ಸಂಪಾದಕೀಯ

ಇದೀಗ ದೇಶದಲ್ಲೇನಾದರೂ ಭ್ರಷ್ಟಾಚಾರ ಮಿತಿ ಮೀರಿದೆಯೇ? ಅಥವಾ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆಯೇ? ಅದಲ್ಲವಾದರೆ ಮಾಧ್ಯಮಗಳು ಅದೇಕೆ ಮೋದ್ಯಮಗಳಂತೆ ವರ್ತಿಸುತ್ತಿವೆ?

‘ತುರ್ತುಪರಿಸ್ಥಿತಿಯ ಸಮಯದಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯ ಇರಲಿಲ್ಲ, ಸರಕಾರ ಬಿಡುಗಡೆ ಮಾಡಿದ ವರದಿಗಳನ್ನು ಮಾತ್ರವೇ ಪ್ರಕಟಿಸಬೇಕಾಗಿತ್ತು’ ಎಂದು ಬಿಜೆಪಿಗರು ಆರೋಪಿಸುವುದನ್ನು ನಾವು ನೀವು ಹಲವಾರು ಬಾರಿ ಕೇಳಿದ್ದೇವೆ. ಆದರೆ ಆ ಕಾಲದಲ್ಲಿ ತುರ್ತುಪರಿಸ್ಥಿತಿ ಹೇರಿಕೆಗೆ ಕಾರಣವಾದ ಅನಿವಾರ್ಯ ಸಂಧರ್ಭ ಮತ್ತದರ ಹಿಂದಿನ ಆಡಳಿತಾತ್ಮಕ ಕಾರಣಗಳ ಕುರಿತು ಆ ನಂತರದ ಪೀಳಿಗೆಯಲ್ಲಿ ಅರಿವು ಮೂಡಿಸುವ ಕೆಲಸ ಕಾಂಗ್ರೇಸ್‍ನ ಹಿರಿಯ ನಾಯಕರುಗಳು ಮಾಡದಿದ್ದುದು ಬಿಜೆಪಿಯ ಸತತವಾದ ಈ ಅಪಪ್ರಚಾರಕ್ಕೆ ಇಂಬು ನೀಡುತ್ತಾ ಬಂತು ಎನ್ನುವುದು ಬೇರೆ ಮಾತು!ಆದರೆ ಮೋದಿ ಆಡಳಿತದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನಂತೂ ಈ ತನಕ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹಾಗೆಯೇ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ನಾವು ಗಂಭೀರವಾಗಿ ಆರೋಪಿಸು ವಂತೆಯೂ ಇಲ್ಲ ಏಕೆಂದರೆ ಮೋದಿ ಸರಕಾರ ಮಾಧ್ಯಮಗಳ ಮೇಲೆ ಯಾವುದೇ ತೆರನಾದ ಒತ್ತಡ ಹೇರುತ್ತಿಲ್ಲ ಆದರೆ ಅದು ಮಾಧ್ಯಮಗಳನ್ನು ಬಹು ಜಾಗರೂಕತೆ(?)ಯಿಂದ ಯಾ ವ್ಯವಸ್ಥಿತವಾಗಿ ‘ನಿಭಾಯಿಸು’ತ್ತಿದೆ ಎನ್ನುವ ಅಂಶವನ್ನು ಯಾರೂ ಕೂಡಾ ಅಲ್ಲಗೆಳೆಯುವಂತಿಲ್ಲ.

ನಿಜ… ಇದೀಗ ದೇಶದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಇಲ್ಲದಿದ್ದಾಗ್ಯೂ ಮಾಧ್ಯಮಗಳು ವಸ್ತುನಿಷ್ಠವಾದ ವರದಿ ಪ್ರಕಟಿಸುತ್ತಿಲ್ಲ, ಜನಪರವಾದ ಕಾಳಜಿ ವ್ಯಕ್ತಪಡಿಸುತ್ತಿಲ್ಲ, ಕೇಂದ್ರ ಸರಕಾರದ ವಕ್ತಾರರಂತೆ ವರ್ತಿಸುತ್ತಿವೆ …ಯಾಕೆ?

ದೇಶದ ಆಡಳಿತದ ಆಗುಹೋಗುಗಳ ಮೇಲೆ ಕಣ್ಣಿಟ್ಟು ಅದರಲ್ಲಿನ ಹುಳುಕುಗಳನ್ನು ಬಹಿರಂಗಪಡಿಸಿ ಆ ಮೂಲಕ ಜನಪರ ಆಡಳಿತಕ್ಕೆ ಕಾರಣೀಭೂತವಾಗಬೇಕಿದ್ದ ಮಾಧ್ಯಮಗಳು ಇಂದು ತಮ್ಮ ಅತ್ಯಂತ ಅಮೂಲ್ಯವಾದ ಸಾಮಾಜಿಕ ಜವಾಬ್ದಾರಿಯನ್ನು ಮರೆತು ‘ಭ್ರಷ್ಟವಾಗಿದೆ’ ಎಂದು ವ್ಯಾಖ್ಯಾನಿಸಿದರೆ ಹಾದಿಬೀದಿಯಲ್ಲಿ ಸಾಮಾನ್ಯ ಜನತೆ ಮಾಡುವ ಆದಾರರಹಿತ ಆರೋಪದಂತೆಯೇ ಇದನ್ನು ಕೂಡಾ ನೀವು ಅಲ್ಲಿಯೇ ಕೇಳಿ ಅಲ್ಲಿಯೇ ತಳ್ಳಿಹಾಕಿ ಬಿಡಬಹುದು.ಬೆರಳೆಣಿಕೆಯಷ್ಟು ನಿಷ್ಠಾವಂತ ಮಾಧ್ಯಮ ಗಳನ್ನು ಹೊರತುಪಡಿಸಿ ಇಂದು ನೀವು ದೇಶದ ಹೆಚ್ಚಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಅಂಕಣಗಳನ್ನು ಗಮನಿಸಿ. ಅದರಲ್ಲಿ ಕನಿಷ್ಠ ವಾರಕ್ಕೆ ಮೂರು ದಿನ ಬಿಜೆಪಿಯ ಪರವಾದ ಲೇಖನಗಳು ಕಂಡು ಬಂದರೆ ಮತ್ತೆ ಕನಿಷ್ಠ ಮೂರು ದಿನ ಕಾಂಗ್ರೆಸ್ ವಿರುದ್ಧ ಉಹಾಪೋಹಗಳನ್ನು ಒಳಗೊಂಡ ಲೇಖನಗಳು ಪ್ರಕಟ ಗೊಂಡಿರುತ್ತವೆ ಅದೇ ರೀತಿಯಲ್ಲಿ ಟಿವಿ ವಾಹಿನಿಗಳು ಕೂಡಾ ಬಿಜೆಪಿ ಪರವಾದ ಮತ್ತು ಕಾಂಗ್ರೇಸ್ ವಿರುದ್ಧವಾದ ಕಾರ್ಯಕ್ರಮಗಳನ್ನು ಪ್ರತೀದಿನವೂ ನಡೆಸುತ್ತಲೇ ಇರುತ್ತವೆ ಇನ್ನು ದೇಶದ ಸಾವಿರಕ್ಕೂ ಹೆಚ್ಚಿನ ವೆಬ್‍ಸೈಟ್‍ಗಳನ್ನು ಗಮನಿಸಿದರೆ ಸರಣಿ ಸರಣಿಯಾಗಿ ಬಿಜೆಪಿ ಪರವಾದ ಕಾಂಗ್ರೇಸ್ ವಿರುದ್ಧವಾದ ಲೇಖನಗಳನ್ನು ನೀವು ಕಾಣಬಹುದು.

ಹಾಗಾದರೆ ಬಿಜೆಪಿ ಆಡಳಿತದಲ್ಲಿ ಈ ದೇಶವೇನೂ ರಾಮರಾಜ್ಯವಾಗಿದೆಯೆ? ಆಡಳಿತದಲ್ಲಿ ತಪ್ಪುಗಳೇ ಇಲ್ಲವೇ ಅಥವಾ ಈ ದೇಶದಲ್ಲೀಗ ಯಾವುದೇ ಸಮಸ್ಯೆಗಳು ಇಲ್ಲವೇ? ಇಲ್ಲಿ ನಡೆಯುತ್ತಿರುವ ಕೋಮುಗಲಭೆಗಳಿಗೂ, ಲೂಟಿಗಳಿಗೂ, ಅತ್ಯಾಚಾರಗಳಿಗೂ ಹತ್ಯೆಗಳಿಗೂ, ಭ್ರಷ್ಟಾಚಾರಗಳಿಗೂ ಈ ಸರ್ಕಾರಕ್ಕೂ ಸಂಬಂಧವೇ ಇಲ್ಲವೇ? ಬೆಲೆ ಏರಿಕೆ ತಡೆಗೆ ಈ ಸರಕಾರವೇನಾದರೂ ಕ್ರಮ ಕೈಗೊಂಡಿದೆಯೇ?

ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ವಿದೇಶದಲ್ಲಿದ್ದ ಕಪ್ಪುಹಣವನ್ನು ತಂದು ಪ್ರತಿಯೊಬ್ಬ ಪ್ರಜೆಯ ಖಾತೆಗೆ ಹದಿನೈದು ಲಕ್ಷ ಹಣವನ್ನು ಜಮಾ ಮಾಡುವುದಾಗಿ ಹಾಗೂ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕಲ್ಪಿಸುವ ಕುರಿತಾಗಿ ಹೇಳಿದ್ದ ಮೋದಿ ಸರಕಾರ ತಾನಾಡಿದ ಮಾತಿನ ಕುರಿತು ಕಿಂಚಿತ್ ಆದರೂ ಪ್ರಾಮಾಣಿಕತೆ, ಜವಾಬ್ದಾರಿ, ಕಾಳಜಿ ಹೊಂದಿದೆಯೇ? 2016ರ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ನೋಟು ಬ್ಯಾನ್ ಮಾಡುವಾಗ ಪ್ರಧಾನಿ ಮೋದಿಯವರು ಈ ನೋಟು ಬ್ಯಾನ್‌ ಮೂಲಕ ದೇಶದೊಳಗಿನ ಕಪ್ಪುಹಣವನ್ನು ನಿರ್ನಾಮಗೊಳಿಸುವ ಕುರಿತು ನೀಡಿದ ಭರವಸೆ ಏನಾಯಿತು? ಆ ನೋಟ್ ಬ್ಯಾನ್ ನಂತರ ಅದೆಷ್ಟು ಸಾವಿರ ಕೋಟಿ ಕಪ್ಪು ಹಣ ನಿರ್ನಾಮವಾಯಿತು ಎಂದು ಮೋದಿಯವರು ಎಂದಾದರೂ ದೇಶದ ಜನರಿಗೆ ವಿವರಣೆ ನೀಡಿದ್ದನ್ನು ನೀವು ಕೇಳಿದ್ದೀರಾ? ಕಪ್ಪು ಹಣ ನಿರ್ನಾಮ ವಾದದ್ದು ಹೌದಾದರೆ ಆರ್ಬಿಐ ನೋಟ್ ಬ್ಯಾನ್ ಸಂಧರ್ಭದಲ್ಲಿ 99.3% ನೋಟುಗಳು ವಾಪಾಸು ಬಂದವು ಎಂದು ಹೇಳಿದ್ದು ಸುಳ್ಳೇ? ನೋಟುಬ್ಯಾನ್ ನಂತರ ಕಪ್ಪುಹಣ ನಿರ್ನಾಮವಾಗುವ ಬದಲು ದೇಶದ ಆರ್ಥಿಕತೆ ಸರ್ವನಾಶವಾದುದು ಸುಳ್ಳೇ? ಮಾರುಕಟ್ಟೆಯಲ್ಲಿ ಹಣದ ಹರಿವು ಏಕಾಏಕಿ ಸ್ಥಗಿತಗೊಂಡದ್ದು ಸುಳ್ಳೇ? ವ್ಯಾಪಾರ ವಹಿವಾಟು ಇಲ್ಲದೇ ಅಂಗಡಿ ಹೋಟೆಲ್‌ಗಳು, ಫ್ಯಾಕ್ಟರಿಗಳು ಬಂದ್ ಆಗಿದ್ದು ಸುಳ್ಳೇ? ಅಲ್ಲಿನ ಕಾರ್ಮಿಕರು ಕೆಲಸ ಕಳೆದುಕೊಂಡದ್ದು ಸುಳ್ಳೇ? ವ್ಯಾಪಾರ ಕುಸಿತಗೊಂಡು ಉಧ್ಯಮಗಳು ಬಂದ್ ಆದ ಕಾರಣಕ್ಕೆ ತೆರಿಗೆ ಪಾವತಿ ದಡೀರ್ ಕುಸಿತ ಕಂಡದ್ದು ಸುಳ್ಳೇ? ತೆರಿಗೆ ಪಾವತಿ ಕುಸಿತ ಕಂಡದ್ದರ ಪರಿಣಾಮದಿಂದ ದೇಶದ ಜಿಡಿಪಿ ಮೈನಸ್ 23.9% ಗೆ ಕುಸಿತ ಕಂಡದ್ದು ಸುಳ್ಳೇ? ನಿರುದ್ಯೋಗ ಸಮಸ್ಯೆ ಕಳೆದ 45ವರ್ಷಗಳ ಹಿಂದಿನ ಮಟ್ಟಕ್ಕೆ ಪತನಗೊಂಡದ್ದು ಸುಳ್ಳೇ?

ಕೇವಲ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸುವ ಮೂಲಕ ದೇಶದೊಳಗೆ ಕೊರೋನಾ ವೈರಸ್ ನುಸುಳದಂತೆ ತಡೆಯುವ ಸಾಮಾನ್ಯ ಜ್ಞಾನದ ಸುಲಭ ಉಪಾಯಗಳನ್ನು ಬಿಟ್ಟು ಅನಗತ್ಯವಾದ ಲಾಕ್‌ಡೌನ್ ಹೇರಿಕೆ ಮಾಡಿ ದೇಶದ ಜನರಿಗೆ ಮತ್ತಿತರ ವಲಸೆ ಕಾರ್ಮಿಕರಿಗೆ ಊಟಕ್ಕಿಲ್ಲದಂತೆ ಮಾಡಿ ಸಾಯುವ ಸ್ಥಿತಿ ನಿರ್ಮಿಸಿದ್ದು ಸಾಧನೆಯೇ? ಕೊರೋನಾ ನಿಗ್ರಹಿಸಲು ಚಪ್ಪಾಳೆ ಹೊಡೆಯುವುದು, ಕ್ಯಾಂಡಲ್ ಹಚ್ಚುವುದು ಮುಂತಾದ ಮೋದಿಯವರ ವಿಚಾರಧಾರೆಯ ಹಿಂದಿನ ವೈಜ್ಞಾನಿಕ ಆದಾರಗಳಾದರೂ ಏನು?

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಆಡಳಿತಾವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 147ಡಾಲರ್‌ಗೆ ತಲುಪಿದಾಗಲೂ ಈ ದೇಶದಲ್ಲಿ ಪೆಟ್ರೋಲ್ ಬೆಲೆ 78ರೂಪಾಯಿ ಮೀರಿರಲಿಲ್ಲ. ಡಿಸೇಲ್ ಬೆಲೆ 73 ರೂಪಾಯಿ ಮೀರಿರಲಿಲ್ಲ. ಅಡುಗೆ ಅನಿಲದ ಬೆಲೆ 320ರೂಪಾಯಿ ಮೀರಿರಲಿಲ್ಲ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಇದೀಗ ಕಚ್ಚಾತೈಲ ಬೆಲೆ ಬ್ಯಾರೆಲ್ ಗೆ ಕೇವಲ 47ಡಾಲರ್ ಇದೆ. ಆದರೆ ಪೆಟ್ರೋಲ್ ಬೆಲೆ 83ರೂಪಾಯಿ. ಡೀಸೆಲ್ ಬೆಲೆ 80ರೂಪಾಯಿ. ಹಾಗೂ ಅಡುಗೆ ಅನಿಲದ ಬೆಲೆ 700ರೂಪಾಯಿಗೆ ಏರಿದೆ. ಕಚ್ಚಾ ತೈಲ ಬೆಲೆ ನಾಲ್ಕು ಪಟ್ಟು ಕಡಿಮೆಯಾದ ಪ್ರಮಾಣದಲ್ಲಿ ನೋಡುವುದಾದರೆ ಇಂದು ಈ ದೇಶದಲ್ಲಿ ಗರಿಷ್ಠ ಎಂದರೆ 30 ರೂಪಾಯಿ ಗಳಿಗೆ ಪೆಟ್ರೋಲ್, 25ರೂ.ಗಳಿಗೆ ಡೀಸೆಲ್, 150ರೂ.ಗಳಿಗೆ ಅಡುಗೆ ಅನಿಲ ದೊರೆಯಬೇಕಾಗಿತ್ತು. ಆದರೆ ದೊರೆಯುತ್ತಿಲ್ಲ ಹಾಗಾದರೆ ಆ ವ್ಯತ್ಯಾಸದ ಲಾಭದ ಹಣ ಯಾರ ತೀಜೋರಿ ಸೇರುತ್ತಿದೆ ಈ ಹಗಲು ದರೋಡೆಗೂ ಮೋದಿ ಸರ್ಕಾರಕ್ಕೂ ಸಂಬಂಧವೇ ಇಲ್ಲವೇ?… ನಮ್ಮಲ್ಲಿ ಇಂತಹ ನೂರಾರು ಪ್ರಶ್ನೆಗಳಿವೆ.ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರಿಸ ಬೇಕಾದವರು ಯಾರು?

ಆದರೆ ಈ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡಬೇಕಾದ ಮಾಧ್ಯಮಗಳು ಸರಕಾರದ ಇಂತಹ ತಪ್ಪುಗಳನ್ನು ಮುಚ್ಚಿಟ್ಟು ಸರಕಾರದ ಪರವಾಗಿ ಅಥವಾ ಮೋದಿಯನ್ನು ಇಂದ್ರ—ಚಂದ್ರ ಎಂದೆಲ್ಲಾ ವರ್ಣಿಸಿ ಜನರಲ್ಲಿ ಭ್ರಮೆ ಹುಟ್ಟಿಸುವ ರೀತಿಯ ವರದಿಗಳನ್ನು ಎಪಿಸೋಡ್‍ಗಳನ್ನು ಸಿದ್ದಪಡಿಸಿ ಪ್ರಕಟಿಸುತ್ತಿದ್ದಾರೆ. ಈ ವರದಿಗಳು ಎಪಿಸೋಡ್‍ಗಳು ‘ಪ್ರಾಯೋಜಿತ’ ಎನ್ನುವುದು ಅದನ್ನು ನೋಡುವಾಗಲೇ ಈ ದೇಶದ ಭವಿಷ್ಯದ ಕುರಿತು ಕಾಳಜಿ ಹೊಂದಿರುವ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ ಆದರೆ ಏನೂ ಮಾಡುವಂತಿಲ್ಲ.

‘ನಾ ಮೈ ಕಾವೂಂಗಾ , ನಾ ಕಾನೆದೂಂಗಾ’ ಎಂದು ಹೇಳಿಯೇ ಅಧಿಕಾರಕ್ಕೆ ಬಂದವರು ನರೇಂದ್ರ ಮೋದಿಯವರು. ಹಾಗಾದರೆ ದೇಶಾಧ್ಯಂತ ಈ ಲಕ್ಷಾಂತರ ದಿನ ಪತ್ರಿಕೆಗಳನ್ನು, ಸಾವಿರಾರು ಟಿವಿ ವಾಹಿನಿಗಳನ್ನು ಮತ್ತು ವೆಬ್‍ಸೈಟು ಗಳನ್ನು ಇವರು ಹೇಗೆ ‘ನಿಭಾಯಿಸು’ ತ್ತಿದ್ದಾರೆ?

ಒಂದು ಮಾಹಿತಿಯ ಪ್ರಕಾರ ದೇಶದಾದ್ಯಂತ ಸುಮಾರು ಸಾವಿರಕ್ಕೆ ಹತ್ತಿರ ಹತ್ತಿರ ಟಿವಿ ವಾಹಿನಿಗಳ, ಪತ್ರಿಕೆಗಳ ಮಾಲಕತ್ವ ಉದ್ಯಮಿಗಳಾದ ಅದಾನಿ ಹಾಗೂ ಅಂಬಾನಿಗಳಂತಹ ಉಧ್ಯಮಿಗಳದ್ದಾಗಿದೆ ಮತ್ತು ಅವರುಗಳು ನೇರವಾಗಿ ಮೋದಿ ಸರಕಾರದ ‘ಫಲಾನುಭವಿ’ಗಳು ಎನ್ನುವ ವಿಚಾರ ರಹಸ್ಯವಾಗೇನೂ ಉಳಿದಿಲ್ಲ. ಇದು ಕೆಲವೇ ಕೆಲವು ಮೋದಿಯವರ ಉದ್ಯಮಿ ಸ್ನೇಹಿತರುಗಳ ಮಾಲಕತ್ವದ ವಿವರಗಳಾದರೆ ಇನ್ನು ದೇಶಾದ್ಯಂತ ಅದೆಷ್ಟು ಸಣ್ಣಪುಟ್ಟ ಉದ್ಯಮಿಗಳು ಈ ಸರಕಾರದ ಕೃಪಾಶ್ರಯದಲ್ಲಿ ಇರಬಹುದು ಎನ್ನುವುದನ್ನು ನೀವೆ ಊಹಿಸಿ.

‘ತಿನ್ನುವವರು ತಿನ್ನುತ್ತಾರೆ- ತಿನ್ನಿಸುವವರಿಗೆ ತಿನ್ನಿಸುತ್ತಾರೆ, ತಿನ್ನುವುದು ಮತ್ತು ತಿನ್ನಿಸುವುದು ಅವೆರಡೂ ಒಂದು ಕಲೆ’. ತಿನ್ನಲು ಗೊತ್ತಿಲ್ಲದವನು ತಿನ್ನುವಾಗಲೇ ಸಿಕ್ಕಿಹಾಕಿಕೊಂಡು ‘ಭ್ರಷ್ಟ’ನೆನಿಸಿ ಕೊಳ್ಳುತ್ತಾನೆ. ತಿನ್ನುವಲ್ಲಿ ತಿನ್ನಿಸುವಲ್ಲಿ ಪಳಗಿದವನು ತಾನೂ ತಿಂದು ತಿನ್ನಿಸಬೇಕಾದವರಿಗೆ ಹೊಟ್ಟೆತುಂಬಾ ತಿನ್ನಿಸಿ ಸಿಕ್ಕಿಹಾಕಿಕೊಳ್ಳದೆ ‘ಗಟ್ಟಿಗ’ನೆನಿಸಿ ಕೊಳ್ಳುತ್ತಾನೆ. ಇದು ರಾಜಕೀಯದ ಹೊಸ ನಿಯಮ.

__________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares