"ಬಿಜೆಪಿಗರು ನಕಲಿ ದೇಶಭಕ್ತರು. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಆ ಪಕ್ಷದ ಸ್ಥಾಪಕ ಸಂಘಟನೆಯ ಯಾವುದೇ ನಾಯಕರು ಭಾಗವಹಿಸಿಲ್ಲ. ನಿಜ ಹೇಳಬೇಕೆಂದರೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಬಿಜೆಪಿಯ ಒಂದು ನಾಯಿ ಕೂಡಾ ಸತ್ತಿಲ್ಲ.
ಬಿಜೆಪಿ ಪಕ್ಷದ ನಾಯಕರು ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ, ಇತಿಹಾಸದ ಪುಟವನ್ನು ಅಧ್ಯಯನ ಮಾಡಿದಾಗ ಅವರು ರಾಷ್ಟ್ರಧ್ಚಜವನ್ನು ವಿರೋಧಿಸಿರುವುದು ತಿಳಿಯುತ್ತದೆ. 1929ರಲ್ಲಿ ನಡೆದ ಸಭೆಯಲ್ಲಿ ದೇಶಕ್ಕೆ ಒಂದು ಧ್ವಜ ಬೇಕು, ಸ್ವತಂತ್ರ ಹೋರಾಟ ಮಾಡುವ ಜಾಗದಲ್ಲಿ ತಿರಂಗವನ್ನು ದ್ಛಜಾರೋಹಣ ಮಾಡಬೇಕು ಎಂದು ಸ್ವತಂತ್ರ ಹೋರಾಟಗಾರರು ನಿರ್ಣಯ ತೆಗೆದುಕೊಂಡರು, ಇದನ್ನು ಎಲ್ಲರೂ ಒಪ್ಪಿದ್ದರು, ಆದರೆ RSS ಒಪ್ಪದೇ 1931 ರಲ್ಲಿ ರಾಷ್ಟ್ರಧ್ವಜವನ್ನು ವಿರೋಧಿಸಿ ನಿರ್ಣಯವನ್ನು ಜಾರಿ ಮಾಡುತ್ತದೆ" ಎಂದು ಮಾಜಿ ಸಚಿವ, ಶಾಸಕ, ಕೆಪಿಸಿಸಿ ಐ.ಟಿ ಸೆಲ್ ಅಧ್ಯಕ್ಷ ಪ್ರಿಯಾಂಕ್ ಖರ್ಗೆಯವರು ಹೇಳಿದ್ದಾರೆ.
ಅವರು ಶನಿವಾರ ಚಿಂಚೋಳಿ, ಕಾಳಗಿ ಹಾಗೂ ಕೋಡ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಳಗಿಯಲ್ಲಿ ನಡೆದ "ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಆಚರಣೆ"ಯ ಅಂಗವಾಗಿ ನಡೆದ 75 ಕಿ.ಮೀ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
"ಸ್ವಾತಂತ್ರ್ಯ ಬಂದು 52 ವರ್ಷಗಳು ಕಳೆದರು ಅವರುಗಳು ರಾಷ್ಟ್ರ ಧ್ವಜವನ್ನು ಹಾರಿಸಿರಲಿಲ್ಲ. ಹಾಗಾಗಿ, ಬಿಜೆಪಿಗರಿಗೆ ನಮ್ಮ ರಾಷ್ಟ್ರಧ್ವಜ ಹಾರಿಸುವ ನೈತಿಕತೆ ಉಳಿದಿಲ್ಲಾ.
ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು RSS ಅನ್ನು ನಿಷೇಧಿಸಿದರು. ಆ ನಂತರ ರಾಷ್ಟ್ರಧ್ವಜಕ್ಕೆ ಹಾಗೂ ದೇಶಕ್ಕೆ ಆರೆಸ್ಸೆಸ್ ನಿಷ್ಠವಾಗಿರಬೇಕು ಎನ್ನುವ ಷರತ್ತಿನ ಮೇಲೆ ನಿಷೇಧ ವಾಪಸ್ ಪಡೆಯುತ್ತಾರೆ. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಈ ಸ್ವಾತಂತ್ರೋತ್ಸವದ ನಡಿಗೆಯಿಂದ ನಮ್ಮ ಪಕ್ಷ ಈ ದೇಶದಲ್ಲಿ ಮತ್ತಷ್ಟು ಬಲಿಷ್ಟಗೊಳ್ಳಲಿದೆ " ಎಂದವರು ಹೇಳಿದ್ದಾರೆ.
"ಬಿಜೆಪಿಗರಿಗೆ ರಾಷ್ಟ್ರಧ್ವಜಕ್ಕಿಂತ ಆರೆಸ್ಸೆಸ್ ಶಾಖೆಗಳಲ್ಲಿ ಹಾರಿಸುವ ಭಗವಧ್ವಜದ ಮೇಲೆ ಹೆಚ್ಚಿನ ಗೌರವವಿದೆ, ಇಂತವರು ನಮಗೆ ರಾಷ್ಟ್ರಭಕ್ತಿಯ ಮೇಲೆ ಪಾಠ ಮಾಡುತ್ತಾರೆ.
ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಲು ಒಂದು ನಿಯಮವಿದೆ. ಅದಕ್ಕೆ ಒಂದು ನಿರ್ಧಾರಿತ ಬಟ್ಟೆ ಇದೆ, ಆದರೆ ರಾಷ್ಟ್ರಧ್ವಜದ ನಿಯಮಾವಳಿಗೆ ತಿದ್ದುಪಡಿ ತಂದು ಖಾದಿಯ ಬಟ್ಟೆಯ ಬದಲು ಪಾಲಿಯೆಸ್ಟರ್‌ಗೆ ಅನುಮತಿ ನೀಡಿದ್ದಾರೆ. ಕಾರಣ ಇಷ್ಟೆ, ಈ ದೇಶದ ಅತಿಹೆಚ್ಚು ಪಾಲಿಯೆಸ್ಟರ್ ತಯಾರಿಕ ಸಂಸ್ಥೆ ಅಂಬಾನಿಗೆ ಸೇರಿದೆ. ಈ ಮೂಲಕ ರಾಷ್ಟ್ರಧ್ವಜವನ್ನೂ ಕೂಡಾ ಮಾರಾಟಕ್ಕಿಟ್ಟಿದೆ" ಎಂದವರು ಖೇದ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ಮತ್ತು ಶಾಸಕರಾದ ಶ್ರೀಧರ ಬಾಬು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಹಾಗೂ ಖನೀಜ್ ಫಾತೀಮಾ, ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ,ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ, ಶಿವಾನಂದ ಪಾಟೀಲ ಸೇರಿದಂತೆ ಹಲವಾರು ನಾಯಕರುಗಳು ಉಪಸ್ಥಿತರಿದ್ದರು.