ಉಡುಪಿ

ತೆಕ್ಕಟ್ಟೆ ಗ್ರಾಮ ಪಂಚಾಯತ್: ಅಧಿಕಾರದ ಸೂತ್ರ ಮತ್ತೊಮ್ಮೆ ಕಾಂಗ್ರೆಸ್ ‘ಕೈ’ಗೆ ಖಚಿತ!

ಕುಂದಾಪುರ ತಾಲೂಕಿನಾದ್ಯಂತ ಜನತೆಗೆ ಸಂಕಷ್ಟದ ಸಂಧರ್ಭದಲ್ಲಿ ನೆನಪಾಗುವ ಮೊತ್ತ ಮೊದಲ ಹೆಸರು ‘ಶಿವ್ರಾಮಣ್ಣ’ ಅರ್ಥಾತ್ ಮಲ್ಯಾಡಿ ಶಿವರಾಮ ಶೆಟ್ಟಿಯವರು. ಸದಾ ಹಸನ್ಮುಖಿಯಾಗಿರುವ ತೀರಾ ಸರಳ ನಡೆನುಡಿಯ, ವಿಶಾಲ ಮನೋಭಾವದ ಇವರು ತನ್ನಲ್ಲಿ ಕಷ್ಟ ಹೇಳಿಕೊಂಡು ಬಂದವರಿಗೆ ಅಥವಾ ದೂರವಾಣಿ ಮೂಲಕ ಹೇಳಿಕೊಂಡವರ ಸಮಸ್ಯೆಗೆ ಸ್ಪಂದಿಸುವ, ಅದರ ಪರಿಹಾರದ ಕುರಿತು ಪ್ರಾಮಾಣಿಕವಾದ ಪ್ರಯತ್ನ ಮಾಡುವ ಮೂಲಕ, ಆ ಕಷ್ಟ ಪರಿಹಾರವಾಗುವ ತನಕವೂ ಜೊತೆಯಲ್ಲಿ ನಿಂತು ಧೈರ್ಯ ತುಂಬುವ ಇವರು ಯಾವುದೇ ಪ್ರತಿಫಲ ಬಯಸುವವರಲ್ಲ. ಪರಿಚಿತರು ಯಾರಾದರೂ ಕಷ್ಟದಲ್ಲಿ ಇದ್ದಾರೆ ಎಂದು ಗಾಳಿಸುದ್ದಿ ಬಂದರೂ ಅವರನ್ನು ಹುಡುಕಿಕೊಂಡು ಹೋಗಿ ತನ್ನಿಂದಾದ ಸಹಾಯ ಮಾಡುವ ಉಪಕಾರ ಮನೋಭಾವದ ವ್ಯಕ್ತಿ ಶಿವರಾಮ ಶೆಟ್ಟರು ಎಂಬ ಮಾತು ತಾಲೂಕಿನಾದ್ಯಂತ ಜನಜನಿತ.‘ರಾಜಕಾರಣ ಎಂದರೆ ಅಧಿಕಾರ ಮಾತ್ರವೇ ಅಲ್ಲ, ಅದು ಜನಸೇವೆಗೆ ಇರುವ ರಾಜಮಾರ್ಗ, ಒಮ್ಮೆ ಜನಪ್ರತಿನಿಧಿಯಾಗಿ ಆಯ್ಕೆಯಾದರೆ ಅಲ್ಲಿ ನಮಗೆ ಪಕ್ಷದ ಹಾಗೂ ಆ ಕ್ಷೇತ್ರದ ಮತದಾರರ ಋಣ ಇರುತ್ತದೆ ಅದನ್ನು ತೀರಿಸುವುದು ನಮ್ಮ ಕರ್ತವ್ಯವಾಗಿದೆ’ ಎಂಬ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿರುವ ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟರ ನೇತೃತ್ವದಲ್ಲಿ ರಾಜಕಾರಣಕ್ಕೆ ಕಾಲಿಟ್ಟವರು ಮಲ್ಯಾಡಿಯವರು. ಪ್ರತಾಪ್ ಶೆಟ್ಟರ ಪಕ್ಷ ಸಿದ್ದಾಂತ, ಕಾರ್ಯಕ್ಷಮತೆ, ಸರಳತೆ ಹಾಗೂ ಜನರಿಗೆ ಸ್ಪಂದಿಸುವ ಗುಣಗಳನ್ನು ತನ್ನಲ್ಲೂ ಅಳವಡಿಸಿಕೊಂಡವರು.

ಮಲ್ಯಾಡಿ ಶಿವರಾಮ ಶೆಟ್ಟರು ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ಸತತವಾಗಿ ಏಳು ಬಾರಿ ಗೆದ್ದು ಒಂದು ಬಾರಿ ಅಧ್ಯಕ್ಷರಾಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ಪರಿಸರದ ಜನರ ನೆನಪಿನಲ್ಲಿ ಉಳಿಯುವಂತಹ ರೀತಿಯಲ್ಲಿ ಕೆಲಸ ಮಾಡಿದವರು. ಒಂದು ಬಾರಿ ಮಂಡಲ ಉಪಪ್ರಧಾನರಾಗಿ ಕೂಡಾ ಕೆಲಸ ಮಾಡಿ ಹೆಸರು ಪಡೆದಿದ್ದವರು. ಆ ಮೂಲಕ ತಾಲೂಕಿನಾದ್ಯಂತ ಸೋಲಿಲ್ಲದ ಸರದಾರ ಎಂಬ ಬಿರುದು ಪಡೆದವರು. ತದನಂತರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸದೇ ಯುವಕರಿಗೆ ಅವಕಾಶ ಮಾಡಿಕೊಟ್ಟವರು. 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಅಭ್ಯರ್ಥಿಯಾಗಿ ಹಾಲಾಡಿ ಶ್ರೀನಿವಾಸ ಶೆಟ್ಟರೆದುರು ಸ್ಪರ್ದಿಸಿದ್ದವರು. ನಿರಂತರ12ವರ್ಷಗಳ ಕಾಲ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದವರು‌. ಇದೀಗ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಲ್ಯಾಡಿ ಶಿವರಾಮ ಶೆಟ್ಟರ ಕುರಿತು ಇಷ್ಟೆಲ್ಲಾ ವಿವರಗಳನ್ನು ಏಕೆ ಬರೆಯಬೇಕಾಯಿತು ಎಂದರೆ ಇದೀಗ ಗ್ರಾಮ ಪಂಚಾಯತ್ ಚುನಾವಣೆ ಎದುರಾಗಿದೆ. ಶಿವರಾಮ ಶೆಟ್ಟರ ಸ್ವಕ್ಷೇತ್ರ ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ಇದೀಗ ಕಾಂಗ್ರೆಸ್ ಬೆಂಬಲಿತರಾದ ರೇಣುಕಾ ಮತ್ತು ಪ್ರೇಮ ಮೊಗವೀರ ಎಂಬ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 12 ಕ್ಷೇತ್ರಗಳಲ್ಲಿ ಪ್ರಬಲವಾದ ಹಾಗೂ ಘಟಾನುಘಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಅರುಣ, ಶೇಖರ್ ಕಾಂಚನ್, ಸಂಜೀವ ದೇವಾಡಿಗ, ಸುಲೋಚನಾ ಪೂಜಾರಿ, ಮಾಲತಿ ದೇವಾಡಿಗರ, ಶಂಕರ ಪೂಜಾರಿ, ಶೋಬಾ ಶೆಟ್ಟಿ, ಮಮತಾ ದೇವಾಡಿಗ, ವಿಜಯ ಭಂಡಾರಿ, ಸುರೇಶ ಶೆಟ್ಟಿ, ಸತೀಶ್ ದೇವಾಡಿಗ, ಲಕ್ಷ್ಮೀ ಇವರುಗಳು ಸ್ಪರ್ಧಿಸುತ್ತಿದ್ದಾರೆ. ಶಿವರಾಮ ಶೆಟ್ಟರ ನೇತೃತ್ವದಲ್ಲಿ ಗೆಲುವು ಖಚಿತ, ಅವರು ಕಳೆದ 45ವರ್ಷಗಳ ಕಾಲ ಮಾಡಿದ ಜನಸೇವೆಯೇ ನಮಗೆ ಆಶೀರ್ವಾದವಾಗಲಿದೆ ಎನ್ನುತ್ತಾರೆ ಅಭ್ಯರ್ಥಿಗಳು.

_____________________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares