ಸುದ್ದಿ ವಿಶ್ಲೇಷಣೆ

ಛತ್ತೀಸ್‌ಘಡ; ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ- 22 ಯೋಧರ ಸಾವು! ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?

ಎಪ್ರಿಲ್ 3 (ಶನಿವಾರ) ರಂದು ಛತ್ತೀಸ್ ಘಢದ ಸುಕ್ಮಾ ಮತ್ತು ಬಿಜಾಪುರ್ ಗಡಿಯಲ್ಲಿ ನಡೆದ ನಕ್ಸಲರ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 31ಕ್ಕೂ ಹೆಚ್ಚು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಸಿಆರ್‌ಪಿಎಫ್‌ನ ಒಬ್ಬ ಇನ್‌ಸ್ಪೆಕ್ಟರ್ ಸೇರಿದಂತೆ 22 ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಅಲ್ಲದೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಲೂಟಿಗೈಯಲಾಗಿದೆ ಎಂದು ವರದಿಯಾಗಿದೆ. ಮೃತ 22 ಯೋಧರಲ್ಲಿ ಸಿಆರ್‌ಪಿಎಫ್‌ನ 8 ಮಂದಿ, ‘ಕೋಬ್ರಾ’ (ಕಮಾಂಡೊ ಬೆಟಾಲಿಯನ್ಸ್‌ ಫಾರ್‌ ರೆಸಲೂಟ್‌ ಆ್ಯಕ್ಷನ್‌)ದ 7 ಕಮಾಂಡೊಗಳು, ಬಸ್ತಾರಿಯಾ ತುಕಡಿಯ ಒಬ್ಬ ಯೋಧ ಸೇರಿದ್ದಾರೆ.2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಪುಲ್ವಾಮಾ ದಲ್ಲಿ ಭಯೋತ್ಪಾದಕ ದಾಳಿ ನಡೆದು 40ಯೋಧರು ಹುತಾತ್ಮರಾಗಿದ್ದರು. ಆಗ ಪ್ರಧಾನಿ ಮೋದಿಯವರು ‘ಯೋಧರ ಪ್ರಾಣತ್ಯಾಗವನ್ನು ವ್ಯರ್ಥವಾಗಲು ಬಿಡಲಾರೆವು’ ಎಂದಿದ್ದರು ಮತ್ತು ಆ ಘಟನೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಗೆದ್ದು ಬಂದಿದ್ದರು.

ಹಾಗೆಯೇ 2020 ಬಿಹಾರ ಚುನಾವಣಾ ಸಂಧರ್ಭದಲ್ಲಿ ಚೀನಾದ ಯೋಧರಿಂದ 20ಭಾರತೀಯ ಯೋಧರು ಬಲಿಯಾಗಿರುವ ಸಂಧರ್ಭದಲ್ಲಿ ಮೋದಿಯವರ ಅದೇ ಹಳೆ ಡೈಲಾಗ್ ಹೊಡೆದಿದ್ದರು ‘ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ’ ಎಂದು. ನಂತರ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಿತ್ತು.

ಇದೀಗ ಪಂಚರಾಜ್ಯ ಚುನಾವಣಾ ಸಮಯದಲ್ಲಿ ಅದೇ ರೀತಿಯ ಘಟನೆ ಮರುಕಳಿಸಿದೆ. ಛತ್ತೀಸ್ ಗಢ ದಲ್ಲಿ ನಡೆದ ನಕ್ಸಲರ ದಾಳಿಯಿಂದ 22 ಪೋಲಿಸರು ಬಲಿಯಾಗಿದ್ದಾರೆ. ಈಗ ಕೇಂದ್ರ ಗ್ರಹ ಸಚಿವ ಅಮಿತ್ ಷಾ ‘ಯೋಧರ ಪ್ರಾಣತ್ಯಾಗವನ್ನು ವ್ಯರ್ಥವಾಗಲು ಬಿಡೆವು’ ಎಂದು ಮೋದಿಯವರ ಅದೇ ಹಳೇ ಡೈಲಾಗ್ ಅನ್ನು ಪುನರುಚ್ಚರಿಸಿದ್ದಾರೆ.

ಇಲ್ಲಿ ನಮ್ಮ ಪ್ರಶ್ನೆ ಏನೆಂದರೆ… ಬೇರೆ ಸಮಯದಲ್ಲಿ ಸುಮ್ಮನಿರುವ ಭಯೋತ್ಪಾದಕರು, ವೈರಿ ರಾಷ್ಟ್ರಗಳ ಸೈನಿಕರು ಅಥವಾ ನಕ್ಸಲರು ಚುನಾವಣೆಯ ಸಮಯದಲ್ಲಿ ಮಾತ್ರವೇ ಅದೆಲ್ಲಿಂದ ಪ್ರತ್ಯಕ್ಷರಾಗುತ್ತಾರೆ? ಇದರ ಹಿಂದಿನ‌ ಸಂಚೇನು?

ಅದಲ್ಲವಾದರೆ… ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಬಳಕೆಯಾದ 350ಕೆಜಿ RDX ಎಲ್ಲಿಂದ ಬಂದಿತ್ತು? ಅದನ್ನು ಆ ಸ್ಥಳಕ್ಕೆ ತರುವಲ್ಲಿ ಯಾರೆಲ್ಲ ಭಾಗಿಯಾಗಿದ್ದರು? ಆರ್‌ಡಿಎಕ್ಸ್ ತರಲಾದ ಆ ಕಾರಿನ ಮಾಲಕರು ಯಾರು? ಆತ್ಮಹತ್ಯಾ ಬಾಂಬರ್ ಒಬ್ಬನಿಂದಲೇ ಇಷ್ಟೆಲ್ಲಾ ಮಾಡಲು ಸಾಧ್ಯವಿದೆಯೇ? ಒಬ್ಬನೇ ಮಾಡಿದ್ದರೆ ಅದರಿಂದ ಆ ಮೃತ ಭಯೋತ್ಪಾದಕನಿಗೆ ಆದ ಲಾಭವಾದರೂ ಏನು? ಖಂಡಿತವಾಗಿಯೂ ಆ ಘಟನೆಯ ಹಿಂದೆ ಯಾವುದಾದರೊಂದು ಬಲವಾದ ಕುತಂತ್ರ ಇದ್ದೇ ಇರಬೇಕಲ್ಲವೇ? ಆ ದಾಳಿಯ ಲಾಭ ಪಡೆದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಆ ದಾಳಿಯ ಹಿಂದಿನ ಸಂಚನ್ನು ಅದೇಕೆ ಈ ತನಕವೂ ತನಿಖೆ ನಡೆಸಿಲ್ಲ? ತನಿಖೆ ನಡೆಸದಿರುವ ಮೂಲಕ ಯಾರ ಹಿತಾಸಕ್ತಿಯ ರಕ್ಷಣೆ ಮಾಡಲಾಗುತ್ತಿದೆ? ಒಂದು ವೇಳೆ ತನಿಖೆ ನಡೆಸಲಾಗಿದೆಯಾದರೆ ಅದೇಕೆ ಆ ತನಿಖಾ ವರದಿಯನ್ನು ಈ ತನಕವೂ ಬಿಡುಗಡೆ ಮಾಡಿಲ್ಲ… ಇದರ ಹಿಂದಿನ ಮರ್ಮವಾದರೂ ಏನು? ಹಾಗಾದರೆ ಪಂಚ ರಾಜ್ಯ ಚುನಾವಣೆಯ ನಂತರ ಛತ್ತೀಸ್‌ಘಢದ ನಕ್ಸಲ್ ದಾಳಿ ಪ್ರಕರಣ ಪುಲ್ವಾಮಾ ರೀತಿಯಲ್ಲಿ ಹಳ್ಳ ಹಿಡಿಯಲಾರದು ಎನ್ನಲಾದೀತೆ?

ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತು ಚೀನಾ ಮಿಲಿಟರಿ ದಾಳಿ ಪ್ರಕರಣಗಳು ಮೋದಿ ಸರ್ಕಾರದ ವೈಫಲ್ಯವಾಗಿದ್ದರೂ ಅದನ್ನು ಆ ರೀತಿಯಾಗಿ ಜನಮಾನಸದಲ್ಲಿ ಪ್ರತಿಪಾದಿಸುವಲ್ಲಿ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ವಿಫಲವಾದ ಹಿನ್ನಲೆಯಲ್ಲಿ ಮೋದಿ ಸರ್ಕಾರ ಅವುಗಳ ಪರೋಕ್ಷ ಲಾಭವನ್ನು ಪಡೆದು ದೇಶದಾದ್ಯಂತ ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು ವಿಪರ‌್ಯಾಸವೇ ಸೈ!__________________________________

►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares