ರಾಜ್ಯ

|ತನಿಖೆಯ ಹೆಸರಲ್ಲಿ ಕಾಂಗ್ರೆಸ್ ನಾಯಕರಿಗೆ ಕಿರುಕುಳ|  ಜೂನ್ 17: ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ಸಿದ್ದರಾಮಯ್ಯ

Published by
“ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಕಾನೂನು ಹಾಗೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯವರಿಗೆ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಇಂದು ಕೆಪಿಸಿಸಿ ಕಚೇರಿಯಿಂದ ರಾಜಭವನದ ವರೆಗೆ ಪಾದಯಾತ್ರೆ ನಡೆಸಿ, ನಂತರ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದೇವೆ. ನಮ್ಮ ಹೋರಾಟದ ಮುಂದುವರೆದ ಭಾಗವಾಗಿ ಜೂನ್ 17 ಶುಕ್ರವಾರ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಸಂವಿಧಾನ ಬಾಹಿರ ವರ್ತನೆಯನ್ನು ನಿಲ್ಲಿಸದೆ ಹೋದರೆ ಈ ನಮ್ಮ ಹೋರಾಟ ನಿರಂತರವಾಗಲಿದೆ” ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

“ನ್ಯಾಷನಲ್‌ ಹೆರಾಲ್ಡ್‌ ಮೊಕದ್ದಮೆಯೇ ಒಂದು ಸುಳ್ಳು ಮತ್ತು ಕಲ್ಪಿತ ಪ್ರಕರಣ. ಇದಕ್ಕೆ ಯಾವ ಸಾಕ್ಷ್ಯಾಧಾರಗಳು ಇಲ್ಲ. ಆದರೂ ಕಳೆದ ಮೂರು ದಿನಗಳಿಂದ ಪ್ರತಿನಿತ್ಯ ರಾಹುಲ್‌ ಗಾಂಧಿ ಅವರನ್ನು ಇ.ಡಿ ಅವರು ವಿಚಾರಣೆಗೆ ಕರೆದು 9 ರಿಂದ 10 ಗಂಟೆಗಳ ಕಾಲ ವಿಚಾರಣೆ ಹೆಸರಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.
ಒಂದು ವೇಳೆ ಬ್ರಿಟೀಷರು ಕೇಂದ್ರ ಬಿಜೆಪಿ ಸರ್ಕಾರದ ರೀತಿ ಕಿರುಕುಳ ನೀಡಿದ್ದರೆ ಸ್ವಾತಂತ್ರ್ಯ ಚಳವಳಿ ಮಾಡಲು ಆಗುತ್ತಿತ್ತಾ? ಸ್ವತಂತ್ರ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಪ್ರತಿ ವರ್ಷ ಸಾರ್ವಜನಿಕ ಸಭೆಗಳನ್ನು ಮಾಡುತ್ತಿತ್ತು, ಆದರೆ ಈಗ ಎಐಸಿಸಿ ಕಚೇರಿಯನ್ನೇ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡು ಸೀಜ್‌ ಮಾಡಲಾಗಿದೆ” ಎಂದವರು ಆರೋಪಿಸಿದ್ದಾರೆ.

“ಶಾಂತಿಯುತ ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸರ ದೌರ್ಜನ್ಯ ಮಿತಿಮೀರಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾಗಲೂ ಈ ಸ್ಥಿತಿ ಇರಲಿಲ್ಲ. ನರೇಂದ್ರ ಮೋದಿ ಅವರದು ಸರ್ವಾಧಿಕಾರಿ ಸರ್ಕಾರವೇ? ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇದೆಯೇ? ಬಿಜೆಪಿ ಸರ್ಕಾರ ಇಂದು ಎಲ್ಲ ಕಾನೂನುಗಳನ್ನು, ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ ಜನರ ಹಕ್ಕುಗಳನ್ನು ಹತ್ತಿಕ್ಕಲು ಹೊರಟಿದೆ. ಬಹುಶಃ ತಾವು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತೇವೆ ಎಂದುಕೊಂಡಿರಬಹುದು? ಬಿಜೆಪಿ ಸರ್ಕಾರದ ನಡವಳಿಕೆ ‘ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು’ ಎಂಬ ಗಾದೆ ಮಾತಂತಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ಕಾಂಗ್ರೆಸ್‌ ಪಕ್ಷಕ್ಕೆ ಹೋರಾಟಗಳು ಹೊಸದೇನಲ್ಲ. ಕಾಂಗ್ರೆಸ್ ಹೋರಾಟ ಮಾಡಿಯೇ ಈ ದೇಶಕ್ಕೆ ಸ್ವತಂತ್ರ ತಂದುಕೊಟ್ಟದ್ದು. ಬಿಜೆಪಿಯವರು ಯಾರು ತ್ಯಾಗ ಬಲಿದಾನ ಮಾಡಿದವರಲ್ಲ. ಇಂದು ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ, ಅಮಿತ್‌ ಶಾ ಗೃಹ ಸಚಿವರಾಗಿದ್ದರೆ ಅದು ಕಾಂಗ್ರೆಸ್‌ ಪಕ್ಷದ ಸ್ವಾತಂತ್ರ್ಯ ಹೋರಾಟದ ಫಲ ಎಂಬುದನ್ನು ಅವರು ನೆನೆಯಬೇಕು. ಅನ್ಯಾಯ, ದೌರ್ಜನ್ಯಗಳು ಕಣ್ಣೆದುರೇ ನಡೆಯುತ್ತಿದ್ದರೂ ಅವೆಲ್ಲವನ್ನು ನೋಡಿಕೊಂಡು ಸುಮ್ಮನಿರೋಕಾಗಲ್ಲ. ಸಂವಿಧಾನದ 19ನೇ ವಿಧಿಯಿನ್ನೂ ರದ್ದಾಗಿಲ್ಲ, ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕಿದೆ. ಅದರಂತೆ ನಾವು ಪ್ರತಿಭಟಿಸುತ್ತೇವೆ.
ವಿನಾಕಾರಣ ನಮ್ಮನ್ನು ಜೈಲಿಗೆ ಹಾಕುವುದಾದರೆ ಹಾಕಲಿ, ನಾವು ಅದಕ್ಕೂ ಸಿದ್ಧರಿದ್ದೇವೆ” ಎಂದವರು ಪ್ರಕಟಣೆಯಲ್ಲಿ ಸವಾಲೆಸೆದಿದ್ದಾರೆ.
Share
Published by

Recent Posts