Advertisement

ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!

Advertisement

ಇಂದಿನಿಂದ ನಾಲ್ಕು ದಿನಗಳ ಕಾಲ ದೇಶದಾದ್ಯಂತ 'Tika Utsav' (ಲಸಿಕೆ ಅಭಿಯಾನ) ನಡೆಯಲಿದೆ... ಆ ಕುರಿತು ಟ್ವಿಟರ್, ಫೇಸ್‌ಬುಕ್‌ ಮುಂತಾದ ಸಾಮಾಜಿಕ ಜಾಲತಾಣದಲ್ಲಿ 'ತಿಕ ಉತ್ಸವ' ಎಂದೆಲ್ಲಾ ವ್ಯಂಗ್ಯಭರಿತ ಟ್ರೋಲ್ ಆರಂಭಗೊಂಡಿದೆ. ಆದರೆ ಅದು ಸರಿಯಲ್ಲ. ಏಕೆಂದರೆ ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ ಎಂದುಕೊಳ್ಳೋಣ. ಮತ್ತು ಲಸಿಕಾ ಅಭಿಯಾನವನ್ನು ಸ್ವಾಗತಿಸೋಣ! ಅಲ್ಲದೇ ಆ ವ್ಯಾಕ್ಸಿನ್ ಸಂಶೋಧನೆ ಮಾಡಿದವರು ನಮ್ಮ ಹೆಮ್ಮೆಯ ವಿಜ್ಞಾನಿಗಳು. ಸ್ವಾತಂತ್ರ್ಯ ನಂತರ ಸ್ಥಾಪಿತವಾದ ಸರ್ಕಾರಿ ಸಂಸ್ಥೆಗಳಲ್ಲಿ ಓದಿ, ಕಲಿತು ಈ ಮಟ್ಟಕ್ಕೆ ಬೆಳೆದವರು ಅವರುಗಳು. ವ್ಯಾಕ್ಸಿನ್ ತಯಾರಿಸಿದ ಕಂಪೆನಿಗಳು ಅಪ್ಪಟ ಭಾರತೀಯ ಕಂಪೆನಿಗಳು. ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾ ಮುಂತಾದ ನಾಯಕರ ದೂರದರ್ಶಿತ್ವದ ನೀತಿಗಳ ಫಲವಾಗಿ ಜನ್ಮ ತಳೆದ ಕಂಪನಿಗಳು ಅವು. ಅವುಗಳು ನಮ್ಮ ದೇಶದ ಹೆಮ್ಮೆ. ಅಂದಿನ ನಾಯಕರುಗಳ ಮುಂದಾಲೋಚನೆಯ ಫಲವಾಗಿ ಇಂದು ವ್ಯಾಕ್ಸಿನ್ ಗಾಗಿ ಯಾರದ್ದೋ ಮುಂದೆ ಕೈಒಡ್ಡುವ ಸ್ಥಿತಿಯಲ್ಲಿ ನಾವಿಲ್ಲ! ಬದಲಿಗೆ ಹಲವು ರಾಷ್ಟ್ರಗಳಿಗೆ ನಾವು ವ್ಯಾಕ್ಸಿನ್ ಪೂರೈಸುವ ಮಟ್ಟದಲ್ಲಿ ಬೆಳೆದಿದ್ದೇವೆ. ಇದು ನಿಜಕ್ಕೂ ನಾವು ಸಂಭ್ರಮಿಸುವ ವಿಚಾರವಾಗಿದೆ. ಹಾಗಾಗಿ ಆ ವ್ಯಾಕ್ಸಿನ್ ತಯಾರಿಕಾ ಕಂಪೇನಿಗಳಿಗೆ ಮತ್ತದನ್ನು ಸಂಶೋಧಿಸಿದ ವಿಜ್ಞಾನಿಗಳಿಗೆ ನಾವೆಲ್ಲರೂ ಶಿರಬಾಗಿ ಅಭಿನಂದನೆ ಸಲ್ಲಿಸಬೇಕಾಗಿದೆ. ಹೌದು, ಲಸಿಕೆ ಅಭಿಯಾನದ ವಿಚಾರದಲ್ಲಿ ನಾವು ಯಾವುದೇ ಸಣ್ಣ ತಕರಾರು ಕೂಡ ಎತ್ತಬಾರದು. ಆದರೆ ಪ್ರಧಾನಿ ಮೋದಿಯವರು ಕೊರೊನಾ ತಡೆಯ ಕುರಿತು ಈ ಒಂದು ವರ್ಷದಲ್ಲಿ ತಗೆದುಕೊಂಡ ನಿರ್ಣಯಗಳ ವಿಚಾರದಲ್ಲಿ ನಾವು ಖಂಡಿತವಾಗಿಯೂ ತಕರಾರು ಎತ್ತಬೇಕಾಗಿದೆ. ಏನದು ತಕರಾರು? ಯಾಕೆ ತಕರಾರು? ತಕರಾರು ಸರಿಯೇ, ತಪ್ಪೇ? ಈ ಕುರಿತು ತಿಳಿಯಲು ಕೆಳಗಿನ ಲೇಖನವನ್ನು ವಿವರವಾಗಿ ಓದಿ. 2019ರ ನವೆಂಬರ್ 17ರಂದು ಚೀನಾದಲ್ಲಿ ವಿಶ್ವದಲ್ಲೆ ಪ್ರಪ್ರಥಮವಾಗಿ ಕೊರೊನಾ ಕಾಣಿಸಿಕೊಂಡಿತು.ಅಮೆರಿಕಾದಲ್ಲಿ ಇದರ ಪ್ರಥಮ ಪ್ರಕರಣ ಪತ್ತೆಯಾದದ್ದು ಜನವರಿ 20 ರಂದು. ಹಾಗೆಯೇ ಭಾರತದಲ್ಲಿ ಪ್ರಥಮ ಪ್ರಕರಣ ಪತ್ತೆಯಾದದ್ದು ಜನವರಿ 29 ರಂದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯವರು ಟ್ವೀಟ್ ಮಾಡಿ ಕೊರೊನಾ ಕುರಿತು ಈಗಿಂದೀಗಲೇ ಕ್ರಮ ಕೈಗೊಳ್ಳುವಂತೆ ಪ್ರದಾನಿ ಮೋದಿಯವರನ್ನು ಆಗ್ರಹಿಸಿದ್ದು ಪೆಬ್ರವರಿ 12ರಂದು. ಮೋದಿ ಟ್ರಂಪ್ ಜೋಡಿ ಕೈಕೈ ಹಿಡಿದು, ಅಪ್ಪಿಕೊಂಡು ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಭಾರತದಲ್ಲಿ ನಡೆಸಿದ್ದು ಫೆಬ್ರವರಿ 24 ರಂದು. ಅದರಲ್ಲಿ ಭಾಗಿಯಾದ ಜನರ ಸಂಖ್ಯೆ ಬಿಜೆಪಿ ಪಕ್ಷ ಘೋಷಿಸಿದ ಪ್ರಕಾರ 1ಲಕ್ಷಕ್ಕೂ ಮಿಗಿಲು. ಮಾರ್ಚ್ 22ರಂದು ಜನತಾ ಕರ್ಪ್ಯೂ ಆಚರಿಸುವಂತೆ ಮೋದಿ ದೇಶದ ಜನತೆಗೆ ಕರೆ ಕೊಟ್ಟದ್ದು ಮಾರ್ಚ್ 19ರಂದು ರಾತ್ರಿ 8 ಗಂಟೆಗೆ. ಪ್ರಥಮ ಕೊರೋನಾ ಪ್ರಕರಣ ದಾಖಲಾದೊಡನೆಯೆ ನಿಷೇದಿಸಬೇಕಾಗಿದ್ದ ಅಂತರ್ರಾಷ್ಟ್ರೀಯ ವಿಮಾನಗಳನ್ನು ಮೋದಿ ಸರ್ಕಾರ ನಿಷೇದಿಸಿದ್ದು ಮಾರ್ಚ್‌ 22ರಂದು.''ಇಂದು ರಾತ್ರಿ 8pm ಗೆ ಮತ್ತೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದೇನೆ'' ಎಂದು ಮೋದಿ ಟ್ವೀಟ್ ಮಾಡಿದ್ದು ಮಾರ್ಚ್ 24ರ ಬೆಳಿಗ್ಗೆ. ಮಾರ್ಚ್ 24ರ ರಾತ್ರಿ 8 ಗಂಟೆಗೆ ಪ್ರದಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಘೋಷಣೆ ''ಇಂದು ರಾತ್ರಿ 12 ಗಂಟೆಯಿಂದ ನಿರಂತರ 21ದಿನಗಳ ಕಾಲ ಕಡ್ಡಾಯವಾಗಿ ಲಾಕ್‌ಡೌನ್ ಘೋಷಿಸಲಾಗಿದೆ. ಯಾರೂ ಮನೆಯಿಂದ ಹೊರಬರಕೂಡದು. ಬಸ್, ರೈಲು ಮುಂತಾದ ಎಲ್ಲಾ ವಾಹನಗಳನ್ನು ನಿಷೇಧಿಸಲಾಗಿದೆ" ಎಂದಾಗಿತ್ತು. ಹಾಗೆಯೇ ಅಂದು ಕೊರೊನಾ ಲಾಕ್‌ಡೌನ್ ಘೋಷಿಸಲ್ಪಟ್ಟಾಗ ಈ ದೇಶದಲ್ಲಿದ್ದ ಕೊರೊನಾ ಪಾಸಿಟಿವ್ ಸಂಖ್ಯೆ 'ಕೇವಲ 497'. ಆ ಬೆರಳೆಣಿಕೆಯಷ್ಟು ಜನರಿಗೆ ಕಡ್ಡಾಯ ಮತ್ತು ಕಟ್ಟುನಿಟ್ಟಾದ ಕೊರಂಟೈನ್ ಮಾಡಿಸಿ, ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಿದ್ದರೆ ಈ ದೇಶದ 137ಕೋಟಿ ಜನರನ್ನು ಲಾಕ್‌ಡೌನ್ ಹೆಸರಲ್ಲಿ ಮನೆಗಳಲ್ಲಿ ಕೂರಿಸುವ ಅಥವಾ ವಲಸೆ ಕಾರ್ಮಿಕರನ್ನು ಹೊಟ್ಟೆಗಿಲ್ಲದೆ ಬೀದಿ ಹೆಣಗಳಾಗಿಸುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರಲಿಲ್ಲ. ಇದೊಂದು ಐತಿಹಾಸಿಕ ಪ್ರಮಾದ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. 'ಯಾವುದೇ ಒಂದು ದೇಶದ ಆಡಳಿತಗಾರನಾಗಿದ್ದವನು ಮೂರ್ಖನಾಗಿದ್ದರೆ, ಆತನ ಮೂರ್ಖತನದ ಪರಿಣಾಮಗಳನ್ನು ಆ ದೇಶದ ಜನ ಶತಮಾನಗಳಷ್ಟು ದೀರ್ಘಕಾಲ ಅನುಭವಿಸ ಬೇಕಾಗುತ್ತದೆ' ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ! ಕಳೆದ ವರ್ಷ ಮಾರ್ಚ್ 25ರಂದು ಲಾಕ್‌ಡೌನ್ ಘೋಷಿಸುವ ಬದಲಾಗಿ ನಮ್ಮ ಸರ್ಕಾರ ಇನ್ನೂ ಆರಂಬಿಕ ಹಂತದಲ್ಲಿದ್ದ ಕೋರೊನಾ ಈ ದೇಶದೊಳಗೆ ನುಸುಳುವುದನ್ನು ತಡೆಯುವ ಪ್ರಕ್ರೀಯೆ ಆರಂಭಿಸಬೇಕಿತ್ತು. ಅದಕ್ಕಿದ್ದ ಏಕೈಕ ಹಾಗೂ ಅಂತಿಮ ಮಾರ್ಗವೇ ಈ ಮೇಲೆ ಹೇಳಿದಂತೆ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸುವುದು ಮಾತ್ರವೇ ಆಗಿತ್ತು. ಈ ಕುರಿತು ಕಳೆದ ವರ್ಷ ಜನವರಿ ಕೊನೆಯ ವಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿದ್ದರಾದರೂ ಅದನ್ನು ಮೋದಿ ಸರ್ಕಾರ ಮತ್ತವರ ಕ್ಯಾಬಿನೆಟ್ ಸಚಿವರು ಲಘುವಾಗಿ ತಗೆದುಕೊಂಡು ರಾಹುಲ್ ರನ್ನು ಮಾಧ್ಯಮಗಳ ಮೂಲಕ ಗೇಲಿ ಮಾಡಿದ್ದರು. ಕೊರೊನಾ ಕುರಿತು ಜಾಗ್ರತೆ ವಹಿಸಿ ಜನರನ್ನು ರಕ್ಷಿಸಬೇಕಾಗಿದ್ದ ಸರ್ಕಾರ ಅದಕ್ಕೆ ಬದಲಾಗಿ ತಾನೇ ಸ್ವತಃ ಫೆಬ್ರವರಿ ಎರಡನೇ ವಾರದಲ್ಲಿ 'ನಮಸ್ತೆ ಟ್ರಂಪ್' ಕಾರ್ಯಕ್ರಮ ರೂಪಿಸಿತ್ತು ಮತ್ತು ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿತ್ತು. ಆದರೆ ಆ ಸಮಯದಲ್ಲಿ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಕೋವಿಡ್19 ರುದ್ರ ತಾಂಡವ ಆರಂಭಿಸಿತ್ತು. ಸಾವುಗಳ ಸಂಖ್ಯೆ ಮಿತಿ ಮೀರಿತ್ತು.ಅವರುಗಳಿಗಂತೂ ಲಾಕ್‌ಡೌನ್ ಮಾತ್ರವೇ ಅಂತಿಮ ಪರಿಹಾರವಾಗಿತ್ತು. ಕೈಮೀರಿದ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿದ್ದವು ಆ ರಾಷ್ಟ್ರಗಳು. ಜನರ ರಕ್ಷಣೆಯೇ ಆ ಲಾಕ್‌ಡೌನ್ ನ ಪ್ರಮುಖ ಉದ್ದೇಶವಾಗಿತ್ತು. ಬಹುಶಃ ನಾವು ಕಂಡಂತೆ ಆ ಎಲ್ಲಾ ರಾಷ್ಟ್ರಗಳು ಲಾಕ್‌ಡೌನ್ ಎದುರಿಸಲು ಪೂರ್ವತಯಾರಿ ಮಾಡಿಕೊಂಡಿದ್ದವು. ಅದು ನಡುರಾತ್ರಿಯ ತೀರ್ಮಾನಗಳಾಗಿರಲಿಲ್ಲ ಮತ್ತು ತಿಂಗಳುಗಟ್ಟಲೆ ಯೋಚಿಸಿ, ಸಂಪುಟ ಸಭೆಗಳಲ್ಲಿ ಚರ್ಚಿಸಿ, ಆರೋಗ್ಯ- ಆಹಾರ- ರಕ್ಷಣೆ- ವಿತ್ತ ಮುಂತಾದ ತಜ್ಞರ ಅಭಿಪ್ರಾಯ ಪಡೆದು ತಗೆದುಕೊಂಡ ತೀರ್ಮಾನಗಳಾಗಿದ್ದವು ಅವು. ಆದರೆ ಆ ಸಮಯದಲ್ಲಿ ಸದಾ ವಿದೇಶ ಪ್ರವಾಸಗಳ ಮತ್ತು ನಮಸ್ತೆ ಟ್ರಂಪ್ ಕಾರ್ಯಕ್ರಮದ ಹ್ಯಾಂಗೋವರ್ ನಲ್ಲಿದ್ದ ನಮ್ಮ ಪ್ರಧಾನಿ ಮೋದಿಯವರು ದೇಶದ ಮುಖ್ಯಮಂತ್ರಿಗಳ, ಅಧಿಕಾರಿಗಳ, ತಜ್ಞರ ಯಾವುದೇ ಸಭೆ ನಡೆಸದೇ, ಚರ್ಚಿಸದೇ, ದೇಶದ ಜನರಿಗೆ ಯಾವುದೇ ಮುನ್ಸೂಚನೆ ನೀಡದೆ ರಾತ್ರೋರಾತ್ರಿ ಲಾಕ್‌ಡೌನ್ ಘೋಷಿಸಿ ಬಿಟ್ಟಿದ್ದರು. ಲಾಕ್‌ಡೌನ್ ಘೋಷಿಸಲ್ಪಟ್ಟ ಮರುದಿನ ಅಂದರೆ ಮಾರ್ಚ್ 25ರಂದು ಬೆಳಿಗ್ಗೆ ಇದ್ಯಾವುದರ ಪರಿವೆ ಇಲ್ಲದ ದೇಶದ ಬೇರೆ ಬೇರೆ ಭಾಗದಿಂದ ವಲಸೆ ಬಂದು ಬೀದಿಬದಿಯಲ್ಲಿ ಮಲಗಿ ಜೀವನ ನಡೆಸುತ್ತಿದ್ದ ಕಾರ್ಮಿಕರಿಗೆ ಶಾಕ್ ಕಾದಿತ್ತು... ಅಂದಂದಿನ ಕೂಲಿಯನ್ನು ಅಂದಂದು ಉಂಡು ಮಲಗುತ್ತಿದ್ದ ಅವರಿಗೆ 21ದಿನಗಳ ಕಾಲ ಉಣ್ಣಲೇನು ಮಾಡೋದು ಎಂಬ ಚಿಂತೆ ಆವರಿಸತೊಡಗಿತು. ಊರಿಗೆ ಹೋಗೋಣವೆಂದರೆ ಲಾಕ್‌ಡೌನ್ ಕಾರಣಕ್ಕೆ ಬಸ್ ಮತ್ತು ರೈಲುಗಳು ಕೂಡ ಇರಲಿಲ್ಲ. ಹತ್ತಿರದ ಊರಿನ ಕೂಲಿಕಾರರು ನಡೆದು ಹೋಗಲು ತೀರ್ಮಾನಿಸಿದಾಗ ಆದದ್ದಾಗಲಿ ಎಂದು ಉಳಿದವರೂ ನಡೆಯಲು ಆರಂಭಿಸಿದರು. ಕೆಲವರಲ್ಲಿ ಅಲ್ಪಸ್ವಲ್ಪ ಹಣ ಇತ್ತು ಮತ್ತೆ ಕೆಲವರಲ್ಲಿ ಅಲ್ಪಸ್ವಲ್ಪ ರೇಷನ್ ಇತ್ತು... ಹಲವೆಡೆ ಪೋಲಿಸರು, ಮುದುಕರು- ಗರ್ಭಿಣಿಯರು- ಎಳೆಮಕ್ಕಳೆನ್ನದೆ ಲಾಠಿ ಬೀಸತೊಡಗಿದರು. ಆದರೆ ಮುಂದೆ ಮುಂದೆ ಹೋಗುತ್ತಿದ್ದಂತೆಯೇ ಇದ್ದಬದ್ದ ಹಣ, ರೇಷನ್ ಕೂಡಾ ಖಾಲಿಯಾಗತೊಡಗಿತು. ಕೆಲವರು ನಡೆಯಲಾಗದೆ ಕುಸಿದು ಬಿದ್ದು ಸತ್ತರೆ ಇನ್ನು ಕೆಲವರು ಹಸಿವಿನಿಂದ ಸತ್ತರು ಮತ್ತೊಂದಷ್ಟು ಜನ ನಿರಾಶೆ, ಆತಂಕ, ಭಯಗಳಿಂದ ಸತ್ತರು. ಹಾಗೆಯೇ ಆ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮತ್ತೋರ್ವ ನಾಯಕ ರಾಹುಲ್ ಗಾಂಧಿಯವರು ಮೋದಿ ಸರ್ಕಾರಕ್ಕೆ ಪತ್ರ ಬರೆದು ಈ ಕೂಡಲೇ ಜನರ ಕಷ್ಟಕ್ಕೆ ಸ್ಪಂದಿಸುವಂತೆ ಆಗ್ರಹಿಸಿದ್ದರು. ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದ ಸಾರಾಂಶ: 'ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಅಂತಿಮ ಪರಿಹಾರವಲ್ಲ. ಇದರಿಂದ ಮನೆಯಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುವ ದೇಶದ ಕೋಟ್ಯಂತರ ಬಡಜನ ತೀವ್ರವಾದ ಗಾಬರಿ, ಆತಂಕ ಹಾಗೂ ಅತಂತ್ರ ಭಾವನೆಯಿಂದ ಗೊಂದಲಕ್ಕೀಡಾಗಿ ಭಯ ಭೀತರಾಗಿದ್ದಾರೆ. ದೇಶದ ವಿವಿದೆಡೆಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗಿರುವ ಕೋಟ್ಯಾಂತರ ಕಾರ್ಮಿಕರು ರಾತ್ರೋರಾತ್ರಿ ಘೋಷಿತವಾದ ಈ ಲಾಕ್‌ಡೌನ್ ನಿಂದ ಇದ್ದಲ್ಲಿ ಇರಲೂ ಆಗದೆ ವಾಪಾಸು ಸ್ವಗ್ರಾಮಕ್ಕೆ ತೆರಳಲೂ ಆಗದೆ ಅತಂತ್ರರಾಗಿದ್ದಾರೆ. ಭಾರತವನ್ನು ಪ್ರಪಂಚದ ಇತರ ರಾಷ್ಟ್ರಗಳಿಗೆ ಹೋಲಿಸಲಾಗದು. ಇಲ್ಲಿನ ಜನಗಳ ಜೀವನಪದ್ಧತಿ ವಿಭಿನ್ನವಾದುದು ಮತ್ತು ಸ್ವಾಭಿಮಾನದಿಂದ ಕೂಡಿದುದಾಗಿದೆ. ಇಲ್ಲಿನ ಹೆಚ್ಚಿನ ಬಡಜನರು ದಿನಗೂಲಿ ನಂಬಿಕೊಂಡು ಸಂಸಾರ ನಡೆಸುವವರಾಗಿದ್ದಾರೆ. ಈ ಲಾಕ್‌ಡೌನ್ ನಿಂದ ಆ ವರ್ಗ ಹಸಿವೆಗೆ ಬಲಿಯಾಗುವ ಅಪಾಯವಿದೆ. ಆ ಕಾರಣಕ್ಕಾಗಿ ಲಾಕ್‌ಡೌನ್ ಗೆ ಬದಲಾಗಿ ಸರ್ಕಾರ ಕೂಡಲೇ ಬೇರೇನಾದರೂ ವ್ಯವಸ್ಥೆ ಮಾಡಬೇಕು ಮತ್ತು ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು' ಎಂದು ಪತ್ರದಲ್ಲಿ ಆಗ್ರಹಿಸಿದ್ದರು. ಸೋನಿಯಾ ಗಾಂಧಿಯವರ ಪತ್ರದ ಸಾರಾಂಶ: ಬ್ಯಾಂಕ್‌ಗಳಿಗೆ ಪಾವತಿಸಬೇಕಿರುವ ಸಾಲದ ಕಂತುಗಳಿಗೆ ಆರು ತಿಂಗಳ ವಿನಾಯಿತಿ ಮಾಡಬೇಕು. ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಕೊರೊನಾ ವಿರುದ್ಧ ಹೋರಾಡಲು ಆರ್ಥಿಕ ಮತ್ತು ವೈದ್ಯಕೀಯ ಮಾರ್ಗಗಳನ್ನು ಅನುಸರಿಸಬೇಕು. ಅಸಂಘಟಿಕ ವಲಯದ ಕೃಷಿ ಕಾರ್ಮಿಕರು, ದಿನಗೂಲಿ ನೌಕರರು, ನರೇಗಾ ನೋಂದಾಯಿತರಿಗೆ, ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ನೇರವಾಗಿ ಹಣ ಪಾವತಿ ಮಾಡುವ ನಿರ್ಧಾರಗಳನ್ನು ಕೈಗೊಳ್ಳಬೇಕು. ಅಸಂಘಟಿಕ ವಲಯಕ್ಕೆ ಕನಿಷ್ಠ ಆದಾಯ ಕಲ್ಪಿಸುವ ಕಾಂಗ್ರೆಸ್‌ನ ‘ನ್ಯಾಯ್‌’ ಪರಿಕಲ್ಪನೆಯನ್ನು ಜಾರಿ ತರುವುದು ಈ ಹೊತ್ತಿನ ಅಗತ್ಯ. ಕಿಸಾನ್‌ ಯೋಜನೆ ಖಾತೆದಾರರಿಗೆ, ಜನಧನ ಖಾತೆದಾರರಿಗೆ, ಹಿರಿಯ ನಾಗರಿಕರಿಗೆ, ವಿದವೆಯರಿಗೆ, ಅಂಗವಿಕಲರ ಖಾತೆಗಳಿಗೆ ₹7500ಗಳ ನೆರವಿನ ಹಣ ಪಾವತಿಸಬೇಕು ಎಂದು ಅವರು ಆ ಪತ್ರದಲ್ಲಿ ವಿನಂತಿಸಿದ್ದರು. ಆದರೆ ಅದೇ ಸಮಯದಲ್ಲಿ ಲಾಕ್‌ಡೌನ್ ನಿಂದ ತಿನ್ನಲು ಅನ್ನಾಹಾರಗಳು ಇಲ್ಲದೇ, ಗಂಭೀರ ಕಾಯಿಲೆಗಳಿಂದ ನರಳುತ್ತಿರುವವರು ಸರಿಯಾದ ಚಿಕಿತ್ಸೆ ಇಲ್ಲದೇ ಸಾಯುತ್ತಿರುವ ದೇಶದ ಜನರ, ವಲಸೆ ಕಾರ್ಮಿಕರ ಪುನರ್ವಸತಿಗೆ ವ್ಯವಸ್ಥೆ ಮಾಡಬೇಕಿದ್ದ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರಧಾನಿಯವರು ರಾತ್ರೋರಾತ್ರಿ ಟಿವಿಗಳಲ್ಲಿ ಕಾಣಿಸಿಕೊಂಡು ದೇಶದ ಜನರೆಲ್ಲರೂ 'ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ' 'ಕ್ಯಾಂಡಲ್ ಹಚ್ಚುವಂತೆ' ಕರೆ ನೀಡಿ ನಗೆಪಾಟೀಲಾದದ್ದನ್ನು ಇಡೀ ಜಗತ್ತೇ ಕಂಡಿದೆ. ಅದನ್ನೆಲ್ಲ ನೋಡುವಾಗ ಬಹುಶಃ ಇದೀಗ ಘೋಷಿಸಲ್ಪಟ್ಟಿರುವ Tika utsav ಮೋದಿ ಸರ್ಕಾರದ ತಡವಾಗಿಯಾದರೂ ಕೈಗೊಂಡ ಒಂದು ಸರಿಯಾದ ಕ್ರಮವಾಗಿದೆ. ಕೇವಲ ಮೌಢ್ಯ ಸಾರುವ ಚಪ್ಪಾಳೆ ಮತ್ತು ಕ್ಯಾಂಡಲ್ ಸ್ಥಾನದಲ್ಲಿ ಇಂದು ನಮ್ಮ ಮೋದಿಯವರು ವ್ಯಾಕ್ಸಿನ್ ಗೆ ಸ್ಥಾನ ನೀಡಿರುವುದು ವಿಜ್ಞಾನಕ್ಕೆ ಸಿಕ್ಕ ಜಯ ಎನ್ನೋಣ. ಈ ಕುರಿತಾದಂತೆ ಲಾಕ್‌ಡೌನ್ ನಂತರ ಅಂತಾರಾಷ್ಟ್ರೀಯ ಮಾಧ್ಯಮ ಬಿಬಿಸಿ ಪ್ರಕಟಿಸಿರುವ ಎಲ್ಲರೂ ಓದಲೇಬೇಕಾದ ವರದಿಯ ಸಾರಾಂಶ; ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತ ದೇಶದಲ್ಲಿ ಕೊರೋನ ಹೆಸರಲ್ಲಿ ಲಾಕ್‌ ಡೌನ್‌ ಹೇರಿರುವ ಕಾರಣದಿಂದ ದೇಶಾದ್ಯಂತ ಸಾವಿರಾರು ಮಂದಿ ಕಷ್ಟಕ್ಕೀಡಾಗಿದ್ದು ಮಾತ್ರವಲ್ಲದೇ ಪ್ರಾಣ ಕಳೆದುಕೊಂಡಿದ್ದರು. "ಲಾಕ್‌ ಡೌನ್‌ ಹೇರುವ ಮುಂಚೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ತಜ್ಞರು ಅಥವಾ ಪರಿಣಿತರ ಸಲಹೆ ಪಡೆದಿರಲಿಲ್ಲ" ಎಂದು ವರದಿ ಮಾಡಿದೆ. ಬಿಬಿಸಿಯು ಒಟ್ಟು 240ಕ್ಕೂ ಹೆಚ್ಚು ಆರ್ಟಿಐ ಅರ್ಜಿಯನ್ನು ಸರಕಾರದ ವಿವಿಧ ಇಲಾಖೆಗಳಿಗೆ ಹಾಕಿತ್ತು. ಇದಕ್ಕೆ ಸಿಕ್ಕ ಉತ್ತರಗಳಲ್ಲಿ ʼಪ್ರಧಾನಿ ಮೋದಿಯು ಲಾಕ್‌ ಡೌನ್‌ ಸಂಬಂಧಿಸಿ ಯಾರನ್ನೂ ಸಂಪರ್ಕಿಸಿರಲಿಲ್ಲ ಎನ್ನುವುದು ನಿಚ್ಚಳವಾಗಿದೆʼ ಎಂದು ವರದಿ ತಿಳಿಸಿದೆ. ಭಾರತೀಯ ಗೃಹ ಇಲಾಖೆಯು ಈ ಸಂಬಂಧ ಹಲವು ಅರ್ಜಿಗಳಿಗೆ ಉತ್ತರ ನೀಡಲು ನಿರಾಕರಿಸಿತ್ತು ಮತ್ತು ಹಾರಿಕೆಯ ಉತ್ತರ ನೀಡಿ ಮುಂದುವರಿಯಲು ಪ್ರಯತ್ನಿಸಿತ್ತು ಎಂದು ವರದಿ ಉಲ್ಲೇಖಿಸಿದೆ. ಲಾಕ್‌ ಡೌನ್‌ ನಲ್ಲಿ ಹೆಚ್ಚಾಗಿ ಪೀಡಿತರಾಗಿದ್ದು, ಬಡವರು, ದಿನಗೂಲಿ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಸ್ಥರಾಗಿದ್ದಾರೆ. ಆಕಸ್ಮಿಕವಾಗಿ ಅವರ ಕೆಲಸಗಳೆಲ್ಲಾ ನಿಂತು ಹೋದ ಬಳಿಕ ಅವರು ಚಿಂತಾಕ್ರಾಂತರಾಗಿದ್ದರು. ಮಾತ್ರವಲ್ಲದೇ ವಲಸೆ ಕಾರ್ಮಿಕರು ಕೂಡಾ ಸಂಕಷ್ಟ ಅನುಭವಿಸಿದ್ದಾರೆ. ಗರ್ಭಿಣಿ ಮಹಿಳೆಯರು, ರೋಗಿಗಳು ಮತ್ತು ಅಪೌಷ್ಠಿಕತೆ ಹೊಂದಿರುವ ಮಕ್ಕಳು ಕೂಡಾ ಕಷ್ಟ ಅನುಭವಿಸಿದ್ದಾಗಿ ವರದಿ ತಿಳಿಸಿದೆ. ತಜ್ಞರ ಪ್ರಕಾರ "ಸರಿಯಾದ ಸಲಹೆ ಸೂಚನೆ, ಮಾರ್ಗದರ್ಶನಗಳಿಲ್ಲದೇ ಕೈಗೊಂಡ ನಿರ್ಧಾರದಿಂದಾಗಿ ಹಲವು ಸಾವು ನೋವುಗಳು ಸಂಭವಿಸಿತು" ಎಂದು ವರದಿ ತಿಳಿಸಿದೆ. "ಜನವರಿ ತಿಂಗಳಲ್ಲಿ ಕೊರೋನ ವೈರಸ್‌ ಹರಡಲು ಪ್ರಾರಂಭವಾಯಿತು. ಮಾರ್ಚ್‌ 25 ರಂದು ಲಾಕ್‌ ಡೌನ್‌ ಹೇರಲಾಯಿತು. ರಾತ್ರೋರಾತ್ರಿ ಲಾಕ್‌ ಡೌನ್‌ ಹೇರಲು ಇದು ಪ್ರವಾಹವೋ, ಅಥವಾ ಭೂಕಂಪವೋ ಅಲ್ಲ. ಸರಿಯಾಗಿ ಸಮಾಲೋಚನೆ ನಡೆಸಿ, ಒಂದಿಷ್ಟು ಸಮಯ ನೀಡಿ, ಎಲ್ಲಾ ಮೂಲೆಗಳಿಂದ ಸಲಹೆಗಳು ಪಡೆದು ಲಾಕ್‌ ಡೌನ್‌ ಹೇರಬಹುದಿತ್ತು" ಎಂದು ವರದಿ ಹೇಳುತ್ತದೆ. "ಲಾಕ್‌ ಡೌನ್‌ ಅನ್ನು ಉತ್ತಮವಾಗಿ ಯೋಜಿಸಲು ಅವಕಾಶವಿತ್ತು. ಇದು ರಾಜ್ಯಗಳು ಮತ್ತು ಜಿಲ್ಲೆಗಳನ್ನು ಅವಲಂಬಿಸಿ ವಿಕೇಂದ್ರೀಕೃತ ನಿರ್ಧಾರವಾಗಿರಬೇಕು. ಸಂಪೂರ್ಣ ಲಾಕ್‌ಡೌನ್ ಅಗತ್ಯವಿರಲಿಲ್ಲ. ಈಗ ಏನಾಗಿದೆ ಎಂಬುದು ಭಾರೀ ಆಘಾತಕರ ವಿಚಾರ. ಏಕೆಂದರೆ ಭಾರತೀಯ ಆರ್ಥಿಕತೆಯೂ ಕೂಡ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳುತ್ತದೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement