Advertisement

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ !

Advertisement

ಬರಹ; ಡಾ. ಜೆ ಎಸ್ ಪಾಟೀಲ. (ಲೇಖಕರು ಜನಪರ ಚಿಂತಕರು)

ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ ಬಗ್ಗೆ ಮಾತನಾಡುವವರ ತಲೆಯ ಮೇಲೆ ಹೆಲಿಕಾಪ್ಟರ್‌ನಿಂದ ಹೂವು ಮಳೆಗರೆಯಲಾಗುತ್ತದೆ. ಆದರೆˌ ನೀವು ಶಿಕ್ಷಣ/ವಿಜ್ಞಾನ/ಜಾಗ್ರತೆ/ಅರಿವಿನ ಕುರಿತು ಮಾತನಾಡಿದರೆ ನಿಮ್ಮ ಮೇಲೆ ಲಾಠಿ ಏಟುಗಳು ಬೀಳುತ್ತವೆ. ಇಲ್ಲಿ ಮಕ್ಕಳು ಕುಡಿಯುವ ಹಾಲು ದೇವರೆಂಬ ಕಲ್ಲಿನ ವಿಗ್ರಹಗಳ ಮೇಲೆ ಹರಿದು ವ್ಯರ್ಥವಾಗಿ ಗಟಾರ ಸೇರುತ್ತವೆ. ಗಟಾರ ಸೇರಬೇಕಾದ ದನದ ಮೂತ್ರವು ಬೆಳ್ಳಿಯ ಬಟ್ಟಲಲ್ಲಿಟ್ಟು ಪವಿತ್ರವೆಂದು ಸೇವಿಸಲು ಹೇಳಲಾಗುತ್ತದೆ. ಆದ್ದರಿಂದಲೇ ನನ್ನ ದೇಶ ಜಗತ್ತಿನ ಜ್ಞಾನದ ತವರಾಗುವ ಬದಲಿಗೆ ಧಾರ್ಮಿಕ ಅಂಧಕಾರವನ್ನು ಬಿತ್ತುವ ಮೌಢ್ಯದ ತವರು ಮನೆಯಾಗಿದೆ.



ಅಂದು ಈ ನೆಲದಲ್ಲಿ ಬೌದ್ಧರು ಸ್ಥಾಪಿಸಿ ದೇಶ-ವಿದೇಶಗಳ ಜನರಿಗೆ ಉತ್ಕ್ರಷ್ಠವಾದ ಜ್ಞಾನ ಪ್ರಸಾರ ಮಾಡುತ್ತಿದ್ದ ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು ಪರಕೀಯ ದಾಳಿಕೋರರ ಸಹಾಯದಿಂದ ಸುಟ್ಟು ಹಾಕಿದ ಪಾತಕಿಗಳ ಸಂತಾನವೇ ಇಂದು ದಿಲ್ಲಿಯ ಜಗದ್ವಿಖ್ಯಾತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು (JNU) ಮುಚ್ಚಿಸಲು ಪ್ರಯತ್ನಿಸುತ್ತಿವೆ. ಇಲ್ಲಿ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿ ಉಪಗ್ರಹ ಉಡಾವಣೆಯ ದಿನ ದೇವಸ್ಥಾನಕ್ಕೆ ಹೋಗಿ ಕಾಯಿ ಕರ್ಪೂರ ಸಮರ್ಪಿಸಿ ಮೌಢ್ಯ ಮೆರೆಯುತ್ತಾನೆ. ಈ ನೆಲದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕನೊಬ್ಬ ಬೌದ್ಧ ಧರ್ಮದ ಉದಾತ್ ತತ್ವಗಳನ್ನು ಮತ್ತು ಲಿಂಗಾಯತ ಧರ್ಮದ ವೈಚಾರಿಕ ವಚನಗಳನ್ನು ಉಪನಿಷತ್ತುಗಳಲ್ಲಿ ಇರುವ ಸಂಗತಿಗಳು ಎಂದು ವಿಡಿಯೊ ಮಾಡಿ ಉಡಾಫೆಯ ಪ್ರಚಾರ ಮಾಡ್ತಾನೆ. ಅದೇ ಉಪನಿಷತ್ತುಗಳನ್ನು ಶರಣರು ವಾಗ್ವಾದ್ವೈತವೆಂದು ದಿಕ್ಕರಿಸುತ್ತಾರೆ. ಇಲ್ಲೊಬ್ಬ ಭೌತಶಾಸ್ತ್ರದ ಉಪನ್ಯಾಸಕ ಸೃಷ್ಠಿಯ ನೈಸರ್ಗಿಕ ಕ್ರಿಯೆಯಾದ ಗ್ರಹಣವನ್ನು ಪಾಠ ಮಾಡುತ್ತ ನವಗ್ರಹಪೂಜೆˌ ಗ್ರಹದೋಷ ಪೂಜೆ/ಹೋಮಗಳಿಗೆ ಮೊರೆಹೋಗುತ್ತಾನೆ. ಇದು ಸನಾತನಿಗಳ ವೈಯಕ್ತಿಕ ನಂಬಿಕೆಯಾಗಿದ್ದರೆ ಅದರಿಂದ ಭಾರತ ದೇಶಕ್ಕೆ ಯಾವುದೇ ಹಾನಿಯಿಲ್ಲ. ಆದರೆ ಸನಾತನಿಗಳು ಉಳಿದವರನ್ನು ನಂಬಿಸಲು ಈ ರೀತಿಯ ವಿದ್ವಂಸಕಾರಿ ಹುನ್ನಾರಗಳು ಮಾಡುತ್ತಿರುತ್ತಾರೆ. ಸನಾತನಿಗಳ ಈ ಹುನ್ನಾರಗಳು ಹಳೆಯವೇ ಆದರೂˌ ತಂತ್ರಗಳು ಮಾತ್ರ ನವೀನ ಅಷ್ಟೆ.

ಈ ದೇಶದ ಪರಿಶಿಷ್ಟ ಜಾತಿˌˌ ದಲಿತ ದಮನಿತˌ ಪರಿಶಿಷ್ಟ ಪಂಗಡˌ ಇತರ ಹಿಂದುಳಿದ ವರ್ಗದ ಜನರು ಒಂದು ಬಾರಿ ಭಾರತ ದೇಶದೊಳಗಿರುವ ದೊಡ್ಡ ದೊಡ್ಡ ಮಂದಿರಗಳ ಅರ್ಚಕರ ಹುದ್ದೆಗಾಗಿ ಬೇಡಿಕೆಯನ್ನಿಟ್ಟು ನೋಡಲಿ. ಈ ಸನಾತನಿ ಪುರೋಹಿತಶಾಹಿಗಳು ಅವರ ಬೇಡಿಕೆಯನ್ನು ಯಾವ ರೀತಿಯಾಗಿ ಸ್ವೀಕರಿಸುತ್ತಾರೆ ಎನ್ನುವುದು ಅರ್ಥವಾದರೆ ಶೂದ್ರರೆಲ್ಲರೂ ತಾವು ಹಿಂದೂಗಳೆಂಬ ಭ್ರಮೆಯಿಂದ ಆಗ ತಾವಾಗಿಯೇ ಹೊರ ಬರುತ್ತಾರೆ. ಭಾರತದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕಠಿಣ ಹೋರಾಟದ ಬದುಕುˌ ಅವರ ಸವಾಲಿನ ಶೈಕ್ಷಣಿಕ ಯಾತ್ರೆ ಹಾಗು ಅವರ ಸ್ವಾಭಿಮಾನದ ದಂಡಯಾತ್ರೆಯ ಕುರಿತು ಪಾಠ ಮಾಡುವುದಿಲ್ಲ. ಏಕೆಂದರೆ ಜನರು ಕಾನೂನು ಕಲಿತರೆ ಇಲ್ಲಿನ ಪುರೋಹಿತಶಾಹಿಗಳ ಗುಲಾಮಗಿರಿ ಮಾಡಲು ಜನರು ಸಿಗುವುದಿಲ್ಲವಲ್ಲ. ಈ ದೇಶದಲ್ಲಿ ಗೌತಮ ಬುದ್ಧ-ಮಹಾವೀರರ ಅಹಿಂಸೆˌ ಬಸವಣ್ಣನವರ ಸಮಾನತೆ ಮತ್ತು ಸಹಬಾಳ್ವೆ ˌ ತುಕಾರಾಮˌ ಫುಲೆˌ ನಾರಾಯಣಗುರುˌ ಪೆರಿಯಾರ ಮುಂತಾದವರ ವೈಚಾರಿಕತೆˌ ಗಾಂಧಿಜಿಯವರ ಸಹಿಷ್ಣತೆˌ ಶಾಂತಿˌ ಸತ್ಯದ ಮಾರ್ಗ ನಮ್ಮ ಪೀಳಿಗೆಗೆ ಮನವರಿಕೆ ಮಾಡಿಸುವುದಿಲ್ಲ. ಏಕೆಂದರೆ ಜನ ವಿಚಾರವಂತರಾದರೆ ಪುರೋಹಿತಶಾಹಿಗಳ ಮೌಢ್ಯಕ್ಕೆ ಬಲಿಯಾಗುವವರು ಯಾರು?

ಗಂಗೆಯ ನೀರು ನಮಗೆಲ್ಲರಿಗೂ ಪವಿತ್ರವೆಂದು ಭೋದಿಸಲಾಗುತ್ತದೆ. ಧಾರ್ಮಿಕತೆಯ ಹೆಸರಿನಲ್ಲಿ ಅದೇ ಗಂಗೆಯ ಒಡಲೊಳಗೆ ಅರ್ಧ ಸುಟ್ಟ ಹೆಣಗಳನ್ನು ಎಸೆಯುವ ಮೂಲಕ ಆಕೆಯನ್ನು ಮಲೀನ ಹಾಗು ಅಪವಿತ್ರಗೊಳಿಸಲಾಗುತ್ತದೆ. ಗಂಗೆ ಕೇವಲ ಶೂದ್ರರಿಗೆ ಮಾತ್ರ ಪವಿತ್ರವೆಂದು ಬಿಂಬಿಸಲಾಗುತ್ತಿದೆ. ಆದರೆˌ ನಾನು ವಾರಣಾಸಿಯ ಮಾರುಕಟ್ಟೆಯ ರಸ್ತೆಗಳಲ್ಲಿ ಬಿಸಲೇರಿ ಬಾಟಲಿಯ ನೀರು ಮಾರುವುದನ್ನು ನೋಡಿದ್ದೇನೆ. ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತಲು ನಮ್ಮ ದೇಶದ ಅನೇಕ ಜನ ತತ್ವಜ್ಞಾನಿಗಳುˌ ಸಂತರುˌ ಚಿಂತಕರುˌ ವಿಚಾರವಾದಿಗಳು ಪ್ರತಿಪಾದಿಸಿದ ಜ್ಞಾನವನ್ನು ಮರೆಮಾಚಲಾಗುತ್ತಿದೆ. ಪ್ರಗತಿಪರತೆ ಅಪಾಯದಲ್ಲಿದೆˌ ಆದ್ದರಿಂದ ಶಿಕ್ಷಣವನ್ನು ಹೆಚ್ಚು ದುಬಾರಿಯನ್ನಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಬುದ್ಧಿವಂತಿಕೆಯ ಎತ್ತುಗಳನ್ನು ಮೂಢನಂಬಿಕೆಯನ್ನು ಉಳುಮೆ ಮಾಡಲು ಬಳಸಲಾಗುತ್ತಿದೆ. ಇಲ್ಲಿನ ಟಿವಿ ವಾಹಿನಿಗಳು ನೆಲಮೂಲದ ಜನಪದ ಸಂಸ್ಕ್ರತಿಯನ್ನು ಮರೆಮಾಚಿ ಸನಾತನಿಗಳ ವಾಣಿಜ್ಯೀಕರಣಗೊಂಡ ದೇವಸ್ಥಾನಗಳು ಹಾಗೂ ದೇವರುಗಳ ಪ್ರಚಾರವನ್ನು ನಿರಂತರವಾಗಿ ಟಿವಿ ದಾರವಾಹಿಗಳ ಮೂಲಕ ಮಾಡುತ್ತವೆ.

ಶೂದ್ರ ಶೋಷಕˌ ಸ್ತ್ರೀಶೋಷಕ ಬೌದ್ದ ದ್ವೇಷಿˌ ಲಿಂಗಾಯತ ದ್ವೇಷಿˌ ಶರಣ ಪೀಡಕˌ ಜೀವವಿರೋಧಿ ಸಿದ್ಧಾಂತಗಳೇ ಸಂಸ್ಕ್ರತಿ ಎಂದು ನಮ್ಮೆಲ್ಲರ ತಲೆಯ ಮೇಲೆ ಹೇರಲಾಗಿದೆ. ಅವುಗಳನ್ನೆಲ್ಲ ಸ್ಥಾಪಿತ ಆಚರಣೆಗಳಾಗಿˌ ಸಾಂಸ್ಕ್ರತಿಕ ಮೌಲ್ಯಗಳಾಗಿ ಬಿಂಬಿಸಲಾಗಿದೆ. ಜನರ ಸಂಪರ್ಕವೇ ಇಲ್ಲದˌ ಸ್ವಂತ ಲಿಪಿ ಇಲ್ಲದˌ ಇತ್ತೀಚೆಗೆ ವ್ಯಾಕರಣವನ್ನು ಅಳವಡಿಸಿಕೊಂಡಿರುವ ಪುರೋಹಿತಶಾಹಿಗಳ ಗ್ರಾಂಥಿಕ ಮತ್ತು ಪೌರೋಹಿತ್ಯದ ಭಾಷೆಯನ್ನು ದೇವರ ಭಾಷೆ ಎಂದು ಹುಸಿ ಸುದ್ದಿ ವ್ಯವಸ್ಥಿತವಾಗಿ ಹರಡಲಾಗಿದೆ. ಇಲ್ಲಿನ ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ರಸ್ತೆಗಿಳಿದು ಚಳವಳಿ ಮಾಡಬೇಕಾಗುತ್ತದೆ. ಆದರೆˌ ಪರಾವಲಂಬಿ ಪುರೋಹಿತರ ಬದುಕನ್ನು ಹಸನಗೊಳಿಸುವ ದೇವಸ್ಥಾನಗಳನ್ನು ಕಟ್ಟಲು ಯಾರೂ ಕೇಳದೆಯೂ ಕೂಡ ಅಪಾರ ಹಣದ ರಾಶಿ ಸಂಗ್ರಹವಾಗುತ್ತದೆ. ಈ ರೀತಿಯ ಪ್ರಸಂಗಗಳಿಂದˌ ಈ ದೇಶವು ಅಂಧಶ್ರದ್ಧೆಗಳ ವಿಶ್ವಗುರುವಾಗಬಲ್ಲುದೇ ಹೊರತು ಜ್ಞಾನ ಮತ್ತು ಶಿಕ್ಷಣದ ಕೇಂದ್ರವಾಗಲಾರದು.

ಇನ್ನೊಂದು ವಿಷಯವೆಂದರೆ, ವಿಜ್ಞಾನಿ ನ್ಯೂಟನ್ ಅಕಸ್ಮಾತ್ ಭಾರತದಲ್ಲಿ ಜನಿಸಿದ್ದರೆ, ಮರದ ಮೇಲಿನಿಂದ ಬಿದ್ದ ಸೇಬು ಹಣ್ಣು ದೈವೀ ಕೃಪೆಯಿಂದ ಕೆಳಗೆ ಬಿತ್ತೆಂದು ಭ್ರಮಿಸಿ ಅದನ್ನು ಆತ ತನ್ನ ಬಂಜೆ ಹೆಂಡತಿಗೆ ತಿನ್ನಿಸುತ್ತಿದ್ದ. ದೇವರ ಅನುಗ್ರಹದಿಂದ ಪ್ರಸಾದದಂತೆ ದೊರೆತ ಆ ಹಣ್ಣಿನ ದೆಸೆಯಿಂದಲೇ ತನ್ನ ಪತ್ನಿ ಗರ್ಭಿಣಿಯಾದಳೆಂದು ಆತ ಭ್ರಮಿಸುತ್ತಿದ್ದˌ ಹಾಗೂ ಜನರನ್ನೆಲ್ಲ ಅದೇ ಭ್ರಮೆಯಲ್ಲಿ ಬೀಳಿಸುತ್ತಿದ್ದ. ನ್ಯೂಟನ್ನನ ನಿಯಮಗಳಾಗಲಿˌ ವೈಜ್ಞಾನಿಕ ಸಿದ್ಧಾಂತಗಳಾಗಲಿ ಯಾವುವೂ ಆಗ ಅವಿಷ್ಕಾರಗೊಳ್ಳುತ್ತಿರಲಿಲ್ಲ. ಅದರ ಬದಲಿಗೆ ದೇವರ ಕೃಪೆಯಿಂದ ಮೇಲಿಂದ ಕೆಳಗೆ ಬಿದ್ದ ಹಣ್ಣಿನ ದೆಸೆಯಿಂದ ಮಕ್ಕಳಾದವೆಂದು ಮೌಢ್ಯ ಮಾರಾಟ ಮಾಡುವ ಒಂದು ಬಹುದೊಡ್ಡ ಅಂಗಡಿ ಈ ನೆಲದಲ್ಲಿ ತೆರೆಯಲ್ಪಡುತ್ತಿತ್ತು. ಈ ನೆಲದಲ್ಲಿ ವಿಜ್ಞಾನವನ್ನು ಮೊದಲಿನಿಂದಲೂ ಪ್ರಜ್ಞಾಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಆದರೆˌ ಸನಾತನಿಗಳು ತಮ್ಮ ಅನೇಕ ಮೌಢ್ಯಗಳಿಗೆ ಕಪೋಲಕಲ್ಪಿತ ವೈಜ್ಞಾನಿಕ ಹಿನ್ನೆಲೆಯ ಕಥೆಯನ್ನು ಹೆಣೆಯುವುದು ಮರೆಯುವುದಿಲ್ಲ.

ಭಾರತದಲ್ಲಿ ಸಾರ್ವಜನಿಕವಾಗಿ ಎಲ್ಲ ಬಗೆಯ ಧಾರ್ಮಿಕ ಆಚರಣೆಗಳ ಪ್ರದರ್ಶನಗಳನ್ನು ನಿಲ್ಲಿಸಬೇಕಿದೆ. ಧರ್ಮ ಗ್ರಂಥಗಳನ್ನು ಪ್ರಚಾರ ಮಾಡುವ ಬದಲಿಗೆ ನಮ್ಮ ಸಂವಿಧಾನವೆಂಬ ಅಧುನಿಕ ಬದುಕಿಗೆ ಬೇಕಾಗುವ ಜ್ಞಾನವುಳ್ಳ ಗ್ರಂಥವನ್ನು ಓದಲು ನಾವು ಜನರನ್ನು ಜಾಗೃತಗೊಳಿಸಬೇಕಿದೆ. ಆಗ ಮಾತ್ರ ನಾವು ನಮ್ಮ ಮೂಲಭೂತ ಹಕ್ಕುಗಳನ್ನು ತಿಳಿದುಕೊಂಡು ಅವುಗಳ ಬೇಡಿಕೆಗಾಗಿ ಹೋರಾಡಬಹುದು. ಬದಲಿಗೆ ಧಾರ್ಮಿಕ ಮೌಢ್ಯವನ್ನು ಬಿತ್ತುವ ಪುಸ್ತಕಗಳನ್ನು ಓದಿದರೆ ನಾವು ಧಾರ್ಮಿಕ ಮೌಢ್ಯಗಳ ದಾಸರಾಗಿ ಪುರೋಹಿತಶಾಹಿಗಳ ಕುಠಿಲ ಹುನ್ನಾರಗಳಿಗೆ ಬಲಿಯಾಗುತ್ತ ದಾಸ/ಗುಲಾಮರಾಗಿ ಬದುಕಬೇಕಾಗುತ್ತದೆ. ಸಂವೇದನೆ ರಹಿತˌ ವಿಚಾರಹೀನ ಧಾರ್ಮಿಕತೆ ನಮ್ಮನ್ನು ದೇವಸ್ಥಾನಗಳ ಸರತಿ ಸಾಲಿನಲ್ಲಿ ನಿಲ್ಲಿಸಿ ಪುರೋಹಿತರ ಹಿತಾಸಕ್ತಿಗೆ ಬಲಿ ತಗೆದೆಕೊಳ್ಳುತ್ತದೆ. ನಾವು ಯಾವ ರೀತಿ ಚಿಂತಿಸಿ/ಯೋಚಿಸಿ ನಡೆದುಕೊಳ್ಳುತ್ತೇವೆಯೊ ಅದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ನಾವು ದೇಶದ ಮೂಲ ನಿವಾಸಿ ಶೂದ್ರರ ಸ್ವಾಭಿಮಾನವನ್ನು ಕಸಿದುಕೊಳ್ಳುತ್ತಿರುವ ನಮ್ಮ ಶತ್ರುಗಳಾದ ಪುರೋಹಿತಶಾಹಿಗಳ ಅಡಿಯಾಳಾದರೆ ನಮ್ಮ ಗೌರವವು ನಾಶವಾಗುತ್ತದೆ. ಸಿಂಹ ಎಚ್ಚರವಾಗಿದ್ದರೆ ದರೋಡೆಕೋರ ಗುಳ್ಳೆ ನರಿಗಳು ಬಾಲಮುದುಡಿಕೊಂಡು ಓಡಿಹೋಗುತ್ತವೆ.

ನಾವು ನಮ್ಮೊಳಗಿನ ಅಂಧವಿಶ್ವಾಸ ಹೊಡೆದೊಡಿಸಬೇಕಿದೆ !
ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ !
ಬೆಳಗು ಮತ್ತು ಬೆಳಕು ಕೇವಲ ಸೂರ್ಯೋದಯ ವಾಗುವುದರಿಂದ ಮಾತ್ರ ಕಾಣುತ್ತದೆ ಎನ್ನುವ ಭ್ರಮೆಯಿಂದ ನಾವು ಹೊರಬರಬೇಕಿದೆ. ನಾವು ಬೆಳಗು ಮತ್ತು ಬೆಳಕು ಕಾಣಬೇಕಾದರೆ ಅದಕ್ಕಾಗಿ ನಮ್ಮ ಕಣ್ಣುಗಳನ್ನು ತೆರೆಯಬೇಕಾಗುತ್ತದೆ. ನೀವು ಈ ಲೇಖನವನ್ನು ಓದಲು ನಿಮ್ಮ ಅಮೂಲ್ಯ ಸಮಯವನ್ನು ನೀಡಿದ್ದಿರಿ. ಅದಕ್ಕಾಗಿ ನಿಮಗೆ ಅನಂತ ಶರಣು ಶರಣಾರ್ಥಿಗಳು. ಈ ಲೇಖನ ಓದಿದ ನೀವೆಲ್ಲರೂ ಈಗ ಒಂದು ಸಣ್ಣ ಸಹಾಯ ಮಾಡಿರಿ. ಈ ಸಂದೇಶವನ್ನು ನಿಮ್ಮ ಸ್ನೇಹಿತರುˌ ಬಂಧುಗಳು ಮತ್ತಿತರರೊಂದಿಗೆ ಹಂಚಿಕೊಳ್ಳಿ. ನಿಮ್ಮ ಸುತ್ತಲಿನ ಜನರಿಗೆ ಅರಿವು ನೆಲೆಗೊಳಿಸುವ ಏಕೈಕ ಮಾರ್ಗ ಇದು. ನಿಮಗೆ ಸಾಧ್ಯವಾದಷ್ಟು ಜನರಿಗೆ ಈ ಲೇಖನದ ಸಾರಾಂಶದೊಳಗೆ ಅಡಗಿರುವ ಸಂದೇಶವನ್ನು ತಲುಪಿಸಿರಿ. ಪುರೋಹಿತಶಾಹಿಗಳು ಹೆಣೆದ ಮೌಢ್ಯಗಳಿಂದ ಹೊರಬನ್ನಿ !


Advertisement
Advertisement
Recent Posts
Advertisement