Advertisement

'ಪೋಲಿಯೋ ಮುಕ್ತ ಭಾರತ' ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.

Advertisement

ಬರಹ: ಓಸ್ಕರ್ ಲುವಿಸ್ ಪೋಲಿಯೋ ವೈರಸ್ ಭಾದೆಗೆ ತುತ್ತಾದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದ ನಮ್ಮ ದೇಶವು ಪೋಲಿಯೋ ವೈರಸ್ ವಿರುದ್ಧ ಸೆಣಸಾಡಿ ಕೊನೆಗೊಂದು ದಿನ WHO ನಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಮಾನ್ಯತೆ ಗಳಿಸಿಕೊಂದಿರುವುದರ ಹಿಂದೆ ಒಂದು ದೀರ್ಘ ಇತಿಹಾಸವಿದೆ.. ಆ ಇತಿಹಾಸದಲ್ಲಿ ತಟ್ಟೆ ಬಡಿತ, ಡೊಳ್ಳು ಕುಣಿತ, ದೀಪ, ದೊಂಧಿ, ಸುಡು ಮದ್ದುಗಳಂತಹ ಹುಚ್ಚಾಟಗಳಿರಲಿಲ್ಲ, ಭಾಷಣ, ಘೋಷಣೆಯಂತಹ ನಾಟಕಗಳಿರಲಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮವನ್ನು ಉತ್ಸವವಾಗಿ ಸಂಭ್ರಮಿಸಲು ಕರೆಕೊಡುವ ಅಮಾನವೀಯ ಹಪಾಹಪಿ ಇರಲಿಲ್ಲ, ಇನ್ನು ಜನರಲ್ಲಿ ಸಾಕ್ಷರತೆ ಕಮ್ಮಿಯಿದ್ದರೂ ಅದನ್ನು ಉತ್ಸವವಾಗಿ ಸಂಭ್ರಮಿಸುವಷ್ಟು ಮೂರ್ಖತನವೂ ಇರಲಿಲ್ಲ. 1978 ರಿಂದ 2014ರವರೆಗಿನ 36 ವರ್ಷಗಳ ಈ ಸುದೀರ್ಘ ಸೆಣಸಾಟದಲ್ಲಿ ಹಲವು ಏಳುಬೀಳುಗಳು, ಸವಾಲುಗಳು.. ನಾಗರಿಕರ ಶೈಕ್ಷಣಿಕ ಮಟ್ಟ ಇಂದಿನಷ್ಟಿರಲಿಲ್ಲ, ಸರಕಾರ ಮತ್ತು ನಾಗರಿಕರ ನಡುವೆ ಇಂದಿನಷ್ಟು ಸಂಹವನ ಸಾಧ್ಯವಿರಲಿಲ್ಲ, ರೇಡಿಯೋ, ಟಿವಿ ಮೊದಲಾದ ಮಾಧ್ಯಮಗಳು ದೇಶದ ಅದೆಷ್ಟೋ ಹಳ್ಳಿಗಳನ್ನು ತಲುಪಿಯೇ ಇರಲಿಲ್ಲ, ವೈದ್ಯಕೀಯ ಸವಲತ್ತುಗಳು ಇಂದಿನಷ್ಟು ಆಧುನಿಕವಾಗಿರಲಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ರೋಗ ಬಂದಾಗ ಅದನ್ನು ದೇವರ ಶಾಪವೆಂದೋ, ದೆವ್ವದ ಕಾಟವೆಂದೋ ಇಲ್ಲಾ ಪಾಪದ ಫಲವೆಂದೋ ಭಾವಿಸಿ ವೈದ್ಯರ ಬದಲಿಗೆ ಮಂತ್ರ-ತಾಂತ್ರಿಕರ ಬಳಿಗೆ ಓಡಿ ಹೋಗುವ ಮೌಢ್ಯತೆ ದೇಶದ ಹೆಚ್ಚಿನ ಜನರ ಮನಸ್ಸಿನಲ್ಲಿ ಮನೆ ಮಾಡಿತ್ತು. ಇಂತಹ ಪರಿಸ್ಥಿತಿಯಲ್ಲಿ 1978ನೇ ಇಸವಿಯಲ್ಲಿ ನಮ್ಮ ದೇಶದಲ್ಲಿ ಮೊತ್ತ ಮೊದಲ ಪೋಲಿಯೋ ಲಸಿಕೆ Oral Polio Vaccine (OPV) ಯ ಪ್ರಯೊಗವಾಗುತ್ತದೆ. ಅಲ್ಲಿಂದ ಮುಂದೆ ಒಂದೊಂದೇ ಸೀಮಿತತೆಗಳನ್ನು ಮುರಿದು, ಎದುರಾದ ಎಲ್ಲಾ ಸವಾಲುಗಳನ್ನು ಒಂದೊಂದಾಗಿ ಮಟ್ಟ ಹಾಕುತ್ತಾ ಇದು ದೇಶದ ಹಳ್ಳಿ ಹಳ್ಳಿಗಳಿಗೂ ವ್ಯಾಪಿಸುತ್ತದೆ. 1995 ರಲ್ಲಿ ವೆಲ್ಲೂರು ಜಿಲ್ಲೆಯಿಂದ ಮೊದಲ್ಗೊಂಡು ತಮಿಳುನಾಡು ರಾಜ್ಯ ದೇಶದ ಮೊದಲ ಪೋಲಿಯೋ ಮುಕ್ತ ರಾಜ್ಯವಾದ ನಂತರ ಅಲ್ಲಿನ ಸೂತ್ರವನ್ನೇ ರಾಷ್ಟ್ರವ್ಯಾಪಿ ಜಾರಿಗೊಳಿಸಲಾಯಿತು. ಮುಂದಿನ ನಾಲ್ಕು ವರ್ಷಗಳಲ್ಲಿ ಅಂದರೆ 1999ರಲ್ಲಿ ದೇಶದ ಸುಮಾರು 60% ಮಕ್ಕಳು ಪೋಲಿಯೋ ಲಸಿಕೆ ಪಡೆಯುವಂತಾಯಿತು. ಇಷ್ಟೆಲ್ಲಾ ಆದರೂ ಭಾರತದ ಜನಸಂಖ್ಯೆಗೆ ಬಹುಪಾಲು ಕೊಡುಗೆ ನೀಡುವ ದೇಶದ ಮೂರು ಅತೀ ದೊಡ್ಡ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಲಸಿಕೆ ಅಭಿಯಾನಕ್ಕೆ ನಿರೀಕ್ಷಿತ ಯಶಸ್ಸು ದೊರಕಿರಲಿಲ್ಲ.. ಜನರ ಶೈಕ್ಶಣಿಕ ಮಟ್ಟ, ಮೌಢ್ಯತೆ ಹಾಗೂ ಕಟ್ಟಾ ಧಾರ್ಮಿಕತೆ ಇದರ ಹಿಂದಿನ ಮುಖ್ಯ ಕಾರಣಗಳು! 2001 ರಲ್ಲಿ UNICEF ಸಹಯೋಗದೊಂದಿಗೆ ಮುಖ್ಯವಾಗಿ ಈ ಮೂರು ರಾಜ್ಯಗಳನ್ನು ಹಾಗೂ ಪೋಲಿಯೋ ಲಸಿಕೆ ಆಭಿಯಾನ ಪರಿಣಾಮಕಾರಿಯಾಗಿ ತಲುಪದ ದೇಶದ ಇತರ ಹಳ್ಳಿಗಳನ್ನು ಗಮನದಲ್ಲಿಟ್ಟುಕೊಂಡು - ಲಸಿಕೆ ಕೇಂದ್ರಗಳ ವರೆಗೆ ಬಾರದ ಜನರ ಬಳಿಗೆ ಲಸಿಕೆಯನ್ನು ಒಯ್ಯುವ ಅಭಿಯಾನ ಶುರುವಾಯಿತು. ಇಂದಿಗೂ ಈ ಅಭಿಯಾನ ಪ್ರತೀ ಗ್ರಾಮದಲ್ಲೂ ಪಲ್ಸ್ ಪೋಲಿಯೋ ಲಸಿಕೆ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ರೇಡಿಯೋ ಟಿವಿಗಳು ಬಳಕೆಗೆ ಬಂದಿದ್ದ ಅಂದಿನ ಕಾಲದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನು ಈ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಬಳಸಲಾಯ್ತು.. "ದೋ ಬೂoದ್ ಜಿಂದಗಿ ಕೆ" ಎಂದೇ ಈ ಅಭಿಯಾನ ಜನಪ್ರಿಯವಾಗಿ ದೇಶವ್ಯಾಪಿ ಹರಡಿತು. ದೇಶದಲ್ಲಿ ಕೊನೆಯ ಎರಡು ಪೋಲಿಯೋ ಪ್ರಕರಣಗಳು ವರದಿಯಾಗಿದ್ದು 2011 ಜನವರಿಯಲ್ಲಿ - ಗುಜರಾತ್ ಮತ್ತು ಪಶ್ಚಿಮ ಬಂಗಾಳಗಳದಲ್ಲಿ. ಮುಂದೆ ಮೂರು ವರ್ಷಗಳ ವೀಕ್ಷಣಾ ಅವಧಿಯೊಳಗೆ ಯಾವುದೇ ಹೊಸ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ, 2014 ಮಾರ್ಚ್ 27ರಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮದೇಶವನ್ನು ಅಧಿಕೃತವಾಗಿ ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿತು! ಇದು, ಮೂರು ದಶಕಗಳಿಗೂ ಹೆಚ್ಚುಕಾಲ ದೇಶವನ್ನು ನಿರಂತರ ಕಾಡಿದ್ದ, ಪ್ರತೀ ದಿನವೊಂದಕ್ಕೆ ಸರಾಸರಿ 500ರ ಲೆಕ್ಕದಲ್ಲಿ "ದೇಶದ ಭವಿಷ್ಯವಾಗಬೇಕಿದ್ದ ಮಕ್ಕಳನ್ನು" ಅಂಗವೈಕಲ್ಯಕ್ಕೆ ದೂಡುತ್ತಿದ್ದ ಮಹಾಮಾರಿಯೊಂದರಿಂದ ನಮ್ಮ ದೇಶವು ಮುಕ್ತಿ ಪಡೆದ ಯಶೋಗಾಥೆ. ದೇಶದ ಆಡಳಿತ ಚುಕ್ಕಾಣಿ ಹಿಡಿದವರಿಂದ ಮೊದಲ್ಗೊಂಡು, ಮೆಡಿಕಲ್ ರಿಸರ್ಚ್ ಸೆಂಟರ್ ಗಳು, ಇತರ ವೈದ್ಯಕೀಯ ಸಂಸ್ಥೆಗಳು, ಅರೋಗ್ಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು, ರೋಟರಿ ಕ್ಲಬ್ ಗಳು, ಸ್ವಯಂಸೇವಕರು ಒಟ್ಟಾಗಿ ತೋರಿದ ಧನಾತ್ಮಕ ಮನೋಭಾವ, ಜೀವಪರ ಚಿಂತನೆ, ವೈಜ್ಞಾನಿಕ ಕಾರ್ಯವಿಧಾನಗಳು, ನಿರಂತರ ಪರಿಶ್ರಮ ಹಾಗೂ ಬದ್ಧತೆಯ ಫಲಶ್ರುತಿ! ಕೊರೋನಾ ನಮ್ಮ ದೇಶದೊಳಗೆ ಕಾಲಿಡುವ ಮೊದಲೇ ಅಂತರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸಿ ಈ ಮಹಾಮಾರಿಯಿಂದ ಪಾರಾಗುವ ಅವಕಾಶ ನಮಗಿತ್ತು, ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರು ಈ ಕುರಿತು ಸೂಚನೆಯನ್ನು ಕೂಡಾ ನೀಡಿದ್ದರು. ಆದರೆ 'ನಮಸ್ತೇ ಟ್ರಂಪ್' ಎನ್ನುವ ಸ್ವಪ್ರತಿಷ್ಟೆಯ ಪರಾಕಾಷ್ಟೆಯಲ್ಲಿ ಆ ಅವಕಾಶ ಕೊಚ್ಚಿ ಹೋಯಿತು. ಅಲ್ಲಿಂದ ಮುಂದೆ ಅವೈಜ್ಞಾನಿಕ ಲಾಕ್‌ಡೌನ್, ಕರ್ಫ್ಯೂ ಮುಂತಾದ ಕ್ರಮಗಳು ಉದ್ಯೋಗ ಕಡಿತದಿಂದ ಹಿಡಿದು ಅವಶ್ಯ ವಸ್ತುಗಳ ಬೆಲೆಯೇರಿಕೆ ಒರೆಗಿನ ಅಡ್ಡ ಪರಿಣಾಮಗಳನ್ನು ಬೀರಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡು ಉದರಪೋಷಣೆಗೆ ದಿನನಿತ್ಯದ ದುಡಿಮೆಯನ್ನು ನಂಬಿಕೊಂಡಿರುವ ದೇಶವಾಸಿಗಳು ಹೈರಾಣಾಗಿ ಕೂತಿರುವ ಸಮಯದಲ್ಲೇ ದೇಶದಲ್ಲೊಂದು 'ಉತ್ಸವ' ಶುರುವಾಗಿರುವ ಹಿನ್ನೆಲೆಯ್ಲಲ್ಲಿ ಮೇಲಿನ ಯಶೋಗಾಥೆಯನ್ನು ಸ್ಮರಿಸಿಕೊಳ್ಳಬೇಕಾಯಿತು! ಇಂದು ನಮ್ಮ ದೇಶದಲ್ಲಿ ಪೋಲಿಯೋ ಇಲ್ಲ, ಆದರೆ ದೇಶದ ಸದ್ಯದ ಪರಿಸ್ಥಿತಿ ಮಾತ್ರ ಪೋಲಿಯೋ ಪೀಡಿತರಿಗಿಂತಲೂ ಜಾಸ್ತಿ ಅಂಕು ಡೊಂಕಾಗಿದೆ! ಕೆಲವೇ ದಿನಗಳ ಹಿಂದೆ ಮಿತ್ರ ಅಲ್ಮೇಡಾ ಗ್ಲಾಡ್‌ಸನ್ ಅವರು ತಮ್ಮ ಪೋಸ್ಟೊಂದರಲ್ಲಿ ಉಲ್ಲೇಖಿಸಿದ್ದರು - ಒಂದು ಕಾಲದಲ್ಲಿ ಈ ದೇಶಕ್ಕೆ ಭವಿಷ್ಯವಿತ್ತು. ಆದರೆ ಈಗ ಇತಿಹಾಸ ಮಾತ್ರ ಉಳಿದಿದೆ! ಅಂದಹಾಗೆ "ನಾನು, ನನ್ನದು, ನನ್ನಿಂದ" ಅನ್ನುವ ಒಣಪ್ರತಿಷ್ಟೆಯ ಸರದಾರರು ಅಧಿಕಾರದ ಖುರ್ಚಿಯನ್ನೇರಿದ್ದು 2014 ಮೇ 26ರಂದು, ಅಂದರೆ ಭಾರತವು ಅಧಿಕೃತವಾಗಿ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಣೆಯಾದ ಬರೋಬ್ಬರಿ ಎರಡು ತಿಂಗಳ ನಂತರ! ಒಂದು ವೇಳೆ ಆತ ಅಧಿಕಾರಕ್ಕೆ ಬಂದ ನಂತರವೇನಾದರೂ ನಮ್ಮ ದೇಶ ಈ ಮೈಲಿಗಲ್ಲನ್ನು ಮುಟ್ಟಿದ್ದರೆ, ಅಷ್ಟೂ ಲಕ್ಷ ಜನಗಳ ನಿಸ್ವಾರ್ಥಿ ಸೇವೆ ಮತ್ತು ಪರಿಶ್ರಮದ ಫಲವನ್ನು ಒಬ್ಬರ ಹೆಸರಿಗೆ ದಾಖಲಾಗಿ ಬಿಡುತಿತ್ತೇನೋ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement