ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ತನ್ನ ಮಾಲಕತ್ವದ "ನ್ಯಾಷನಲ್ ಹೆರಾಲ್ಡ್" ಪತ್ರಿಕೆಯ 90ಕೋಟಿ ಸಾಲ ತೀರಿಸಿದ್ದು ಕಾಂಗ್ರೆಸ್ ಮಾಡಿದ ಅಪರಾಧವೇ?

ರಾಜ್ಯ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಘಟಕವು ಇ.ಡಿ ತನಿಖೆಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕರಿಗೆ ನೀಡುತ್ತಿರುವ ‌ಕಿರುಕುಳದ ಕುರಿತಾಗಿ ಮತ್ತು ಹೆರಾಲ್ಡ್ ಬೆಳೆದುಬಂದ ಬಗೆಯ ಕುರಿತು ಪ್ರಕಟಣೆ ಹೊರಡಿಸಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ತನ್ನದೇ ಮಾಲಕತ್ವದ "ನ್ಯಾಷನಲ್ ಹೆರಾಲ್ಡ್" ಪತ್ರಿಕೆಯ 90ಕೋಟಿ ಸಾಲವನ್ನು ತೀರಿಸಿ, ಪತ್ರಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ಕಾಂಗ್ರೆಸ್ ಮಾಡಿದ ಅಪರಾಧವೇ? ಅದಲ್ಲವಾದರೆ ಆ ವ್ಯವಹಾರದಲ್ಲಿ ನಡೆದಿರುವ ಅಕ್ರಮವಾದರೂ ಏನು ಎಂದು ಪ್ರಶ್ನಿಸಿದೆ.

ಪ್ರಕಟಣೆಯ ವಿವರಗಳು ಇಂತಿವೆ:

ನ್ಯಾಷನಲ್ ಹೆರಾಲ್ಡ್ ಎಂಬುದು ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್, ಪುರುಷೋತ್ತಮ್ ಟಂಡನ್, ಆಚಾರ್ಯ ನರೇಂದ್ರ ದೇವ್, ಶ್ರೀ ರಫಿ ಅಹಮದ್ ಮತ್ತು ಇತರರಿಂದ 1937ರಲ್ಲಿ ಪ್ರಾರಂಭವಾದ ಪತ್ರಿಕೆಯಾಗಿದೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಎಂಬ ಕಂಪನಿಯ ಮೂಲಕ ದೇಶದಲ್ಲಿನ ಸ್ವಾತಂತ್ರ್ಯ ಚಳುವಳಿಗೆ ಧ್ವನಿ ನೀಡಲೆಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಉದಯವಾಯಿತು. ಈ ಪತ್ರಿಕೆಯನ್ನು ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಅಂದರೆ 1942 ರಿಂದ 1945 ರವರೆಗೆ ಬ್ರಿಟೀಷರು ನಿಷೇಧಿಸಿದ್ದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ ಮಹಾತ್ಮ ಗಾಂಧಿಯವರು "ರಾಷ್ಟ್ರೀಯ ಚಳುವಳಿಗೆ ಇದು ಮಾರಕ" ಎಂದು ಬಣ್ಣಿಸಿದ್ದರು.

ಪತ್ರಿಕೆಯ ವೈಚಾರಿಕ ಶ್ರೇಷ್ಠತೆಯ ಹೊರತಾಗಿಯೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರ್ಥಿಕ ನಷ್ಟವನ್ನು ಅನುಭವಿಸಿತು. ನ್ಯಾಷನಲ್ ಹೆರಾಲ್ಡ್ ಎದುರಿಸುತ್ತಿದ್ದ 90 ಕೋಟಿ ರೂಗಳ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಕಾಂಗ್ರೆಸ್ ಪಕ್ಷವು 2002 ರಿಂದ 2011 ರ 10 ವರ್ಷಗಳ ಅವಧಿಯಲ್ಲಿ ಸುಮಾರು 100 ಕಂತುಗಳ ಮೂಲಕ 90 ಕೋಟಿ ರೂ ಸಾಲ ನೀಡಿತು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ 90 ಕೋಟಿ ರೂ.ಗಳಲ್ಲಿ 67 ಕೋಟಿ ರೂಗಳು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಉದ್ಯೋಗಿಗಳ ವೇತನ ಮತ್ತು ವಿ ಆರ್ ಎಸ್ ಗೆ ಬಳಸಲಾಯಿತು. ಮತ್ತು ಉಳಿದ ಹಣವನ್ನು ಸರ್ಕಾರದ ಪಾವತಿಗೆ ಬಳಸಲಾಯಿತು ಅಂದರೆ ವಿದ್ಯುತ್ ಶುಲ್ಕ, ಕಟ್ಟಡ ತೆರಿಗೆ, ಬಾಡಿಗೆ ಶುಲ್ಕ, ಕಟ್ಟಡ ವೆಚ್ಚ ಮುಂತಾದವಕ್ಕೆ ಬಳಸಲಾಯಿತು.

ಬಿಜೆಪಿಯವರು ಕಾಂಗ್ರೆಸ್ ಪಕ್ಷ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಾಲ ನೀಡಿರುವುದೆ ಅಪರಾಧ ಎಂಬ ರೀತಿಯಲ್ಲಿ ಮಾತಾಡುತ್ತಾರೆ. ಇದು ಬಿಜೆಪಿಗರ ವಿಚಾರಹೀನತೆ ಮತ್ತು ದುರುದ್ದೇಶಪೂರಿತ ಅಜೆಂಡಾವನ್ನು ಪ್ರದರ್ಶಿಸುತ್ತದೆ.

ರಾಜಕೀಯ ಪಕ್ಷ ಸಾಲ ನೀಡುವುದು ಭಾರತದಲ್ಲಿ ಯಾವುದೆ ಕಾನೂನಿನಡಿಯಲ್ಲಿ ಕ್ರಿಮಿನಲ್ ಅಪರಾಧವಲ್ಲ. ಹಾಗೆಯೇ 1937 ರಿಂದ ಕಾಂಗ್ರೆಸ್ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿರುವ ಮತ್ತು ಕಾಂಗ್ರೆಸ್ ನ ಸಿದ್ಧಾಂತವನ್ನು ಪ್ರತಿಪಾದಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಎಂಬ ಕಂಪನಿಗೆ ಸಾಲ ನೀಡಿರುವುದರಲ್ಲಿ ತಪ್ಪೇನಿದೆ? ಕಾಂಗ್ರೆಸ್ ಪಕ್ಷ ಈ ಸಾಲದ ಬಗ್ಗೆ ತನ್ನ ಖಾತೆ ಪುಸ್ತಕದಲ್ಲಿ ಉಲ್ಲೇಖಿಸಿದೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಆಡಿಟ್ ರಿಪೋರ್ಟ್ ನಲ್ಲೂ ಸಹ ಉಲ್ಲೇಖಿಸಿದೆ.

06.11.2012 ರಂದು ಚುನಾವಣಾ ಆಯೋಗವು ಸುಬ್ರಮಣಿಯನ್ ಸ್ವಾಮಿ ಅವರಿಗೆ ಪತ್ರ ಬರೆದು ರಾಜಕೀಯ ಪಕ್ಷಗಳ ವೆಚ್ಚವನ್ನು ನಿಷೇಧಿಸುವ ಅಥವಾ ನಿಯಂತ್ರಿಸುವ ಯಾವುದೇ ನಿರ್ಬಂಧನೆಗಳಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದರಿಂದ ಬಿಜೆಪಿಯು ಆರೋಪ ಮಾಡುತ್ತಿದ್ದ ರಾಜಕೀಯ ಪಕ್ಷ ಕಂಪೆನಿಗೆ ಸಾಲ ನೀಡಿರುವುದು ಅಪರಾಧ ಎಂಬುದು ಸಂಪೂರ್ಣವಾಗಿ ಸುಳ್ಳು ಎಂದು ಸಾಬೀತಾಗುತ್ತದೆ.

ಕಾಂಗ್ರೆಸ್ ಪಕ್ಷ ನೀಡಿದ್ದ 90 ಕೋಟಿ ರೂ ಸಾಲವನ್ನು ಮರುಪಾವತಿಸಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃ ಸಂಸ್ಥೆಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ನಿಂದ ಸಾಧ್ಯವಾಗಲಿಲ್ಲ. ಆದ್ದರಿಂದ ಈ 90 ಕೋಟಿ ಸಾಲವನ್ನು ಈಕ್ವಿಟಿ ಷೇರುಗಳಾಗಿ ಪರಿವರ್ತಿಸಲಾಯಿತು. ಕಾಂಗ್ರೆಸ್ ಪಕ್ಷ ಈಕ್ವಿಟಿ ಷೇರುಗಳನ್ನು ಹೊಂದಲು ಸಾಧ್ಯವಿಲ್ಲದ ಕಾರಣ ಸೆಕ್ಷನ್ 25 ರ ಅಡಿಯ ನಾಟ್-ಫಾರ್-ಪ್ರಾಫಿಟ್ ಕಂಪೆನಿಯಾದ ಯಂಗ್ ಇಂಡಿಯನ್ ಕಂಪೆನಿಗೆ ಹಂಚಲಾಯಿತು.

ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ, ದಿ. ಶ್ರೀ ಆಸ್ಕರ್ ಫರ್ನಾಂಡಿಸ್, ದಿ. ಶ್ರೀ ಮೋತಿಲಾಲ್ ವೋಹ್ರಾ, ಶ್ರೀ ಸುಮನ್ ದುಬೆ ಮುಂತಾದವರು ಈ ನಾಟ್-ಫಾರ್-ಪ್ರಾಫಿಟ್ "ಯಂಗ್ ಇಂಡಿಯಾ" ಕಂಪನಿಯ ವ್ಯವಸ್ಥಾಪಕ ಸಮಿತಿ ಸದಸ್ಯರಾಗಿದ್ದಾರೆ. ಕಾನೂನಿನ ಪ್ರಕಾರ ಈ ನಾಟ್-ಫಾರ್-ಪ್ರಾಫಿಟ್ 'ಯಂಗ್ ಇಂಡಿಯಾ' ಕಂಪನಿಯ ವ್ಯವಸ್ಥಾಪಕ ಸಮಿತಿ ಸದಸ್ಯರು, ಷೇರುದಾರರು ಕಂಪನಿಯಿಂದ ಯಾವುದೇ ರೀತಿಯ ಲಾಭಾಂಶ, ಸಂಬಳ ಅಥವಾ ಯಾವುದೇ ಹಣಕಾಸಿನ ಪ್ರಯೋಜನ ಪಡೆಯುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಇಲ್ಲಿ ಸೋನಿಯಾ ಗಾಂಧಿಯವರಾಗಲಿ ಅಥವಾ ರಾಹುಲ್ ಗಾಂಧಿಯವರಾಗಲಿ 'ಯಂಗ್ ಇಂಡಿಯಾ' ಕಂಪನಿಯ ಮೂಲಕ ಆರ್ಥಿಕ ಲಾಭ ಪಡೆದುಕೊಂಡಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುವುದೇ ಇಲ್ಲ. ಹಾಗೇನಾದರೂ ಬಿಜೆಪಿಯವರು ಆರೋಪ ಮಾಡಿದರೆ ಅದು ಶುದ್ಧ ಸುಳ್ಳಾಗುತ್ತದೆ ಮತ್ತು ಸಾಭೀತುಪಡಿಸಬೇಕಾಗುತ್ತದೆ.

ನ್ಯಾಷನಲ್ ಹೆರಾಲ್ಡ್ ನ ಎಲ್ಲಾ ಆದಾಯ ಮತ್ತು ಸ್ವತ್ತುಗಳು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿಯ ಒಡೆತನದ ಆಸ್ತಿಗಳಾಗಿಯೇ ಉಳಿಯಲಿವೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿಯ ಚರ ಅಥವಾ ಸ್ಥಿರ ಆಸ್ತಿಗಳನ್ನು ಇಲ್ಲಿಯವರೆಗೂ ಯಾರಿಗೂ ವರ್ಗಾಯಿಸಿಲ್ಲ ಮತ್ತು ವರ್ಗಾಯಿಸಲು ಸಾಧ್ಯವೂ ಇಲ್ಲ.

'ಯಂಗ್ ಇಂಡಿಯಾ' ಕಂಪನಿಯೂ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ನಿಯಂತ್ರಿಸುತ್ತಿದ್ದರೂ ( ಯಾಕೆಂದರೆ ಯಂಗ್ ಇಂಡಿಯಾ 99% ಷೇರುಗಳನ್ನು ಹೊಂದಿದೆ ) ಅದು ತನ್ನ ವ್ಯವಸ್ಥಾಪಕ ಸಮಿತಿಯ ಸದಸ್ಯರಿಗೆ ಒಂದು ರೂಪಾಯಿಯನ್ನೂ ನೀಡಲು ಸಾಧ್ಯವಿಲ್ಲ. ಏಕೆಂದರೆ ಅದು 'ಲಾಭರಹಿತ' ಕಂಪನಿಯಾಗಿದೆ.

'ಯಂಗ್ ಇಂಡಿಯಾ' ಕಂಪನಿಯ ಮ್ಯಾನೆಜಿಂಗ್ ಕಮಿಟಿಯ ಸದಸ್ಯರು ತಮ್ಮ ಕಂಪನಿ ಮುಚ್ಚಿದರೂ ಅದರಿಂದ ಬರುವ ಎಲ್ಲಾ ಆದಾಯವೂ ಕೇವಲ 'ಲಾಭರಹಿತ' ಕಂಪನಿಗೆ ಹೋಗಬಹುದೇ ಹೊರತು ಅದರ ಷೇರುದಾರರಾಗಲಿ,ಸಮಿತಿ ಸದಸ್ಯರಾಗಲಿ ಕಾನೂನುಬದ್ಧವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ನ ಸ್ವತ್ತುಗಳನ್ನು ಮಾರಾಟ ಮಾಡುವುದಾಗಲಿ ಅಥವಾ ವ್ಯಕ್ತಿಗಳು ಬಳಸಿಕೊಳ್ಳುವುದಕ್ಕಾಗಲಿ ಸಾಧ್ಯವಿಲ್ಲ. ಅದು ಎಂದೆಂದಿಗೂ ನಾಟ್-ಫಾರ್-ಪ್ರಾಫಿಟ್ ಕಂಪನಿಯೊಂದಿಗೆ ಉಳಿಯುತ್ತದೆ. ಹೀಗಿರುವಾಗ ವೈಯುಕ್ತಿಕ ಲಾಭಕ್ಕಾಗಿ ಆರ್ಥಿಕ ಅವ್ಯವಹಾರ ನಡೆಸಿದ್ದಾರೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವವಾಗುವುದಿಲ್ಲ.

ನ್ಯಾಷನಲ್ ಹೆರಾಲ್ಡ್ ಎಂಬುದು ಈ ದೇಶದ ಆಸ್ತಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ರೀತಿಯ ಕೊಡುಗೆ ನೀಡಿದ ಪತ್ರಿಕೆ. ಕಾಂಗ್ರೆಸ್ ಪಕ್ಷದ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಪತ್ರಿಕೆ, ಕಾಂಗ್ರೆಸ್ ನ ತತ್ವ ಸಿದ್ಧಾಂತಗಳನ್ನು ಎತ್ತಿ ಹಿಡಿದ ಪತ್ರಿಕೆ, ಕಾಂಗ್ರೆಸ್ ಪಕ್ಷದ ಧ್ವನಿಯ ಆಗಿದ್ದ ಪತ್ರಿಕೆ. ಇಂಥ ಪತ್ರಿಕೆಯನ್ನು ಉಳಿಸಿಕೊಳ್ಳಬೇಕಾಗಿದ್ದದ್ದು ಕಾಂಗ್ರೆಸ್ ನ ಜವಾಬ್ದಾರಿಯಾಗಿತ್ತು. ಆ ಕೆಲಸವನ್ನು ಶ್ರೀಮತಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಮಾಡಿದರು.

ನ್ಯಾಷನಲ್ ಹೆರಾಲ್ಡ್ ಎಂಬುದು ಹಗರಣವಾಗಲು ಸಾಧ್ಯವೇ ಇಲ್ಲ. ಯಾಕೆಂದರೆ ಯಂಗ್ ಇಂಡಿಯಾ ಎಂಬುದು ಲಾಭರಹಿತ ಕಂಪನಿ. ಇದರ ಮೂಲಕ ಆಸ್ತಿಯನ್ನು ಪಡೆದುಕೊಳ್ಳುವುದಕ್ಕಾಗಲಿ ಮಾರಾಟ ಮಾಡುವುದಕ್ಕಾಗಲಿ ಸಾಧ್ಯವಿಲ್ಲ. ಇದು ಬಿಜೆಪಿಯವರಿಗೂ ಸಹ ಗೊತ್ತಿರುವ ವಿಷಯ ಅದಕ್ಕಾಗಿಯೇ ಇಷ್ಟು ವರ್ಷಗಳಾದರೂ ಬಿಜೆಪಿಗೆ ಇದನ್ನು ನಿರೂಪಿಸಲು ಸಾಧ್ಯವಾಗಿಲ್ಲ. ಆದರೂ ಬಿಜೆಪಿಯು ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನ ಧ್ವನಿ ಅಡಗಿಸಲು ಪ್ರಯತ್ನ ಪಡುತ್ತಿದೆ. ಯಾಕೆಂದರೆ ಬಿಜೆಪಿಗೆ ರಾಹುಲ್ ಗಾಂಧಿಯವರ ವರ್ಚಸ್ಸು ದಿನೇ ದಿನೇ ಬೆಳೆಯುತ್ತಿರುವುದು ಆತಂಕ ಮೂಡಿಸುತ್ತಿದೆ ಎಂಬುದು ಲೋಕಸತ್ಯ.

ಇದೊಂದು ರೀತಿಯಲ್ಲಿ ಸತ್ಯಕ್ಕಾಗಿ ನಡೆಯುತ್ತಿರುವ ಯುದ್ಧ. ಈ ಯುದ್ಧದಲ್ಲಿ ಅಸತ್ಯವು ಮಣಿದು ಸತ್ಯವು ವಿಜಯಶಾಲಿಯಾಗಲಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಈ ಅಗ್ನಿಪರೀಕ್ಷೆಯಿಂದ ಇನ್ನಷ್ಟು ಪ್ರಕಾಶಮಾನವಾಗಿ ಹೊರಹೊಮ್ಮಲಿದ್ದಾರೆ ಎಂದು ಕೆಪಿಸಿಸಿ ಸೋಶಿಯಲ್ ಮೀಡಿಯಾವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.