ಉಡುಪಿ

ಜಾರಕಿಹೊಳಿ ಪ್ರಕರಣದ ಸಂತ್ರಸ್ತೆಗೆ ನ್ಯಾಯ ದೊರಕಿಸಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್

ಯಡಿಯೂರಪ್ಪ ಸರ್ಕಾರದಲ್ಲಿ ಪ್ರಭಾವೀ ಸಚಿವರಾಗಿದ್ದ ಶಾಸಕ ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ,ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ತನ್ಮೂಲಕ ಸಂತ್ರಸ್ಥೆಗೆ ನ್ಯಾಯ ದೊರಕಿಸಿಕೊಡಬೇಕು.ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.

ಈ ಪ್ರಕರಣವನ್ನು ಸರ್ಕಾರವು ನಿಭಾಯಿಸುತ್ತಿರುವ ರೀತಿ ನೋಡಿದಾಗ ಈ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ಯಾವ ರಕ್ಷಣೆಯೂ ಇಲ್ಲದಂತಾಗಿದೆ.ಮತ್ತು ಕಾನೂನಾತ್ಮಕ ರಕ್ಷಣೆ ದೊರಕಿಸುವುದು ಸಾಧ್ಯವಿಲ್ಲದಂತಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.ಪ್ರಕರಣದ ಸಂಬಂಧವಾಗಿ ಸಂತ್ರಸ್ತೆ ದೂರು ನೀಡಿದ ಬೆನ್ನಲ್ಲೇ ಮಾನ್ಯ ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಅವರು ಆರೋಪ ಮುಕ್ತರಾಗುತ್ತಾರೆ ಎಂದು ಹೇಳಿಕೆ ನೀಡಿದ್ದರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಪೋಲೀಸ್ ಅಧಿಕಾರಿಗಳ ಬಗ್ಗೆ ಹಸ್ತಕ್ಷೇಪ ಮಾಡುತ್ತಿರುವುದು ಮಾದ್ಯಮ ಗಳ ಮೂಲಕ ಸ್ಪಷ್ಟವಾಗಿ ತಿಳಿದು ಬರುತ್ತಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರವು ಅತ್ಯಾಚಾರದ ಆರೋಪಿಯನ್ನು ಬಂಧಿಸದೇ ಆರೋಪಿ ಯಾವುದೇ ಎಗ್ಗಿಲ್ಲದೆ ಓಡಾಡಿಕೊಂಡಿರಲು ಅವಕಾಶವನ್ನು ಮಾಡಿ ಕೊಟ್ಟಂತಾಗಿದೆ.ಸಂತ್ರಸ್ತೆಯ ಕುಟುಂಬದ ಸದಸ್ಯರ ಮೇಲೆ ಒತ್ತಡ ತರುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.ಪ್ರಕರಣದ ಸಿಡಿ ಬಿಡುಗಡೆಯಾದಾಗ ಅದರಲ್ಲಿರುವುದು ನಾನಲ್ಲ, ಇದರಲ್ಲಿ ವಿರೋಧ ಪಕ್ಷಗಳ ಕೈವಾಡ ಇದೆ ಎಂದಿದ್ದ ಜಾರಕಿಹೊಳಿ ಇದೀಗ ವಿಚಾರಣೆಯಲ್ಲಿ ಅದು ತಾನೇ ಎಂದು ಒಪ್ಪಿಕೊಂಡಿದ್ದರೂ ಇನ್ನೂ ಅವರ ಬಂಧನವಾಗಿಲ್ಲವೇಕೆ?ಎಂದು ಪ್ರಶ್ನಿಸಿದ್ದಾರೆ.

ತಮ್ಮ ಅಧಿಕಾರವನ್ನು ಯುವತಿಯೊಬ್ಬಳ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡು,ತಾವು ನಡೆಸಿದ ಅತ್ಯಾಚಾರ ಪ್ರಕರಣದಿಂದ ಪಾರಾಗಲು ಯತ್ನಿಸುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಪರವಾಗಿ ನಿಂತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಸಂತ್ರಸ್ತ ಯುವತಿಗೆ ನ್ಯಾಯ ಸಿಗುವುದು ಅನುಮಾನವಾಗಿದೆ.ಆದ್ದರಿಂದ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ,ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ , ಸಂತ್ರಸ್ತೆ ಗೆ ನ್ಯಾಯ ದೊರಕಿಸುವಂತೆ ಘನವೆತ್ತ ರಾಜ್ಯಪಾಲರು ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ರಾಜ್ಯದ ಸಮಸ್ತ ಮಹಿಳೆಯರ ಪರವಾಗಿ ಪತ್ರ ಮುಖೇನ ಮನವಿ ಮಾಡಿಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.__________________________________

►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com