Advertisement

ಮೋದಿ ಸರ್ಕಾರದ ರೈತವಿರೋಧಿ ಕೃಷಿ ಕಾಯ್ದೆಗಳ ಪರ ನಿಲ್ಲಲಿದೆಯೇ ಸ್ವಯಂಘೋಷಿತ ಮಣ್ಣಿನ ಮಕ್ಕಳ ಪಕ್ಷ ಜೆಡಿಎಸ್?

Advertisement

ಕೃಷಿ ಕ್ಷೇತ್ರವನ್ನು ಕಾರ್ಪೋರೆಟ್ ದೊರೆಗಳ ಕೈಗೊಪ್ಪಿಸುವ, ಭವಿಷ್ಯದಲ್ಲಿ ರೈತರ ಮಕ್ಕಳನ್ನು ಕಾರ್ಪೋರೆಟ್ ದೊರೆಗಳ ಗುಲಾಮರನ್ನಾಗಿಸುವ ಗುಪ್ತ ಕಾರ್ಯಸೂಚಿ ಹೊಂದಿರುವ ಹಾಗೂ ಸಂಸತ್ತಿನಲ್ಲಿ ಸಮರ್ಪಕವಾದ ಚರ್ಚೆಗೆ ಅವಕಾಶ ನೀಡದೇ ತರಾತುರಿಯಲ್ಲಿ ಅಂಗೀಕರಿಸಲಾಗಿರುವ ಮೋದಿ ಸರ್ಕಾರದ ರೈತವಿರೋಧಿ ಕೃಷಿ ಕಾಯ್ದೆಯ ವಿರುದ್ಧ ಇದೀಗ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. 'ದೆಹಲಿ ಚಲೋ' ಬೃಹತ್ ರೈತ ಪ್ರತಿಭಟನೆ ಇದೀಗ ಹನ್ನೆರಡನೆಯ ದಿನಕ್ಕೆ ಕಾಲಿಟ್ಟಿದೆ. ಜಲಪಿರಂಗಿ, ಲಾಠಿ ಚಾರ್ಜ್, ಹೆದ್ದಾರಿಯಲ್ಲಿ ಕಂದಕ ನಿರ್ಮಿಸಿ ಮುಂದೆ ಚಲಿಸದಂತೆ ತಡೆಯುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರದ ಮೋದಿ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ಹರಸಾಹಸಗಳನ್ನು ಮಾಡುತ್ತಲೇ ಇವೆ. ಒಂದೆಡೆ ಪ್ರತಿಭಟನಾನಿರತ ರೈತರನ್ನು ಖಲಿಸ್ಥಾನ್ ಉಗ್ರಗಾಮಿಗಳು ಎಂದು ಬಿಂಬಿಸಿ ಹಿಮ್ಮೆಟ್ಟಿಸಲು ಪ್ರಯತ್ನಿಸಿದರೆ ಮತ್ತೊಂದೆಡೆ ಈ ಪ್ರತಿಭಟನೆಗೆ ಮಾವೋವಾದಿಗಳ ನಂಟಿದೆ ಎಂದು ಬಿಂಬಿಸಲು ಪ್ರಯತ್ನ ನಡೆಯುತ್ತಿದೆ. ಇನ್ನೊಂದೆಡೆ ಆ ರೈತರನ್ನು 'ಕಾಂಗ್ರೆಸ್ ಎಜೆಂಟರುಗಳು' ಎಂದು ಕೂಡ ಮೋದಿ ಪರ ಮಾದ್ಯಮಗಳು ಬಿಂಬಿಸುತ್ತಿವೆ. ಈ ನಡುವೆ ಸ್ವತಃ ಪ್ರಧಾನಿ ಮೋದಿ 'ಆ ಕಾಯ್ದೆಗಳು ರೈತರನ್ನು ಉದ್ಧರಿಸಲು ಜಾರಿಗೊಳಿಸಿರುವ ಕಾಯ್ದೆಗಳಾಗಿದ್ದು ಪ್ರತಿಪಕ್ಷಗಳು ಆ ಕಾಯ್ದೆಗಳ ಕುರಿತು ಅಪಪ್ರಚಾರ ನಡೆಸುವ ಮೂಲಕ ರೈತರನ್ನು ವಂಚಿಸುತ್ತಿವೆ' ಎಂದು ಹೇಳಿಕೆ ನೀಡಿದ್ದರು ಮತ್ತು ಈ ಹಿಂದೆ ಕಾಂಗ್ರೆಸ್ ಸರ್ಕಾರಗಳು 'ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲಮನ್ನಾ, ರಸಗೊಬ್ಬರ ಸಬ್ಸಿಡಿಗಳ ಮೂಲಕ ರೈತರನ್ನು ವಂಚಿಸಿತ್ತು' ಎಂಬ ವಿವೇಚನಾರಹಿತ ಹೇಳಿಕೆ ನೀಡಿದ್ದರು. ಅದು ವಿವೇಚನಾರಹಿತ ಹೇಳಿಕೆಯಲ್ಲವಾದರೆ ಅದು ಹೇಗೆ ಕನಿಷ್ಠ ಬೆಂಬಲ ಬೆಲೆ ನೀಡುವಿಕೆ, ಕೃಷಿ ಸಾಲಮನ್ನಾಗೊಳಿಸುವಿಕೆ ಹಾಗೂ ರಸಗೊಬ್ಬರ ಸಬ್ಸಿಡಿಗಳು ರೈತರಿಗೆ ಮಾಡಿದ ವಂಚನೆಯಾಗಿವೆ ಎಂದು ವಿವರಿಸಬೇಕಿತ್ತಲ್ಲವೇ? ಬಹುಶಃ ಪ್ರಧಾನಿಯವರು ಈ ದೇಶದ ಜನರನ್ನು ಇಷ್ಟನ್ನೂ ಅರ್ಥ ಮಾಡಿಕೊಳ್ಳಲಾಗದ ದಡ್ಡರು ಎಂದುಕೊಂಡಿದ್ದರೆ ನಿಜಕ್ಕೂ ಅದವರ ಮೂರ್ಖತನವಲ್ಲದೇ ಮತ್ತೇನೂ ಅಲ್ಲ. ಈ ಹಿಂದೆ ಮೋದಿ ಸರ್ಕಾರ ಮತ್ತವರ ಪೈಡ್ ಮೀಡಿಯಾಗಳು ಪರಿಸರ ಪರ ಹೋರಾಟಗಾರರನ್ನು ಅಭಿವೃದ್ಧಿ ವಿರೋಧಿಗಳು ಎಂದು ಹೀಯಾಳಿಸುವ ಮೂಲಕ ಅವರ ಹೋರಾಟವನ್ನು ಹತ್ತಿಕ್ಕಿತ್ತು. ಮಾನವ ಹಕ್ಕುಗಳ ಪರ ಹಾಗೂ ದಲಿತರ ಪರ ಹೋರಾಟಗಾರರನ್ನು 'ಅರ್ಬನ್ ನಕ್ಸಲ್ಸ್' ಎಂದು ಕರೆದು ಜೈಲಿಗೆ ತಳ್ಳಿತ್ತು. ಸಿಎಎ ವಿರೋಧಿ ಹೋರಾಟಗಾರರಿಗೆ ಐಸಿಸ್ ಉಗ್ರಗಾಮಿಗಳ ನಂಟಿನ ಕಥೆ ಹೆಣೆದಿದ್ದರೆ, ಹಥ್ರಾಸ್ ಪ್ರಕರಣದಲ್ಲಿ ಸಂತ್ರಸ್ತೆಯ ಪರ ನಿಂತವರಿಗೆ 'ನಕ್ಸಲ್' ನಂಟಿನ ಕಥೆ ಕಟ್ಟಿತ್ತು. ಬಹುಶಃ ರೈತರ ಕುರಿತು ಇಂತಹದ್ದೆ ಕಥೆ ಕಟ್ಟಿ, ಅಪಪ್ರಚಾರ ಮಾಡುವ ಮೂಲಕ ರೈತ ಹೋರಾಟದ ಹೆಡೆಮುರಿ ಕಟ್ಟಬಹುದು ಎಂಬ ಮೋದಿ ಸರ್ಕಾರದ ಕನಸಿಗೆ ರೈತಪರ ಹೋರಾಟಗಾರರು ಈ ಯಾವುದೇ ಅಪಪ್ರಚಾರಕ್ಕೆ ವಿಚಲಿತರಾಗದೆ ಪ್ರತಿಭಟನೆ ಮುಂದುವರಿಸಿರುವುದು ಹಿನ್ನಡೆಯಾಗಿದೆ. ಈ ನಡುವೆ ಕೇಂದ್ರ ಸರ್ಕಾರದೊಂದಿಗಿನ ಐದನೇ ಸುತ್ತಿನ ಮಾತುಕತೆ ವಿಫಲವಾಗುತ್ತಿದ್ದಂತೆಯೆ ರೈತಸಂಘಗಳು ಡಿಸೆಂಬರ್ 8ರಂದು ಭಾರತ್ ಬಂದ್‌ಗೆ ಕರೆ ನೀಡಿವೆ ಮತ್ತು ಕರ್ನಾಟಕ ರಾಜ್ಯದ ವಿವಿಧ ರೈತಪರ ಸಂಘಟನೆಗಳು ಹಾಗೂ ಮುಖ್ಯವಾಗಿ ಕರ್ನಾಟಕ ಕಿಸಾನ್ ಕಾಂಗ್ರೆಸ್ ಕೂಡ ಬಂದ್‌ಗೆ ಬೆಂಬಲ ಘೋಷಿಸಿದೆ. ಒಟ್ಟಾರೆಯಾಗಿ ಇದರಿಂದ ವಿಚಲಿತವಾಗಿರುವಂತೆ ತೋರುತ್ತಿರುವ ಕೇಂದ್ರ ಸರ್ಕಾರ ರೈತಶಕ್ತಿಯನ್ನು ಎದುರಿಸಲಾಗದೆ ಇದೀಗ ಬುಧವಾರ (ಡಿಸೆಂಬರ್ 9) ಆರನೆ ಸುತ್ತಿನ ಮಾತುಕತೆಗೆ ರೈತರನ್ನು ಆಹ್ವಾನಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಹಲವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ಕಾಯ್ದೆಗಳು ಅಂಗೀಕಾರ ಪಡೆದುಕೊಂಡಿವೆಯಾದರೂ ಬಿಜೆಪಿಯೇತರ ಆಡಳಿತದ ಹೆಚ್ಚಿನ ರಾಜ್ಯಗಳಲ್ಲಿ ಇದು ತಿರಸ್ಕರಿಸಲ್ಪಟ್ಟಿದೆ. ಆದರೆ ಈ ಹಿಂದೆ ಹಸಿರು ಶಾಲು ಹೊದ್ದು ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಗೋಲಿಬಾರು ಮಾಡಿದ್ದ ಅಪಕೀರ್ತಿ ಪಡೆದಿರುವ ಕರ್ನಾಟಕದ ಯಡಿಯೂರಪ್ಪ ಸರ್ಕಾರ ಕೇಂದ್ರದ ಮೋದಿ ಸರ್ಕಾರವನ್ನು ಖುಷಿಪಡಿಸುವ ನಿಟ್ಟಿನಲ್ಲಿ ಈ ರೈತವಿರೋಧಿ ಕಾಯ್ದೆಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಿದೆ. ಹಾಗೆಯೇ ಅದರ ಮುಂದುವರಿದ ಭಾಗವಾಗಿ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಮಧ್ಯರಾತ್ರಿ 12.40ರ ವರೆಗೆ ಚರ್ಚೆಗೆ ಅವಕಾಶ ಮಾಡಿ ಕೊಟ್ಟು ವಿಧೇಯಕವನ್ನು ಮತಕ್ಕೆ ಹಾಕದೆ ಸದನವನ್ನು ಮುಂದೂಡಿದ ಕಾರಣದಿಂದಾಗಿ ಭೂ ಸುಧಾರಣಾ ಕಾಯ್ದೆ ಅಂಗೀಕಾರವಾಗದೇ ಇರುವುದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ, ವಿಧಾನ ಪರಿಷತ್ ಸಭಾಪತಿ- ರೈತಪರ ನಾಯಕ ಪ್ರತಾಪ್ ಚಂದ್ರ ಶೆಟ್ಟಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಇದೀಗ ಸೋಮವಾರ ಆರಂಭಗೊಳ್ಳಲಿರುವ ಏಳು ದಿನಗಳ ಕಲಾಪದಲ್ಲಿ ಈ ಕರಾಳ ಮಸೂದೆಗಳು ಮತ್ತು ಸಭಾಪತಿಯವರ ಮೇಲಿನ ಅವಿಶ್ವಾಸ ನಿರ್ಣಯಗಳು ಚರ್ಚೆಗೆ ಬರಲಿದೆ. ಆದರೆ ಈ ಮಸೂದೆಯ ವಿರುದ್ದವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಬೆಂಬಲಿಸಿದಲ್ಲಿ ಖಂಡೀತವಾಗಿಯೂ ಈ ಮಸೂದೆ ಬಿದ್ದುಹೋಗಲಿದೆ ಹಾಗೂ ಸಭಾಪತಿಯವರ ಸ್ಥಾನ ಕೂಡ ಅಭದ್ರವಾಗಿ ಉಳಿಯಲಿದೆ. ಒಂದು ವೇಳೆ ಅದಕ್ಕೆ ವ್ಯತಿರಿಕ್ತವಾಗಿ ಮೇಲ್ಮನೆಯಲ್ಲಿ ಪೂರ್ಣಪ್ರಮಾಣದ ಬಹುಮತ ಹೊಂದಿಲ್ಲದ ಬಿಜೆಪಿಯ ಪರ ಜೆಡಿಎಸ್ ಮತಚಲಾಯಿಸಿದಲ್ಲಿ ಅಥವಾ ತಟಸ್ಥ ನಿಲುವು ತಳೆದಲ್ಲಿ ಈ ಕಾಯ್ದೆ ಅನುಮೋದನೆ ಪಡೆದು ರಾಜ್ಯಪಾಲರ ಸಹಿಗೆ ಹೋಗಲಿದೆ ಮತ್ತು ಸಭಾಪತಿಯವರ ಮೇಲಿನ ಅವಿಶ್ವಾಸ ನಿರ್ಣಯದಲ್ಲಿ ಕೂಡ ಬಿಜೆಪಿ ಗೆಲುವು ಕಾಣಲಿದೆ. ಇದು ಸಂಪೂರ್ಣವಾಗಿ ಜೆಡಿಎಸ್‌ನ ನಿರ್ಣಯದ ಮೇಲೆ ಅವಲಂಬಿತವಾಗಿದೆ ಎಂದರೆ ತಪ್ಪಾಗಲಾರದು. ಈ ವಿಚಾರವನ್ನು ಇಲ್ಲಿ ಚರ್ಚಿಸಲು ಕಾರಣವೇನೆಂದರೆ ಈ ಕಾಯ್ದೆಯ ಕುರಿತು ಜೆಡಿಎಸ್ ಪಕ್ಷ ಯಾವ ನಿಲುವು ಹೊಂದಿದೆ ಎಂಬ ಕುರಿತು ಈ ತನಕವೂ ಆ ಪಕ್ಷ ಸ್ಪಷ್ಟಪಡಿಸಿಲ್ಲ. ಈ ನಡುವೆ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಅನುಭವಿಸಿ ಆ ನಂತರ ಬಿಜೆಪಿಯಿಂದ ಅಪರೇಷನ್ ಕಮಲಕ್ಕೆ ಒಳಗಾಗಿ ಅಧಿಕಾರ ಕಳೆದುಕೊಂಡು ಇದೀಗ 'ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ತನ್ನ ರಾಜಕೀಯ ಬದುಕು ಹಾಳಾಯಿತು' ಎಂಬ ಹೇಳಿಕೆ ನೀಡಿರುವ ಜೆಡಿಎಸ್‌ನ ಕುಮಾರಸ್ವಾಮಿ ಯವರು ಈ ಕಾಯ್ದೆಯನ್ನು ವಿರೋಧಿಸುವ ಕುರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆಯೇ ಎಂಬ ಕುರಿತು ಕೂಡ ಇದೀಗ ಚರ್ಚೆ ಆರಂಭಗೊಂಡಿದೆ. ಆದರೆ ಕೆಲವು ಹಿರಿಯ ರಾಜಕೀಯ ವಿಶ್ಲೇಷಕರ ಪ್ರಕಾರ 'ಕುಮಾರಸ್ವಾಮಿಯವರ ಈ ಕಾಂಗ್ರೆಸ್ ವಿರೋಧಿ ಹೇಳಿಕೆಯ ಹಿಂದೆ ವಿಧಾನಪರಿಷತ್ ನಲ್ಲಿ ರೈತವಿರೋಧಿ ಕಾಯ್ದೆಗಳನ್ನು ಜೆಡಿಎಸ್ ಬೆಂಬಲಿಸುವ ಸಂಭವ ಇದೆ' ಎಂಬುವುದಾಗಿದೆ. ಕೃಷಿಪ್ರಧಾನ ದೇಶವಾಗಿರುವ ಭಾರತದಲ್ಲಿ ತರಲುದ್ದೇಶಿಸಿರುವ ಈ ರೈತವಿರೋಧಿ ಕೃಷಿ ವಿದೇಯಕವನ್ನು ಅನ್ನ ತಿನ್ನುವ ಪ್ರತಿಯೊಬ್ಬರೂ ವಿರೋಧಿಸಲೇ ಬೇಕಾಗಿದೆ. ಬಹುಶಃ ತಮ್ಮ ರಾಜಕೀಯ ಜೀವನದುದ್ದಕ್ಕೂ ತಾವು 'ಮಣ್ಣಿನ ಮಕ್ಕಳು' ಎಂದು ಹೇಳಿಕೊಂಡೆ ರಾಜಕಾರಣ ಮಾಡಿದ ದೇವೇಗೌಡರ ಕುಟುಂಬ ಯಾವುದೇ ಕಾರಣಕ್ಕೂ ಆ ಕಾಯ್ದೆಯ ಪರ ನಿಲ್ಲದೇ ಹಾಗೂ ಸಭಾಪತಿಯವರ ಮೇಲಿನ ಅವಿಶ್ವಾಸ ನಿರ್ಣಯವನ್ನು ವಿರೋಧಿಸುವ ಮೂಲಕ ತಾವು ರೈತಪರ ಎಂದು ನಿರೂಪಿಸಬೇಕಾಗಿದೆ. ಒಂದು ವೇಳೆ ಹಾಗೆ ಆ ರೈತವಿರೋಧಿ ಕಾಯ್ದೆಗಳನ್ನು ಮತ್ತು ಅವಿಶ್ವಾಸ ನಿರ್ಣಯವನ್ನು ವಿರೋಧಿಸದಿದ್ದಲ್ಲಿ ಖಂಡೀತವಾಗಿಯೂ ಆ ಮೂಲಕ ಆ ಪಕ್ಷದ ನಿಜಬಣ್ಣ ಬಯಲಿಗೆ ಬರಲಿದೆ ಹಾಗೂ ಅದು ಮುಂದಿನ ದಿನಗಳಲ್ಲಿ ರೈತವಿರೋಧಿ ಪಕ್ಷವಾಗಿ ಬಿಂಬಿತವಾಗಲಿದೆ. ಭವಿಷ್ಯದಲ್ಲಿ ಆ ಪಕ್ಷ ಅದರ ದುಷ್ಪರಿಣಾಮವನ್ನು ಖಂಡೀತವಾಗಿಯೂ ಎದುರಿಸಬೇಕಾಗಿ ಕೂಡ ಬರಲಿದೆ. ಆ ಕಾರಣಕ್ಕಾಗಿಯಾದರೂ ಆ ಪಕ್ಷ ರೈತರ ಪರವಾಗಿ ನಿಲ್ಲಲಿ ಎಂಬುವುದು kannadamedia.com ನ ಆಶಯವಾಗಿದೆ. ________________________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement