Advertisement

ರಾಹುಲ್ ಗಾಂಧಿ ಭಾಗವಹಿಸಿದ್ದ ಮದುವೆ ಸಮಾರಂಭದ ವೀಡಿಯೋವನ್ನು 'ನೈಟ್ ಕ್ಲಬ್‌ ಪಾರ್ಟಿ' ಎಂದು ಅಪಪ್ರಚಾರ ನಡೆಸಿದ ಬಿಜೆಪಿ ಐಟಿ ಸೆಲ್

Advertisement
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ಐಟಿ ಸೆಲ್ ಮತ್ತಿತರ ನಾಯಕರು ಮಂಗಳವಾರ ಹಸಿಹಸಿಯಾದ ಸುಳ್ಳು ಆರೋಪ ಮಾಡಿ ಅಪಪ್ರಚಾರ ನಡೆಸಿದ್ದಾರೆ. ಸಿಎನ್‌ಎನ್ ನ ಮಾಜಿ ಪತ್ರಕರ್ತ ಮಿತ್ರರ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ನೇಪಾಳಕ್ಕೆ ತೆರಳಿರುವ ರಾಹುಲ್ ಅವರ ಕುರಿತು  "ನೈಟ್‌ಕ್ಲಬ್ ನಲ್ಲಿ ಭಾರತದ ವೈರಿರಾಷ್ಟ್ರ ಚೀನಾದ ಮಹಿಳಾ ರಾಯಭಾರಿ ಹೌ ಯಾಂಕಿ ಯವರ ಜೊತೆ ಪಾರ್ಟಿ" ಎಂದು ಅಪಪ್ರಚಾರ ನಡೆಸಿದೆ. ಈ ಕುರಿತಾದ ವಿಡಿಯೋ ತುಣುಕೊಂದನ್ನು ಕೂಡ ಬಿಜೆಪಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅದೇ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, "ಮುಂಬಯಿ ಆಕ್ರಮಣಕ್ಕೆ ಒಳಗಾದಾಗ ರಾಹುಲ್ ಗಾಂಧಿ ನೈಟ್ ಕ್ಲಬ್‌ನಲ್ಲಿದ್ದರು. ತಮ್ಮ ಪಕ್ಷ ಸ್ಫೋಟಿಸುತ್ತಿರುವ ಸಂದರ್ಭದಲ್ಲಿ ಕೂಡ ಅವರು ನೈಟ್‌ಕ್ಲಬ್‌ನಲ್ಲಿದ್ದಾರೆ. ಅವರು ಸ್ಥಿರತೆ ಪ್ರದರ್ಶಿಸುತ್ತಿದ್ದಾರೆ" ಎಂದು ಕಟಕಿಯಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು "ಮುಂಬಯಿ ದಾಳಿ ನಡೆಯುವಾಗಲೂ ರಾಹುಲ್ ಪ್ರಧಾನಿಯಾಗಿರಲಿಲ್ಲ. ಈಗಲೂ ಪ್ರಧಾನಿಯಲ್ಲ. ಹಾಗಾದರೆ ಅವರಿಗೆ ನಮ್ಮ ನಿಮ್ಮಂತೆ ವೈಯಕ್ತಿಕ ಬದುಕು ಇರುವುದಿಲ್ಲವೇ? ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿಯ ಅನುಮತಿ ಬೇಕೇ?" ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವು ನೆಟ್ಟಿಗರು "ಪುಲ್ವಾಮಾದಲ್ಲಿ ಮಿಲಿಟರಿ ಪಡೆಯ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿದ್ದ ದೇಶದ ಪ್ರಧಾನಿ ಮೋದಿಯವರು ಯಾರಿಗೂ ಸಿಗದ ಕಡೆಯಲ್ಲಿ ಶೂಟಿಂಗ್ ನಲ್ಲಿ ತೊಡಗಿದ್ದರು. ಅದು ಮೋದಿಯವರು ದೇಶದ ಸಂದೀಗ್ಧ ಸಮಯ ಒಂದರಲ್ಲಿ ಪ್ರದರ್ಶಿಸಿದ ಜವಾಬ್ದಾರಿಯಾಗಿತ್ತು" ಎಂದು ಟೀಕಿಸಿದ್ದಾರೆ.

ಇನ್ನು ಕೆಲವು ನೆಟ್ಟಿಗರು "ಹಾಗಾದರೆ, ಉರಿ ಸೇನಾನೆಲೆಯ ಮೇಲೆ ದಾಳಿ ನಡೆದು 18 ಸೈನಿಕರ ಹತ್ಯೆ ಮಾಡುವಾಗ, ಪುಲ್ವಾಮಾದಲ್ಲಿ ದಾಳಿ ಮಾಡಿ 40ಸೈನಿಕರ ಹತ್ಯೆ ನಡೆದಾಗ ಮೋದಿ ಪ್ರಧಾನಿ ಯಾಗಿರಲಿಲ್ಲವೇ. ಅವರಾಗ ಎಲ್ಲಿದ್ದರು ಮತ್ತು ಅದ್ಯಾವ ಮಹತ್ಕಾರ್ಯದಲ್ಲಿ ತೊಡಗಿದ್ದರು ಎಂದು ಬಿಜೆಪಿಗರು ಉತ್ತರಿಸುವರೇ? ಮಹಾತ್ಮಾ ಗಾಂಧಿ ಹತ್ಯೆ ಮಾಡಿದ, ಮಾಲೆಂಗಾಂ ನಲ್ಲಿ ಬಾಂಬ್ ಸ್ಪೋಟಿಸಿದ, ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಪಕ್ಷದವರಿಂದ ದೇಶಪ್ರೇಮದ ಪಾಠವೇ?" ಎಂದು ಪ್ರತಿಕ್ರಿಯಿಸಿದ್ದಾರೆ.
ಹಲವು ನೆಟ್ಟಿಗರು "ರಾಹುಲ್ ಗಾಂಧಿಯವರ ಕುರಿತು ಬಿಜೆಪಿಗರಿಗೆ ಈ ಪರಿಯ ಭಯ ಏಕೆ?" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ರಾಹುಲ್ ನೇಪಾಳ ಪ್ರವಾಸದ ಕುರಿತು "ಕಠ್ಮಂಡು ಪೋಸ್ಟ್‌" ಮಂಗಳವಾರ ಮಾಡಿರುವ ವರದಿಯ ಪ್ರಕಾರ "ರಾಹುಲ್ ಗಾಂಧಿಯವರು ಸೋಮವಾರ ಪತ್ರಕರ್ತ ಸ್ನೇಹಿತರಾದ ಸಿಎನ್‌ಎನ್ ನ ಮಾಜಿ ಉದ್ಯೋಗಿ, ದ ಲುಂಬಿನಿ ಮ್ಯೂಸಿಯಂ ನ ಕಾರ್ಯನಿರ್ವಾಹಕ ನಿರ್ದೇಶಕ ಸುಮ್ನಿಮಾ ಉದಾಸ್ ರವರ ವಿವಾಹದಲ್ಲಿ ಭಾಗವಹಿಸಲು ಮೇ 2ರಂದು ನೇಪಾಳಕ್ಕೆ ತೆರಳಿದ್ದರು. ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ಕಠ್ಮಂಡುವಿನ ಮ್ಯಾರಿಯೆಟ್ ಹೋಟೆಲ್‌ನಲ್ಲಿ ತಂಗಿದ್ದಾರೆ. ಮೇ 3ರಂದು ಉದಾಸ್ ಅವರ ಮದುವೆ ನಡೆದಿದ್ದು, ಮೇ 5ರಂದು ಹಯಾತ್ ರೀಜೆನ್ಸಿ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ."

ಬಿಜೆಪಿಯ ಅಪಪ್ರಚಾರದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು "ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿಯವರು ಭಾರತದ ಸ್ನೇಹಿತ ರಾಷ್ಟ್ರವಾದ ನೇಪಾಳದಲ್ಲಿ ನಡೆದ ತಮ್ಮ ಬಹುಕಾಲದ ಪತ್ರಕರ್ತ ಮಿತ್ರರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಹಾಗಾದರೆ ಬಿಜೆಪಿಗರ ಪ್ರಕಾರ ಮದುವೆ ಸಮಾರಂಭದಲ್ಲಿ ಭಾಗಿಯಾಗುವುದೂ ತಪ್ಪೇ? ಬಿಜೆಪಿ ಆಡಳಿತದಲ್ಲಿ ಅದು ಕೂಡ ಬಹುದೊಡ್ಡ ಅಪರಾಧವೇ? ಹಾಗಾದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ವೈರಿರಾಷ್ಟ್ರ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಹುಟ್ಟುಹಬ್ಬಕ್ಕೆ ಮತ್ತವರ ಮಗಳ ಮದುವೆಗೆ ಕರೆಯದೆ ರಾತ್ರೋರಾತ್ರಿ ತೆರಳಿ ಕೇಕ್‌ ಕಟ್‌ ಮಾಡಿರುವುದು ಸರಿಯೇ? ಹಾಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕೆಲವೇ ದಿನಗಳಲ್ಲಿ ಪಠಾಣ್‌ಕೋಟ್‌ನಲ್ಲಿ ಏನಾಯ್ತು ಎಂದು ಇಡೀ ವಿಶ್ವಕ್ಕೆ ಗೊತ್ತಿದೆ" ಎನ್ನುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ನೇಪಾಳದ ರಾಯಭಾರಿಯಾಗಿದ್ದ ಭೀಮ್ ಉದಾಸ್ ರವರು ತಮ್ಮ ಮಗಳು ಸುಮ್ನಿಮಾ ಉದಾಸ್ ರವರ ಮದುವೆ ಸಮಾರಂಭಕ್ಕೆ ಆಗಮಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಆಹ್ವಾನ ನೀಡಿದ್ದರು ಎಂದು 'ಕಠ್ಮಂಡು ಪೋಸ್ಟ್' ವರದಿ ಮಾಡಿದೆ. ಉದಾಸ್ ಅವರ ಮಗಳು ಸುಮ್ನಿಮಾ ಅವರು ಸಿಎನ್‌ಎನ್‌ನ ಮಾಜಿ ವರದಿಗಾರ್ತಿಯಾಗಿದ್ದು, ಅವರ ಮದುವೆ ನಿಮಾ ಮಾರ್ಟಿನ್ ಶೆರ್ಪಾ ಜತೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಪ್ರವಾಸದ ವಿರುದ್ಧ ಕಾಂಗ್ರೆಸ್ ಪಕ್ಷ "ದೇಶದಲ್ಲಿ ಬಿಕ್ಕಟ್ಟು ಉಂಟಾಗಿದೆ. ಆದರೆ ಮೋದಿ ಸಾಹೇಬರು ವಿದೇಶದಲ್ಲಿ ಇರುವುದನ್ನು ಇಷ್ಟಪಡುತ್ತಾರೆ" ಎಂದು ಸೋಮವಾರ ರಾತ್ರಿ ಟ್ವೀಟ್ ಮಾಡಿತ್ತು. ಕಾಂಗ್ರೆಸ್ ಪಕ್ಷ ಖಂಡನೆ ವ್ಯಕ್ತಪಡಿಸಿದ ಕೆಲವೇ ಗಂಟೆಗಳಲ್ಲಿ ಮದುವೆ ಕಾರ್ಯಕ್ರಮದ ಈ ವಿಡಿಯೋವನ್ನು ಬಿಜೆಪಿ ಅಪಪ್ರಚಾರಕ್ಕೆ ಬಳಸಿಕೊಂಡಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯರವರ ಟ್ವೀಟ್:
Advertisement
Advertisement
Recent Posts
Advertisement