Advertisement

'ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?' ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.

Advertisement

'ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?' ಎಂಬ ಪೋಸ್ಟ್ ಕಳೆದೆರಡು ದಿನಗಳಿಂದ ಬಿಜೆಪಿ ಐಟಿ ಸೆಲ್ ಕಾರ್ಯಕರ್ತರ, ನಾಯಕರುಗಳ ಫೇಸ್‌ಬುಕ್‌, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳ ವಾಲ್‌ನಲ್ಲಿ ವಿಪುಲವಾಗಿ ಹರಿದಾಡುತ್ತಿದೆ... ಅದನ್ನು ನೀವೆಲ್ಲರೂ ಓದಿರುತ್ತೀರಿ. ಇತ್ತೀಚೆಗೆ ದೇಶಾಧ್ಯಂತ ನಡೆದ ಪಂಚರಾಜ್ಯ ಚುನಾವಣೆ, ಮತ್ತಿತರ ರಾಜ್ಯಗಳ ಲೋಕಸಭಾ, ವಿಧಾನಸಭಾ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ಬಳಿಕ ಈ ಪ್ರಶ್ನೆಯನ್ನು ಜನಮಾನಸದಲ್ಲಿ ಹರಿಯ ಬಿಡಲಾಗುತ್ತಿದೆ. ಇದನ್ನು ಓದಿದ ಕಾಂಗ್ರೆಸ್ ಕಾರ್ಯಕರ್ತರ ಮನದಲ್ಲೂ ಕೂಡ 'ಹೌದಲ್ಲವೇ' ಎಂಬ ಚಿಕ್ಕ ಸಂದೇಹ ಹುಟ್ಟು ಹಾಕಲಾಗುತ್ತದೆ. ಮೇಲ್ನೋಟಕ್ಕೆ ಅವರ ಪ್ರಶ್ನೆ ಸರಿಯಾಗಿದೆ ಅನ್ನಿಸುತ್ತದೆಯಾದರೂ ಅದು ಬಿಜೆಪಿಗರ 'ಮನಃಶಾಸ್ತ್ರೀಯ ತಂತ್ರಗಾರಿಕೆ' ಆಗಿದೆ ಮತ್ತು ಅದೊಂದು ತಂತ್ರಗಾರಿಕೆ ಎಂಬ ಕುರಿತು ಸಾಮಾನ್ಯವಾಗಿ ಯಾರೂ ಯೋಚಿಸುವುದಿಲ್ಲ ಮತ್ತು ಇದು ಕಾಂಗ್ರೆಸ್ ಮತ್ತಿತರ ಪಕ್ಷಗಳ ಒಂದು ದೌರ್ಬಲ್ಯ ಕೂಡ ಹೌದು. ಇಷ್ಟಾಗಿಯೂ, ತರ್ಕ ನಡೆಯಬೇಕಾದ ದಿಕ್ಕು 'ಇವಿಎಂ ಸರಿಯಾಗಿರಬಹುದು' ಎಂಬ ದಿಕ್ಕಿನಲ್ಲಲ್ಲ ಮತ್ತು ಬಿಜೆಪಿಗರ ಆ ಪ್ರಶ್ನೆಗೆ ಉತ್ತರಿಸಬೇಕಾದವರು ಕೂಡ ಕಾಂಗ್ರೆಸಿಗರಲ್ಲ, ಬದಲಿಗೆ ಸ್ವತಃ ಬಿಜೆಪಿಗರೇ ಆಗಿದ್ದಾರೆ... ಏಕೆಂದರೆ, 2014ರ ನಂತರ ಪ್ರತಿ ಉಪಚುನಾವಣೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭಾ ಚುನಾವಣಾ ಫಲಿತಾಂಶ ನೋಡಿದರೆ ಬಿಜೆಪಿಯ ಸಾಧನೆ ಅತ್ಯಲ್ಪ. ಕರ್ನಾಟಕ ಸೇರಿದಂತೆ ಹೆಚ್ಚಿನೆಡೆ ಅಪರೇಷನ್ ಕಮಲ ಸರ್ಕಾರ ಇದೆಯೇ ಹೊರತೂ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಸರ್ಕಾರ ಕೇವಲ ಬೆರಳೆಣಿಕೆಯಷ್ಟು ಮಾತ್ರ. 2014ರಲ್ಲಿ ಕೂಡ ಬಿಜೆಪಿ ಮೈತ್ರಿಕೋಟಕ್ಕೆ ಕೇಂದ್ರದಲ್ಲಿ ಬಂದ ಒಟ್ಟು ಓಟು ಕೇವಲ ಶೇಕಡಾ 31ಮಾತ್ರ. ಅಂದರೆ ದೇಶದಾದ್ಯಂತ 69 ಶೇಕಡಾ ಜನ ಬಿಜೆಪಿ ಮೈತ್ರಿಕೂಟಕ್ಕೆ ವಿರೋಧವಾಗಿದ್ದಾರೆ ಎಂದೇ ಅರ್ಥ ಅಲ್ಲವೇ? ಆ ನಂತರವೂ ಕೂಡ ಮೋದಿ ಸರ್ಕಾರ ಜಾರಿಗೊಳಿಸಿದ ನೋಟ್‌ಬ್ಯಾನ್, ಜಿಎಸ್‌ಟಿ ಮುಂತಾದ ಕ್ರಮಗಳು ಜನವಿರೋಧಿಯಾಗಿದ್ದವು. ಅವುಗಳು ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಿದ್ದವು. ಸಣ್ಣ, ಮಧ್ಯಮ ಉಧ್ಯಮಗಳು ಮುಚ್ಚಲ್ಪಟ್ಟವು. ಅವುಗಳು ಮುಚ್ಚಲ್ಪಟ್ಟ ಕಾರಣಕ್ಕಾಗಿ ಸಾಲ ಮರುಪಾವತಿಸಲಾಗದೆ ಬ್ಯಾಂಕ್ ಗಳು ದಿವಾಳಿಯಾದವು. ಉದ್ಯಮಗಳು ಮುಚ್ಚಲ್ಪಟ್ಟ ಕಾರಣಕ್ಕಾಗಿ ತೆರಿಗೆ ಸಂಗ್ರಹದಲ್ಲಿ ದಾಖಲೆಯ ಮಟ್ಟದಲ್ಲಿ ಕುಸಿತವಾಯಿತು. ಆ ಕಾರಣಕ್ಕಾಗಿ ಜಿಡಿಪಿ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಕುಸಿತ ಕಂಡಿತು. ಉಧ್ಯಮಗಳ ಜೊತೆ ಕಾರ್ಮಿಕರು ಬೀದಿಗೆ ಬಿದ್ದರು. ನಿರುದ್ಯೋಗದ ಮಟ್ಟ ಕಳೆದ 45ವರ್ಷಗಳಷ್ಟು ಹಿಂದಿನ ಮಟ್ಟಕ್ಕೆ ಕುಸಿಯಿತು. ಇಷ್ಟೆಲ್ಲದರ ಹೊರತಾಗಿಯೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಫಲಿತಾಂಶವೇ ಬಂದಿತ್ತು! ಇತರ ಪಕ್ಷಗಳು ದೂಳಿಪಟವಾಗಿದ್ದವು. ಈ ಸಮಯದಲ್ಲಿ ದೇಶದ ಬಹುಸಂಖ್ಯಾತರ ಪ್ರಶ್ನೆ 'ಇದು ಹೇಗಾಯಿತು?' ಎಂದೇ ಆಗಿತ್ತು. ಆರಂಭದಲ್ಲಿ ಹೇಳಿದಂತೆ ಸ್ಥಳೀಯ ಸಂಸ್ಥೆಯ ಚುನಾವಣೆ, ಉಪ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ಓಟು ಹಾಕದ ಮತದಾರರು ಅದೇಕೆ ಲೋಕಸಭಾ ಚುನಾವಣೆಯಲ್ಲಿ ಓಟು ಹಾಕುತ್ತಾರೆ? 2014 ರ ಚುನಾವಣೆಯಲ್ಲಿ ಗೆದ್ದು ಏನೂ ಕೆಲಸ ಮಾಡದೆ ಜನರಿಂದ 'ಗೋ ಬ್ಯಾಕ್... ' ಘೋಷಣೆ ಕೇಳಿದ್ದ ಕೆಲವು ಲೋಕಸಭಾ ಸದಸ್ಯರಗಳು ಕೂಡ 2019ರ ಚುನಾವಣೆಯಲ್ಲಿ ಲಕ್ಷಾಂತರ ಮತಗಳಿಂದ ಅದು ಹೇಗೆ ಗೆಲ್ಲಲು ಸಾಧ್ಯವಾಗಿದೆ? ಬಹುಶಃ ಇದೆಲ್ಲವನ್ನೂ ತರ್ಕಿಸುವಾಗ ಇವಿಎಂ ಮೇಲೆ ಅನುಮಾನ‌ ಸಹಜವಾಗಿಯೇ ಬರುತ್ತದೆ. ಹಾಗೆ ಆಗಿಲ್ಲ, ಜನರು ಓಟು ಹಾಕಿಯೇ ಮೋದಿ ಸರ್ಕಾರ ಪುನಃ ಆಡಳಿತಕ್ಕೆ ಬಂತು ಅನ್ನುವ ಸಂಪೂರ್ಣ ಭರವಸೆ ಬಿಜೆಪಿಗರಲ್ಲಿ ಇದ್ದರೆ ಅದೇಕೆ ಬಿಜೆಪಿಗರು ಇವಿಎಂ ಬ್ಯಾನ್ ಮಾಡಿ ಗೆದ್ದು ತೋರಿಸಬಾರದು? ಇಷ್ಟೆಲ್ಲಾ ಅಪವಾದಗಳು ಇದ್ದೂ ಕೂಡ ಅದೇಕೆ ಅವರು ಇವಿಎಂ ಬ್ಯಾನ್ ಮಾಡುತ್ತಿಲ್ಲ ಮತ್ತು ಅದೇಕೆ ಇಂತಹ 'ಬ್ರೈನ್ ವಾಷ್' ಪ್ರಶ್ನೆಗಳನ್ನು ಹರಿಯಬಿಡುತ್ತಿದ್ದಾರೆ? ಆ ಕಾರಣಕ್ಕಾಗಿ ಇತ್ತೀಚೆಗಿನ ಚುನಾವಣೆಗಳ ಫಲಿತಾಂಶ ಕಂಡು ಕಾಂಗ್ರೆಸ್ ಸಹಿತ, ದೇಶದ ವಿವಿಧ ಬಿಜೆಪಿಯೇತರ ಪಕ್ಷಗಳು ಮೈ ಮರೆಯದೆ, ಇವಿಎಂ ಮೆಷಿನ್ ನಿಷೇಧಿಸುವ ಕುರಿತು ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ಅಥವಾ ಅಭಿಯಾನ ಆರಂಭಿಸಬೇಕಾಗಿದೆ. ಆ ಮೂಲಕವಷ್ಟೇ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯವಿದೆ. ಅದಲ್ಲವಾದರೆ ಮುಂದೊಂದು ದಿನ ಈ ದೇಶದಲ್ಲಿ ಪ್ರಜಾಪ್ರಭುತ್ವವೂ ಇರಲಾರದು, ಬ್ರಿಟೀಷರಿಂದ ಸಿಕ್ಕ 'ಅಧಿಕಾರದ ಹಸ್ತಾಂತರದ ಸ್ವಾತಂತ್ರ್ಯ'ದ ಬಳಿಕ ಬಹು ಮುಖ್ಯವಾಗಿ ದೇಶದ ಬಹುಸಂಖ್ಯಾತ ಜನರಿಗೆ 'ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು' ಸಿದ್ಧಾಂತದ ಅಂಬೇಡ್ಕರ್ ಸಂವಿಧಾನದ ಮೂಲಕ ದೊರೆತ 'ಸ್ವಾತಂತ್ರ್ಯ' ಕೂಡಾ ಹರಣವಾಗುವ ಅಪಾಯವಿದೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement