Advertisement

ಮುಖ್ಯಮಂತ್ರಿಗಳೇ, ಮೊಟ್ಟೆ ಎಸೆಯುವ ಗೂಂಡಾ ರಾಜಕೀಯ ನಿಲ್ಲಿಸಿ. ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡಾ ಕಷ್ಟವಾಗಬಹುದು: ಸಿದ್ದರಾಮಯ್ಯ ಎಚ್ಚರಿಕೆ

Advertisement

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರುಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡಾ ಕಷ್ಟವಾಗಬಹುದು. ಯು.ಪಿ ಮಾದರಿ ಎಂದರೆ ಇದೆನಾ?" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಅತಿವೃಷ್ಟಿಯಿಂದಾದ ನಷ್ಟದ ವೀಕ್ಷಣೆಗಾಗಿ ನಿನ್ನೆ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ, ಮಡಿಕೇರಿಯಲ್ಲಿ ಬಿಜೆಪಿಯ ಕಾರ್ಯಕರ್ತರು ತನ್ನ ಕಾರನ್ನು ಮುತ್ತಿಗೆ ಹಾಕಿ, ಮೊಟ್ಟೆ ಎಸೆದ ಘಟನೆಯ ಕುರಿತು ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿದ್ದಾರೆ.

"ನಾವು ಸಮಾಜದಲ್ಲಿ ಸಾಮರಸ್ಯ ಬಯಸುವವರು, ಎಲ್ಲ ಜಾತಿ ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಬಯಸುವವರು. ಬಿಜೆಪಿಯವರು ಮತ ಧ್ರುವಿಕರಣಕ್ಕಾಗಿ ಸಮಾಜ ಒಡೆಯುವವರು, ಗೋಡ್ಸೆಗೆ ಪೂಜೆ ಮಾಡುವುದು ದೇಶಪ್ರೇಮವೇ?" ಎಂದವರು ಪ್ರಶ್ನಿಸಿದ್ದಾರೆ.

"ಶಿವಮೊಗ್ಗದ ಗಲಭೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರೇ ಕಾರಣ. ಸಚಿವ ಸ್ಥಾನ ಕಳೆದುಕೊಂಡು ಮನೆಯಲ್ಲಿರುವ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನ ಖಾತರಿಯೂ ಇಲ್ಲ. ಇದರಿಂದ ಹತಾಶರಾಗಿರುವ ಈಶ್ವರಪ್ಪನವರು ಆರ್ ಎಸ್ ಎಸ್ ಒಡೆಯರನ್ನು ಒಲಿಸಿಕೊಳ್ಳಲು ಇದೆಲ್ಲ ಮಾಡುತ್ತಿದ್ದಾರೆ" ಎಂದವರು ಆರೋಪಿಸಿದ್ದಾರೆ.

"ಸಾಧನೆಯ ಬಲದಿಂದ ಚುನಾವಣೆಯನ್ನು ಎದುರಿಸಲಿಕ್ಕಾಗದ ಬಿಜೆಪಿ ನಾಯಕರಿಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಮತ್ತು ಆಧಾರರಹಿತ ಆರೋಪಗಳೇ ಬಂಡವಾಳ. ಹಳೆಯ ಆಟವನ್ನು ಬಿಜೆಪಿ ರಾಜ್ಯದಲ್ಲಿ ಮತ್ತೆ ಶುರುಮಾಡಿದೆ. ಈ ಸುಳ್ಳಿನ ಸರದಾರರಿಗೆ ಸತ್ಯವನ್ನು ಎದುರಿಸುವ ನೈತಿಕತೆ ಇಲ್ಲ" ಎಂದವರು ಹೇಳಿದರು.

"ವಿ.ಡಿ.ಸಾವರ್ಕರ್ ಬಗ್ಗೆ ಅಭಿಮಾನ ಇದ್ದರೆ ಅವರ ಬಗ್ಗೆ ಪುಸ್ತಕ ಬರೆದು, ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಿ.. ಕೋಮುಗಲಭೆ ಹುಟ್ಟುಹಾಕಲು ಅವರ ಪೋಟೊವನ್ನು ಅಸ್ತ್ರವನ್ನಾಗಿ ಯಾಕೆ ಮಾಡುತ್ತಿದ್ದೀರಿ? ಇದನ್ನೇ ನಾನು ಪ್ರಶ್ನಿಸಿದ್ದು" ಎಂದವರು ಸ್ಪಷ್ಟಿಕರಣ ನೀಡಿದರು.

"ಮಹಾತ್ಮ ಗಾಂಧೀಜಿಯವರ ಪೋಟೊ ಹಾಕಿ ಜಾಹೀರಾತು ಕೊಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು, ಅದೇ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಪೋಟೊ ಮೆರವಣಿಗೆ ಮಾಡಿದ ತಮ್ಮದೇ ಪಕ್ಷದ ಕಾರ್ಯಕರ್ತರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?
ಸಾವರ್ಕರ್ ಅವರನ್ನು ಹೊತ್ತು ಮೆರೆಯುತ್ತಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ 52 ವರ್ಷಗಳ ಕಾಲ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ಯಾಕೆ ಹಾರಿಸಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುತ್ತೀರಾ?" ಎಂದವರು ಪ್ರಶ್ನಿಸಿದ್ದಾರೆ.

"ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೊವನ್ನು ಪಕ್ಷದ ಕಚೇರಿಯಲ್ಲಿಯೇ ಕಸದ ಬುಟ್ಟಿಗೆ ಎಸೆದಿರುವ ಬಿಜೆಪಿ ನಾಯಕರ ಹೃದಯದೊಳಗೆ ಗಾಂಧೀಜಿಯೂ ಇಲ್ಲ, ಅಂಬೇಡ್ಕರ್ ಅವರೂ ಇಲ್ಲ. ಅವರೊಳಗೆ ಇರುವುದು ನಾಥುರಾಮ್ ಗೋಡ್ಸೆ ಮಾತ್ರ. ಈ ಸತ್ಯವನ್ನು ಮೊದಲು ಒಪ್ಪಿಕೊಳ್ಳಿ" ಎಂದವರು ಹೇಳಿದರು.

"ಬಿ.ಎಸ್ ಯಡಿಯೂರಪ್ಪ ಅವರಿಗೆ 75 ವರ್ಷ ಆಯ್ತು ಎಂದು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಯವಾಗಿ ಕೆಳಗಿಳಿಸಿದರು. ಅವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ, ಹಾಗಾದರೆ ಈಗ ಅವರ ವಯಸ್ಸು ಏಕಾಏಕಿ ಕಡಿಮೆ ಆಯ್ತಾ? ಆದರೆ, ಇದಕ್ಕೆ ನಿಜವಾದ ಕಾರಣ ಅವರ ಮೇಲಿನ ಪ್ರೀತಿ ಅಲ್ಲ, ಮುಂದಿನ ಚುನಾವಣೆಯಲ್ಲಿ ಸೋಲುವ ಭಯ" ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement