Advertisement

ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ಒದಗಿಸಿ: ಯಡಿಯೂರಪ್ಪ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ.

Advertisement

ಸೆಕ್ಸ್ ಸಿ.ಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ‌ಗೆ ಒಂದು ನ್ಯಾಯ, ಸಂತ್ರಸ್ತೆಗೆ ಒಂದು ನ್ಯಾಯವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಒಪ್ಪಿಗೆ ಇಲ್ಲದ ಯಾವುದೇ ಲೈಂಗಿಕ ಕ್ರಿಯೆ ಅತ್ಯಾಚಾರದ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದರೂ 376 ಅಡಿಯಲ್ಲಿ ಸರ್ಕಾರ ಪ್ರಕರಣವನ್ನು ಏಕೆ ದಾಖಲಿಸಿಲ್ಲ? ರಾಜ್ಯದ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬ ನಿಟ್ಟಿನಲ್ಲಿ ಮಾತ್ರವೇ ತನಿಖೆ ನಡೆಯುತ್ತಿದೆ. ಆ ಹೆಣ್ಣು ಮಗಳಿಗೆ ಆದ ಅನ್ಯಾಯದ ಬಗ್ಗೆ ತನಿಖೆ ನಡೆಯುತ್ತಿಲ್ಲ. ಸಚಿವ ರಮೇಶ್ ಜಾರಕಿಹೊಳಿ ಅರದ್ದೆನ್ನಲಾದ ಸಿಡಿ ಮತ್ತು ಅದಕ್ಕೆ ಸಂಬಂಧಿಸಿದ ಉಳಿದೆಲ್ಲ ಬೆಳವಣಿಗೆಗಳ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾದೀಶರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು. ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಆಧರಿಸಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣದಡಿ (ಭಾರತೀಯ ದಂಡಸಂಹಿತೆ 376ರ ಅಡಿ) ಮೊಕದ್ದಮೆ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಮತ್ತು ತಮ್ಮ ಮಾನಕ್ಕೆ ಹಾನಿಯುಂಟು ಮಾಡುವ ಸಿ.ಡಿ ಪ್ರಸಾರ/ ಪ್ರಕಟವಾಗದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿರುವ ರಾಜ್ಯದ ಆರು ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಅವರು ಆಗ್ರಹಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 2ರಂದು ದಿನೇಶ್ ಕಲ್ಲಹಳ್ಳಿ ಎಂಬುವವರು ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ಅದಕ್ಕೆ ಸಿ.ಡಿಯೊಂದನ್ನು ಸಾಕ್ಷ್ಯವಾಗಿ ನೀಡಿದ್ದರು. ಆದರೆ ಈ ಬಗ್ಗೆ ಪೋಲಿಸರು ಎಫ್‌ಐಆರ್ ದಾಖಲಿಸುವುದಾಗಲಿ ಅಥವಾ ದೂರುದಾರನಿಗೆ ಎನ್‌ಸಿಆರ್ ಅನ್ನು ನೀಡುವುದಾಗಲಿ ಏಕೆ ಮಾಡಿಲ್ಲ? ರಮೇಶ್ ಜಾರಕಿಹೊಳಿ ಅವರು ಮೊದಲಿಗೆ ಈ ಸಿಡಿ ನಕಲಿ ಎಂದು ತಮ್ಮ ಮೇಲಿದ್ದ ಆರೋಪವನ್ನು ಅಲ್ಲಗೆಳೆದಿದ್ದರು. ಆ ನಂತರ ಮಾರ್ಚ್ 3ರಂದು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಯಾಕೆ? ಎಂದವರು ಪ್ರಶ್ನಿಸಿದರು. ಅನಂತರ ಮಾರ್ಚ್ 6 ರಂದು ಸಚಿವರುಗಳಾದ ಬಿ.ಸಿ ಪಾಟೀಲ್, ಶಿವರಾಮ ಹೆಬ್ಬಾರ್, ಎಸ್.ಟಿ ಸೋಮಶೇಖರ್, ಡಾ. ಕೆ ಸುಧಾಕರ್, ನಾರಾಯಣ ಗೌಡ, ಬೈರತಿ ಬಸವರಾಜ್ ಅವರು ತಮ್ಮ ವಿರುದ್ಧ 67ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣ ಗಳಲ್ಲಿ ಮಾನಹಾನಿಯಾಗುವಂತಹ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕೆಂದು ನಗರ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಾವು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬ ಬಗ್ಗೆ ಇವರುಗಳಿಗೆ ವಿಶ್ವಾಸವಿದ್ದರೆ ಹೀಗೆ ನ್ಯಾಯಾಲಯದ ಮೊರೆ ಹೋಗುವ ಅಗತ್ಯ ಬರುತ್ತಿತ್ತೇ? ನಿರ್ಧಿಷ್ಟವಾಗಿ 19 ಸಿ.ಡಿಗಳಿವೆ ಎಂದು ಸಚಿವರುಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇಷ್ಟೊಂದು ಖಚಿತವಾದ ಮಾಹಿತಿ ಅವರು ಹೊಂದಿದ್ದರೆ ಅವರು ಯಾಕೆ ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿಲ್ಲ? ರಾಜ್ಯ ಸರ್ಕಾರ ಈ ಆರೋಪದ ಬಗ್ಗೆ ಪೋಲಿಸರಿಂದ ಯಾಕೆ ತನಿಖೆ ನಡೆಸಿಲ್ಲ? ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲಾಗದೆ ನ್ಯಾಯಾಲಯದ ಮೊರೆ ಹೋದ ಈ ಸಚಿವರುಗಳು ಜನರನ್ನು ಹೇಗೆ ರಕ್ಷಿಸುತ್ತಾರೆ ಎಂದವರು ಪ್ರಶ್ನಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಆ ಯುವತಿ ಮಾರ್ಚ್ 13ರಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತನ್ನ ಜೀವಕ್ಕೆ ಅಪಾಯವಿದೆ, ರಕ್ಷಣೆ ನೀಡಿ ಮತ್ತು ರಮೇಶ್ ಜಾರಕಿಹೊಳಿ ಅವರು ತನಗೆ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಅಮಿಷವೊಡ್ಡಿ ತನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾಳೆ. ಹಾಗಾಗಿ ಇದು ಅತ್ಯಾಚಾರ ಪ್ರಕರಣದ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಪೋಲಿಸರು ಯಾಕೆ ಈ ತನಕ ಕ್ರಮ ಕೈಗೊಂಡಿಲ್ಲ? ಪೋಲೀಸ್ ಇಲಾಖೆಯ ಕರ್ತವ್ಯಲೋಪ ಇಲ್ಲಿ ಎದ್ದು ಕಾಣುತ್ತದೆ. ರಮೇಶ್ ಜಾರಕಿಹೊಳಿಯಂತಹ ಪ್ರಭಾವಿಗಳಿಗೆ ಒಂದು ನ್ಯಾಯ, ಆ ಯುವತಿಗೆ ಒಂದು ನ್ಯಾಯವೇ? ಎಸ್‌ಐಟಿಗೆ ರಾಜ್ಯ ಸರ್ಕಾರ ನೀಡಿರುವ ವ್ಯಾಪ್ತಿ ಸೀಮಿತವಾಗಿದ್ದು ಅದರಿಂದ ಅನ್ಯಾಯಕ್ಕೊಳಗಾದ ಯುವತಿಗೆ ನ್ಯಾಯ ಸಿಗದು. ಆ ಕಾರಣದಿಂದ 376 ಅಡಿಯಲ್ಲಿ ದೂರು ದಾಖಲು ಮಾಡಿಕೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ವಿರುದ್ದ ತನಿಖೆ ನಡೆಸಬೇಕು. ಈ ತನಕವೂ ಅತ್ಯಾಚಾರ ಪ್ರಕರಣ ದಾಖಲು ಮಾಡದ ಪೊಲೀಸರ ವಿರುದ್ಧವೂ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ. __________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಷನ್ ಶೆಟ್ಟಿ ಆರ್‌.ಜಿ-) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement