Advertisement

ಈಗ ಹಿಂದೂ ಧರ್ಮ ಒಡೆಯುತ್ತಿರುವವರು ಯಾರು?

Advertisement

ನಮಗೆಲ್ಲ ತಿಳಿದ ಹಾಗೆ ಹಿಂದೂ ಒಂದು ಧರ್ಮವಲ್ಲ ˌ ಅದೊಂದು ಜೀವನಮಾರ್ಗ. 1867 ರ ಸುಮಾರಿಗೆ ಬಂಗಾಳಿ ಫ್ಯಾಸಿಷ್ಟ ಬ್ರಾಹ್ಮಣರು ಮುಂಬರುವ ದಿನಗಳಲ್ಲಿ ಬ್ರಾಹ್ಮಣ ಸಮುದಾಯದ ರಾಜಕೀಯˌ ಶೈಕ್ಷಣಿಕˌ ಮತ್ತು ಧಾರ್ಮಿಕ ಹಿತಾಸಕ್ತಿಗಳ ರಕ್ಷಣೆಗಾಗಿ ಸನಾತನ ವೈದಿಕ ಧರ್ಮ ಪದದ ಬದಲಾಗಿ ಹಿಂದೂ ಎನ್ನುವ ಶಬ್ಧದ ಪ್ರಯೋಗ ಮಾಡಲಾರಂಭಿಸಿದರು. ಅದಕ್ಕೆ ಧ್ವನಿಗೂಡಿಸಿದ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರು ಬ್ರಾಹ್ಮಣ್ಯದ ಪಾರಿಭಾಷೆಯನ್ನು ಹಿಂದು ಪದದ ಮೂಲಕ ವಿಸ್ತರಿಸಿದರು. ಅದನ್ನೇ ನಂಬಿದ ಈ ನೆಲಮೂಲದ ಶೂದ್ರರು ತಾವೆಲ್ಲ ಹಿಂದುಗಳು ಎಂದು ತಪ್ಪಾಗಿ ಭಾವಿಸಿ ಕುಳಿತರು. ಅದಕ್ಕೆ ಶೂದ್ರರು ಸಮ್ಮತಿಸಿದ್ದಾರೆಂದು ಪ್ರಜ್ಞಾಪೂರ್ವಕವಾಗಿ ಭಾವಿಸಿದ ಬ್ರಾಹ್ಮಣರು ಹಿಂದೂ ಹೆಸರಿನಲ್ಲಿ ಬ್ರಾಹ್ಮಣ ಧರ್ಮ ಗಟ್ಟಿಗೊಳಿಸುತ್ತ ಸಾಗಿದರು. ಬರಹ; ಡಾ. ಜೆ ಎಸ್ ಪಾಟೀಲ. (ಲೇಖಕರು ಜನಪರ ಚಿಂತಕರು) ಬ್ರಿಟೀಷರ ಆಡಳಿತದಲ್ಲಿ ಪ್ರತ್ಯೇಕ ಧರ್ಮವಾಗಿದ್ದ ಲಿಂಗಾಯತರನ್ನು ಸ್ವಾತಂತ್ರಾ ನಂತರದ ಬ್ರಾಹ್ಮಣರ ಆಳ್ವಿಕೆಯಲ್ಲಿ ಶೂದ್ರರ ಪಟ್ಟಿಗೆ ತಳ್ಳಲ್ಪಟ್ಟಿತು. ಶತಮಾನಗಳಷ್ಟು ಹಳೆಯ ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅದರ ಸಂವಿಧಾನ ಮಾನ್ಯತೆಯ ಬೇಡಿಕೆಯ ಕೂಗು ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಹೆಚ್ಚಿತು. ಅದರ ಮುಂದುವರೆದ ಭಾಗವಾಗಿ ಕಳೆದ ಮೂರು ವರ್ಷಗಳ ಹಿಂದೆ ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಚಳುವಳಿ ತೀವ್ರ ಸ್ವರೂಪ ಪಡೆದುಕೊಂಡಾಗ ಕಂಗಾಲಾಗಿದ್ದು ಮತ್ತದೇ ಫ್ಯಾಸಿಷ್ಟ ಶಕ್ತಿಗಳು. ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆ ಬೇಡಿಕೆಯ ಚಳುವಳಿ ತೀವ್ರವಾಗುತ್ತಿದ್ದಂತೆ ಚಳುವಳಿಯ ಮುಂಚೂಣಿ ಮಠಾಧೀಶರುˌ ರಾಜಕಾರಣಿಗಳುˌ ಮತ್ತು ಕಾರ್ಯಕರ್ತರಿಗೆ ಜೀವ ಬೆದರಿಕೆ ಒಡ್ಡುವುದುˌ ಮುಂಚೂಣಿ ಚಳುವಳಿಕಾರರ ಚಾರಿತ್ರ್ಯ ವಧೆˌ ಚಳುವಳಿಕಾರರ ಕುರಿತು ಅಪಪ್ರಚಾರ ಮುಂತಾದ ಸನಾತನ ಹೀನ ಪರಂಪರೆಗಳು ಸಾಕಷ್ಟು ಸದ್ದು ಮಾಡಿದವು. ಕರ್ನಾಟಕದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳನ್ನು ನಿಯಂತ್ರಿಸುವ ಪುರೋಹಿತಶಾಹಿ ಪಟ್ಚಭದ್ರ ಶಕ್ತಿಗಳು ಲಿಂಗಾಯತ ಚಳುವಳಿಯ ಕುರಿತು ಅಪಪ್ರಚಾರ ಮಾಡತೊಡಗಿದವು. ಲಿಂಗಾಯತ ಚಳುವಳಿಯಿಂದ ಕಂಗಾಲಾಗಿದ್ದ ಫ್ಯಾಸಿಷ್ಟ ಶಕ್ತಿಗಳು *ಹಿಂದೂ ಧರ್ಮ ಒಡೆಯುತ್ತಿದ್ದಾರೆ* ಎಂದು ಹಲುಬಿದವು. ಶತಶತಮಾನಗಳಿಂದ ಪರಕೀಯ ಆಳರಸರ ಗುಲಾಮಗಿರಿ ಮಾಡಿದ ಸನಾತನಿಗಳು ಈ ರಾಷ್ಟ್ರಕ್ಕೆ ಎಂದೂ ನಿಷ್ಟರಾಗಿ ಬದುಕಿದ ಉದಾಹರಣೆಗಳಿಲ್ಲ. ಈ ಮಣ್ಣಿನ ಜನರನ್ನೆಲ್ಲ ಚಾತುರ್ವರ್ಣವೆಂಬ ಅಮಾನುಷ ವ್ಯವಸ್ಥೆಯ ಮೂಲಕ ವಿಭಜಿಸಿ ಇಡೀ ಭಾರತಿಯ ಸಮಾಜವನ್ನು ಒಡೆದು ಛಿದ್ರ ಛಿದ್ರಗೊಳಿಸಿದ್ದ ಸನಾತನಿಗಳ ರಾಷ್ಟ್ರದ್ರೋಹದ ಕಾರ್ಯಕ್ಕೆ ತಿಲಾಂಜಲಿ ಇಡಲೆಂದು ಇನ್ನೂ ಸಂಪೂರ್ಣ ರಾಷ್ಟ್ರದ ಪರಿಕಲ್ಪನೆ ಇಲ್ಲದಿರುವ ಕಾಲಘಟ್ಟದಲ್ಲಿ ಬಸವಣ್ಣನವರು ಬ್ರಾಹ್ಮಣ್ಯವನ್ನು ಕಾಲಿನಿಂದ ಒದ್ದು ನೆಲಮೂಲದ ಜನರೆಲ್ಲರನ್ನು ಒಂದುಗೂಡಿಸಿ ಒಂದು ವಿಶಾಲ ಹಳಹದಿಯ ರಾಷ್ಟ್ರೀಯವಾದಿ ಧರ್ಮವನ್ನು ಕಟ್ಟಿದರು. ಅದು ಸನಾತನಿಗಳ ಒಡೆದಾಳುವ ಚಾತುರ್ವರ್ಣ ವ್ಯವಸ್ಥೆಗೆ ಪರ್ಯಾಯ ಮತ್ತು ಪ್ರತಿದ್ವಂದಿಯಾಗ ಹೊಸ ವೈಚಾರಿಕ ಧರ್ಮವಾಗಿ ರೂಪುತಳೆಯಿತು. ಇಂದಿನ ದಿನಮಾನದ ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಬೇಡಿಕೆಯ ಹಿಂದಿರುವ ಉದಾತ್ ಉದ್ದೇಶವು ಕೂಡ ಹಿಂದುತ್ವದ ವಿಷ ವರ್ತುಲದಲ್ಲಿ ಸಿಲುಕಿ ವಿಘಟನೆಗೊಂಡಿರುವ ನೆಲಮೂಲದ ಶೂದ್ರ ಜನರನ್ನೆಲ್ಲ ನೈಜ ಒಳಗೊಳ್ಳುವಿಕೆಯ ರಾಷ್ಟ್ರೀಯವಾದದ ಸೂರಿನಡಿಯಲ್ಲಿ ಒಂದುಗೂಡಿಸುವುದೇ ಆಗಿದೆ. ಆದರೆˌ ಲಿಂಗಾಯತರ ಈ ಒಂದುಗೂಡಿಸುವಿಕೆಯ ಕಾರ್ಯವನ್ನು *ಹಿಂದೂ ಧರ್ಮದ ವಿಘಟನೆ* ಎಂದು ತಪ್ಪಾಗಿ ಬಿಂಬಿಸಿದ ಫ್ಯಾಸಿಷ್ಟ ವಿಭಜಕ ಶಕ್ತಿಗಳು ಈಗ ಮಾಡುತ್ತಿರುವುದೇನು? ಕಳೆದ ಆರೇಳು ತಿಂಗಳುಗಳಿಂದ ರಾಜ್ಯ ಮತ್ತು ರಾಷ್ಟ್ರದಲ್ಲಿ ನಡೆಯುತ್ತಿರುವ ಹಲವಾರು ಘಟನೆಗಳನ್ನು ನಾವು ಅವಲೋಕಿಸಿದರೆ ನಾನು ಮೇಲೆ ಪ್ರಸ್ತಾಪಿಸಿದ ವಾದಕ್ಕೆ ಪುಷ್ಠಿ ದೊರೆಯುತ್ತದೆ. ಒಂದುಕಡೆ ಕೋಮುವಾದಿ-ಬಂಡವಾಳಶಾಹಿ ಜಂಟಿ ಶಕ್ತಿಗಳ ರೈತ ವಿರೋಧಿ ನೀತಿಯ ವಿರುದ್ಧ ದಿಲ್ಲಿಯಲ್ಲಿ ಚಳುವಳಿ ನಿರತ ರೈತರನ್ನು ಒಡೆದಾಳುವ ಅನೇಕ ಕುಟಿಲ ಹುನ್ನಾರಗಳು ಫಲ ನೀಡುತ್ತಿಲ್ಲ. ಇನ್ನೊಂದುಕಡೆ ಕರ್ನಾಟಕದಲ್ಲಿ ಶೂದ್ರ ವರ್ಗಕ್ಕೆ ಸೇರಿರುವ ಕುರುಬರನ್ನು ಪರಿಶಿಷ್ಟ ಪಂಗಡದ ಮೀಸಲಾತಿಗಾಗಿˌ ಲಿಂಗಾಯತ ಪಂಚಮಸಾಲಿ ಉಪವರ್ಗವನ್ನು ಇತರ ಹಿಂದುಳಿದ ವರ್ಗದ 3ಬಿ ಬದಲಾಗಿ 2ಎ ಅಡಿಯಲ್ಲಿ ಮೀಸಲಾತಿಗಾಗಿ ಮತ್ತು ಮತ್ತೊಂದು ಕಡೆ ಪ್ರಗತಿಪರ ಮುಖವಾಡದ ನಿಡುಮಾಮಿಡಿ ಸ್ವಾಮಿ ನೇತ್ರತ್ವದಲ್ಲಿ ವೀರಶೈವ ಜಂಗಮರು ತಾವು ಬೇಡ ಜಂಗಮರೆಂದು ಸಾಧಿಸುತ್ತ ಪರಿಶಿಷ್ಟರ ಕೋಟಾದಲ್ಲಿ ಮೀಸಲಾತಿಗಾಗಿ ಹೋರಾಡಲು ಪ್ರೇರೇಪಿಸಿದ್ದು ಫ್ಯಾಸಿಷ್ಟ ಶಕ್ತಿಗಳು ಅನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಒಟ್ಟಾರೆˌ ಈ ಒಡೆದಾಳುವ ಜಾತಿ ರಾಜಕಾರಣದ ಹಿಂದೆ ಅಡಗಿರುವ ಫ್ಯಾಸಿಷ್ಟರ ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿˌ ಸನಾತನಿಗಳು ತಮ್ಮ ಸ್ವಹಿತಾಸಕ್ತಿಗಾಗಿ ಇಂದು ಇಡೀ ಹಿಂದೂ ಸಮಾಜವನ್ನು ಜಾತಿˌ ಉಪಜಾತಿಗಳ ಅಡಿಯಲ್ಲಿ ವಿಘಟಿಸುತ್ತಿರುವುದಂತೂ ಸತ್ಯ. ಕರ್ನಾಟಕದಲ್ಲಿ ಕಳೆದ ಒಂದು ದಶಕದಲ್ಲಿ ಬಹುತೇಕ ಲಿಂಗಾಯತರುˌ ಕುರುಬರುˌ ಇತರ ಸಣ್ಣಪುಟ್ಟ ಶೂದ್ರ ವರ್ಗಗಳು ಮತ್ತು ಅಲ್ಪಸಂಖ್ಯಾತರ ಜಂಟಿ ರಾಜಕೀಯ ಸಮ್ಮಿಲನ ಫ್ಯಾಸಿಷ್ಟರನ್ನು ಕಂಗಾಲಾಗಿಸಿದೆ. ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕೆಂದು ಸಂಪುಟದಲ್ಲಿ ಶಿಫಾರಸ್ಸು ಮಾಡಿದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮುತ್ಸದ್ದಿ ನಡೆಯಿಂದ ಕಂಗಾಲಾಗಿದ್ದ ಫ್ಯಾಸಿಷ್ಟ ಶಕ್ತಿಗಳು ಲಿಂಗಾಯತ ಚಳುವಳಿಯ ಮುಂಚೂಣಿ ರಾಜಕಾರಣಿಗಳು ಮತ್ತು ಸಿದ್ಧರಾಮಯ್ಯನವರ ವಿರುದ್ಧ *ಧರ್ಮ ವಿಭಜಕರು* ಎಂದು ತನ್ನ ಫ್ಯಾಸಿಷ್ಟ ಪಡೆಯ ಮೂಲಕ ಅಪಪ್ರಚಾರ ಮಾಡಿಸಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಒಬ್ಬ ಸ್ವಜಾತಿಯ ಕೈಗೊಂಬೆ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸುವ ಸನಾತನಿಗಳ ಹುನ್ನಾರ ಕೈಗೂಡಲಿಲ್ಲ. ಆ ಕಾರಣದಿಂದ ಈಗ ಕುರುಬರು ಮತ್ತು ಪಂಚಮಸಾಲಿಗಳ ಮೀಸಲಾತಿ ಹೋರಾಟದ ಪ್ರಾಯೋಜಕರಾಗಿ ಸನಾತನಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವುದು ನಾವೆಲ್ಲ ಗಮನಿಸಬೇಕಾಗಿದೆ. ಪ್ರಸ್ತುತ ರಾಜ್ಯ ಸರಕಾರದ ಆಡಳಿತದ ನಿಯಂತ್ರಣ ಸನಾತನಿಗಳ ಸಂಪೂರ್ಣ ಹಿಡಿತಕ್ಕೆ ಸಿಗುತ್ತಿಲ್ಲ. ಯಡಿಯೂರಪ್ಪನನ್ನು ಹೇಗಾದರೂ ಮಾಡಿ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸುವ ಸಲುವಾಗಿ ಮತ್ತು ಲಿಂಗಾಯತ ಧರ್ಮ ಹೋರಾಟದಿಂದ ಲಿಂಗಾಯತ ಪಂಚಮಸಾಲಿ ಒಳ ಪಂಗಡವನ್ನು ವಿಮುಖಗೊಳಿಸುವ ಹೇಯ ಉದ್ದೇಶದಿಂದ ತೆರೆಮರೆಯಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಿದ್ದು ಇದೇ ಸನಾತನಿಗಳು. ವೈದಿಕ ಮಠಗಳಿಗೆ ಹೋದರೆ ಶೂದ್ರರೆಂದೇ ಪರಿಗಣಿಸಲ್ಪಡುವ ವೀರಶೈವ ಆರಾಧ್ಯ ಜಂಗಮರು ತಮ್ಮನ್ನು ತಾವು ಬ್ರಾಹ್ಮಣಷ್ಟೇ ಶ್ರೇಷ್ಠರೆಂಬ ವ್ಯಸನಕ್ಕೆ ಬಲಿಯಾಗಿ ಲಿಂಗಾಯತ ಧರ್ಮ ಹೋರಾಟವನ್ನು ವಿರೋಧಿಸಿ ಈಗ ಬೇಡಜಂಗಮ ಕೋಟಾದಡಿಯಲ್ಲಿ ಪರಿಶಿಷ್ಠರ ಮೀಸಲಾತಿ ಕಬಳಿಸಲು ಹೋರಾಟ ಮಾಡುತ್ತಿದ್ದಾರೆ. ಅದರೊಟ್ಟಿಗೆˌ ಇಡೀ ಕುರುಬ ಸಮುದಾಯದ ಮೇಲಿನ ಸಿದ್ಧರಾಮಯ್ಯನವರ ನಿಯಂತ್ರವನ್ನು ಸಡಿಲುಗೊಳಿಸಲು ಸನಾತನಿಗಳು ಅದೇ ಸಮುದಾಯದ ಈಶ್ವರಪ್ಪನನ್ನು ಕುರುಬರ ಮೀಸಲಾತಿ ಹೋರಾಟದ ದಾಳವಾಗಿ ಬಳಸುತ್ತಿರುವುದು ಬಹಳ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಹೋರಾಟವು *ಹಿಂದೂ ಧರ್ಮದ ವಿಭಜನೆ* ಎಂದು ಹಲುಬಿದ್ದ ಸನಾತನಿಗಳ ಫ್ಯಾಸಿಷ್ಟ ಸಂಘಟನೆಯ ಪುರೋಹಿತಶಾಹಿಗಳು ಮತ್ತು ಪಂಕ್ತಿಭೇದ ಕುಖ್ಯಾತಿಯ ಮಡಿವಂತ ಬ್ರಾಹ್ಮಣ ಮಠಾಧೀಶರು ಈಗ ಮೀಸಲಾತಿಯ ಹೆಸರಿನಲ್ಲಿ ನಡೆಯುತ್ತಿರುವ ಹಿಂದೂ ಸಮಾಜದ ವಿಘಟನೆಯನ್ನು ನೋಡಿಯೂ ನೋಡದಂತೆ ಮೂಕವಾಗಿರುವುದೇಕೆ? ಅಖಂಡ ಹಿಂದೂ ಸಮಾಜದಲ್ಲಿ ಮೀಸಲಾತಿಯ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಗಳಿಂದ ಈಗ ಹಿಂದೂ ಸಮಾಜ ಒಡೆಯುವಂತಾಗಲಿಲ್ಲವೆ? ಅಂದರೆˌ ಹಿಂದೂ ಸಮಾಜ ಒಡೆಯುವುದಾದಲ್ಲಿ ಅದು ತಮಗೆ ಲಾಭವಾಗುವಂತೆ ಒಡೆಯಲಿ ಎನ್ನುವುದು ಸನಾತನಿಗಳ ಉದ್ದೇಶವೆ? ಅಖಂಡ ಹಿಂದೂ ಸಮಾಜದ ಒಗ್ಗಟ್ಟು ಅಥವಾ ಸಂಘಟನೆ ಎಂದರೆ ಈ ನೆಲದಲ್ಲಿ ವಾಸಿಸುವ ಪ್ರತಿಯೊಂದು ಜಾತಿˌ ಪಂಗಡˌ ಧರ್ಮದ ಜನರನ್ನು ಒಂದುಗೂಡಿಸಿಕೊಂಡು ಹೋಗುವುದೇ ಆಗಿದೆ. ಅದನ್ನು ನಾವು ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಪಡೆಯುವ ಮೂಲಕ ಮಾತ್ರ ಸಾಧಿಸಬಹುದಾಗಿದೆ. ಅದನ್ನು ಬಿಟ್ಟು ಹಿಂದೂಗಳನ್ನು ಅನೇಕ ಜಾತಿˌ ಉಪಜಾತಿಗಳಲ್ಲಿ ಒಡೆದುˌ ಅನ್ಯ ಧರ್ಮಿಯರನ್ನು ದ್ವೇಷಿಸುವ ಅಸಹಿಷ್ಣು ವಾತಾವರಣ ನಿರ್ಮಿಸುವ ಮೂಲಕ ಹಿಂದೂ ಧರ್ಮವನ್ನು ಕಟ್ಟುತ್ತೇವೆ ಎನ್ನುವ ಸನಾತನಿಗಳ ನಡೆ ಹಾಸ್ಯಾಸ್ಪದವಾದದ್ದು. ಲಿಂಗಾಯತ ಧರ್ಮದಡಿಯಲ್ಲಿ ಜಾತಿ-ವರ್ಣ-ವರ್ಗ-ಲಿಂಗ ತಾರತಮ್ಯ ರಹಿತ ಹಿಂದೂ ಸಮಾಜ ನಿರ್ಮಿಸಲು ಪ್ರಯತ್ನಿಸುತ್ತಿರುವ ಲಿಂಗಾಯತರ ಅಸಲಿ ರಾಷ್ಟ್ರೀಯವಾದವನ್ನು ವಿಫಲಗೊಳಿಸಿ ಇಡೀ ಭಾರತಿಯ ಸಮುದಾಯಗಳನ್ನು ಜಾತಿˌ ಉಪಜಾತಿಗಳಲ್ಲಿ ವಿಘಟಿಸಿ ಬ್ರಾಹ್ಮಣರ ಯಜಮಾನಿಕೆಯ ನಕಲಿ ರಾಷ್ಟ್ರೀಯವಾದದ ಹಿಂದೂ ಧರ್ಮ ಜೀವಂತವಿಡುವ ಸನಾತನಿಗಳ ಹುನ್ನಾರವು ಹಿಂದೂ ಧರ್ಮದ ವಿಘಟನೆಯ ಹೇಯ ಕ್ರತ್ಯವಲ್ಲದೆ ಬೇರೇನೂ ಅಲ್ಲ ಎಂದೇ ಹೇಳಬೇಕಾಗುತ್ತದೆ. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement