ಉಡುಪಿ

ಯಡಮೊಗೆ ಕೊಲೆ ಪ್ರಕರಣದ ಆರೋಪಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಭಟ್‌ಗೆ ರಕ್ಷಣೆ ನೀಡಿದವರನ್ನು ಕೂಡಾ ಬಂಧಿಸಿ: ಉಡುಪಿ ಜಿಲ್ಲಾ ಕಾಂಗ್ರೆಸ್

‘ಯಡಮೊಗೆ ಗ್ರಾ.ಪಂ ಅಧ್ಯಕ್ಷರೆ, ಸರ್ವ ಸದಸ್ಯರೇ, ಊರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಮೊದಲು ಯಡಮೊಗೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸಿಗುವ ಹಾಗೆ ಮಾಡಿ. ಆಸ್ಪತ್ರೆಗೆ ಬೆಡ್ ವ್ಯವಸ್ಥೆ ಮಾಡಿ.‌ ಐಸೋಲೇಶನ್ ವ್ಯವಸ್ಥೆ ಮಾಡಿ. ಕೊರೊನಾ ಬಂದವರನ್ನು ಆಸ್ಪತ್ರೆಗೆ ಸೇರಿಸಿ., ಗುಣಮುಖರಾದವರನ್ನು ಮನೆಗೆ ಕಳಿಸಿ ಕೊಡಿ. ಬಡಕೂಲಿ ಕಾರ್ಮಿಕರು ಊಟಕ್ಕೆ ಏನು ಮಾಡುತ್ತಿದ್ದಾರೆ, ಅವರಿಗೆ ಏನು ಸಮಸ್ಯೆ ಇದೆ ಎಂದು ವಿಚಾರಿಸಿ. ಅದನ್ನು ಬಿಟ್ಟು ಊರಿಗೆ ಬೇಲಿ ಹಾಕಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಬೇಡಿ. ಅದರಿಂದ ಸರಕಾರದಿಂದ ಬಂದ 50 ಸಾವಿರ ರೂ. ನುಂಗಿ ನೀರು ಕುಡಿಯೋದು ಬಿಟ್ಟು ಏನೂ ಪ್ರಯೋಜನ ಇಲ್ಲ’ ಎಂದು ತನ್ನದೇ ಊರಿನ ಕೊರೋನಾ ಕಾರ್ಯಪಡೆಯ ದಬ್ಬಾಳಿಕೆ ಮತ್ತು ಅವೈಜ್ಞಾನಿಕವಾದ ‘ಗ್ರಾಮ ಲಾಕ್‌ಡೌನ್’ ವಿರುದ್ದ ತನ್ನ ವಾಟ್ಸ್ಯಾಪ್ ನಲ್ಲಿ ಸಾಮಾಜಿಕ ಕಳಕಳಿಯ ಸ್ಟೇಟಸ್ ಹಾಕಿದ ಸಾಮಾಜಿಕ ಕಾರ್ಯಕರ್ತ ಉದಯ ಗಾಣಿಗರವರ ಕೊಲೆಯ ಹಿಂದೆ ಬಿಜೆಪಿ ಪಕ್ಷದ ಹಿಂದಿನ ಮನುವಾದಿ ಚಿಂತನೆಯ ಹಾಗೂ ಮೂಲಭೂತ ವಾದಿಗಳ ವ್ಯವಸ್ಥಿತ ಹಿಡೆನ್ ಅಜೆಂಡಾ ಅಡಗಿದ್ದು, ಇದರಿಂದ ಬಿಜೆಪಿಯ ನೈಜ ಬಣ್ಣ ಬಯಲಾಗಿದೆ ಎಂದು ಯಡಮೊಗೆ ಕೊಲೆ ಪ್ರಕರಣದ ಕುರಿತು ಉಡುಪಿ ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷರಾದ ಅಶೋಕ್‍ಕುಮಾರ್‍ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಾಣೇಶ ಯಡಿಯಾಳನ ನಿರಂಕುಶ ಕಾರ್ಯವೈಖರಿ ಮತ್ತು ಅವ್ಯವಹಾರಗಳ ಬಗ್ಗೆ ಅಕ್ಷೇಪ ಮಾಡುತ್ತಿದ್ದ ಸಮಾಜಮುಖಿ ಚಿಂತನೆಯ ಉದಯ ಗಾಣಿಗರವರನ್ನು ಕೊಲೆ ಮಾಡುವುದು ಪ್ರಾಣೇಶ್ ಮತ್ತವನ ಹಂತಕ ಪಡೆಯ ಪೂರ್ವ ನಿಯೋಜಿತ ಪ್ಲಾನ್ ಆಗಿತ್ತು. ಅದರಲ್ಲಿ ಭವಿಷ್ಯತ್ತಿನ ರಾಜಕೀಯದ ದೂರದೃಷ್ಟಿಯು ಇತ್ತು ಎನ್ನಲಾಗಿದ್ದು, ಸುಫಾರಿ ಕೊಲೆಗಟುಕರು ಕೂಡ ಹೇಸುವ ರೀತಿಯಲ್ಲಿ ಮನೆಯ ಸಮೀಪ, ಹೆಂಡತಿ ಮಕ್ಕಳ ಎದುರೆ ಕಾರು ಹರಿಸಿ ಕೊಲೆ ಮಾಡುವುದರ ಹಿಂದೆ ಮತ್ತು ಕಾರನ್ನು ಅಲ್ಲಿಯೇ ತೊರೆದು ಬೇರೊಂದು ಕಾರಿನಲ್ಲಿ ಪರಾರಿಯಾಗಿರುವುದರ ಹಿಂದೆ ಕಾನೂನಿನಿಂದ ನುಣುಚಿಕೊಳ್ಳುವ ಹಾಗೂ ಆ ಮೂಲಕ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ಅಡಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊಲೆಯಾದ ಉದಯಗಾಣಿಗರ ಹೆಂಡತಿಯೇ ತನ್ನ ದೂರಿನಲ್ಲಿ ಈ ಬಗ್ಗೆ ಆರೋಪಿಸಿದ್ದರಿಂದ ಈ ನೀಚ ಕೃತ್ಯವೆಸಗಿದವರೆನ್ನಲಾದ ಪ್ರಧಾನ ಆರೋಪಿ ಬಿಜೆಪಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್‍ ಅಗ್ರಹಾರ ಹಾಗೂ ಕೊಲೆಗಡುಕರಿಗೆ ಆಶ್ರಯ ನೀಡಿದವರನ್ನೂ ಕೂಡ ಬಂಧಿಸಿ ಜಾಮೀನುರಹಿತ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆ ಕೊಡಿಸುವ ಮೂಲಕ ಮೃತ ಉದಯ ಗಾಣಿಗರವರ ಹೆಂಡತಿ, ಎಳೆ ಮಕ್ಕಳು ಹಾಗೂ ಸಂತೃಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಜಿಲ್ಲಾಡಳಿತವನ್ನು ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

__________________________________

►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com