ಜಿನ್ನಾ ಭಾಷಣವನ್ನು ಶಾಲಾಪಠ್ಯದಲ್ಲಿ ಯಾವ ಕಾರಣಕ್ಕಾಗಿ ಸೇರಿಸಲಾಗುವುದಿಲ್ಲವೋ, ಅದೇ ಕಾರಣ ಹೆಡ್ಗೆವಾರ್ ಭಾಷಣಕ್ಕೂ ಅನ್ವಯವಾಗಬೇಕಲ್ಲವೇ?

|ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)
ಚಿತ್ರ ಕೃಪೆ: ಗೂಗಲ್

ಆತ್ಮೀಯರೇ ,

ಹೆಡಗೆವಾರರ ಪಠ್ಯದಲ್ಲಿ ತಪ್ಪೇನಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅದನ್ನು ತೆಗೆಯಲಾಗದು ಎಂದು ಘೋಷಿಸಿದ್ದಾರೆ.

ಹೆಡಗೇವಾರರ ಪಠ್ಯವನಲ್ಲದೆ ಇನ್ನೇನು ಜಿನ್ನಾ ಅವರ ಪಠ್ಯ ಇಡಬೇಕಿತ್ತೆ
ಎಂದು ಬಿಜೆಪಿ ನಾಯಕ ಈಶ್ವರಪ್ಪ ಕೇಳಿದ್ದಾರೆ.

"ಆದರ್ಶ ಯಾರಾಗಬೇಕು " ಎನ್ನುವ ಬರಹವನ್ನು 10ನೇ ತರಗತಿಯ ಪಠ್ಯದಲ್ಲಿ ಸೇರಿಸಲು ಕಾರಣ ಬರೆದ ಲೇಖಕನಿಗಿಂತ ಬರಹದಲ್ಲಿದ್ದ ಒಳ್ಳೆಯ ಸಂದೇಶ ಕಾರಣವೆಂದು ಶಿಕ್ಷಣ ಮಂತ್ರಿಗಳು ಸಬೂಬು ನೀಡಿದ್ದಾರೆ.

ಹೆಡಗೇವಾರ ಪಠ್ಯವನ್ನು ನೋಡಿ. ಅದರಲ್ಲಿ ಮಕ್ಕಳಿಗೆ ಆದರ್ಶರಾಗಬೇಕಿರುವುದು ತತ್ವಗಳೇ ವಿನಾ ವ್ಯಕ್ತಿಗಳಲ್ಲ ಎಂಬ ಸಂದೇಶವಿದೆ. ಅದನ್ನು ಮಕ್ಕಳಿಗೆ ಕಲಿಸುವುದರಲ್ಲಿ ಏನು ತಪ್ಪಿದೆ. ಪಠ್ಯವನ್ನು ನೋಡಿ, ಲೇಖಕರನ್ನಲ್ಲ.. ಇತ್ಯಾದಿ!

ಹಾಗಿದ್ದಲ್ಲಿ ಈ ದೇಶದ ಕೂಡು ನಾಗರೀಕತೆಯ ಹಿರಿಮೆಯ ಬಗ್ಗೆ ಜಿನ್ನಾ ಅವರು 1916ರಲ್ಲಿ ಮಾಡಿದ ಅತ್ಯುತ್ತಮ ಭಾಷಣವಿದೆ.

ಅದನ್ನೂ ಏಕೆ ಸೇರಿಸಬಾರದು?

ಹಾಗೆ ನೋಡಿದರೆ 1930ರ ತನಕ ಇಡಿ ದೇಶ ಜಿನ್ನಾ ಅವರನ್ನು ಹಿಂದೂ-ಮುಸ್ಲಿಂ ಭಾವೈಕ್ಯತೆಯ ರಾಯಭಾರಿ ಎಂದೇ ಕರೆಯುತ್ತಿತ್ತು.

ವಾಸ್ತವದಲ್ಲಿ ಹೆಡಗೇವಾರರು 1925ರಲ್ಲಿ ಭಾರತವನ್ನು ಕೋಮು ಆಧಾರಿತವಾಗಿ ವಿಭಜಿಸುವ ಆರೆಸ್ಸೆಸ್ ಕಟ್ಟುತ್ತಿದ್ದಾಗ ಅದೇ ವರ್ಷ ಸೆಂಟ್ರಲ್ ಅಸೆಂಬ್ಲಿಯಲ್ಲಿ ಜಿನ್ನಾ ಅವರು ಹಿಂದೂ ಮುಸ್ಲೀಮ್ ಐಕ್ಯತೆಗಾಗಿ ಕೋಮುವಾರು ರಾಜಕೀಯ ಮೀಸಲಾತಿ  ಬೇಡ ಎಂದು ಭಾಷಣ ಮಾಡುತ್ತಿದ್ದರು!

1920ರಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯ ಘೋಷಣೆಯನ್ನು ವಿರೋಧಿಸುತ್ತಾ ಹೆಡಗೇವಾರ್ ಕಾಂಗ್ರೆಸ್ಸಿನಿಂದ ದೂರ ಸರಿದರೆ ಜಿನ್ನಾ ಅವರು ರಾಜಕೀಯದೊಂದಿಗೆ ಧರ್ಮವನ್ನು ಮಿಶ್ರಣ ಮಾಡುತ್ತಾ ಹಿಂದೂ-ಮುಸ್ಲಿಂ ಮೂಲಭೂತವಾದಕ್ಕೆ ಕುಮ್ಮಕ್ಕು ಕೊಡುವ ಗಾಂಧಿ ರಾಜಕಾರಣ ದೇಶಕ್ಕೆ ಒಳ್ಳೆಯದು ಮಾಡುವುದಿಲ್ಲ ಎಂದು ಘೋಷಿಸಿ ಕಾಂಗ್ರೆಸ್ಸಿನಿಂದ ದೂರ ಸರಿದಿದ್ದರು.

ಆ ನಂತರದಲ್ಲಿ ಒಂದೆಡೆ ಜಿನ್ನಾ 1939 ನಂತರದಲ್ಲಿ ದೇಶವನ್ನು ವಿಭಜಿಸಿ ಪಾಕಿಸ್ತಾನದ ಹುಟ್ಟಿಗೆ ಕಾರಣವಾದರೆ ಮತ್ತೊಂದೆಡೆ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಹಿಂದೂ ಕೋಮುವಾದವನ್ನು ಉದ್ರೇಕಿಸುತ್ತಾ ದೇಶ ವಿಭಜನೆಗೂ ಮತ್ತು ದೇಶದೊಳಗಿನ ಶಾಶ್ವತ ಕೋಮು ವಿಭಜನೆಗೂ ಕಾರಣರಾದರು.

ಎಷ್ಟೇ ಬೋಧಪ್ರದವಾಗಿದ್ದರೂ  ಜಿನ್ನಾರ ಪಠ್ಯವನ್ನು ಶಾಲಾ ಮಕ್ಕಳಿಗೆ ಬೋಧಿಸದಿರಲೂ ಆ ವ್ಯಕ್ತಿಯ ಐತಿಹಾಸಿಕ ಪಾತ್ರ ಕಾರಣವಾಗುವುದಾದರೆ  ಅದೇ ಕಾರಣಕ್ಕಾಗಿ ಪಠ್ಯ ಎಷ್ಟೆ ಬೋಧಪ್ರದವಾಗಿದ್ದರೂ (ಹೆಡಗೇವಾರರ ಆ ಭಾಷಣ ಆ ದೃಷ್ಟಿಯಿಂದಲೂ ಅತ್ಯಂತ ಸಮಸ್ಯಾತ್ಮಕವಾಗಿದೆ ಎನ್ನುವುದು ಮತ್ತೊಂದು ವಿಷಯ)  ಹೆಡಗೆವಾರರ ಮತ್ತವರ ಸಂಘದ ಐತಿಹಾಸಿಕ ವಿಭಜಕ ಪಾತ್ರಕ್ಕಾಗಿಯೇ ಅದನ್ನು ವಿಧ್ಯಾರ್ಥಿಗಳ ಚಿಕ್ಕಂದಿನಿಂದ ಒಂದು ಆದರ್ಶವಾಗಿ ಬೋಧಿಸಬಾರದಲ್ಲವೇ?
•ಶಿವಸುಂದರ್