ತುಮಕೂರು

ಅಧಿಕಾರಕ್ಕೆ ಬಂದರೆ 30ದಿನಗಳಲ್ಲಿ ಕೆರೆ ತುಂಬಿಸಬಲ್ಲೆವು: ಟಿ.ಬಿ ಜಯಚಂದ್ರ

‘ಹೈಕೋರ್ಟ್ ತೀರ್ಪಿನ ಪ್ರಕಾರ ನೀರು ನಮ್ಮ ಹಕ್ಕು ಅದು ಯಾರು ಕೂಡಾ ನಮಗೆ ನೀಡುವ ಭಿಕ್ಷೆಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನವರು ಇದೀಗ ಚುನಾವಣೆ ಸಮಯದಲ್ಲಿ ಆರು ತಿಂಗಳಲ್ಲಿ ನೀರು ಬಿಡುವುದಾಗಿ ಹೇಳಿದ್ದಾರೆ. ಬಹುಶಃ ಇಂತಹ ಹಸಿಹಸಿ ಸುಳ್ಳುಗಳಿಗೆ ಶಿರಾ ವಿಧಾನಸಭಾ ಕ್ಷೇತ್ರದ ಜನತೆ ಮರುಳಾಗಲಾರರು. ಇಷ್ಟಾಗಿಯೂ ಕೇವಲ ಮೂವತ್ತು ದಿನಗಳಲ್ಲಿ ಕೆರೆಯನ್ನು ತುಂಬಿಸಬಹುದಾಗಿದೆ, ಅದಕ್ಕೆ ಆರು ತಿಂಗಳು ಯಾಕೆ? ಅಧಿಕಾರಕ್ಕೆ ಬಂದರೆ ಕೇವಲ ಮೂವತ್ತು ದಿನಗಳಲ್ಲಿ ಅದನ್ನು ನಾವು ಮಾಡಿ ತೋರಿಸಲಿದ್ದೇವೆ’ ಎಂದು ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಹೇಳಿದ್ದಾರೆ.‘ಶಿರಾ ವಿಧಾನಸಭಾ ಕ್ಷೇತ್ರವನ್ನು ಶಿಕಾರಿಪುರ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಶಿರಾ ಉತ್ತಮವಾಗಿ ಅಭಿವೃದ್ಧಿ ಹೊಂದಿರುವ ಕಾರಣ ಇದು ನಗರಸಭೆಯಾಗಿ ಭಡ್ತಿ ಪಡೆದಿದ್ದು ಶಿಕಾರಿಪುರ ಇನ್ನೂ ಪುರಸಭೆಯಾಗಿಯೇ ಇದೆ‌. ಹಾಗಾದರೆ ಇದರ ಅರ್ಥವೇನು? ಅಭಿವೃದ್ಧಿ ಹೊಂದದ ಕ್ಷೇತ್ರ ಶಿಕಾರಿಪುರದ ಮಟ್ಟಕ್ಕೆ ಶಿರಾವನ್ನು ಇಳಿಸುವುದು ಎಂದರ್ಥವೇ ಎಂದವರು ಪ್ರಶ್ನಿಸಿದ್ದಾರೆ. ಹಿಂದೆ ಮದಲೂರು ಕೆರೆಯ ಯೋಜನೆಯನ್ನು ನಿಲ್ಲಿಸುವ ಆದೇಶ ನೀಡಿರುವ ಯಡಿಯೂರಪ್ಪನವರೆ ಇಂದು ಕೆರೆಗೆ ನೀರು ಬಿಡುತ್ತೇನೆ ಎನ್ನುತ್ತಿರುವುದು ಅವರ ದ್ವಿಮುಖ ವ್ಯಕ್ತಿತ್ವವನ್ಮು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

‘ಕಾಡುಗೊಲ್ಲರ ಅಭಿವೃದ್ಧಿ ನಿಗಮ ಘೋಷಣೆ ನಿಯಮಬದ್ದವಾಗಿ ಮಾಡಿಲ್ಲ. ಇದು ಕೇವಲ ಪೇಪರ್ ಮೇಲಿನ ಘೋಷಣೆಯಾಗಿದೆ. ಇಂತಹ ಹುಸಿ ಘೋಷಣೆಗಳಿಂದ ಕಾಡು ಗೊಲ್ಲರಿಗೆ ಯಾವುದೇ ಲಾಭವಿಲ್ಲ. ಪ್ರಾಮಾಣಿಕ ಕಾಳಜಿಯ ಘೋಷಣೆ ಇದಾಗಿದ್ದರೆ ಅದೇಕೆ ಈ ವಿಚಾರವನ್ನು ಸದನದಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆದಿಲ್ಲ? ಇಂತಹ ಘೋಷಣೆಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಇವರಿಗಿಲ್ಲವೇ? ಹಣ ಬಿಡುಗಡೆಯಾಗದ ಮೇಲೆ ಅದರಿಂದ ಆ ಸಮುದಾಯಕ್ಕೆ ಯಾವ ಅಭಿವೃದ್ಧಿ ಮಾಡಲು ಸಾಧ್ಯ’ ಎಂದವರು ಸರಣಿ ಪ್ರಶ್ನೆಗಳನ್ನು ಹೇಳಿದ್ದಾರೆ.

__________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com