ್ಯಾಂಕ್ ಸಾಲ ರೂ. 7,41,48,885. 1994-95 ರಲ್ಲಿ ರೂ 2 ಕೋಟಿ ಇದ್ದ ವಾರ್ಷಿಕ ವಹಿವಾಟು ಇಂದು ರೂ. 187 ಕೋಟಿಗೂ ಅಧಿಕ. ಅಂದು ರೂ. 54 ಲಕ್ಷದಷ್ಟಿದ್ದ ಬಂಡವಾಳ ಇಂದು 55ಕೋಟಿಗೆ ಏರಿದೆ. ರಾಜು ಪೂಜಾರಿ ಯವರ ಅಧ್ಯಕ್ಷರಾಗಿ ಆಯ್ಕೆಯಾಗುವ ಪೂರ್ವದಲ್ಲಿ ನಷ್ಟದಲ್ಲಿದ್ದ ಸಂಸ್ಥೆ ಈಗ ವಾರ್ಷಿಕ 1ಕೋಟಿಗೂ ಮಿಕ್ಕಿ ಲಾಭದಲ್ಲಿ ಮುನ್ನಡೆಯುತ್ತಿದೆ. ರಾಜು ಪೂಜಾರಿಯವರ ಅದ್ಯಕ್ಷತೆಯ ಅವಧಿಯಲ್ಲಿ ಸಂಘ ಸಾಧಿಸಿದ ಪ್ರಗತಿಗೆ ಇದುವೇ ಮಾನದಂಡ. ನಾವುಂದದ ಹೆದ್ದಾರಿ ಅಂಚಿನಲ್ಲಿದ್ದ ಹಳೆಯ ಪ್ರಧಾನ ಕಚೇರಿ ಕಟ್ಟಡದ ಬದಲಿಗೆ ಈ ಸಂಸ್ಥೆ ಸಹಕಾರ ಸನ್ನಿಧಿ ಹೆಸರಿನ ನೂತನ ಸುಸಜ್ಜಿತ ಕಟ್ಟಡ ಹೊಂದುವ ಮೂಲಕ ಸ್ವಂತ ಕಟ್ಟಡ ಹೊಂದಿದ ಪರಿಸರದ ಮೊದಲ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆ ಅದರದ್ದು. ಆ ಬಳಿಕ ಹೇರೂರಿನ‌ ಶಾಖೆಗೆ ಹೊಸ ನಿವೇಶನ ಖರೀದಿಸಿ ಅಲ್ಲಿ ಕಟ್ಟಡ ನಿರ್ಮಿಸಲಾಯಿತು. ಬಡಾಕೆರೆಯಲ್ಲಿ ಹೊಸದಾಗಿ ಶಾಖೆಯನ್ನು ಆರಂಭಿಸಿ ನಿವೇಶನ ಖರೀದಿಸಿ ಕಟ್ಟಡ ನಿರ್ಮಿಸಲಾಯಿತು. ಮರವಂತೆ ಶಾಖೆಗೂ ಇದೀಗ ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಇಂತಹ ಸ್ವಂತ ಕಟ್ಟಡಗಳ ಹೊಂದುವಿಕೆಯ ಮೂಲಕ ಸಂಘದ ಆಸ್ತಿ ಹೆಚ್ಚಾಗಿ ನೌಕರರಲ್ಲಿ, ಸದಸ್ಯರಲ್ಲಿ, ಗ್ರಾಹಕರಲ್ಲಿ ಹೆಮ್ಮೆಯನ್ನು, ನಂಬಿಕೆಯನ್ನು ಹಾಗೂ ಭರವಸೆವನ್ನು ವೃದ್ದಿಸಿದೆ. 'ವಿಭಿನ್ನ ಕ್ಷೇತ್ರಗಳ ಸಾಧಕ ರಾಜು ಪೂಜಾರಿ' ಒಂದು ವ್ಯಕ್ತಿತ್ವ ರೂಪುಗೊಳ್ಳಲು ಅನುವಂಶೀಯತೆ ಮತ್ತು ಪರಿಸರದ ಪ್ರಭಾವ ಒಟ್ಟಾಗಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ಮಾತಿಗೆ ರಾಜು ಪೂಜಾರಿ ಒಂದು ಉತ್ತಮ ಉದಾಹರಣೆ. ಅವರ ತಂದೆ ಮರವಂತೆಯ ದಿವಂಗತ ರಾಮ ಪೂಜಾರಿ ಸಮಾಜ ಸೇವೆಯೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಧ್ಯಕ್ಷ, ಜಿಲ್ಲಾ ಪರಿಷತ್ತಿನ ಸದಸ್ಯ ಹುದ್ದೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದವರು. ಸಮುದಾಯದ ಎಲ್ಲಾ ವರ್ಗ, ಮತ, ಜಾತಿಗಳೊಂದಿಗೆ ಬೆರೆತು ಬದುಕಿದವರು, ತನ್ನಿಂದಾದ ಸೇವೆಗೈದವರು. ರಾಜು ಪೂಜಾರಿಯವರಲ್ಲಿ ನಾಯಕತ್ವದ ಗುಣ, ಸ್ನೇಹ ಮನೋಭಾವ ರಕ್ತಗತವಾಗಿಯೇ ಬರಲು ಅವರ ತಂದೆಯ ಪ್ರಭಾವವೇ ಬಹುಮುಖ್ಯ ಕಾರಣ ಅಂತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಅಷ್ಟಲ್ಲದೇ ಅವರು ಗಳಿಸಿದ ಪದವಿ ಶಿಕ್ಷಣ, ಎಳೆವೆಯಲ್ಲೆ ದೊರೆತ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ, ಆದರ್ಶ ಸಹಕಾರಿ, ಅಂದಿನ ಶಾಸಕ ಜಿ.ಎಸ್ ಆಚಾರ್ ಅವರಂದು ನೀಡುತ್ತಿದ್ದ ಸಲಹೆ ಸೂಚನೆಗಳು, ಒಡನಾಟ. ಇಂದು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಸಹಕಾರಿ ದುರೀಣ ಡಾ.ಎಂ.ಎನ್.ರಾಜೇಂದ್ರ ಕುಮಾರ್ ರವರ ಮಾರ್ಗದರ್ಶನಗಳು ಇಂದು ರಾಜು ಪೂಜಾರಿ ಯವರನ್ನು ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಸಹಕಾರಿ ಕ್ಷೇತ್ರಗಳ ಓರ್ವ ಸಮರ್ಥ ದುರೀಣನನ್ನಾಗಿಸಿದೆ. ಮರವಂತೆ ಗ್ರಾಮ ಪಂಚಾಯತಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ ರಾಜು ಪೂಜಾರಿ ಯವರು ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷರಾಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ, ಕುಂದಾಪುರ ತಾಲ್ಲೂಕು ಪಂಚಾಯತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿ, ಒಟ್ಟಾರೆಯಾಗಿ ಜಿಲ್ಲೆಯ ಅಭಿವೃದ್ಧಿಗೆ ಗಣನೀಯವಾದ ಕೊಡುಗೆ ನೀಡಿದ್ದಾರೆ. ಹೀಗೆ ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಸ್ಥರಗಳಲ್ಲಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರು ಇವರು. ಮರವಂತೆ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕ ನಿರ್ಧೇಶಕರಾಗಿ ಕ್ಷೀರೋತ್ಪನ್ನ ಅಭಿವೃದ್ಧಿ ಕ್ಷೇತ್ರಕ್ಕೆ ಕಾಲಿರಿಸಿದ ಇವರು, ಯಡ್ತರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ಜೊತೆಗೆ ತಂದೆ ರಾಮ ಪೂಜಾರಿಯವರ ನೆನಪಿನಲ್ಲಿ ಬೈಂದೂರಿನಲ್ಲಿ ಸಂಸ್ಥೆ ಸ್ಥಾಪಿಸಿ, ಅಧ್ಯಕ್ಷರಾಗಿ ಮುನ್ನಡೆಸುತ್ತಿರುವ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ- ಅಪರೇಟಿವ್ ಸಂಸ್ಥೆಯನ್ನು ಕೇವಲ ಹತ್ತು ವರ್ಷಗಳಲ್ಲಿ ಐದು ಶಾಖೆಗಳಿಗೆ ವಿಸ್ತರಿಸಿ ಸಹಕಾರಿ ಸಾಧನೆಯ ಹೊಸ ಅಧ್ಯಾಯ ಬರೆದಿದ್ದಾರೆ. ಸಾಗರ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿ ಕಾರ್ಯವೆಸಗುತ್ತ ಅದರ ಬೆಳವಣಿಗೆಯಲ್ಲಿಯೂ ಕೈ ಜೋಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಮಂಡಳಿಯ ಸದಸ್ಯರಾಗಿ ದುಡಿಯುತ್ತಿದ್ದಾರೆ.ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘದ ನಿರ್ದೇಶಕ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ ಸಂಘದ ನಿರ್ದೇಶಕ ಹುದ್ದೆಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಬಾಗಲಕೋಟೆಯಲ್ಲಿ ನಡೆದಿದ್ದ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಉತ್ತಮ ಸಹಕಾರಿ ಪ್ರಶಸ್ತಿ, ಕಳೆದ ವರ್ಷ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಧಕ ರಾಜು ಪೂಜಾರಿಯವರಿಗೆ kannadamedia.com ಉತ್ತರೋತ್ತರ ಶ್ರೇಯಸ್ಸನ್ನು ಹಾರೈಸುತ್ತದೆ. ____________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement