ರಾಜ್ಯ

ರಾಜ್ಯದಲ್ಲಿ ಹಲವಾರು ಹಿಂದುಳಿದ ಸಮುದಾಯಗಳಿವೆ, ಯಡಿಯೂರಪ್ಪ ಸರ್ಕಾರ ಅವುಗಳ ಅಭಿವೃದ್ಧಿಗೂ ಪ್ರಾಧಿಕಾರ ರಚನೆ ಮಾಡಲಿ: ಸಿದ್ದರಾಮಯ್ಯ

ರಾಜ್ಯದಲ್ಲಿ ಹಲವಾರು ಹಿಂದುಳಿದ ಸಮುದಾಯಗಳು ಇನ್ನೂ ಇವೆ, ಅವುಗಳ ಅಭಿವೃದ್ಧಿಗೂ ಯಡಿಯೂರಪ್ಪ ಸರ್ಕಾರ ಪ್ರಾಧಿಕಾರ ರಚನೆ ಮಾಡಲಿ. ಮತ ಓಲೈಕೆ ಕಾರಣಕ್ಕಾಗಿ ಯಾವುದೋ ಒಂದು ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಸರಿಯಲ್ಲ. ಅಭಿವೃದ್ಧಿಯ ಹಾದಿಯಲ್ಲಿ ಎಲ್ಲರು ಒಂದಾಗಿ ಸಾಗಿದಾಗ ಮಾತ್ರ ಸಮಾನತೆ ತರಲು ಸಾಧ್ಯ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 30,000 ಮರಾಠ ಸಮುದಾಯದ ಮತದಾರರಿದ್ದಾರೆ, ಅವರ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆಯ ನಿರ್ಧಾರ ಮಾಡಿದೆಯೇ ಹೊರತು ಅವರ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವ ಯಾವುದೇ ಪ್ರಾಮಾಣಿಕ ಕಾಳಜಿ ಬಿಜೆಪಿ ಯಡಿಯೂರಪ್ಪ ಸರ್ಕಾರಕ್ಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.(file photo)

ಬಿಜೆಪಿ ಮತ್ತು ಜೆಡಿಎಸ್‌ನ ಒಳ‌ಒಪ್ಪಂದದ ರಾಜಕಾರಣ ಹೊಸತಲ್ಲ. ಹಿಂದೆಯೂ ಮಾಡಿಕೊಂಡಿದ್ದರು, ಕಳೆದ ಉಪಚುನಾವಣೆಯಲ್ಲೂ ಈ ಆರೋಪ ಇತ್ತು, ಮುಂದೆಯೂ ನಡೆಯಬಹುದು. ಅವಕಾಶವಾದಿ ರಾಜಕಾರಣ ಜೆಡಿಎಸ್‌ನ ನೈಜ ಸಿದ್ಧಾಂತ, ಇದನ್ನು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಮುಂದುವರೆಸಿದ್ದಾರೆ. ಈ ಬಾರಿಯ ಪ್ರವಾಹದಿಂದ ರಾಜ್ಯದಲ್ಲಿ ಸುಮಾರು ರೂ.25,000 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ, ಆದರೆ ಕೇಂದ್ರ ಸರ್ಕಾರದಿಂದ ಈ ವರೆಗೆ ಬಂದಿರುವುದು ರೂ.577 ಕೋಟಿ ಮಾತ್ರ. ಇದರಲ್ಲಿ ಎಷ್ಟು ಜನರಿಗೆ ನೆರೆ ಪರಿಹಾರ ನೀಡಲು ಸಾಧ್ಯ? ರಾಜ್ಯ ಸರ್ಕಾರದ ಬಳಿಯೂ ಹಣವಿಲ್ಲ, ಕೇಂದ್ರವೂ ನೀಡುತ್ತಿಲ್ಲ. ಹೀಗಾದರೆ ಜನರಿಗೆ ಯಾರು ದಿಕ್ಕು? ರೈತರ ಆದಾಯ ದುಪ್ಪಟ್ಟುಗೊಳಿಸ್ತೀವಿ ಅಂತ ಭರವಸೆ ನೀಡಿ, ಈಗ ಭತ್ತ, ಮೆಕ್ಕೆಜೋಳ ಮುಂತಾದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆಯನ್ನೂ ನೀಡದೆ ರೈತರನ್ನು ಕಷ್ಟಕ್ಕೆ ತಳ್ಳಿ ಕೈತೊಳೆದುಕೊಂಡಿದೆ. ಇದರ ಮೇಲೆ ರೈತವಿರೋಧಿ ಕಾನೂನುಗಳನ್ನು ಬೇರೆ ಜಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಉಳ್ಳವರ ಸರ್ಕಾರದಲ್ಲಿ ಅನ್ನದಾತ ನರಳಾಡುತ್ತಿದ್ದಾನೆ. ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸಮಾಜ ವಿರೋಧಿ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ತೀರ್ಮಾನ ಕೂಡ ಹೌದು. ಚುನಾವಣೆಗಳನ್ನು ಸಾಧನೆಯ ಬಲದಿಂದ ಗೆಲ್ಲಲಾಗದ ರಾಜ್ಯದ ಮತಿಹೀನ ಬಿಜೆಪಿ ಸರ್ಕಾರ ಇಂತಹ ಅಗ್ಗದ ತಂತ್ರ-ಕುತಂತ್ರಗಳನ್ನು ಮಾಡಿ ಸಮಾಜವನ್ನು ಒಡೆಯಲು ಹೊರಟಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡತನ ನಿರ್ಮೂಲನೆಯ ಕಾರ್ಯಕ್ರಮಗಳಿಗೆ ವೈಜ್ಞಾನಿಕವಾದ ಅಧ್ಯಯನ ಆಧಾರಿತವಾಗಬೇಕು. ಮುಖ್ಯಮಂತ್ರಿಗಳು ಬಡತನ ನಿರ್ಮೂಲನೆಯ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ ಈಗಾಗಲೇ ಅವರ ಮುಂದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಿ. ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಜಾತಿ-ಧರ್ಮಗಳನ್ನು ಮೀರಿದ್ದು ಬಡತನ. ತಳಸಮುದಾಯಗಳಲ್ಲಿ ಮಾತ್ರವಲ್ಲ ಮೇಲ್ಜಾತಿಗಳಲ್ಲಿಯೂ ಬಡವರಿದ್ದಾರೆ. ಎಲ್ಲ ಜಾತಿ-ಧರ್ಮಗಳ ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ನನ್ನ ಸ್ವಾಗತವಿದೆ. ಕೇವಲ ರಾಜಕೀಯ ಲಾಭಕ್ಕಾಗಿ ನಡೆಸುವ ಇಂತಹ ಕ್ಷುಲ್ಲಕ ಬುದ್ದಿಯ ಕಸರತ್ತುಗಳನ್ನು ಖಂಡಿಸುತ್ತೇನೆ. ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿಗರ ನಡುವೆ ಆಗಾಗ ಸಂಘರ್ಷ ನಡೆದರೂ, ರಾಜ್ಯಾದ್ಯಂತ ಎರಡೂ ಸಮುದಾಯಗಳು ಸೌಹಾರ್ದತೆಯಿಂದ ಬದುಕುತ್ತಿವೆ. ಸರ್ಕಾರ ಮರಾಠ ಅಭಿವೃದ್ದಿ ಪ್ರಾಧಿಕಾರ ಘೋಷಿಸಿ ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸುವ ಮೂರ್ಖತನ ತೋರಿದೆ. ಇದರಿಂದಾಗಿ ರಾಜ್ಯದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಅದಕ್ಕೆ ಮುಖ್ಯಮಂತ್ರಿಗಳೇ ಹೊಣೆ. ನಾನು ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಕಾರ್ಯಕ್ರಮಗಳು ನಿರ್ದಿಷ್ಠ ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ. ಇವೆಲ್ಲವೂ ಸರ್ವಾಜನಾಂಗದ ಬಡವರ ಕಲ್ಯಾಣ ಕಾರ್ಯಕ್ರಮಗಳು. ನಾನು ಜಾತಿ-ಜಾತಿ ನಡುವೆ ವೈಷಮ್ಯ ಹುಟ್ಟಿಸುವ ಕೆಲಸ ಮಾಡಿಲ್ಲ ಎಂದವರು ಹೇಳಿದರು.

ಮೀಸಲಾತಿ, ಸಾಮಾಜಿಕ ನ್ಯಾಯದ ಬಗ್ಗೆ ನಾವು ಮಾತನಾಡಿದಾಗ ನಮ್ಮನ್ನು ಜಾತಿವಾದಿಗಳೆಂದು ಟೀಕಿಸುವ, ಹಂಗಿಸುವ ಬಿಜೆಪಿ ಈಗ ಮಾಡುತ್ತಿರುವುದೇನು? ಜಾತಿ-ಜಾತಿ ನಡುವೆ ಮಾತ್ರವಲ್ಲ ಭಾಷೆ-ಭಾಷೆ ನಡುವೆ ಕೂಡಾ ಜಗಳ ಹುಟ್ಟುಹಾಕುತ್ತಿದೆ. ಇಂತಹ ತುಘಲಕ್ ನಿರ್ಧಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಗ್ಯತೆ ಇಲ್ಲ. ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲ ವೇತನಕ್ಕೆ ದುಡ್ಡಿಲ್ಲ, ಅತಿವೃಷ್ಟಿಯಿಂದ ಕಷ್ಟ-ನಷ್ಟಕ್ಕೀಡಾಗಿರುವ ಜನ ಬೀದಿಯಲ್ಲಿದ್ದಾರೆ, ಕೋರೊನಾ ಸೋಂಕಿನಿಂದ ಜನ ಸಾಯುತ್ತಿದ್ದಾರೆ. ಇವೆಲ್ಲಕ್ಕೂ ಸರ್ಕಾರದ ಬಳಿ ಹಣ ಇಲ್ಲ, ಜಾತಿ ನಿಗಮ-ಪ್ರಾಧಿಕಾರಕ್ಕೆ ನೂರಾರು ಕೋಟಿ ಎಲ್ಲಿಂದ ಬಂತು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಉತ್ತರ ನೀಡಲಿ ಎಂದವರು ಆಗ್ರಹಿಸಿದ್ದಾರೆ.

___________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares