Advertisement

|ಈ ದೇಶಕ್ಕೆ ಆಪತ್ತು ತರಲಿದೆ ಮನುವಾದ|ಸಾಮಾನ್ಯರೂ ದುಷ್ಟ ನರಮೇಧಗಳ ಸೈನಿಕರಾಗುವುದರ ರಹಸ್ಯವೇನು?

Advertisement
ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು )

ಜಗತ್ತಿನಲ್ಲಿ 20-21ನೇ ಶತಮಾನಗಳಲ್ಲಿ ಭಾರತವನ್ನೂ ಒಳಗೊಂಡಂತೆ ಹಲವರು ದೇಶಗಳಲ್ಲಿ ನಡೆದ ಮತ್ತು ನಡೆಯುತ್ತಿರುವ ನರಮೇಧಗಳಿಗೆ ಹಲವು ಪ್ರಮುಖ ಕಾರಣಗಳಿವೆ. ಅವುಗಳಲ್ಲಿ ಒಂದು ಮುಖ್ಯ ಕಾರಣ ಆಯಾ ದೇಶಗಳ ಆಳುವವರ್ಗಗಳು ಅನುಸರಿಸಿದ ನೀತಿಗಳಿಂದಾಗಿ ಆಯಾ ಸಮಾಜಗಳು ಎದುರಿಸಿದ ಸಾಮಾಜಿಕ- ಆರ್ಥಿಕ- ಸಾಂಸ್ಕೃತಿಕ ಬಿಕ್ಕಟ್ಟುಗಳು. ಅಷ್ಟೇ ಮುಖ್ಯವಾದದ್ದು ಆ ದೇಶಗಳ ಆಳುವವರ್ಗಗಳು ಬಹುಸಂಖ್ಯಾತರಲ್ಲಿ ತಾವು ಅಲ್ಪಸಂಖ್ಯಾತರಿಂದ ಶೋಷಣೆಗೊಳಗಾಗಿದ್ದೇವೆ ಎಂಬ ಬಹುಸಂಖ್ಯಾತ ಬಲಿಪಶು (ವಿಕ್ಟಿಮ್) ಮನಸ್ಥಿತಿಯನ್ನು ಸೃಷ್ಟಿಸಿದ್ದು.

ಸಮಾಜವೊಂದರಲ್ಲಿ ಇಂಥಾ ಮನಸ್ಥಿತಿಯನ್ನು ಸೃಷ್ಟಿಸಿದಾಗ ಸಾಧಾರಣ ಸಂದರ್ಭಗಳಲ್ಲಿ ಸಜ್ಜನರಾಗಿರುವ ಬಹುಸಂಖ್ಯಾತರೂ ಕೂಡ ಅಸಹಾಯಕರ, ಅಮಾಯಕರ ನರಮೇಧಕ್ಕೆ ಮೌನ ಸಮ್ಮತಿ ನೀಡುತ್ತಾರೆ ಮಾತ್ರವಲ್ಲ. ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅಥವಾ ಸಕ್ರಿಯ ಸಮ್ಮತಿಯನ್ನು ನೀಡುತ್ತಾರೆ. ಇದು ಹೇಗೆ ಸಾಧ್ಯವಾಗುತ್ತದೆ?

ಸಾಮಾನ್ಯ ಮನುಷ್ಯರೂ ಕೂಡ ಇತಿಹಾಸದಲ್ಲಿ ಬರ್ಬರ ನರಮೇಧ ನಡೆಸುವಷ್ಟು ದುಷ್ಟರಾಗಿ ಹೇಗೆ ಬದಲಾದರು? ಹೇಗೆ ಬದಲಾಗಬಲ್ಲರು?
ಭಾರತದ ಇಂದಿನ ಪರಿಸ್ಥಿತಿಯಲ್ಲಿ ಈ ಪ್ರಶ್ನೆಗಳನ್ನು ಅತ್ಯಂತ ತುರ್ತಾಗಿ ಅರ್ಥಮಾಡಿಕೊಳ್ಳಬೇಕಿದೆ. ಇತಿಹಾಸದಿಂದ ಈ ಸಂದರ್ಭದಲ್ಲಿ ಕಲಿಯಬಹುದಾದಷ್ಟು ಪಾಠಗಳನಾದರೂ ಕಲಿಯಬೇಕಿದೆ.

ವಿಶ್ವಸಂಸ್ಥೆಯ ಪ್ರಕಾರ ಜಿನೋಸೈಡ್-ನರಮೇಧ ಎಂದರೆ :

"ಒಂದು ರಾಷ್ಟ್ರೀಯ, ಜನಾಂಗಿಯ, ಧಾರ್ಮಿಕ ಅಥವಾ ವರ್ಣೀಯ ಗುಂಪನ್ನು, ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡುವ ಉದ್ದೇಶದಿಂದ ಈ ಕೆಳಗಿನ ಯಾವುದೇ ಕ್ರಮಗಳನ್ನು ಎಸಗುವುದನ್ನು ನರಮೇಧದ ಕ್ರಮ- ಜಿನೋಸೈಡಲ್- ಎಂದು ಪರಿಗಣಿಸಲಾಗುವುದು: ಒಂದು ನಿರ್ದಿಷ್ಟ ಗುಂಪಿನ ಸದಸ್ಯರನ್ನು ಕೊಲ್ಲುವುದು; ಆ ಗುಂಪಿನ ಸದಸ್ಯರಿಗೆ ಗಂಭೀರವಾದ ಮಾನಸಿಕ ಅಥವಾ ದೈಹಿಕ ಹಾನಿಗಳನ್ನು ಉಂಟುಮಾಡುವುದು; ಆ ನಿರ್ದಿಷ್ಟ ಗುಂಪಿನ ಭೌತಿಕ ಅಸ್ಥಿತ್ವವು ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡಬೇಕೆಂಬ ಉದ್ದೇಶದಿಂದಲೇ ದುರ್ಭರ ಜೀವನಸ್ಥಿತಿಗತಿಗಳನ್ನು ಸೃಷ್ಟಿಸುವುದು; ಆ ನಿರ್ದಿಷ್ಟ ಗುಂಪಿನ ಸದಸ್ಯರ ಸಂತಾನ ವೃದ್ಧಿಯಾಗದಂತಹ ಕ್ರಮಗಳನ್ನು ಜಾರಿ ಮಾಡುವುದು ಅಥವಾ ಗುಂಪಿನ ಮಕ್ಕಳನ್ನು ಮತ್ತೊಂದು ಗುಂಪಿಗೆ ಹಸ್ತಾಂತರಿಸುವುದು"

ಆದರೆ ಇಂಥಾ ಪರಿಸ್ಥಿತಿಯು ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ. ಮತ್ತು ಇಂಥಾ ನರಮೇಧಗಳು ಆಯಾ ದೇಶಗಳ ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಮೇಲೆ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಂತಕ ಪಡೆಗಳು ಬಹುಪಾಲು ಜನರ ಸಮ್ಮತಿಯೊಂದಿಗೆ ಹಾಗೂ ಪ್ರಭುತ್ವದ ಸಕ್ರಿಯ ಅಥವಾ ಪರೋಕ್ಷ ಭಾಗೀದಾರಿಕೆಯೊಂದಿಗೆ ನಡೆಸುತ್ತಾರೆ.

ಜಗತ್ತಿನಾದ್ಯಂತ ನಡೆಯುತ್ತಿರುವ ಇಂಥ ನರಮೇಧಗಳ ಬಗ್ಗೆಯೇ ವಿಶೇಷ ಅಧ್ಯಯನ ಮಾಡುತ್ತಿರುವ ಪ್ರೊಫೆಸರ್ ಹೆಲೆನ್ ಫೇನ್ ಅವರ ಪ್ರಕಾರ ಈ ಪ್ರಕ್ರಿಯೆಗಳು ಸಾಮಾನ್ಯರನ್ನು ದುಷ್ಟರನಾಗಿಸುವುದು ಹೀಗೆ:

"ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದಹಾಗೆಯೋ ಅಯೋಜಿತವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಈ ಭಾವನೆಗಳ ಮೂಲಕ ಜನಮಾನಸದಲ್ಲಿ ಸರ್ವಸಹಜವಾಗಿ ಇತರ ಮನುಷ್ಯರನ್ನು ನಮ್ಮ ನೈತಿಕ ಹೊಣೆಗಾರಿಕೆಯ ಲೋಕದಿಂದ ಹೊರಗಿರಿಸುವ ತನಕ ನಡೆಯುತ್ತಲೇ ಇರುತ್ತದೆ.

(Accounting For Genocide, Helen Fein).

ಈ ಅಧ್ಯಯನವನ್ನೇ ಮುಂದುವರೆಸುತ್ತಾ ಮತ್ತೊಬ್ಬ ವಿದ್ವಾಂಸ ಜೇಮ್ಸ್ ವಾಲರ್ ಅವರು:

" ನರಮೇಧಕ್ಕೆ ಮುನ್ನ ಸಮಾಜ ಮತ್ತು ವ್ಯಕ್ತಿಗಳನ್ನು ಹಲವಾರು ರೀತಿಯಲ್ಲಿ ಬರ್ಬರಗೊಳಿಸಲಾಗಿರುತ್ತದೆ. ಉದಾಹರಣೆಗೆ ತಾವು ನರಮೇಧ ಮಾಡಲಿರುವ ಸಮುದಾಯವನ್ನು ಸತತವಾಗಿ ನಮ್ಮವರಲ್ಲವೆಂದು ಚಿತ್ರಿಸಲಾಗುತ್ತದೆ. ಬಹುಸಂಖ್ಯಾತ ಸಮಾಜಕ್ಕೆ ವಿಕ್ಟಿಂ ಸಮುದಾಯ ಬಗ್ಗೆ ಇದ್ದ ಭಾವನಾತ್ಮಕ ಸಂಬಂಧಗಳು ಕಡಿತಗೊಳಿಸಿ ಭಾವರಹಿತಗೊಳಿಸಿರಲಾಗುತ್ತದೆ. ಆ ಸಮುದಾಯದ ಜೊತೆಗೆ ಉಳಿದವರ ಸಂವಹನ ಮತ್ತು ಜೊತೆಗೊಳ್ಳುವಿಕೆಗಳು ನಿಧಾನವಾಗಿ ಕಡಿಮೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳ ಮೂಲಕ ವಿಕ್ಟಿಂ ಸಮುದಾಯವನ್ನು "ಸಾಮಾಜಿಕವಾಗಿ ಸಾಯಿಸಿರಲಾಗುತ್ತದೆ". ಇದರಿಂದ ಬಹುಸಂಖ್ಯಾತ ಸಮುದಾಯ ವಿಕ್ಟಿಂ ಸಮುದಾಯದ ಬಗ್ಗೆ ನಿರ್ಲಿಪ್ತವಾಗುತ್ತದೆ. ಮಾತ್ರವಲ್ಲದೆ ಕ್ರಮೇಣ ಬಲಿಪಶುವಾಗುವ ಸಮುದಾಯವನ್ನು ತನ್ನ ನೀತಿ ಸೂತ್ರಗಳು, ನಿಯಮಗಳು ಮತ್ತು ನ್ಯಾಯಸಂಹಿತೆಗಳ ವಲಯದಿಂದ ಹೊರದೂಡುತ್ತದೆ. ಈ ಪ್ರಕ್ರಿಯೆಗಳೇ ಆ ಸಮಾಜವು ಬರ್ಬರ ಅನಾಗರಿಕ ನರಮೇಧಗಳನ್ನು ಮತ್ತು ಕ್ರೌರ್ಯಗಳನ್ನು ಸಮರ್ಥಿಸುವಂತೆ ಮಾಡುತ್ತದೆ"
ಎಂದು ವಿವರಿಸುತ್ತಾರೆ.
(James Waller- Becoming Evil- How Ordinary People Commit Genocide and Mass Killing)

ಹನ ಅರೆಂಡ್ತ್ ಎಂಬ ಯೆಹೋದಿ ಚಿಂತಕಿ ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಯೆಹೂದಿಗಳ ನರಮೇಧದಕ್ಕೆ ನಿರ್ಲಿಪ್ತವಾಗಿ ನಾಯಕತ್ವ ಕೊಟ್ಟ ನಾಜಿ ನಾಯಕ ಐಶ್ ಮನ್ ನ ವಿಚಾರಣೆಯನ್ನು ಹತ್ತಿರದಿಂದ ಅಧ್ಯಯನ ಮಾಡುತ್ತಾರೆ…ಅದನ್ನು ಆಧರಿಸಿ ಅವರು ಬರೆದ ಮಹತ್ವದ ಕೃತಿ Banality Of Evil ನಲ್ಲಿ ಹೀಗೆ ಹೇಳುತ್ತಾರೆ:

" ಐಶ್ ಮನ್ ನಂತವರು ಕಾಡುವುದೇಕೆಂದರೆ ಅವನಂತವರು ಅಲ್ಲಿ ಸಾವಿರಾರು ಮಂದಿಯಿದ್ದಾರೆ. ಮತ್ತು ಅವರಲ್ಲಿ ಬಹಳಷ್ಟು ಜನ ವಿಕೃತ ಮನಸ್ಸುಳ್ಳವರೂ ಅಲ್ಲ. ಅಥವಾ ಹಿಂಸಾನಂದಿಗಳೂ ಅಲ್ಲ. ಅಂಥ ಬಹಳಷ್ಟು ಜನ ಈಗಲೂ- ಆಗಲೂ ಭೀತಿಹುಟ್ಟಿಸುವಷ್ಟು ನಾರ್ಮಲ್ ಸ್ಥಿತಿಯಲ್ಲೇ ಇದ್ದಾರೆ. ನಮ್ಮ ಕಾನೂನು ಸಂಸ್ಥೆಗಳ ದೃಷ್ಟಿಕೋನದಲ್ಲಿ ಹಾಗೂ ನಮ್ಮ ನೈತಿಕ ಮಾನದಂಡಗಳ ತೀರ್ಮಾನಗಳಲ್ಲಿ ನೋಡುವುದಾದರೆ ಅವರು ನಡೆಸಿದ ಎಲ್ಲಾ ಅತ್ಯಾಚಾರಗಳ ಒಟ್ಟು ಭೀಕರತೆಗಿಂತಲೂ ಈ ನಾರ್ಮಾಲಿಟಿಯು (ಸಾಮಾನ್ಯ ಸ್ಥಿತಿ ) ಅತ್ಯಂತ ಭಯಾನಕವಾದದ್ದು"

(Hannah Arendt, Eichmann in Jerusalem: A Report on the Banality of Evil)
/ಹಾಗೆಯೇ, ರವಂಡಾ ದೇಶದಲ್ಲಿ ೧೯೯೪ರಲ್ಲಿ ನಡೆದ ಟುಟ್ಸಿ ಜನಾಂಗದ ನರಮೇಧವನ್ನು ವರದಿ ಮಾಡಿದ ಬಿಬಿಸಿ ವರದಿಗಾರ ಫರ್ಗಲ್ ಕೇನ್ ಆ ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಹತ್ಯೆಯಾಗುವ ಮುಂಚೆ ನಡೆದ ಪ್ರಕ್ರಿಯೆಗಳನ್ನು ಹೀಗೆ ವಿವರಿಸುತ್ತಾರೆ:

"… ಈ ರಕ್ತಸಿಕ್ತ ದೇಶದಲ್ಲಿ ಕೆಲ ವ್ಯಕ್ತಿಗಳಂತೂ ನಿಜಕ್ಕೂ ವಿಕೃತ ಮನಸ್ಸುಳ್ಳವರು. ಚಿಂದಿಯುಟ್ಟ ಬಡ ಜನರನ್ನೂ ಹಾಗೂ ಅನಕ್ಷರಸ್ಥ ರೈತಾಪಿ ಜನರನ್ನು ಟುಟ್ಸಿಗಳ ವಿರುದ್ಧ ದ್ವೇಶದಿಂದ ಕುದಿಯುವಂತೆ ಮಾಡುವುದು ಸುಲಭವೇ ಆಗಿತ್ತು. ಆದರೆ ನಾನು ಆ ದೇಶದಲ್ಲಿ ಭೇಟಿಯಾದ ಅತ್ಯಂತ ಕುತಂತ್ರಿ ಹಾಗೂ ಕ್ರೂರ ಜನರೆಂದರೆ ಆ ದೇಶದ ಸುಶಿಕ್ಷಿತ-ಪ್ರತಿಷ್ಠಿತ ವರ್ಗದ ಗಂಡಸರು ಮತ್ತು ಹೆಂಗಸರು. ಅವರುಗಳು ಅತ್ಯಂತ ನಾಜೂಕಿನ ಸಂಸ್ಕಾರವಂತರು. ಸಾಸಿವೆಯಷ್ಟು ಲೋಪವಿಲ್ಲದ ಶುದ್ಧ ಫ್ರೆಂಚಿನಲ್ಲಿ ಸಂಭಾಷಣೆ ಮಾಡ ಬಲ್ಲವರು. ಯುದ್ಧದ ಸ್ವರೂಪ ಮತ್ತು ಪ್ರಜಾತಂತ್ರದ ಬಗ್ಗೆ ಕೊನೆಯಿಲ್ಲದ ತಾತ್ವಿಕ ಚರ್ಚೆಗಳನ್ನು ನಡೆಸಬಲ್ಲವರು. ಆದರೆ ಅವರೆಲ್ಲರೂ ತಮ್ಮ ದೇಶದ ಸೈನಿಕರು ಮತ್ತು ರೈತಾಪಿಗಳಂತೆ ತಮ್ಮ ಸಹೋದರ ದೇಶವಾಸಿಗಳ ರಕ್ತಕೂಪದಲ್ಲಿ ಮಿಂದೇಳುತ್ತಿದ್ದರು.

(Fergal Keane, Season of Blood: A Rwandan Journey)

ಹಿಟ್ಲರನ ಜರ್ಮನಿಯಲ್ಲಿ ಬಹುಸಂಖ್ಯಾತ ಜರ್ಮನರು ಲಕ್ಷಾಂತರ ಅಲ್ಪಸಂಖ್ಯಾತ ಯೆಹೂದಿಗಳ ನರಮೇಧವನ್ನು ಸಕ್ರಿಯವಾಗಿ ಸಮ್ಮತಿಸಿದ್ದು; ಇದೀಗ ಇಸ್ರೇಲಿನಲ್ಲಿ ಅಲ್ಪ ಸಂಖ್ಯಾತ ಮತ್ತು ಅಸಹಾಯಕ ಪೆಲೆಸ್ತೀನಿಯರ ಮೇಲೆ ನಡೆಸುತ್ತಿರುವ ಯೆಹೂದಿ ಪ್ರಭುತ್ವ ನಡೆಸುತ್ತಿರುವ ವಿಕೇಂದ್ರಿಕೃತ ನರಮೇಧವನ್ನು ಯೆಹೂದಿ ಬಹುಸಂಖ್ಯಾತ ಸಮುದಾಯ ಸಮ್ಮತಿಸುತ್ತಿರುವುದು; ೯೦ ರ ದಶಕದಲ್ಲಿ ರವಾಂಡ ದೇಶದಲ್ಲಿ ಅಲ್ಲಿನ ಹುಟು ಜನಾಂಗೀಯವಾದಿ ಸರ್ಕಾರದ ಬೆಂಬಲದೊಂದಿಗೆ ನಡೆಸಿದ ಅಲ್ಪಸಂಖ್ಯಾತ ಟುಟ್ಸಿಗಳ ನರಮೇಧವನ್ನು ಬಹುಸಂಖ್ಯಾತ ಹುಟುಗಳು ಉತ್ಸಾಹದಿಂದ ಬೆಂಬಲಿಸಿದ್ದು; ಇಂದು ಅಮೆರಿಕದಲ್ಲಿ ಕರಿಯರ ಮೇಲೆ ಬೆಳಿಯರು ನಡೆಸುತ್ತಿರುವ ಸಶಸ್ತ್ರ ದಾಳಿಗಳನ್ನು ಬಿಳಿ ಅಮೆರಿಕ ಸಮುದಾಯದ ದುರಭಿಮಾನಿ ಜನಾಂಗೀಯವಾದಿಗಳು ಬೆಂಬಲಿಸುತ್ತಿರುವುದು;

ಹಾಗೂ ಭಾರತದಲ್ಲಿ ಪ್ರಧಾನವಾಗಿ ಮುಸ್ಲಿಮರ ಮೇಲೆ, ಮತ್ತು ದಲಿತ ಮತ್ತು ಕ್ರಿಶ್ಚಿಯನ್ನರ ಮೇಲೆ ಮನುವಾದಿ ಹಂತಕರು ನಡೆಸುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭೌತಿಕ ಹತ್ಯಾಕಾಂಡಗಳಿಗೆ ಬಹುಸಂಖ್ಯಾತ ಹಿಂದೂ ಸಮಾಜ ಮೌನ ಸಮ್ಮತಿ ನೀಡುತ್ತಿರುವುದು, ಕ್ರಮೇಣವಾಗಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಇದೇ ಬರ್ಬರ ಪ್ರಕ್ರಿಯೆಗಳ ಭಾಗವಾಗಿದೆ.

ಇದರ ಆಳದಲ್ಲಿ ಇರುವುದು ಒಬ್ಬ ಮನುಷ್ಯರಾಗಿ ತಮಗೆ ವರ್ತಿಸುವ ನ್ಯಾಯ-ನೀತಿಗಳನ್ನು ಇತರರಿಗೆ ನಿರಾಕರಿಸುವ ಅಮಾನವೀಯತೆ. ಸಹಜ ಸಂದರ್ಭದಲ್ಲಿ ಧರ್ಮವೆಂದರೆ ನ್ಯಾಯ-ನೀತಿ ಎಂದು ಅಥವಾ ತಮ್ಮಂತೆ ಪರರೆಂಬ ಆಧ್ಯಾತ್ಮದಲ್ಲಿ ಬದುಕುವ ಜನಸಾಮನ್ಯರಲ್ಲಿ ರಾಷ್ಟ್ರ, ಧರ್ಮ, ಜನಾಂಗದ ವರ್ಣದ ಹೆಸರಲ್ಲಿ ಮನುಷ್ಯತ್ವವನ್ನು ಕೊಂದು ಹಾಕಿ "ಅವರು ನಮ್ಮವರಲ್ಲ", "ಮನುಷ್ಯರೆಂದು ಪರಿಗಣಿಸಲು ಅಯೋಗ್ಯರು" , "ಕೀಳಾದವರು ಅಥವಾ ದೇಶದ್ರೋಹಿಗಳು" ಎಂಬ ಬರ್ಬರತೆಯನ್ನು ಬೆಳೆಸಲಾಗುತ್ತದೆ.

ಭಾರತದಲ್ಲಂತೂ ಈ ನರಮೇಧಗಳಿಗೆ ಬೇಕಾದ ಸಾಮಾಜಿಕ ಕಂಡಿಷನಿಂಗ್ ನಮ್ಮ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯೊಳಗೇ ಇದೆ. ಭಾರತದ ನಾಗರಿಕತೆಯೊಳಗೇ ಇದ್ದ ಈ ಮನುವಾದಿ ಮೇಲರಿಮೆಯ ಹಂತಕ ಮನೋಭಾವಕ್ಕೆ ಹಿಂದೂರಾಷ್ಟ್ರವೆಂಬ ಹಿಂಸಾತ್ಮಕ ಆಧುನಿಕ ರಾಜಕಾರಣ ಇನ್ನಷ್ಟು ಕ್ರೂರ, ಕರಾಳ ಹಾಗೂ ವಿಧ್ವಂಸಕ ಚಹರೆಯನ್ನು ಶಕ್ತಿಯನ್ನೂ ನೀಡಿದೆ..

ಈ ನರಮೇಧ ರಾಜಕಾರಣದ ಬೇರು ಇರುವುದು ಸಮಾಜದಲ್ಲಿ. ಮನುಷ್ಯರಲ್ಲಿ. ಮನುಷ್ಯರಲ್ಲಿ ಒಳಿತು ಮತ್ತು ಕೇಡು-ಸ್ವಾರ್ಥಗಳೆರಡೋ ಅಂತರ್ಗತವಾಗಿರುತ್ತದೆ.

ಫ್ಯಾಸಿಸ್ಟ್ ರಾಜಕಾರಣ ಮನುಷ್ಯರೊಳಗಿರುವ ಕೇಡು ಮತ್ತು ಸ್ವಾರ್ಥವನ್ನು ಉದ್ದೀಪಿಸಿ ಬೆಳೆಯುತ್ತದೆ. ಸಮಾಜದ-ಬದುಕಿನ ಬಿಕ್ಕಟ್ಟಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ.

ಇದನ್ನು ಸೋಲಿಸಲು ಸಾಧ್ಯವಾಗುವುದು ಮನುಷ್ಯರಲ್ಲಿ ಅಂತರ್ಗತವಾಗಿರುವ ಒಳಿತು-ಸಹಬಾಳ್ವೆಯ ಮೌಲ್ಯಗಳನ್ನು ಉದ್ದೀಪಿಸುವ ಮೂಲಕ ಮಾತ್ರ. ಹಾಗೂ ಅದನ್ನು ಸಾಧ್ಯಗೊಳಿಸುವ ಸಮಾಜ-ಬದುಕನ್ನು ರೂಪಿಸುವ ಮೂಲಕ. ತನ್ನಂತೆ ಪರರು ಎಂಬ ಸಾರವನ್ನು ಉದ್ದೀಪಿಸುವ ಮೂಲಕ.

ಅದಕ್ಕೆ ಮೊದಲ ಹೆಜ್ಜೆ ಅವರಿದ್ದ ಪರಿಸ್ಥಿತಿಯಲ್ಲಿ ನಾನಿದ್ದರೆ ಏನು ಮಾಡುತ್ತಿದ್ದೆ ಎಂದು ಕೇಳಿಕೊಳ್ಳುವುದು.

ಆದ್ದರಿಂದ ಕೇಳೋಣ:

ನಿಜಹೇಳಿ..ನೀವಾಗಿದ್ದರೆ ಏನು ಮಾಡುತ್ತಿದ್ದಿರಿ?

ಅಂದ ಹಾಗೆ ಸಜ್ಜನರೆ ..

ಪಕ್ಕದ ಮನೆಯ ಮುಂದಲ್ಲದೆ
ನಿಮ್ಮ ಮನೆಮುಂದೆ ನಿಂತು
ನಿಮ್ಮ ಮನೆಹೆಂಗಸರ ಮೇಲೆ
ಅತ್ಯಾಚಾರ ಮಾಡಬೇಕೆನ್ನುವ
ಪುಂಡುಪೋಕರಿಯನ್ನು
ನಿಮ್ಮ ಮನೆಯೊಳಗೇ ಕರೆದು
ಸನ್ಯಾಸಿ ಎಂದು ಸತ್ಕರಿಸುತ್ತಿದ್ದಿರಾ? ..

ಅಂದಹಾಗೆ ಧರ್ಮಭೀರುಗಳೇ,

ಪರದೈವವನ್ನಲ್ಲದೆ
ನಿಮ್ಮ ಮನೆದೇವರನ್ನು
ನೆಲಸಮಮಾಡಿದವರನ್ನು
ಧರ್ಮರಕ್ಷಕರೆಂದು ಗೌರವಿಸುತ್ತಿದ್ದಿರಾ..?

ಪರಮಾತ್ಮನ ನೆನೆದು
ತಿನ್ನುವ ಪ್ರಸಾದವನ್ನು
ಪಾಪವೆನ್ನುವ ಕಾನೂನನ್ನು
ಪಾಲಿಸುತ್ತಿದ್ದಿರಾ ?

ಅಯ್ಯಾ ಮನಸ್ಸಾಕ್ಷಿಯಿರುವ ಮನುಷ್ಯರಾಗಿದ್ದರೆ
ನಿಜಹೇಳಿ…

ಅವರಂತೆ ನೀವಾಗದೆ ಮಾತ್ರಕ್ಕೆ….

ಜೊತೆಗಿದ್ದವರೆಲ್ಲಾ
ಕಳ್ಳುಬಳ್ಳಿ ಕಡಿದುಕೊಂಡು
ಕತ್ತಿಹಿರಿದು ನಿಂತುಬಿಟ್ಟರೆ…

ದೇಶಕ್ಕೇದೇಶವೇ…

ಇಪ್ಪತ್ತು ನಾಲಕ್ಕು ಗಂಟೆ
ನಿಮ್ಮ ಊಟ, ನಿಮ್ಮ ನೋಟ,
ನಿಮ್ಮ ಪೂಜೆಪಾಠ ಗಳನ್ನೂ..

ಪರಿಶೀಲಿಸುವ ಪೊಲೀಸ್ ಠಾಣೆಯಾಗಿಬಿಟ್ಟರೆ ….

ಪ್ರತಿದಿನ ಪ್ರತಿಕ್ಷಣ
ಅನುಮಾನಿಸುತ್ತಾ , ಅವಮಾನಿಸುತ್ತಾ ..

ನೀವು ತಿನ್ನುವ ಅನ್ನವನ್ನು,
ನಿಮ್ಮ ಅಂಗಡಿಯನ್ನು,
ಗುಡಿಸಲನ್ನು, ಗುಡಿಯನ್ನು
ಮಾನವನ್ನು, ಪ್ರಾಣವನ್ನು ..
ಬೀದಿಬೀದಿಯಲ್ಲಿ ಹರಾಜುಹಾಕಿಬಿಟ್ಟರೆ…

ಕೊಲೆಗಾರರನ್ನು ಸನ್ಮಾನಿಸುತ್ತಾ.
ಕೊಂದಶವಗಳನ್ನೂ ಕೂಡ ಕಟಕಟೆಯಲ್ಲಿ
ನಿಲ್ಲಿಸುತ್ತಿದ್ದರೆ ..

ನೀವು ಏನು ಮಾಡುತ್ತಿದ್ದಿರಿ?

ನಿಜ ಹೇಳಿ,
ನೀವು ಏನು ಮಾಡುತ್ತಿದ್ದಿರಿ ?
ಶಿವಸುಂದರ್

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement