Advertisement

ಭಾರತವನ್ನು ಪ್ರೀತಿಸುವವರು ಓದಲೇಬೇಕಾದ ಲೇಖನ: 'ಸ್ವಮೋಹಿ ರಾಜಕಾರಣಿಯ ವ್ಯಕ್ತಿ ಕೇಂದ್ರಿತ ರಾಜತಾಂತ್ರಿಕತೆಯ ಹುಳುಕುಗಳು'

Advertisement

ಡಾ. ಸ್ಯಾಮ್ಯುವೆಲ್ ಸಿಕ್ವೇರಾ ( ಲೇಖಕರು ಯು.ಕೆ.ಯ ಕ್ಯಾಡಿಫ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದು, ಈಗ ಅಲ್ಲಿಯೇ ಸಂಶೋಧನಾ ಸಹಾಯಕರಾಗಿದ್ದಾರೆ.) ಅನುವಾದ: ನಿಖಿಲ್ ಕೋಲ್ಪೆ ( ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರು) ಜನಮರುಳು ರಾಜಕಾರಣಿಯೊಬ್ಬನ ಸ್ವಮೋಹಿ ವ್ಯಕ್ತಿತ್ವ ಮತ್ತು ಆತನ ಆಡಳಿತ ಶೈಲಿಯು ಹೇಗೆ ಒಂದು ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದರ ವಿಶ್ಲೇಷಣೆಯೇ ಈ ಬರಹ. ಎಲ್ಲವೂ ಚೆನ್ನಾಗಿರುವಾಗ ಎಲ್ಲವೂ ಸರಾಗವಾಗಿಯೇ ನಡೆಯುತ್ತದೆ. ದುರಾಡಳಿತವು ಜನರಿಗೆ ಕೈಕೊಟ್ಟಾಗಲೂ ಗೆಲ್ಲುವುದು ಸುಲಭ. ಆದರೆ, ಈಗ ನಾವು ಕಾಣುತ್ತಿರುವಂತೆ ಚೀನಾ ಅತಿಕ್ರಮಣ, ಭಾರತೀಯ ಸೈನಿಕರ ಹನನ ಇತ್ಯಾದಿಯಾಗಿ ಬಿಕ್ಕಟ್ಟು ಎದುರಾದಾಗ, ಅತ್ಯಂತ ಕೇಂದ್ರೀಕೃತವಾದ ನಾಯಕತ್ವ ಮತ್ತು ವ್ಯಕ್ತಿ ಕೇಂದ್ರಿತ ರಾಜತಾಂತ್ರಿಕ ಶೈಲಿಯ ಬಂಡವಾಳ ಬಯಲಾಗುತ್ತದೆ. ಭಾರತದಂತಹ ವಿಶಾಲವಾದ ಮತ್ತು ವೈವಿಧ್ಯಮಯವಾದ ದೇಶಕ್ಕೆ ವಿಕೇಂದ್ರೀಕೃತ, ಜನರ ಜೊತೆ ಚರ್ಚಿಸುವ ಮತ್ತು ಅವರ ಜೊತೆ ಸಂವಹನ ನಡೆಸುವ ನಾಯಕತ್ವದ ಅಗತ್ಯವಿದೆ; ಕೇವಲ ಪ್ರವಚನ ನೀಡುವ ನಾಯಕತ್ವವಲ್ಲ! ಸರ್ವಾಧಿಕಾರಿ ಜನಮರುಳು ನಾಯಕರು ಅಧಿಕಾರಕ್ಕೆ ಬರುವುದು ಹೇಗೆಂದರೆ, ನಾಯಕತ್ವದ ಕುರಿತು ಅಸಾಂಪ್ರದಾಯಿಕವಾದ ನಿಲುವಿನಿಂದ ಮತ್ತು ಸಾಂಪ್ರದಾಯಿಕವಾದ ಗಣ್ಯ ವರ್ಗದ ಹುಸಿ ವಿರೋಧದಿಂದ. ಸಾಮಾನ್ಯವಾಗಿ ಸರ್ವಾಧಿಕಾರಿ ನಾಯಕರು ಸ್ವಮೋಹಿಗಳು, ಎಂದರೆ ನಾರ್ಸಿಸಿಸ್ಟ್‌ಗಳಾಗಿರುತ್ತಾರೆ. ಆಕ್ಸ್‌ಫರ್ಡ್ ಪದಕೋಶವು ನಾರ್ಸಿಸಿಸ್ಟ್ ವ್ಯಕ್ತಿತ್ವವನ್ನು ಸ್ವಾರ್ಥದಿಂದ ಕೂಡಿದ, ಸ್ವಕೇಂದ್ರಿತವಾದ, ಸಹಾನುಭೂತಿಯಿಲ್ಲದ, ಹೊಗಳಿಕೆಯ ಅಗತ್ಯವಿರುವ ಒಂದು ವ್ಯಕ್ತಿತ್ವ ಎಂದು ವಿವರಿಸುತ್ತದೆ- ಅಂದರೆ, ನೀರಿನಲ್ಲಿ ತನ್ನ ಪ್ರತಿಬಿಂಬ ನೋಡಿ ತನ್ನನ್ನು ತಾನೇ ಪ್ರೀತಿಸುವ ಕಾಲ್ಪನಿಕ, ಪೌರಾಣಿಕ ವ್ಯಕ್ತಿಯ ಕತೆಯಂತೆಯೇ. ಆದುದರಿಂದ ಇಂತಹಾ ವ್ಯಕ್ತಿಗಳ ನಾಯಕತ್ವ ಶೈಲಿಯೂ ವ್ಯಕ್ತಿತ್ವ ಕೇಂದ್ರಿತವಾಗಿರುತ್ತದೆ. ಇಂತವರು ತನ್ನನ್ನು ಸೂರ್ಯನ ಸ್ಥಾನದಲ್ಲಿ ತಾನೇ ಇರಿಸಿಕೊಂಡು ಉಳಿದವರು ಗ್ರಹಗಳು, ಕ್ಷುದ್ರ ಗ್ರಹಗಳು ಎಂದು ಭ್ರಮಿಸಿಕೊಳ್ಳುತ್ತಾರೆ. ಆದುದರಿಂದ, ಇಂತವರು ತಮ್ಮ ಪ್ರಭಾವಳಿಯೇ ತನಗೆ ಇತರರ ಮೇಲೆ ಅಧಿಕಾರ ನೀಡುತ್ತದೆ ಎಂದು ಭ್ರಮಿಸಿಕೊಳ್ಳುತ್ತಾರೆ. ಪರಿಣಾಮವಾಗಿ ಅವರು ತಾವು ಹೊಂದಿರುವ ಸ್ಥಾನಕ್ಕೆ ಅಗತ್ಯವಾಗಿರುವ, ಕಾಲದ ಪರೀಕ್ಷೆಗೆ ಒಳಪಟ್ಟಿರುವ ಉತ್ತರದಾಯಿತ್ವದಂತಹ ಪ್ರಜಾಪ್ರಭುತ್ವವಾದಿ ಮೌಲ್ಯ ಮತ್ತು ಪದ್ಧತಿಗಳನ್ನು ಕಡೆಗಣಿಸುತ್ತಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾದ ಮಾಧ್ಯಮಗೋಷ್ಟಿ ನಡೆಸದೆ, ಏಕತಾನತೆಯ, ಏಕಪಕ್ಷೀಯವಾದ ರೇಡಿಯೋ ಕಾರ್ಯಕ್ರಮವನ್ನು ನೆಚ್ಚಿಕೊಂಡಿರುವುದಕ್ಕೆ ಇದೇ ಕಾರಣ. ತಾನು ಹೇಳಬೇಕಾಗಿರುವವನು, ಉಳಿದವರೆಲ್ಲಾ ಕೇಳಿಸಿಕೊಳ್ಳಬೇಕಾದವರು ಎಂದು ಅವರು ಭಾವಿಸಿಕೊಂಡಂತಿದೆ. ಇದು ಆಡಳಿತ ಕುರಿತ ಅವರ ನಿಲುವಿನಲ್ಲಿಯೂ ವ್ಯಕ್ತವಾಗುತ್ತದೆ. ಅವರು ರಾಜತಾಂತ್ರಿಕತೆಯ ಪರಂಪರೆಯನ್ನು ಕಡೆಗಣಿಸಿ, ತಮ್ಮನ್ನೇ ಅಧಿಕಾರದ ಕೇಂದ್ರವಾಗಿ ಬಿಂಬಿಸಿಕೊಳ್ಳುತ್ತಾರೆ. ಇದಕ್ಕೆ ಬೇರೆ ದೇಶಗಳು ಮತ್ತು ಅವುಗಳ ನಾಯಕರ ಜೊತೆ ಮೋದಿಯವರ ರಾಜತಾಂತ್ರಿಕ ವ್ಯವಹಾರದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಎಲ್ಲಾ ಅಧಿಕಾರಗಳು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕೇಂದ್ರೀಕೃತವಾಗಿವೆ. ಉಳಿದ ಸಚಿವರು ಮತ್ತು ಸಚಿವಾಲಯಗಳಿಗೆ ಯಾವುದೇ ಅಧಿಕಾರ ಇದ್ದಂತಿಲ್ಲ. ಯೋಚಿಸಿ: ಎಷ್ಟು ಜನ ಸಚಿವರ ಮತ್ತು ಅವರ ಸಚಿವಾಲಯಗಳ ಹೆಸರು ಜನಸಾಮಾನ್ಯರಿಗೆ ಗೊತ್ತಿದೆ? ಬೇರೆಬೇರೆ ಸಚಿವಾಲಯಗಳ ಕಾರ್ಯದರ್ಶಿಗಳು ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ವರದಿ ಮಾಡುವ ಪರಿಪಾಠ ನಡೆಯುತ್ತಿದೆ. ವಿಷಯಗಳ ಕುರಿತು ವ್ಯಕ್ತಿಗತ ನಿಲುವಿನ ಕಾರಣದಿಂದಾಗಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳನ್ನು ಸಹಿಸಲಾಗುವುದಿಲ್ಲ ಮತ್ತು ಆಡಳಿತದ ವಿಷಯದಲ್ಲಿ ಪ್ರತಿಭೆಗಳಿಗೆ ಅಥವಾ ಹೊಸ ಚಿಂತನೆಗಳಿಗೆ ಅವಕಾಶವಿಲ್ಲ. ಅಧಿಕಾರದ ಅತ್ಯುನ್ನತ ವಲಯಗಳಲ್ಲಿ ಅಧಿಕಾರಿಗಳಾಗಿ ಅಥವಾ ಮಂತ್ರಿಗಳಾಗಿ ಕುಳಿತಿರುವವರಲ್ಲಿ ಹೆಚ್ಚಿನವರು ಮೋದಿಯ ನಿಷ್ಟಾವಂತರು ಅಥವಾ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದ ಆಪ್ತರು ಅಥವಾ ಕೋಮುವಾದಿ ದಬ್ಬಾಳಿಕೆ ಮತ್ತು ಮೋದಿ ಹಾಗೂ ಅವರ ಘೋಷಿತ ಉತ್ತರಾಧಿಕಾರಿ ಅಮಿತ್ ಶಾ ಅವರ ಭಟ್ಟಂಗಿತನವೇ ಅರ್ಹತೆಯಾಗಿರುವ ಮುಖವಿಲ್ಲದ ದುರ್ಬಲರು. ಅರವಿಂದ ಸುಬ್ರಹ್ಮಣ್ಯನ್, ಅರವಿಂದ ಪಾನಗರಿಯಾ, ರಘುರಾಮ್ ರಾಜನ್ ಅಥವಾ ಇತರ ಅನುಭವಿ ತಜ್ಞರನ್ನು ನೆನಪಿಸಿಕೊಳ್ಳಿ. ಅವರ ಗತಿ ಏನಾಯಿತು? ಮೋದಿಗೆ ನಿಕಟರಾಗಿದ್ದ ಊರ್ಜಿತ್ ಪಠೇಲ್ ಅಂತವರು ಕೂಡಾ ಭಾರತೀಯ ರಿಸರ್ವ್ ಬ್ಯಾಂಕಿನ ತನ್ನ ಜವಾಬ್ದಾರಿಯಿಂದ ಅರ್ಧದಲ್ಲಿಯೇ ಕೈತೊಳೆದುಕೊಳ್ಳಬೇಕಾಯಿತು. 'ಪ್ರಚಾರ, ಬಡಾಯಿಯೇ ಬಂಡವಾಳ' ಈ "ಪರಮೋಚ್ಛ ನಾಯಕ"ನ ಅಧಿಕಾರವನ್ನು ಪ್ರದರ್ಶಿಸಲು ಎಲ್ಲವನ್ನೂ ಮಾಡಲಾಗುತ್ತಿದೆ ಮತ್ತು ಭಾರೀ ಪ್ರಮಾಣದಲ್ಲಿ ಹಣವನ್ನೂ ಸುರಿಯಲಾಗುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಮೋದಿ ಮತ್ತು "ಮೋದಿ ಸರಕಾರ"ದ ಇಮೇಜ್ ಬೆಳೆಸಲು 6000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಕಳೆದ ಆರು ವರ್ಷಗಳಲ್ಲಿ ಮೋದಿ ತನ್ನ ವಿದೇಶ ಯಾತ್ರೆಗಳಿಗೇ 446 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ. ಈ ತನಕದ 59 ವಿದೇಶ ಯಾತ್ರೆಗಳಲ್ಲಿ ಮೋದಿಯನ್ನು ಅಂತರರಾಷ್ಟ್ರೀಯ ಸ್ಥಾನಮಾನ ಇರುವ ಜನಪ್ರಿಯ ಮುತ್ಸದ್ಧಿ ಎಂದು ಬಿಜೆಪಿ ಬಿಂಬಿಸಿದೆ. ಆದರೆ, ಇದರಿಂದ ಧೋರಣೆ ಅಥವಾ ಭಾರತದ ಕುರಿತ ನಿಲುವಿಗೆ ಸಂಬಂಧಿಸಿದಂತೆ ಆದ ಸಾಧನೆ ಅಥವಾ ಲಾಭವಾದರೂ ಏನು? ಅದು ಭಾರತಕ್ಕೆ ಹೆಚ್ಚಿನ ಹಣಕಾಸು ಹೂಡಿಕೆಯನ್ನಾದರೂ ತಂದಿದೆಯೆ? ಒಂದು ವೇಳೆ ಇಂತಹ ಹೂಡಿಕೆ ಆಗಿದ್ದರೆ, ಮೋದಿಯ ಮುದ್ದಿನ ಯೋಜನೆಯಾದ "ಮೇಕ್ ಇನ್ ಇಂಡಿಯಾ" ಒಂದು ಹಾಸ್ಯಾಸ್ಪದ ಪ್ರಹಸನವಾಗುತ್ತಿರಲಿಲ್ಲ. ಪ್ರಧಾನಮಂತ್ರಿಯಾದ ಹೊಸತರಲ್ಲಿ ವಿಮಾನವನ್ನೇ ತಿರುಗಿಸಿ ನವಾಜ್ ಷರೀಫ್‌ರನ್ನು ಭೇಟಿ ಮಾಡಿದ್ದು (ಬಿರಿಯಾನಿ ಭೇಟಿ), ಸಾಬರಮತಿ ಆಶ್ರಮದಲ್ಲಿ ಕ್ಸಿ ಜಿನ್‌ಪಿಂಗ್ ಜೊತೆ ಉಯ್ಯಾಲೆಯಾಟ ಆಡಿದ್ದು, ಡೊನಾಲ್ಡ್ ಟ್ರಂಪ್‌ನ "ನಮಸ್ತೇ ಟ್ರಂಪ್", ಬರಾಕ್ ಒಬಾಮಾರನ್ನು "ಮೈ ಫ್ರೆಂಡ್ ಬರಾಕ್" (ನನ್ನ ಗೆಳೆಯ ಬರಾಕ್) ಎಂದು ಸಂಬೋಧಿಸಿದ್ದು, ಇವರೆಲ್ಲರೂ ತನ್ನ ವೈಯಕ್ತಿಕ ಗೆಳೆಯರೇನೋ ಎಂಬಂತೆ ಬಿಂಬಿಸಿದ್ದು ನೆನಪಿದೆಯೇ? ಭಾರತದ ಪಠಾಣ್‌ಕೋಟ್ ಸೇನಾನೆಲೆಯಲ್ಲಿ ಪಾಕಿಸ್ತಾನದ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ)ಗೆ ಭಯೋತ್ಪಾದಕ ದಾಳಿಯ ಕುರಿತು ತನಿಖೆ ನಡೆಸಲು ಕೂಡಾ ಮೋದಿ ಅವಕಾಶಕೊಟ್ಟರು. ಈ ಎಲ್ಲಾ ದುರಂಹಕಾರಿ ಮತ್ತು ಹುಚ್ಚಾಟದ ಕ್ರಮಗಳ ಹೊರತಾಗಿಯೂ ಇವ್ಯಾವುದೇ ದೇಶ ಭಾರತಕ್ಕೆ ಬೆದರಿಕೆ ಹಾಕುವುದನ್ನು ನಿಲ್ಲಿಸಿವೆಯೆ? ಟ್ರಂಪ್ ಏನು ಮಾಡಿದರು? ಭಾರತದ ಕೈ ತಿರುಚಿ ತೆರಿಗೆ ಹೇರಿದರು. ಚೀನಾ ಏನು ಮಾಡಿತು ಎಂಬುದು ಎಲ್ಲರಿಗೂ ಗೊತ್ತು. ಪಾಕಿಸ್ತಾನ ಭಯೋತ್ಪಾದಕರ ನುಸುವಿಕೆಯನ್ನು ಎಂದಿಗೂ ನಿಲ್ಲಿಸಲಿಲ್ಲ. ಅಷ್ಟೇ ಏಕೆ? ಭಾರತವನ್ನೇ ಅವಲಂಬಿಸುತ್ತಾ, ಆಪ್ತವಾಗಿದ್ದ ನೇಪಾಳ ಕೂಡಾ ಭೂವಿವಾದವನ್ನು ಹಿಡಿದುಕೊಂಡು ಭಾರತಕ್ಕೆ ಸೆಡ್ಡುಹೊಡೆದಿದೆ. ಇದಲ್ಲದೇ, ಎಲ್ಲಾ ಅರ್ಹತೆಯ ಹೊರತಾಗಿಯೂ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಸಿಗಲೇ ಇಲ್ಲ. ಇತ್ತೀಚಿನ ಚೀನಾ ಜೊತೆಗಿನ ಸಂಘರ್ಷದಲ್ಲಿ ಯಾವುದೇ ದೇಶ ಮೋದಿಗೆ ಕರೆ ಮಾಡಿ ಭಾರತಕ್ಕೆ ಬೆಂಬಲ ಘೋಷಿಸಿದೆಯೆ? ಒಂದು ವೇಳೆ ಹಾಗೆ ಮಾಡಿದ್ದರೆ, ಜನರಿಗಂತೂ ಆ ವಿಷಯ ಗೊತ್ತೇ ಇಲ್ಲ. ಆದುದರಿಂದ, ಪ್ರಬಲವಾದ ನಾಯಕತ್ವ ಇದೆ ಎಂದು ಬಿಂಬಿಸುತ್ತಿರುವಾಗಲೂ ಮೋದಿ ಆಡಳಿತ ಶೈಲಿಯು ಭಾರರತವನ್ನು ದಯನೀಯ ಸ್ಥಿತಿಗೆ ತಲಪಿಸಿದೆ ಎಂದು ಹಿಂದೆ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಮಾಧ್ಯಮ ಸಲಹೆಗಾರರಾಗಿದ್ದ ಹರೀಶ್ ಖರೆ ಹೇಳಿದಾಗ ಅವರು ಸತ್ಯವನ್ನೇ ಹೇಳಿದ್ದಾರೆ. ಚೀನಾದ ಜೊತೆ ನಮ್ಮ ಸಂಬಂಧದ ಎಲ್ಲಾ ವಿಷಯಗಳಲ್ಲಿ ಪೆಡಂಭೂತದಂತಹ ವೈಫಲ್ಯವನ್ನು ಉಲ್ಲೇಖಿಸುತ್ತಾ ಅವರು ಹೀಗೆ ಹೇಳಿದ್ದಾರೆ: "...ನಾವು ಸಾಕ್ಷ್ಯಗಳನ್ನು ತಪ್ಪಾಗಿ ಯಾಕೆ ಅರ್ಥಮಾಡಿಕೊಂಡೆವು? ಅದೂ ಕೂಡಾ ನಾವು ಭಾರತದ ರಾಷ್ಟ್ರೀಯ ಭದ್ರತೆಯನ್ನು ದಕ್ಷತೆ ಮತ್ತು ಸಿದ್ಧತೆಯ ವಿಷಯದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುವುದಾಗಿ ಬಿಂಬಿಸಿದ ಹೊಸ ಮಹಾದಂಡನಾಯಕರ ಸಾಂಸ್ಥಿಕ ಆಶೀರ್ವಾದ ಇರುವಾಗ? ಆದರೆ, ಅನುಷ್ಟಾನ ನಿರ್ದೇಶನಾಲಯದಿಂದ ಹಿಡಿದು, ರಿಸರ್ಚ್ ಎಂಡ್ ಅನಾಲಿಸಿಸ್ ವಿಂಗ್ (ರಾ) ಮತ್ತು ಮಿಲಿಟರಿ ಇಂಟೆಲಿಜೆನ್ಸ್ ತನಕ ಭಾರತದ ಮೌಲ್ಯಮಾಪನ ಸಂಸ್ಥೆಗಳಿಗೆ ತಮ್ಮ ರಾಜಕೀಯ ಧಣಿಗಳ ವ್ಯಕ್ತ ಮತ್ತು ಕಲ್ಪಿತ ಆದ್ಯತೆಗಳಿಗೆ ಹೊಂದಿಕೊಳ್ಳುವಂತೆ ತಮ್ಮ ವಾಸ್ತವಾಂಶ, ಅಂದಾಜು ಮತ್ತು ತೀರ್ಮಾನಗಳನ್ನು ತಿರುಚುವ ಗುಣವಾಗದ ಅಭ್ಯಾಸವಿದೆಯೆಂದೂ ನಮಗೆ ಗೊತ್ತು. ಇದರ ಪರಿಣಾಮವು ಯಾವಾಗಲೂ ಮರ್ಯಾದೆ ಕಳೆದುಕೊಳ್ಳುವುದೇ ಆಗಿದೆ..." (ಯಥಾವತ್) ಮೋದಿಯ ದರ್ಪಿಷ್ಟ ವ್ಯಕ್ತಿತ್ವ ಮತ್ತು ಅಧಿಕಾರವನ್ನು ತನ್ನ ಬಿಗಿಮುಷ್ಟಿಯೊಳಗೆ ಕೇಂದ್ರೀಕರಿಸುವ ಅವರ ಖಯಾಲಿಯು ದೇಶವನ್ನು ಹೇಗೆ ಈಗಿನ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂಬುದನ್ನು ಖರೆಯವರ ಮುಂದಿನ ಕಟು ಮಾತುಗಳಲ್ಲಿ ವಿವರಿಸಲಾಗಿದೆ: "ಹೀಗಿದ್ದರೂ ಈ "ಬಿಕ್ಕಟ್ಟಿನ" ಸಂದರ್ಭದಲ್ಲಿ ದೇಶವು ಸರಕಾರ ಮತ್ತು ಅದರ "ಪರಮೋಚ್ಛ" ನಾಯಕನ ಬೆನ್ನಹಿಂದೆ ಒಗ್ಗಟ್ಟಾಗಿಬೇಕೆಂದು ಅಪ್ರಾಮಾಣಿಕತೆಯಿಂದ ಸೂಚಿಸಲಾಗುತ್ತಿದೆ. ಆದರೆ, ಪ್ರಧಾನಮಂತ್ರಿಯ ಭಾರದಿಂದಾಗಿ ನಮ್ಮ ವ್ಯವಸ್ಥೆಯೇ ಕಂಗಾಲಾದ ಪರಿಣಾಮವಾಗಿಯೇ ನಾವು ಈಗಿನ ಪರಿಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ಗುರುತಿಸಬೇಕೆಂಬುದನ್ನೂ ರಾಷ್ಟ್ರೀಯ ಹಿತಾಸಕ್ತಿಯು ಬಯಸುತ್ತದೆ. ಈ ಹಾನಿಕಾರಕ ಹೊರೆಯನ್ನು ನಾವು ಒಪ್ಪಿಕೊಳ್ಳದೇಹೋದಲ್ಲಿ ಉಹಿಸಲಾಗದ ಪರಿಣಾಮಗಳನ್ನು ಉಂಟುಮಾಡಬಲ್ಲ ಇನ್ನೊಂದು ಸಮಸ್ಯೆಯನ್ನು ದೇಶವು ಹೊರಬೇಕಾಗಬಹುದು". (ಯಥಾವತ್) ಭಾರತದ ಒಕ್ಕೂಟ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವುತ್ತಲೇ ತನ್ನ ಸಣ್ಣಪುಟ್ಟ ಸಾಧನೆಗಳನ್ನು ಪ್ರಚಾರ ಮತ್ತು ಬಡಾಯಿಯ ಮೂಲಕ ರಾಜಕೀಕರಣಗೊಳಿಸಿ ಲಾಭಪಡೆಯುವ ಯಾವುದೇ ಪ್ರಯತ್ನವನ್ನು ಮೋದಿ ಮಾಡದೇಬಿಟ್ಟಿಲ್ಲ‌. ಆರ್ಥಿಕತೆಯನ್ನು ಹಾಳುಗೆಡವಿದ ನೋಟು ಅಮಾನ್ಯೀಕರಣ, ಜಿಎಸ್‌ಟಿ ಹೇರಿಕೆ ಮುಂತಾದ ಅವರ ವಿಭಜನಕಾರಿ ಕ್ರಮಗಳ ಜಾರಿಯ ಹೊರತಾಗಿಯೂ, ಸಿರಿವಂತ ವಿರೋಧಿ ತೋರಿಕೆಯ ಮತ್ತು ವಿಭಜನಕಾರಿಯಾದ ಹುಸಿ ಜನಮರುಳು ಮಾತುಗಾರಿಕೆಯು ಅವರನ್ನು ಈ ತನಕ ಕಾಯ್ದುಕೊಂಡು ಬಂದಿದೆ. 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ನಿರುದ್ಯೋಗ ದರ, ಬಡತನ ಸೂಚ್ಯಂಕದಲ್ಲಿ ಭಾರೀ ಏರಿಕೆ, ಪಾತಾಳ ತಲಪಿರುವ ಋಣಾತ್ಮಕ ಜಿಡಿಪಿ, ನಾಗರಿಕ ಹಕ್ಕುಗಳ ಮೊಟಕು ಇತ್ಯಾದಿಗಳ ಹೊರತಾಗಿಯೂ ಅವರು ಹುಸಿ ಪ್ರಚಾರ ಮತ್ತು ಪಾಕಿಸ್ತಾನವನ್ನು ತೆಗಳುವ ತಂತ್ರದಿಂದ ಎರಡನೇ ಬಾರಿಗೆ ಹೆಚ್ಚಿನ ಅಂತರದಿಂದ ಚುನಾವಣಾ ಜಯ ಗಳಿಸಿರುವುದು ಇದನ್ನೇ ತೋರಿಸುತ್ತದೆ. ಟ್ರಂಪ್ ಭೇಟಿಯ ವೇಳೆ ದಿಲ್ಲಿಯಲ್ಲಿ ಗಲಭೆಗಳನ್ನು ನಿಯಂತ್ರಿಸುವಲ್ಲಿ ಭಾರೀ ವೈಫಲ್ಯ ಮತ್ತು ಅವೈಜ್ಞಾನಿಕವಾದ ದಿಢೀರ್ ಕೋವಿಡ್-19 ಲಾಕ್‌ಡೌನ್ ಕ್ರಮವು ವಲಸೆ ಕಾರ್ಮಿಕರನ್ನು ವಿವರಿಸಲು ಅಸಾಧ್ಯವಾದ ಸಂಕಷ್ಟಕ್ಕೆ ತಳ್ಳಿದುದು, ಸಣ್ಣ ಉದ್ದಿಮೆಗಳನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ನಾಶಮಾಡಿದುದು ಕೂಡಾ ವೈಯಕ್ತಿಕವಾಗಿ ಅವರಿಗೆ ಹಾನಿ ಮಾಡಿಲ್ಲ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ, ಚೀನಾದ ಅಧ್ವಾನಗಳು ಮಾತ್ರ ಈ ತನಕ ಮತಗಳನ್ನು ಪಡೆಯುವಲ್ಲಿ ಅಷ್ಟೊಂದು ಯಶಸ್ವಿಯಾಗಿದ್ದ ಮೋದಿ ಮತ್ತು ಹಿಂದೂತ್ವ ರಾಜಕೀಯದ ಬಂಡವಾಳವಿಲ್ಲದ ಬಡಾಯಿಯನ್ನು ಬಯಲು ಮಾಡಿದೆ. ಅವರ ಹಾರಾಟವೆಲ್ಲಾ ದುರ್ಬಲ ಪಾಕಿಸ್ತಾನ, ನೇಪಾಳ ಮತ್ತು ಭಾರತದ ಮುಸ್ಲಿಮರ ವಿರುದ್ದ ಮಾತ್ರವೆಂದೂ ಗೊತ್ತಾಗಿದೆ. ಈ ತನಕ ಚೀನಾದ ಹೆಸರು ಹೇಳಿ ಟೀಕಿಸುವ ಧೈರ್ಯವನ್ನೂ ಮೋದಿ ತೋರಿಸಿಲ್ಲ. ಐವತ್ತಾರು ಇಂಚಿನ ಎದೆ ಇರುವ ಮೋದಿ ಕೇವಲ ದುರ್ಬಲರಿಗೆ ಮಾತ್ರ "ಕೆಂಪು ಕಣ್ಣು" (ಲಾಲ್ ಆಂಖ್) ತೋರಿಸಲು ಶಕ್ತರು ಮತ್ತು ಬಲಶಾಲಿಗಳ ಎದುರು ಕೈಕಟ್ಟಿ, ಬಾಯಿ ಮುಚ್ಚಿ ಮೌನವಾಗಿರುತ್ತಾರೆ ಎಂಬುದೂ ಮನವರಿಕೆಯಾಗುತ್ತಿದೆ. ಮೋದಿ ಮತ್ತು ಅವರ ಹಿಂಬಾಲಕ ಶಾ ಯಾವುದೇ ಪ್ರಶ್ನೆಗೆ ಉತ್ತರ ಹೇಳಲು ಮಾಧ್ಯಮದ ಮುಂದೆ ಬರುತ್ತಿಲ್ಲ. ಗೋದಿ ಮೀಡಿಯಾ ಎಂದೇ ಕರೆಯಲಾಗುವ ಮುಖ್ಯವಾಹಿನಿಯ ಮಾಧ್ಯಮಗಳು ಮಾತ್ರ ನಾಚಿಕೆಬಿಟ್ಟು ಅವರನ್ನು ಹೊಗಳುತ್ತಾ, ಸೇನೆಯನ್ನು ವೈಫಲ್ಯಕ್ಕಾಗಿ ದೂರಿಯಾದರೂ ಅವರ ಇಮೇಜನ್ನು ರಕ್ಷಿಸಿಕೊಳ್ಳುವುದರಲ್ಲಿ ತೊಡಗಿವೆ. ಮೇಲೆ ಉಲ್ಲೇಖಿಸಿರುವ ಹರೀಶ್ ಖರೆ ಅವರ ಹೇಳಿಕೆಯು ಮೋದಿಯ ನಿರಂಕುಶ ಮತ್ತು ಹುಚ್ಚಾಟದ ಆಡಳಿತದ ಅಡಿಯಲ್ಲಿ ಬೆಳೆಯುತ್ತಿರುವ ಕೊಳೆತವನ್ನು ತೋರಿಸುತ್ತದೆ. ಬಿಜೆಪಿಯು ಚೀನಾ ಸೇರಿದಂತೆ ಎಲ್ಲಾ ಬಿಕ್ಕಟ್ಟುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಹೇಳುವುದು ಕಷ್ಟವಿಲ್ಲ. ಅದರ ಐಟಿ ಸೆಲ್, ವಕ್ತಾರರು ಮತ್ತು ಗುಲಾಮಿ ಮಾಧ್ಯಮಗಳು ಬಲಿಪಶುಗಳನ್ನು ಹುಡುಕಿ ಅವರ ಮೇಲೆ ಎಲ್ಲಾ ವೈಫಲ್ಯಗಳ ಹೊರೆಯನ್ನು ಹೊರಿಸಿ, ಉಡಾಫೆಯ ಮತ್ತು ಸ್ವಮೋಹಿಯಾದ "ಪರಮೋಚ್ಛ ನಾಯಕ"ನ ಇಮೇಜನ್ನು ರಕ್ಷಿಸಲು ಯತ್ನಿಸುತ್ತವೆ. ಇದನ್ನು ನಾವು ಕಣ್ಣಾರೆ ನೋಡಬಹುದು. (ಕೃಪೆ: ವಾರ್ತಾಭಾರತಿ) ___________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement