ಗಣರಾಜ್ಯೋತ್ಸವ ಪರೇಡ್ ನಲ್ಲಿ ವಿಶ್ವಮಾನವತೆಯ ಪ್ರತಿಪಾದಕ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ತಿರಸ್ಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮನುವಾದಿ ಬಣ್ಣ ಬಯಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ಕೇಂದ್ರ ಸರಕಾರದ ನಿಲುವನ್ನು ಖಂಡಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿಕೊಂಡು ಬಂದಿದ್ದ ಒಂದೇಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶ್ವ ಕುಟುಂಬ ಚಿಂತನೆಯ ಸಿದ್ಧಾಂತ ವರ್ತಮಾನದ ಆದ್ಯತೆಯಾಗಿದೆ. ಆದರೆ ಆಳುವ ಸರಕಾರ ಅವರ ಸ್ತಬ್ದ ಚಿತ್ರವನ್ನು ತಿರಸ್ಕರಿಸುವ ಮೂಲಕ ತಾನು ಈ ಸಿದ್ಧಾಂತದ ವಿರೋಧವಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಿದ್ದಷ್ಟೇ ಅಲ್ಲ ಬಹುಸಂಖ್ಯಾತ ಹಿಂದೂಗಳ ನಂಬಿಕೆಗೆ ದ್ರೋಹ ಮಾಡಿದೆ ಎಂದು ಅವರು ಹೇಳಿದ್ದಾರೆ. ಕಳೆದ ಆರೇಳು ವರ್ಷಗಳಿಂದ ದೇಶಾದ್ಯಂತ ನಡೆದ ದಲಿತರು, ಹಿಂದುಳಿದವರು, ಮುಗ್ಧ ಮಹಿಳೆಯರು, ಬುದ್ದಿ ಜೀವಿಗಳು ಹಾಗೂ ಸಾಹಿತಿಗಳ ಮೇಲೆ ನಡೆದ ದಾಳಿಗಳು, ಅವರ ಮೇಲೆ ಹೊರೆಸಿದ ದೇಶದ್ರೋಹದ ಪ್ರಕರಣಗಳು ಈ ಸರಕಾರದ ಮೂಲಭೂತವಾದಿ ಸಿದ್ಧಾಂತಕ್ಕೆ ಕನ್ನಡಿ ಹಿಡಿದಿವೆ. ಅಂತವರಿಗೆ ಸಹಜವಾಗಿಯೇ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ದಾಂತ ಕಹಿಯಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಆ ನೆಲೆಯಲ್ಲಿ ಪ್ರಜಾಪ್ರಭುತ್ವದ ಮೇರುರಥದಿಂದ ನಾರಾಯಣ ಗುರುಗಳನ್ನು ಹೊರಹಾಕಲಾಗಿದೆ ಎಂದು ಅವರು ಖೇಧ ವ್ಯಕ್ತಪಡಿಸಿದ್ದಾರೆ.
ಬಿಪಿನ್‌ಚಂದ್ರ ಪಾಲ್ ನಕ್ರೆ ಆಕ್ರೋಶ!
ಗಣರಾಜ್ಯೋತ್ಸವ ಪರೇಡಿನಲ್ಲಿ ನಡೆಯುವ ಸ್ತಬ್ಧ ಚಿತ್ರ ಪ್ರದರ್ಶನಕ್ಕಾಗಿ ಕೇರಳ ಸರಕಾರ ಕಳುಹಿಸಿದ ಜಟಾಯುಪ್ಪಾರ ಹಿನ್ನೆಲೆಯುಳ್ಳ ಶ್ರೀ ನಾರಾಯಣ ಗುರು ಪ್ರತಿಕೃತಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ವಿಶ್ವದ ಒಬ್ಬ ಮಹಾ ಮಾನವತಾವಾದಿ ಹಾಗೂ ಅವರು ಪ್ರತಿ ಆಪಾದನೆ ಮಾಡಿಕೊಂಡು ಬಂದ ಸಾಮಾಜಿಕ ಸಿದ್ದಾಂತಕ್ಕೆ ಮಾಡಿದ ರಾಷ್ಟ್ರೀಯ ಅವಮಾನ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರಹ್ಮ ಶ್ರೀ ನಾರಾಯಣ ಗುರುಗಳು ೧೯ನೇ ಶತಮಾನದ ಕೇರಳದ ಅಮಾನವೀಯ ಜಾತಿಪದ್ಧತಿ, ಶೂದ್ರ ಜನಾಂಗದ ಮಹಿಳೆಯರ ಸ್ತನಕ್ಕೂ ತೆರಿಗೆ ಹಾಕುವ ಮೂಲಭೂತವಾದಿ, ಜನ ವಿರೋಧಿ ನೀತಿಯೇ ಮೊದಲಾದ ಸಾಮಾಜಿಕ ಶೋಷಣೆಯ ವಿರುದ್ಧ ಹೋರಾಡಿದವರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಪ್ರತಿಪಾದನೆಯ ಬ್ರಹ್ಮ ಶ್ರೀ ನಾರಾಯಣ ಗುರುಗಳು ತನ್ನ ಸಾಮಾಜಿಕ ಕ್ರಾಂತಿಯ ಸಾಧನೆಯ ಗರಡಿಯಲ್ಲಿ ಆದಿ ಶಂಕರಾಚರ‍್ಯರ ಅದ್ವೈತ ಸಿದ್ಧಾಂತಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದವರೂ ಆಗಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ ಎಂದು ಹೇಳಿದ್ದಾರೆ.
ಸ್ತಬ್ಧ ಚಿತ್ರ ಆಯ್ಕೆ ಸಮಿತಿ ಈ ಪ್ರತಿಕೃತಿಯನ್ನು ಪುರಸ್ಕರಿದ್ದರ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಸರಕಾರ ಈ ಶೂದ್ರ ಸನ್ಯಾಸಿಯ ಪ್ರತಿಕೃತಿಯನ್ನು ತಿರಸ್ಕರಿಸಿ ಆದಿ ಶಂಕರಾಚರ‍್ಯರ ಪ್ರತಿಕೃತಿಯ ಸ್ತಬ್ಧ ಚಿತ್ರವನ್ನು ಕಳುಹಿಸುವಂತೆ ಕೇರಳ ಸರಕಾರಕ್ಕೆ ಸೂಚಿಸಿರುವುದು ಖಂಡನೀಯ. ಈ ಪ್ರಕ್ರಿಯೆಯ ಔಚಿತ್ಯದ ಹಿಂದೆ ಮನುವಾದಿ ಸಂಸ್ಕ್ರತಿಯ ಪುರೋಹಿತಶಾಹಿ ವ್ಯವಸ್ಥೆಯ ಕೈವಾಡವಿದೆ. ಇದು ದೇಶದ ಪ್ರಜಾತಂತ್ರಕ್ಕೆ ಮಾರಕವಷ್ಟೇ ಅಲ್ಲ ಬಿಜೆಪಿ ಆಡಳಿತದ ಬಗ್ಗೆ ದೇಶ ವಾಸಿಗಳು ಆತ್ಮಾವಲೋಕನ ಮಾಡಲೇ ಬೇಕಾದ ಕಾಲಘಟ್ಟವೂ ಆಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: