Advertisement

'ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ' ಎಂಬ ಡಿಕೆಶಿ ಹೇಳಿಕೆ ಮತ್ತು ಬಿಜೆಪಿಯ ಅಮಿಷದ, ಬೆದರಿಕೆಯ ರಾಜಕಾರಣ!

Advertisement
'ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಒಪ್ಪದಿದ್ದದ್ದಕ್ಕೆ ಕೇಸು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿ, ಟ್ವೀಟ್ ಮಾಡುವ ಮೂಲಕ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಆ ಮೂಲಕ ಬಿಜೆಪಿಯ ಅಮಿಷದ ಮತ್ತು ಬೆದರಿಕೆಯ ರಾಜಕಾರಣ ಲೋಕದೆದುರು ಅನಾವರಣಗೊಂಡಿದೆ.

ತಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಬಹುಮತ ಬಾರದಿದ್ದರೆ ವಿರೋಧ ಪಕ್ಷಗಳ ಶಾಸಕರುಗಳ, ನಾಯಕರುಗಳ ವೈಯಕ್ತಿಕ ವ್ಯವಹಾರಗಳಲ್ಲಿನ ಸಣ್ಣ ಪುಟ್ಟ ಹುಳುಕುಗಳನ್ನು ಪತ್ತೆಹಚ್ಚಿ ಅವರುಗಳ ವಿರುದ್ಧ ಐ.ಟಿ., ಈ.ಡಿ., ಸಿಬಿಐ ಮುಂತಾದ ತನಿಖಾ ಸಂಸ್ಥೆಗಳ ಮೂಲಕ ಕೇಸು ದಾಖಲಿಸಿ, ಶಿಕ್ಷಿಸುವ ಬೆದರಿಕೆಯೊಡ್ಡಿ ಮತ್ತು ತಮ್ಮ ಪಕ್ಷಕ್ಕೆ ಸೇರ್ಪಡೆಗೊಂಡರೆ, ಕೇಸನ್ನು ಖುಲಾಸೆಗೊಳಿಸುವ ಮತ್ತು ದೊಡ್ಡ ಮೊತ್ತದ ಹಣವನ್ನು ಪಾವತಿಸುವ ಅಥವಾ ಅವರನ್ನು ಸಚಿವರನ್ನನಾಗಿಸುವ ಅಮಿಷ ಒಡ್ಡಿ ಆ ಮೂಲಕ ಅಪರೇಷನ್ ಕಮಲ ಮಾಡಿ ಸರ್ಕಾರ ರಚಿಸುವುದು ಬಿಜೆಪಿಯ ಒಂದು ಮಾಮೂಲು ಶೈಲಿಯಾಗಿದೆ.

ಅದೇ ಶೈಲಿಯನ್ನು ಮುಂದುವರೆಸಿ, ಅಪರೇಷನ್ ಕಮಲ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಗಳ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವ ವಿರೋಧ ಪಕ್ಷಗಳ ಇನ್ನಿತರ ನಾಯಕರುಗಳ ಹುಳುಕುಗಳನ್ನು ಪತ್ತೆಹಚ್ಚಿ ಕೇಸು ದಾಖಲಿಸಿ ಅವರ ಬಾಯಿಯನ್ನು ಮುಚ್ಚಿಸುವುದು, ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಒತ್ತಡ ಹೇರುವುದು, ಅವರು ಹಣಕಾಸಿನ ವಿಚಾರದಲ್ಲಿ ಅಥವಾ ಜನಪ್ರಿಯತೆಯ ವಿಚಾರದಲ್ಲಿ ಪ್ರಭಾವಿಯಾಗಿದ್ದರೆ, ವಿರೋಧ ಪಕ್ಷದೊಳಗಿದ್ದೂ ಯಾವುದೇ ಹುಳುಕಿಲ್ಲದ ಸಚ್ಚಾರಿತ್ರ್ಯವಂತರಾಗಿದ್ದರೆ "ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ" ಎಂದು ಹೊಗಳಿ ಉಬ್ಬಿಸಿ, ಅವರ ನಿಕಟ ಸಂಪರ್ಕ ಪಡೆದು "ನೀವು ನಮ್ಮ ಪಕ್ಷಕ್ಕೆ ಬನ್ನಿ, ನಿಮಗೆ ಉನ್ನತ ಸ್ಥಾನ ಮಾನ ನೀಡಲಾಗುವುದು" ಎಂಬ ಅಮಿಷ ಒಡ್ಡಿ, ಅದಕ್ಕೂ ಅವರುಗಳು ಬಗ್ಗದಿದ್ದರೆ ಅವರ ಹೆಂಡತಿ ಮಕ್ಕಳಲ್ಲಿ ಮತ್ತವರ ಕಟ್ಟಾ ಬೆಂಬಲಿಗರಲ್ಲಿ ಈ ಕುರಿತು ತಲೆಕೆಡಿಸಿ, ಆ ನಾಯಕರು ತಮ್ಮ ಪಕ್ಷಕ್ಕೆ ಸೇರುವಂತೆ ಮಾಡಿ, ಅವರಿಗಿದ್ದ ಏಕೈಕ ಶಕ್ತಿಯಾದ "ಸೈದ್ಧಾಂತಿಕ ಬದ್ದತೆ" ಯನ್ನು ಕುಲಗೆಡಿಸಿ ಆ ನಂತರ ಅವರುಗಳಿಗೆ ಯಾವುದೇ ಅವಕಾಶ ನೀಡದೆ, ಅವರಿಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಂಡು ಮೂಲೆಗುಂಪು ಮಾಡುವುದು ಬಿಜೆಪಿ ಪಕ್ಷವನ್ನು ನಿಯಂತ್ರಿಸುತ್ತಿರುವ ಸಂಘಿ ನಾಯಕರುಗಳ ಮತ್ತೊಂದು ತಂತ್ರಗಾರಿಕೆಯಾಗಿದೆ.

ಅದಕ್ಕೆ ಉದಾಹರಣೆ ಎಂಬಂತೆ ಕರ್ನಾಟಕದಲ್ಲಿ ಮತ್ತು ರಾಷ್ಟ್ರದಾದ್ಯಂತ ಹಲವಾರು ಘಟಾನುಘಟಿ ನಾಯಕರುಗಳು ಬಿಜೆಪಿ ಸೇರಿ ತಮ್ಮ ಅಥವಾ ತಮ್ಮವರ ಮೇಲಿರುವ "ಕೇಸುಗಳನ್ನು ಖುಲಾಸೆಗೊಳಿಸಿಕೊಂಡು ರಾಜಕೀಯ ನಿವೃತ್ತಿ ಪಡೆದಿರುವುದು" ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯ ಮೂಲಕ ಪುನಃ ಆಯ್ಕೆಯಾಗಿ "ಆಪರೇಷನ್ ಕಮಲ ಸರ್ಕಾರದಲ್ಲಿ ಸಚಿವ ಪದವಿ ಪಡೆದು ಐಷಾರಾಮಿ ಜೀವನ ಸಾಗಿಸುತ್ತಿರುವುದು" ಅಥವಾ "ಸೈದ್ಧಾಂತಿಕವಾಗಿ ಕುಲಗೆಟ್ಟು" ಮೂಲೆಗುಂಪಾಗಿರುವುದನ್ನು ಕೂಡ ಕಾಣಬಹುದಾಗಿದೆ.

ಇದಕ್ಕೆ ಹೊರತಾಗಿ ತಮ್ಮನ್ನು ತಾವು ಯಾವುದೇ ಪಕ್ಷದ ರಾಜಕಾರಣದಲ್ಲಿ ತೊಡಗಿಸಿಕೊಳ್ಳದೆ ಕೇವಲ ಜನಪರ ಕಾಳಜಿಯನ್ನು ಹೊಂದಿ‌, ದೇಶದ ಜನರಲ್ಲಿ ಬಿಜೆಪಿ ಮತ್ತು‌ ಸಂಘಿ ನಾಯಕರುಗಳು ಹೊಂದಿರುವ ಹಿಡೆನ್ ಅಜೆಂಡಾದ ಕುರಿತು ಸದಾ ಹೇಳಿಕೆಗಳನ್ನು ಕೊಡುವ, ಸಾರ್ವಜನಿಕವಾಗಿ ಹೋರಾಟ ಮಾಡುವ ಪ್ರಗತಿಪರ ಚಿಂತನೆಯ ವ್ಯಕ್ತಿಗಳ ವಿರುದ್ದ ಅವರು "ಹಿಂದೂ ವಿರೋಧಿ" ಎಂದು ಆಧಾರರಹಿತವಾಗಿ ಅಪಪ್ರಚಾರ ಮಾಡಿ, ಆ ಅಪಪ್ರಚಾರದಿಂದ ಬ್ರೈನ್‌ವಾಷ್‌ಗೊಳಗಾದ ದುಷ್ಕರ್ಮಿಗಳು ಆ ಪ್ರಗತಿಪರರಿಗೆ ಬೆದರಿಕೆ ಒಡ್ಡುವಂತೆ, ಅವರುಗಳ ಮೇಲೆ ದಾಳಿ ಮಾಡುವಂತೆ, ಕೊಲೆ ಮಾಡುವಂತೆ ಪ್ರೇರೆಪಿಸುವುದು ಕೂಡ ಆ ಸಂಘಟನೆಯ ಮತ್ತೊಂದು ಕಾರ್ಯತಂತ್ರವಾಗಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಕೊಡುವುದಾದರೆ ಜನಪರ ಚಿಂತಕರಾದ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣ ಮತ್ತು ಇತ್ತೀಚಿನ 61 ಮಂದಿ ಜನಪರ ಚಿಂತಕರಿಗೆ ಬೆದರಿಕೆ ಒಡ್ಡಿದ ಪ್ರಕರಣಗಳನ್ನು ಗಮನಿಸಬಹುದಾಗಿದೆ. ಆ 61 ಮಂದಿಯಲ್ಲಿ ನಾಡಿನ ಪ್ರಮುಖರಾದ
ಸಾಹಿತಿ ಕುಂ. ವೀರಭದ್ರಪ್ಪ, ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ (ಸಿದ್ದರಾಮಯ್ಯ ಅವಧಿ) ಹಾಗೂ ಜನಪರ ಚಿಂತಕ ದಿನೇಶ್ ಅಮಿನ್ ಮಟ್ಟು, ಪ್ರಗತಿಪರ ನ ಚಿಂತಕರಾದ ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಸ್ವಾಮೀಜಿ, ಜನಪ್ರಿಯ ನಟ ಪ್ರಕಾಶ ರೈ, ಮತ್ತಿತರರು ಸೇರಿದ್ದಾರೆ.

ಇದೆಲ್ಲದರ ಹೊರತಾಗಿಯೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿಯವರು ತನ್ನ ಟ್ವೀಟ್ ನಲ್ಲಿ ''BJP ಪಕ್ಷಕ್ಕೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಒಪ್ಪದಿದ್ದದ್ದಕ್ಕೆ ಸಂಚು ರೂಪಿಸಲಾಗಿದೆ. ಸರ್ಕಾರಿ ಸಂಸ್ಥೆಗಳು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿವೆ. ನನ್ನನ್ನು ಹೆದರಿಸುವುದು ಅಷ್ಟು ಸುಲಭವಲ್ಲ. ಬಿಜೆಪಿಯ 40% ಕಮಿಷನ್ ಸರ್ಕಾರದಿಂದ ನಾಡಿನ ಜನ ಬೇಸತ್ತಿದ್ದಾರೆ. ಈ ರಾಜಕೀಯ ಸೇಡಿಗೆ ಸರಿಯಾದ ಉತ್ತರ ಸಿಗಲಿದೆ. ಸಚಿವರೊಬ್ಬರು 40% ಕಮಿಷನ್‌ ಕೇಳಿದ್ದಕ್ಕೆ ಕಾಂಟ್ರ್ಯಾಕ್ಟರ್‌ ಆತ್ಮಹತ್ಯೆ ಮಾಡಿಕೊಂಡರು. ರಾಜ್ಯ ಸರ್ಕಾರವು 40% ಕಮಿಷನ್‌ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘ ಸಾರ್ವಜನಿಕವಾಗಿ ಹೇಳಿದೆ. BJP ಪ್ರಾಯೋಜಿತ PSI ಹಗರಣ ಭೇದಿಸಿದ್ದರಿಂದ ಪೊಲೀಸ್ ನೇಮಕಾತಿ ಸ್ಥಗಿತಗೊಂಡಿದೆ. ಆದರೂ ಯಾರ ಮೇಲೂ ದಾಳಿ ನಡೆದಿಲ್ಲ, ಚಾರ್ಜ್ ಶೀಟ್ ಹಾಕಿಲ್ಲ'' ಎಂದು ಹೇಳುವ ಮೂಲಕ ಬಿಜೆಪಿಯ ಯಾವ ಬೆದರಿಕೆಗೂ ನಾನು ಬಗ್ಗಲಾರೆ" ಎಂದವರು ವಿವರಿಸಿದ್ದಾರೆ. ಡಿಕೆಶಿಯವರ ಈ ಹೇಳಿಕೆ ರಾಜ್ಯದ ರಾಜಕಾರಣದಲ್ಲಿ ಹೊಸತೊಂದು ಅಯಾಮ ಪಡೆಯಲಿದೆ ಎಂಬ ಮಾತು ನಾಡಿನ ಜನಪರ ಚಿಂತಕರ ವಲಯದಲ್ಲಿ ವ್ಯಕ್ತವಾಗಿದೆ. ಕಾದು ನೋಡೋಣ ಏನಂತೀರಾ?

ಡಿಕೆಶಿಯವರ ಟ್ವೀಟ್‌ನ ಲಿಂಕ್:





ಚಂದ್ರಶೇಖರ ಶೆಟ್ಟಿ, ಪ್ರಧಾನ ಸಂಪಾದಕರು.
Advertisement
Advertisement
Recent Posts
Advertisement