Advertisement

ಚಕ್ರತೀರ್ಥನ ನೇತೃತ್ವದ್ದು "ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ" ಅಲ್ಲ. ಅದೊಂದು "ನೈಜ ಇತಿಹಾಸ ಹೊರಬರಬಾರದು ಎಂದು ಹರಸಾಹಸ ಪಡುತ್ತಿರುವ ಆರ್ಯನ್ ಗ್ಯಾಂಗ್"

Advertisement
ಕರ್ನಾಟಕದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿರುವ ಅತಿರಥ ಮಹಾರಥರು ಇದ್ದರೂ ಕೂಡ, ಬಸವರಾಜ ಬೊಮ್ಮಾಯಿ ಸರ್ಕಾರ, ಅವರೆಲ್ಲರನ್ನೂ ಕಡೆಗೆಣಿಸಿ ಆ ಎರಡೂ ಕ್ಷೇತ್ರದಲ್ಲಿ ಯಾವುದೇ ಸಾಧನೆ ಮಾಡಿರದ ರೋಹಿತ್ ಚಕ್ರತೀರ್ಥ ಎಂಬ ಅನಾಮಿಕ, ಪುರೋಹಿತಶಾಹಿ ಮನಸ್ಥಿತಿಯ, ಕುಖ್ಯಾತ ಫೇಸ್‌ಬುಕ್‌ ಟ್ರೋಲರ್‌ನ ನೇತೃತ್ವದಲ್ಲಿ "ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ" ಯನ್ನು ನೇಮಕ ಮಾಡಿದ ಮೊದಲಿಗೆ ಅಥವಾ ನಂತರ ಆತ ಸಂದರ್ಶನಗಳಲ್ಲಿ ಈ ಹಿಂದಿನ ಸಮಿತಿ ಮತ್ತದರ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರನ್ನು "ಬರಗೂರು ಗ್ಯಾಂಗ್" ಎಂದು ಸಂಭೋದಿಸಿದ್ದ. ವಿಷಯ ಇಷ್ಟೇ ಆಗಿದ್ದರೆ, ಮಾತಿನ ಭರದಲ್ಲಿ ಆತನ ಬಾಯಿಂದ ತಪ್ಪು ಉಚ್ಚಾರ ಹೊರಬಿದ್ದಿರಬಹುದು ಎಂದು ಸುಮ್ಮನಿದ್ದು ಬಿಡಬಹುದಾಗಿತ್ತೋ ಏನೋ?

ಆದರೆ, ಆ ನಂತರದ ದಿನಗಳಲ್ಲಿ ನಡೆದ ಆತನ ನೇತೃತ್ವದ ಸಮಿತಿಯ "ಪಠ್ಯಪುಸ್ತಕ ಪರಿಷ್ಕರಣೆ" ಕ್ಷಮಿಸಿ "ತಿರುಚುವಿಕೆ" ಪೂರ್ಣಗೊಂಡ ನಂತರ ನಮಗೆ ಪ್ರಾಮಾಣಿಕವಾಗಿ ಅನ್ನಿಸಿದ್ದು ಏನೆಂದರೆ ಈ "ಚಕ್ರತೀರ್ಥನ ನೇತೃತದಲ್ಲಿ ಬೊಮ್ಮಾಯಿ ಸರ್ಕಾರ ನೇಮಿಸಿದ್ದು ಕೇವಲ ಸಮಿತಿ ಅಲ್ಲ ಅದೊಂದು ಗ್ಯಾಂಗ್ ಎಂದು ಮತ್ತು ಅದರಲ್ಲೂ ಅದು ಕೇವಲ ಗ್ಯಾಂಗ್ ಮಾತ್ರವೇ ಅಲ್ಲದೇ ಅದೊಂದು "ನೈಜ ಇತಿಹಾಸ ಹೊರಬರಬಾರದು ಎಂದು ಹರಸಾಹಸ ಪಡುತ್ತಿರುವ ಆರ್ಯನ್ ಗ್ಯಾಂಗ್" ಎಂಬ ಸತ್ಯ!

ಆರ್ಯನ್ನರ ಕುರಿತು ಇಲ್ಲಿ ಅದೇಕೆ ಪ್ರಸ್ತಾಪಿಸಬೇಕಾಯಿತೆಂದರೆ, ಈ ದೇಶದ ಮೂಲನಿವಾಸಿಗಳಾದ ದ್ರಾವಿಡರ ಇತಿಹಾಸವೇ ಮಹಾ ದುರಂತಮಯವಾದುದು, ಅಮಾನವೀಯವಾದುದು, ಕರುಣಾಜನಕವಾದುದು, ಕ್ರೌರ್ಯಮಯವಾದುದು ಹಾಗೂ ಘೋರವಾದುದು. ಹೌದು, ಈ ಮೇಲಿನ ಕಾರಣಕ್ಕಾಗಿ ಅದೆಲ್ಲವನ್ನೂ ನಾವು ಮತ್ತೊಮ್ಮೆ ನೆನಪು ಮಾಡಿಕೊಳ್ಳಲೇ ಬೇಕಾಗಿದೆ!

ಆರ್ಯನ್ನರು ಈ ದೇಶಕ್ಕೆ ಸುಮಾರು ಮೂರೂವರೆ ಸಾವಿರ ವರ್ಷಗಳ ಹಿಂದೆ, ಮಧ್ಯಪ್ರಾಚ್ಯ ದೇಶಗಳಿಂದ ವಲಸೆ ಬರುವ ಹೊತ್ತಿನಲ್ಲಿ ಈ ದೇಶದಲ್ಲಿ ನಾಯಿ, ಬೆಕ್ಕು, ದನ, ಕುರಿ, ಹುಲಿ, ಚಿರತೆ, ಆನೆ ಮುಂತಾದ ಪ್ರಾಣಿಗಳು ಇರುವಂತೆ ಮನುಷ್ಯ ಕೂಡ ವಾಸವಾಗಿದ್ದ. ಇಲ್ಲಿ ಯಾವುದೇ ಧರ್ಮಗಳು ಇರಲಿಲ್ಲವಾದ ಕಾರಣಕ್ಕಾಗಿ ಆತ ಮನುಷ್ಯ ಧರ್ಮದ ಪಾಲನೆ ಮಾಡಿಕೊಂಡಿದ್ದ. ಆತ ಪ್ರಕೃತಿ ಆರಾಧಕನಾಗಿದ್ದ. ಇಲ್ಲಿ ಗಂಡು- ಹೆಣ್ಣೆಂಬ ಎರಡು ಜಾತಿಗಳು ಬಿಟ್ಟರೆ ಯಾವುದೇ ಜಾತಿ, ವರ್ಣ, ಮೇಲು, ಕೀಳು ಎಂಬ ಭೇದಭಾವ ಇದ್ದಿರಲಿಲ್ಲ.

ಆದರೆ, ಆರ್ಯನ್ನರ ಆಗಮನದ ನಂತರ ಕಾಲಚಕ್ರ ಉರುಳಿದಂತೆ ಇಲ್ಲಿನ ಮೂಲನಿವಾಸಿಗಳಾದ ಆ ನಮ್ಮ ಪೂರ್ವಜರ ಅಜ್ಞಾನ, ಅಸಹಾಯಕತೆ, ಕಪಟತೆ ಅರಿಯದ ನಿಷ್ಕಲ್ಮಷ ಮನೋಭಾವ ಮುಂತಾದವುಗಳನ್ನು ನಿಧಾನವಾಗಿ ದುರುಪಯೋಗ ಪಡಿಸಿಕೊಂಡು, ನಂಬಿಸಿ ಅವರನ್ನು ಪ್ರಾಣಿಪಕ್ಷಿಗಳಿಗಿಂತಲೂ ಹೀನಾಯವಾಗಿ ಆರ್ಯನ್ನರು ಶೋಷಿಸಿದ್ದರು ಎಂಬುದು ಐತಿಹಾಸಿಕ ಸತ್ಯ.

ಹಾಗೆಯೇ, ಈ ನೆಲದ ಮೂಲನಿವಾಸಿಗಳಾದ ದ್ರಾವಿಡರಿಗೆ ಶತಶತಮಾನಗಳ ಕಾಲ ವಿದ್ಯೆ (ಅಕ್ಷರ ಜ್ಞಾನ) ನಿರಾಕರಿಸುವ ಮೂಲಕ ಈ ನೆಲದಲ್ಲಿ ತಮ್ಮದೇ (ದ್ರಾವಿಡರ) ಪೂರ್ವಜರ ಮೇಲೆ ಆ ವಲಸಿಗ ಆರ್ಯನ್ನರು ನಡೆಸಿದ ಸಾಮಾಜಿಕ, ಆರ್ಥಿಕ, ರಾಜಕೀಯ, ದೈಹಿಕ ದೌರ್ಜನ್ಯಗಳ ಸತ್ಯವು ಇತಿಹಾಸದಲ್ಲಿ ದಾಖಲಾಗಿ ಮುಂದಿನ ಜನಾಂಗಕ್ಕೆ ದೊರಕದಂತೆ ಜಾಗೃತೆ ವಹಿಸಿದ್ದರು‌.

ಆ ಕಾಲಕ್ಕೆ ಮತ್ತು ಆ ನಂತರದ ಕಾಲಮಾನದಲ್ಲಿ, ಈ ನೆಲದಲ್ಲಿ ಅಕ್ಷರ ಜ್ಞಾನವಿದ್ದ ಏಕೈಕ ಸಂತಾನಿಗಳು ಆಗಿದ್ದ ಕಾರಣಕ್ಕಾಗಿ ಆ ವಲಸಿಗ ಆರ್ಯನ್ನರು ಆದಿಯಿಂದಲೂ ಹಿಂದೂ ಅರಸರುಗಳ ಆಸ್ಥಾನದಲ್ಲಿ ಅಧಿಕಾರದ ಸ್ಥಾನ ಹೊಂದಿದ್ದರು ಹಾಗೆಯೇ ಅದೇ ಅಧಿಕಾರವನ್ನು ಬಳಸಿಕೊಂಡು ದ್ರಾವಿಡರಿಗೆ ವಿದ್ಯೆ ನಿರಾಕರಿಸುವ ಕ್ರೂರ ವ್ಯವಸ್ಥೆಯನ್ನು ಮುಂದುವರಿದುಕೊಂಡು ಬಂದಿದ್ದರು. ದ್ರಾವಿಡರು ಕೇವಲ ಆರ್ಯನ್ನರ ಚಾಕರಿ ಮಾಡಲು ಮತ್ತು ಸೈನಿಕರಾಗಿ ಯುದ್ದದಲ್ಲಿ ಪ್ರಾಣಕೊಡಲು ಮಾತ್ರವೇ ಸೀಮಿತರಾಗಿದ್ದರು.

ಯುದ್ದದಲ್ಲಿ ಸತ್ತ ಸೈನಿಕರ ಮತ್ತಿತರ ಕಾರಣದಿಂದ ಮೃತರಾದ ದ್ರಾವಿಡರ ಪತ್ನಿಯರು ದೇಹತ್ಯಾಗ ಮಾಡಲು ಸತಿಸಹಗಮನ ಪದ್ದತಿ ಕೂಡ ಜಾರಿಗೊಳಿಸಿದ್ದರು. ಮತ್ತದರ ನಂತರ ಆ ಸೈನಿಕರ ಮತ್ತಿತರರ ಅನಾಥ ಮಕ್ಕಳ ಜೀತ ಮುಂದುವರಿಕೆ ಆಗುತ್ತಿತ್ತು ಎಂಬುದು ಇತಿಹಾಸವನ್ನು ಬಿಡಿಬಿಡಿಯಾಗಿ ಓದಿದವರಿಗೆ ಮನನವಾಗುವ ಸತ್ಯ.

(ವಿದ್ಯೆಯ ಕುರಿತಾಗಿ ಈ ಮೇಲಿನ ಪ್ಯಾರಾದಲ್ಲಿ "ಅಕ್ಷರ ಜ್ಞಾನ" ಎಂದು ಆವರಣದಲ್ಲಿ ನಮೂದಿಸಲು ಕಾರಣವೇನೆಂದರೆ ಆ ಕಾಲಕ್ಕೆ ಮಡಕೆ ಮಾಡುವ ವಿದ್ಯೆಯನ್ನು ಕುಂಬಾರ ಜಾತಿಗರಿಗೆ ಮೀಸಲಿಟ್ಟು, ಚಪ್ಪಲಿ ಹೊಲಿಯುವ ವಿದ್ಯೆಯನ್ನು ಚಮ್ಮಾರ ಜಾತಿಗರಿಗೆ ಮೀಸಲಿಟ್ಟು, ಕತ್ತಿ ಕೊಡಲಿ ಹಾರೆ ಮುಂತಾದವುಗಳ ತಯಾರಿಕೆಯ ವಿದ್ಯೆಯನ್ನು ಕಮ್ಮಾರ ಜಾತಿಗರಿಗೆ ಮೀಸಲಿಟ್ಟು, ಕೂದಲು ಕತ್ತರಿಸುವ ವಿದ್ಯೆಯನ್ನು ಕ್ಷೌರಿಕ ಜಾತಿಗರಿಗೆ ಮೀಸಲಿಟ್ಟು ಹಾಗೆಯೇ ಶೌಚ ಎತ್ತುವ ವಿದ್ಯೆಯನ್ನು ಕ್ಷಮಿಸಿ "ಹೊಲಸು ಕೆಲಸ"ವನ್ನು ಮತ್ತೊಂದು ವರ್ಗದ ಮುಗ್ಧ ಜನರಿಗೆ ಮೀಸಲಿಟ್ಟು ಅವರನ್ನು ಅಸ್ಪೃಶ್ಯರು ಎಂದು ಕರೆದು ಸಮಾಜದಿಂದ ದೂರವಿಟ್ಟು, ತಾವು ಮಾತ್ರವೇ ಅಕ್ಷರಜ್ಞಾನ ಪಡೆಯಬೇಕು, ಅಧಿಕಾರದ ಸ್ಥಾನ ಹೊಂದಬೇಕು, ಭೂಮಿಯ ಹಕ್ಕು ಪಡೆಯಬೇಕು, ಇತರೆಲ್ಲಾ ಜಾತಿಗಳ ಜನರು ಅವರವರ ಕುಲಕಸುಬಿನ ಜೊತೆಗೆ ಕೇವಲ ತಮ್ಮ ಚಾಕರಿಯನ್ನು ಮಾತ್ರವೇ ಮಾಡಿಕೊಂಡು ಸೀಮಿತ ಆದಾಯದಲ್ಲಿ ತಾವು ಕೊಟ್ಟದ್ದನ್ನು ಮಾತ್ರವೇ ತಿಂದು ಬದುಕಿರಬೇಕು ಎಂಬ ಅಲಿಖಿತ ಕಾನೂನುಗಳನ್ನು ಜಾರಿಗೊಳಿಸಿ ಅದನ್ನು ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಸಫಲತೆ ಕಂಡಿದ್ದರು ಈ ಆರ್ಯನ್ನರು.)

ಕಾಲ ಉರುಳಿದಂತೆ.. ನಿಯತ್ತು ಎಂಬ ಶಬ್ದದ ಅರ್ಥವೇ ತಿಳಿಯದ ಇದೇ ಆರ್ಯನ್ನರು, ಸಂಚುಮಾಡಿ ಹಿಂದೂ ಅರಸರ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಂಡು, ಅಕ್ಕಪಕ್ಕದ ರಾಜರುಗಳೊಳಗೆ ಭಿನ್ನಮತವನ್ನು ತಂದಿಟ್ಟು ಆ ಮೂಲಕ ಅವರುಗಳ ಒಗ್ಗಟ್ಟನ್ನು ಒಡೆದು, ಬಲಹೀನಗೊಳಿಸಿ ಈ ದೇಶದಲ್ಲಿ ಮೊಘಲ ಅರಸರ ಸಾಮ್ರಾಜ್ಯ ಸ್ಥಾಪಿಸಲು ನೆರವಾದದ್ದು ಮತ್ತು ಅವರ ಆಸ್ಥಾನದಲ್ಲೂ ಕೂಡ ಆಯಕಟ್ಟಿನ ಜಾಗಗಳಲ್ಲಿ ಉನ್ನತವಾದ ಅಧಿಕಾರದ ಸ್ಥಾನ, ಸಕಲ ಸವಲತ್ತುಗಳನ್ನು ಪಡೆದು ಹಾಗೂ ಮತ್ತಷ್ಟು ಕಾಲ ಕಳೆದಂತೆ ಅದೇ ರಕ್ತಬೀಜಾಸುರರ ಸಂತಾನಿಗಳು ಆ ಕಾಲಮಾನದ ತಮ್ಮ ಸ್ವಾರ್ಥಕ್ಕಾಗಿ ಅದೇ ಮೊಘಲರ ವಿರುದ್ದ ಕುತಂತ್ರ ಮಾಡಿ ಇಂಗ್ಲೀಷರಿಗೆ ಬೆಂಬಲ ನೀಡಿ, ಹಿಂದೂ ಅರಸರಿಗೆ ಮಾಡಿದ್ದ ದ್ರೋಹವನ್ನೆ ಪುನರಾವರ್ತಿಸಿ ಆಂಗ್ಲರ ಸಾಮ್ರಾಜ್ಯ ಸ್ಥಾಪನೆಯಾಗಲು ಕಾರಣವಾದದ್ದು ಕೂಡ ಇತಿಹಾಸದ ಮತ್ತೊಂದು ಭಾಗವೇ ಆಗಿದೆ.

ಆದರೆ ಗಮನಿಸಿ, ಹಿಂದೂ, ಮುಸ್ಲಿಂ, ಬೌದ್ಧ, ಜೈನ, ಪಾರ್ಸಿ, ಸಿಖ್ ಮುಂತಾದ ಧರ್ಮಗಳ ಅರಸರುಗಳು ಈ ನೆಲದಲ್ಲಿ ಆಳ್ವಿಕೆ ಮಾಡಿದ್ದರೂ ಕೂಡ, ಈ ಆರ್ಯನ್ನರು ಅವರುಗಳ ಆಸ್ಥಾನದಲ್ಲಿ ಪ್ರಮುಖ ಹುದ್ದೆ ಹೊಂದಿದ್ದರೂ ಕೂಡ, ಆರ್ಯನ್ನರ ಗುಲಾಮಗಿರಿಯ- ಜೀತದ ಹೊರತಾಗಿ ಈ ನೆಲದ ಮೂಲನಿವಾಸಿಗಳಾದ ದ್ರಾವಿಡರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಯಲ್ಲಿ ಕಿಂಚಿತ್ತೂ ಬದಲಾವಣೆ ಕಂಡಿರಲೇ ಇಲ್ಲ.

ಈ ನಡುವೆ ಇದೆಲ್ಲದರ ಅರಿವಿದ್ದ ಮತ್ತು ಆರ್ಯನ್ನರೆಂಬ ಕುತಂತ್ರಿಗಳ ಪ್ರಭಾವ, ದುಷ್ಟತನ ಶಮನಗೊಳಿಸುವ ಉದ್ದೇಶ ಹೊಂದಿದ್ದ ಆಂಗ್ಲರು, ಆ ಕಾಲಕ್ಕೆ ಸ್ಥಾಪಿಸಿದ್ದ ಚರ್ಚ್‌ಗಳ ಮೂಲಕ ಈ ನೆಲದ ಮೂಲನಿವಾಸಿಗಳಾದ ದ್ರಾವಿಡರಿಗೆ ವಿದ್ಯೆ ಕೊಡಲು ಆರಂಬಿಸಿದ್ದು ಮತ್ತು ಆ ದ್ರಾವಿಡರು ವಿದ್ಯಾವಂತರಾಗಿ ಆರ್ಯನ್ನರಿಗೆ ಸರಿಸಮನಾಗಿ ಸ್ಪರ್ದೆ ನೀಡುವ ಮಟ್ಟಕ್ಕೆ ಬೆಳೆದದ್ದು ಆರ್ಯನ್ನರ ಕಣ್ಣನ್ನು ಕೆಂಪಾಗಿಸಿದ್ದವು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿರುವ ಸತ್ಯ.

ಆ ನಂತರದ ದಿನಗಳಲ್ಲಿ ವಿದ್ಯಾವಂತರಾದ ಜನರಿಂದ ಈ ದೇಶದಲ್ಲಿ ಹುಟ್ಟಿಕೊಂಡ ಸ್ವಾತಂತ್ರ್ಯ ಹೋರಾಟ, ಹೋರಾಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪಾತ್ರ, ಆ ನಂತರದ ಯಶಸ್ಸು, 1947ರಲ್ಲಿ ಈ ದೇಶಕ್ಕೆ ಬ್ರಿಟಿಷರಿಂದ ದೊರೆತ ''ಅಧಿಕಾರದ ಹಸ್ತಾಂತರದ ಸ್ವಾತಂತ್ರ್ಯ", ನವೆಂಬರ್‌ 26, 1949ರಂದು ಅಂಗಿಕರಿಸಲ್ಪಟ್ಟು, ಜನವರಿ 26, 1950ರಂದು ಜಾರಿಗೆ ಬಂದ "ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು" ಸಿದ್ದಾಂತದ ದ್ರಾವಿಡರಿಗೂ ಆರ್ಯನ್ನರ ಸರಿಸಮನಾದ ಹಕ್ಕುಗಳನ್ನು ನೀಡುವ ಅಂಬೇಡ್ಕರ್ ರಚಿತ ಸಂವಿಧಾನ ಮುಂತಾದವುಗಳು ತಮ್ಮ ಸರ್ವಾಧಿಕಾರಕ್ಕೆ ಭಂಗ ತರಬಹುದು ಎಂಬ ವಿಚಾರಗಳ ಕುರಿತು ಮೊದಲೇ ಅರಿತಿದ್ದ ಕಾರಣಕ್ಕಾಗಿ ಆರ್ಯನ್ನರುಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಅದೇ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಿಟೀಷರಿಗೆ ಮಾಹಿತಿದಾರರಾಗಿ ಕೆಲಸ ಮಾಡಿದ್ದರು. ಸ್ವಾತಂತ್ರ್ಯ ಹೋರಾಟ ನಡೆಯದಂತೆ ಮಸಲತ್ತು ನಡೆಸಿದ್ದರು. ಪ್ರತ್ಯೇಕ ಸಂಘಟನೆ ಸ್ಥಾಪಿಸಿ ಯುವಕರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು ಎಂಬುದು ಕೂಡ ಐತಿಹಾಸಿಕ ಸತ್ಯವಾಗಿದೆ.

ಸ್ವಾತಂತ್ರ್ಯಾ ನಂತರ ಅಧಿಕಾರವನ್ನು ಕೈವಶ ಮಾಡಿಕೊಳ್ಳುವ, ಆ ಮೂಲಕ ಅಸಮಾನತೆಯನ್ನು ಪ್ರತಿಪಾದಿಸುವ ಮನುಸ್ಮೃತಿ ಸಂವಿಧಾನವನ್ನು ಜಾರಿಗೊಳಿಸುವ ಹುನ್ನಾರವನ್ನು ಆರ್ಯನ್ ಪಡೆ ಹೊಂದಿತ್ತಾದರೂ ಅದು ತಮಗೆ ಒಲಿಯದು ಎಂದು ಅರಿವಾದ ನಂತರ ನಾಥೂರಾಂ ಘೋಡ್ಸೆ ಎಂಬ ಹಂತಕನನ್ನು ಛೂ ಬಿಟ್ಟು ಗಾಂಧಿ ಹತ್ಯೆಯನ್ನು ನಡೆಸುವ ಅವರುಗಳು ಆ ನಂತರದಲ್ಲಿ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರಾದರೂ ನೆಹರೂ, ಇಂದಿರಾ, ರಾಜೀವ್, ಪಿವಿಎನ್, ಮನಮೋಹನ್ ಸಿಂಗ್ ಮುಂತಾದ ನಾಯಕರುಗಳ ದೂರದರ್ಶಿತ್ವದ ಆಡಳಿತದಿಂದಾಗಿ ಅವರ ಕನಸು ನನಸಾಗದಿದ್ದರೂ 2014 ಮತ್ತು 2019ರಲ್ಲಿ ನಿರಂತರ ಎರಡು ಬಾರಿ ದೊರಕಿದ ಅಧಿಕಾರವನ್ನು ದುರ್ಭಳಕೆ ಮಾಡಿಕೊಂಡು ತಮ್ಮ ಪರವಾದ ಕಾನೂನುಗಳನ್ನು ರೂಪಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ. ರೈತ ವಿರೋಧಿಯಾಗಿರುವ ಮೂರು ಕೃಷಿ ಮಸೂದೆ, ಈ ನೆಲದ ಮೂಲನಿವಾಸಿಗಳ ಪೌರತ್ವ ಕಸಿದುಕೊಳ್ಳುವ ಸಿಎಎ, ಎನ್‌ಆರ್‌ಸಿ ಕಾಯ್ದೆಗಳು ಹಾಗೂ ಈ ದೇಶದ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದ ನೋಟುಬ್ಯಾನ್ ಕೂಡ ಅವರುಗಳ ಹಿಡೆನ್ ಅಜೆಂಡಾದ ಭಾಗವಾಗಿದೆ ಎಂಬುದು ರಾಜಕೀಯ ವಿಶ್ಲೇಶಕರ ಅಭಿಪ್ರಾಯವಾಗಿದೆ.

ಈ ನಡುವೆ ಸ್ವಾತಂತ್ರ್ಯ ಸಿಗುವ ವೇಳೆಗೆ ಕೇವಲ 4% ಆಸುಪಾಸು ಇದ್ದ ಸಾಕ್ಷರತೆಯ ಪ್ರಮಾಣವನ್ನು ಕಾಂಗ್ರೆಸ್ ಕಳೆದ ಎಪ್ಪತ್ತು ವರ್ಷಗಳ ತನ್ನ ಆಡಳಿತಾವಧಿಯಲ್ಲಿ ದೇಶದಾದ್ಯಂತ ಗ್ರಾಮಗ್ರಾಮಗಳ ಮೂಲೆಮೂಲೆಗಳಲ್ಲಿ ಶಾಲೆಗಳನ್ನು ನಿರ್ಮಿಸಿ ಆ ಮೂಲಕ 99.9% ಸಾಕ್ಷರತೆಯ ಪ್ರಮಾಣವನ್ನು ದಾಖಲಿಸಿದ್ದು ಕೂಡ ಆ ವರ್ಗದ ಗುಪ್ತಕಾರ್ಯಸೂಚಿಗೆ ವಿರುದ್ಧವಾದುದಾಗಿದೆ ಎನ್ನುವುದು ಇತಿಹಾಸಕಾರರ ಅಭಿಪ್ರಾಯವಾಗಿದೆ.

ಇಷ್ಟೆಲ್ಲಾ ಐತಿಹಾಸಿಕ ಸತ್ಯಗಳ ಹೊರತಾಗಿಯೂ ಮುಖ್ಯ ವಿಚಾರಕ್ಕೆ ಬರುವುದಾದರೆ ರೋಹಿತ್ ಚಕ್ರತೀರ್ಥನೆಂಬ ಆರ್ಯನ್ನರ ಪ್ರತಿನಿಧಿಯನ್ನು ಬಸವರಾಜ ಬೊಮ್ಮಾಯಿಯವರ ಸರ್ಕಾರದ ಮೂಲಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಲು "ವಿವಿಧ ಧರ್ಮಗಳ ಉದಯ ಎಂಬ ಪಾಠ ದಿಂದಾಗಿ ವೈದಿಕ ವರ್ಗದ ಜನರಿಗೆ ನೋವಾಗಿದೆ" ಎಂಬ ನೆಪವೇ ಆಗಿದೆ. ಆರ್ಯನ್ನರ ವೈದಿಕ ಧರ್ಮ ನಡೆಸುತ್ತಿರುವ ಅಸ್ಪೃಶ್ಯತೆ ಆಚರಣೆ, ಮೂಲಭೂತ ಸೌಕರ್ಯಗಳ ನಿರಾಕರಣೆ, ಆ ಮೂಲಕ ಇತರರಿಗೆ ಮಾಡುತ್ತಿರುವ ಆರ್ಥಿಕ, ಶೈಕ್ಷಣಿಕ, ದೈಹಿಕ, ಲೈಂಗಿಕ ಶೋಷಣೆ, ಆ ಕಾರಣಕ್ಕಾಗಿ ವಿವಿಧ ಸ್ವತಂತ್ರ ಧರ್ಮಗಳ ಉದಯ ಮತ್ತು ಮುಸ್ಲಿಂ ಕ್ರೈಸ್ತ ಮುಂತಾದ ಧರ್ಮಗಳಿಗೆ ಮತಾಂತರ ಆಗಲು ಕಾರಣವಾದ ಕಹಿಸತ್ಯದ ವಿವರಗಳು ಬಹಿರಂಗವಾಗುವ ಕೀಳರಿಮೆಯ ಕಾರಣಕ್ಕಾಗಿ ಆ ಪಾಠದ ಕುರಿತು ಅವರುಗಳು ಆತಂಕ ಹೊಂದಿದ್ದರು.

ನಾಡಗೀತೆಯನ್ನು ವಿಕೃತಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಮತ್ತು ಕನ್ನಡ ಬಾವುಟವನ್ನು ಒಗೆದು ಒಣಗಿಸಿದ್ದ ತನ್ನ ಒಳಚಡ್ಡಿಗೆ ಹೋಲಿಸಿ ಬರೆದಿದ್ದ ರೋಹಿತ್ ಚಕ್ರತೀರ್ಥ ಎಂಬ ಹೆಸರಿನ ಪೂರ್ವಾಗ್ರಹ ಪೀಡಿತ, ವಿಕೃತ ಮನಸ್ಥಿತಿಯ ವ್ಯಕ್ತಿ ಮೊದಲಿಗೆ "ವಿವಿಧ ಧರ್ಮಗಳ ಉದಯ" ಎಂಬ ಪಾಠವನ್ನು ಕಿತ್ತೆಸೆಯುವುದರ ಜೊತೆಗೆ ಬಸವಣ್ಣ, ನಾರಾಯಣ ಗುರುಗಳು, ಅಂಬೇಡ್ಕರ್, ಕುವೆಂಪು, ಪುರಂದರದಾಸರು, ಕನಕದಾಸರು, ಸಾವಿತ್ರಿಬಾಯಿ ಪುಲೆ, ಸಿದ್ದಗಂಗಾ, ಆದಿಚುಂಚನಗಿರಿ ಮಠಗಳು,
ಶಂಕರಾಚಾರ್ಯ ಮುಂತಾದವರನ್ನು ಕೂಡ ಅವಮಾನಿಸಿ, ಕೆಲವು ಮುಖ್ಯ ಮಾಹಿತಿಗಳ ಕೈಬಿಟ್ಟು, ಮತ್ತೆ ಕೆಲವು ನೈಜ ವಿಚಾರ ತಿರುಚಿ ಪಠ್ಯ ರಚಿಸಿ ಪ್ರಕಟಿಸಿರುವ ಕುರಿತು ಇದೀಗ ವಿವಾದ ಹುಟ್ಟಿಕೊಂಡಿದೆ. ಪಠ್ಯದಲ್ಲಿ ಕನ್ನಡ ಬಾವುಟ ಮುಂತಾದವುಗಳನ್ನು ಕಡೆಗೆಣಿಸಲಾಗಿದೆ. ಖಂಡಿತವಾಗಿಯೂ ಇದು ಆಕಸ್ಮಿಕವೂ ಅಲ್ಲ, ಕಾಕತಾಳಿಯವೂ ಅಲ್ಲ. ಇದು ಪೂರ್ವನಿರ್ಧರಿತ!

ಆ ನಿಟ್ಟಿನಲ್ಲಿ ವಿಶ್ಲೇಷಿಸುವುದಾದರೆ ಸ್ಥಳೀಯ ಅಸ್ಮಿತೆಯನ್ನು ಪ್ರತಿಪಾದಿಸುವ ಈ ಮೇಲಿನ ಮಹಾನುಭಾವರುಗಳ ಪಾಠಗಳು ತಮ್ಮ ಗುಪ್ತಕಾರ್ಯಸೂಚಿಗಳಿಗೆ ಮಾರಕವಾಗಿದೆ ಎಂದವರು ಭಾವಿಸಿದಂತಿದೆ. ಆ ಕಾರಣಕ್ಕಾಗಿ ಶಾಲಾ ಮಕ್ಕಳ ಪಠ್ಯಪುಸ್ತಕಗಳಲ್ಲಿನ ಇತಿಹಾಸವನ್ನು ವಿರೂಪಗೊಳಿಸುವ ಮೂಲಕ ವಲಸಿಗ ಆರ್ಯನ್ನರು ಈ ದೇಶವನ್ನು ಮತ್ತೊಮ್ಮೆ ತಮ್ಮ ಕೈವಶ ಮಾಡಿಕೊಳ್ಳುವ ಹುನ್ನಾರ ಹೊಂದಿದ್ದಾರೆ. ಈ ಕುರಿತು ಪ್ರಜ್ಞಾವಂತರಾದ ನಾವು ನೀವು ಚಿಂತಿಸಬೇಕಿದೆ, ಜಾಗೃತರಾಗಬೇಕಿದೆ.

ಸ್ನೇಹಿತರೆ, ಇಷ್ಟೆಲ್ಲಾ ಓದಿದ ಮೇಲೂ ನಿಮಗೆ ರೋಹಿತ್ ಚಕ್ರತೀರ್ಥನದ್ದು "ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ" ಅಲ್ಲ. ಖಂಡಿತವಾಗಿಯೂ ಅದೊಂದು "ಪಠ್ಯಪುಸ್ತಕದಲ್ಲಿನ ಐತಿಹಾಸಿಕ ಮಾಹಿತಿಗಳನ್ನು ತಿರುಚುವ, ಮರೆಮಾಚುವ ಆರ್ಯನ್ ಗ್ಯಾಂಗ್" ಎಂದು ಅನ್ನಿಸದಿರುವುದೇ?
Advertisement
Advertisement
Recent Posts
Advertisement