ರಾಜ್ಯ

ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಸ್ವೀಕರಿಸಲಿ; ಸಿದ್ದರಾಮಯ್ಯ ಆಗ್ರಹ

ರಾಜ್ಯದಲ್ಲಿ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತ ಬಂದಿದೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಈ ವರೆಗೆ ಸ್ವೀಕರಿಸದಿರುವುದು ಖಂಡನೀಯ. ತಕ್ಷಣ ವರದಿ ಸ್ವೀಕರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಸ್ವಾತಂತ್ರ್ಯ ನಂತರದಿಂದ ಈ ವರೆಗೆ ಸಮಾಜದ ವಿವಿಧ ಸಮುದಾಯಗಳಲ್ಲಾದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಲು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಅನುಕೂಲವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರು ನಗರದ ಶೇ.90 ಹಾಗೂ ರಾಜ್ಯದ ಗ್ರಾಮೀಣ ಭಾಗದ ಶೇ.100 ರಷ್ಟು ಕುಟುಂಬಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಇರುವ ವೈಜ್ಞಾನಿಕ ಸಮೀಕ್ಷೆಯೊಂದರ ವರದಿ ಸ್ವೀಕರಿಸದಿರಲು ಕಾರಣ ಏನು ಎಂಬುದನ್ನು ರಾಜ್ಯದ ಯಡಿಯೂರಪ್ಪ ಸರ್ಕಾರ ಹೇಳಲಿ. ರಾಜ್ಯದ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟದ ಹಾದಿ ಹಿಡಿದಿವೆ. ಇದಕ್ಕೆ ನಮ್ಮ ವಿರೋಧ ಖಂಡಿತಾ ಇಲ್ಲ. ಶೋಷಿತ ಸಮುದಾಯಗಳು ಮೀಸಲಾತಿ ಪಡೆಯುವುದು ಅವುಗಳ ಸಂವಿಧಾನಬದ್ಧ ಹಕ್ಕು. ಯಾವ ಸಮುದಾಯಗಳು ಸಂವಿಧಾನದ ನಿಯಮಗಳಡಿ ಮೀಸಲಾತಿಗೆ ಅರ್ಹವಿದ್ದಾವೆ ಅವುಗಳೆಲ್ಲವಕ್ಕೂ ಸರ್ಕಾರ ಮೀಸಲಾತಿ ನೀಡಲು ಕ್ರಮ ವಹಿಸಬೇಕು ಎಂದವರು ಒತ್ತಾಯಿಸಿದ್ದಾರೆ.

ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿ ಗಣತಿ) ನಡೆಸಲು ಆಯೋಗದ ಅಧ್ಯಕ್ಷ ಅಧ್ಯಕ್ಷ ಎಚ್. ಕಾಂತರಾಜ, ಸದಸ್ಯರಾದ ಕೆ.ಎನ್. ಲಿಂಗಪ್ಪ, ಎನ್.ಪಿ. ಧರ್ಮರಾಜ, ಶರಣಪ್ಪ ಡಿ. ಮಣಿಗಾರ, ಡಿ.ಜಿ. ಗೋಪಾಲ ರವರ ನೇತೃತ್ವದಲ್ಲಿ ಸಮಿತಿ ರಚಿಸಿ ಆ ಐತಿಹಾಸಿಕ ಜಾತೀವಾರು ಸಮೀಕ್ಷೆಗೆಂದು ಸುಮಾರು ಇನ್ನೂರು ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು. 2014ರ ಜೂನ್ 26ರಂದು ನೇಮಕವಾಗಿದ್ದ ಅಧ್ಯಕ್ಷ ಮತ್ತು ಸದಸ್ಯರ ಮೂರು ವರ್ಷಗಳ ಅವಧಿ 2017ರಲ್ಲೇ ಮುಕ್ತಾಯಗೊಂಡಿತ್ತು. ಸಮೀಕ್ಷೆ ಮುಗಿಯದಿರುವ ಕಾರಣ ಅದು ಮುಗಿಯುವ ತನಕ ಎಲ್ಲರನ್ನೂ ಮುಂದುವರಿಸಿ 2017ರ ಜುಲೈ 15ರಂದು ‌ಆದೇಶ ಹೊರಡಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಗಿಯುವಷ್ಟರಲ್ಲಿ ಸಮೀಕ್ಷೆ ಪೂರ್ಣವಾಗಿರಲಿಲ್ಲ. ಚುನಾವಣೆಯ ನಂತರ ಬದಲಾದ ವಾತಾವರಣದಲ್ಲಿ ಎಚ್.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾದ ಕೆಲ ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿತ್ತು. ಆಗಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್.ಕಾಂತರಾಜರವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ವರದಿ ಸಿದ್ಧವಾಗಿರುವ ಬಗ್ಗೆ ಚರ್ಚೆಯನ್ನೂ ನಡೆಸಿದ್ದರಾದರೂ ಕುಮಾರಸ್ವಾಮಿಯವರು ವರದಿ ಸಲ್ಲಿಕೆಗೆ ದಿನಾಂಕ ನಿಗದಿಪಡಿಸಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಸುಮಾರು ಒಂದು ವರ್ಷದ ನಂತರ ಇದೀಗ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ಈ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮೊದಲ ಆಯೋಗ 1953ರಲ್ಲಿ ಕಾಕ ಕಾಲೇಕರ್ ನೇತೃತ್ವದಲ್ಲಿ ರಚನೆಯಾಯಿತು. 1955ರಲ್ಲಿ ವರದಿ ನೀಡಿದರೂ ಇದು ಅನುಷ್ಠಾನವಾಗಲಿಲ್ಲ. 1979ರಲ್ಲಿ 2ನೇ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿ 1980ರಲ್ಲಿ ವರದಿ ಸಲ್ಲಿಕೆಯಾಯಿತು. ಹಿಂದುಳಿದ ವರ್ಗ ಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.27ರಷ್ಟು ಮೀಸಲಾತಿ ನೀಡುವ ಈ ವರದಿಯನ್ನು 1993ರಲ್ಲಿ ಅಂದಿನ ಪ್ರಧಾನಿ ದಿ.ಪಿ.ವಿ.ನರಸಿಂಹರಾವ್ ಅವರು ಜಾರಿ ಮಾಡಿದರು. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಎಲ್.ಜಿ. ಹಾವನೂರು ಆಯೋಗ ರಚನೆ ಮಾಡಿ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಶ್ರಮಿಸಿದರು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೂ ಸಮಾನ ಅವಕಾಶ ನೀಡಿದ್ದೇ ಈ ಆಯೋಗ. ಎಲ್.ಜಿ.ಹಾವನೂರು ಆಯೋಗ ಒಂದು ರೀತಿ ಬೈಬಲ್, ಕುರಾನ್, ರಾಮಾಯಣ ಮತ್ತು ಮಹಾಭಾರತದಂತಿದೆ ಎಂಬ ಪ್ರಶಂಶೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ವೆಂಕಟಸುಬ್ಬಯ್ಯ ಮತ್ತು ಚಿನ್ನಪ್ಪ ರೆಡ್ಡಿ ಆಯೋಗಗಳು ರಚನೆಯಾದರೂ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲಿಲ್ಲ. ಸಮಾಜದಲ್ಲಿ ಈಗಲೂ ಕೂಡ ಅಸ್ಪೃಶ್ಯತೆ ಜಾರಿಯಲ್ಲಿದೆ. ಸಮಸಮಾಜ ನಿರ್ಮಾಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಯಡಿಯೂರಪ್ಪ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

__________________________________

►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares