Advertisement

ಶಿವಮೊಗ್ಗದ ಬಿಜೆಪಿ ನಾಯಕರುಗಳಿಗೆ ಸಂಬಂಧಿಸಿದ ಡೈನಮೈಟ್ಸ್ ತುಂಬಿದ ಲಾರಿ ಸ್ಪೋಟ- ಹಲವರ ಸಾವು: ಯಡಿಯೂರಪ್ಪ, ಈಶ್ವರಪ್ಪ ರಾಜೀನಾಮೆಗೆ ಹೆಚ್.ಎಸ್ ಸುಂದರೇಶ್ ಆಗ್ರಹ

Advertisement

ಶಿವಮೊಗ್ಗ ತಾಲೂಕಿನ ಹುಣಸೋಡುವಿನಲ್ಲಿ ಗುರುವಾರ ರಾತ್ರಿ ಸುಮಾರು 10.30ರ ವೇಳೆಗೆ ಸ್ಪೋಟಕಗಳು ತುಂಬಿದ್ದ ಲಾರಿಯೊಂದು ಸ್ಪೋಟಗೊಂಡಿದ್ದು. ಸ್ಥಳದಲ್ಲಿದ್ದ ಹಲವಾರು ಜನ ಕಾರ್ಮಿಕರ ಮತ್ತಿತರರು ಈ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ನಿಖರ ಅಂಕಿ ಅಂಶ ಇನ್ನಷ್ಟೆ ಬೆಳಕಿಗೆ ಬರಬೇಕಿದೆ. ಈ ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ ಸ್ಪೋಟದ ಸದ್ದು ಸುಮಾರು ಐವತ್ತು ಕಿ.ಮೀಟರ್ ತನಕ ಕೇಳಿತ್ತು ಮತ್ತು ಮನೆಗಳು ನಡುಗಿದ್ದವು, ಸ್ಪೋಟದ ವಿಚಾರ ತಿಳಿದಿಲ್ಲದ ಕಾರಣಕ್ಕೆ ರಾತ್ರಿಯಿಡೀ ತಾವುಗಳು ಭೂಕಂಪದ ಭಯದಿಂದ ಕಳೆದಿರುವುದಾಗಿ ಹೇಳಿಕೊಂಡಿದ್ದಾರೆ ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮದ ಜನರು. ರಾತ್ರಿ ನಡೆದ ಡೈನಮೈಟ್ ಸ್ಪೋಟದ ಪ್ರದೇಶಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ರವರು ಛಿದ್ರ-ಛಿದ್ರವಾಗಿ ಬಿದ್ದಿದ್ದ ಮೃತ ದೇಹವನ್ನು ಕಂಡು ಅತೀವವಾದ ಆತಂಕವನ್ನು ವ್ಯಕ್ತಪಡಿಸಿದರು. ಶಿವಮೊಗ್ಗದ ಬಿಜೆಪಿ ನಾಯಕರುಗಳಿಗೆ ಸಂಬಂಧಿಸಿದ ಕಲ್ಲುಕೋರೆಯ ಈ ಸ್ಪೋಟ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪನವರು ರಾಜೀನಾಮೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ. 'ಈ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಬಗ್ಗೆ ಸ್ಥಳೀಯರು ನಿರಂತರವಾಗಿ ವಿರೋದವನ್ನು ವ್ಯಕ್ತ ಪಡಿಸಿದ್ದಾಗ್ಯೂ, ಈ ಗಣಿಗಾರಿಕೆ ನಿಲ್ಲಿಸುವಂತೆ ಹಲವಾರು ಬಾರಿ ಹೋರಾಟ, ಪ್ರತಿಭಟನೆ ನಡೆಸಿ ಬಿಜೆಪಿ ಶಾಸಕರು ಹಾಗೂ ಸಂಸದರುಗಳಿಗೆ ಮನವಿ ಮಾಡಿಕೊಂಡಿದ್ದಾಗ್ಯೂ ಈ ಜನಪ್ರತಿನಿಧಿಗಳು ಜನರ ಭಾವನೆಗಳಿಗೆ ಸ್ಪಂದಿಸದೆ, ಬಿಜೆಪಿಯ ಪ್ರಮುಖರೇ ಆಕ್ರಮವಾಗಿ ನಡೆಸುತ್ತಿರುವ ಈ ಗಣಿಗಾರಿಕೆಯ ಬಗ್ಗೆ ಬೆಂಬಲಾರ್ಥವಾಗಿ ಇವರುಗಳು ಕಂಡು ಕಾಣದಂತೆ ವರ್ತಿಸಿದ್ದು ಇದೀಗ ಈ ದುರಂತಕ್ಕೆ ಕಾರಣವಾಗಿದೆ. ಸ್ಪೋಟ ದುರ್ಘಟನೆಯ ಹಿನ್ನಲೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ನಿರ್ಲಕ್ಷ ಮತ್ತು ಬೇಜವಾಬ್ದಾರಿ ವರ್ತನೆಯೇ ಮುಖ್ಯ ಕಾರಣವಾಗಿದ್ದು, ಅಮಾಯಕ ಜನರ ಸಾವು, ನೋವಿಗೆ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ ರವರು ನೇರ ಹೊಣೆಗಾರರಾಗಿದ್ದು ಕೂಡಲೇ ಅವರುಗಳು ಈ ದುರ್ಘಟನೆಯ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು' ಎಂದು ಹೆಚ್.ಎಸ್.ಸುಂದರೇಶ್ ರವರು ಒತ್ತಾಯ ಪಡಿಸಿದ್ದಾರೆ. 'ಬಿಹಾರ ಮತ್ತು ತಮಿಳುನಾಡುಗಳಿಂದ ಡೈನಮೈಟ್ ಸ್ಪೋಟಕಗಳು ಲಾರಿಗಳ ಮೂಲಕ ಲೋಡುಗಟ್ಟಲೇ ಹುಣಸೋಡು ಗ್ರಾಮಕ್ಕೆ ಆಗಮಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸ್ಪೋಟಕಗಳು ಆಕ್ರಮವಾಗಿ ಸಾಗಣಿಕೆ ನಡೆದಿದೆ ಎಂಬುವುದಕ್ಕೆ ತಡರಾತ್ರಿ ನಡೆದ ಈ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಆಕ್ರಮ ಸಾಗಣಿಕೆಯ ಹಿಂದೆ ಜಿಲ್ಲಾ ಬಿಜೆಪಿ ನಾಯಕರುಗಳು ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಕೈವಾಡವಿದೆ ಮತ್ತು ಆಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಬಿಜೆಪಿ ಪ್ರಮುಖರಿಗೆ ಸರ್ಕಾರದ ರಕ್ಷಣೆ ಇದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಡೈನಮೈಟ್ ಸ್ಪೋಟ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಗಬೇಕು ಮತ್ತು ಈ ಘಟನೆಗೆ ಕಾರಣವಾಗಿರುವ ಗಣಿಗಾರಿಕೆ ನಡೆಸುತ್ತಿರುವ ಬಿಜೆಪಿ ಪ್ರಮುಖರನ್ನು ತಕ್ಷಣವೇ ಬಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಅವರು ಆಗ್ರಹ ಪಡಿಸಿದ್ದಾರೆ. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement