"ಅಕ್ಕಿ ಕೊಟ್ಟಿದ್ದು ಕೇಂದ್ರ ಸರ್ಕಾರವೇ ಹೊರತು ಸಿದ್ದರಾಮಯ್ಯ ಸರ್ಕಾರವಲ್ಲ" ಎಂದು ಬಿಜೆಪಿಯ ಜನಸ್ಪಂಧನ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಬಿಜೆಪಿಯ ಹಲವು ಹಿರಿ ಕಿರಿಯ ನಾಯಕರುಗಳು ಕೂಡ ಹೋದಲ್ಲಿ ಬಂದಲ್ಲೆಲ್ಲಾ ಬಾಷಣ ಬಿಗಿಯುತ್ತಲೇ ಬಂದಿದ್ದಾರೆ. ಇದು ಸತ್ಯವೇ ಎಂಬ ಕುರಿತು ಬಿಜೆಪಿಗರಿಗೆ ಒಂದು ಅಂಕಿ ಸಂಖ್ಯೆ ಆಧಾರಿತ ಬಹಿರಂಗ ಪತ್ರ.
ಮುಖ್ಯಮಂತ್ರಿಗಳೇ ಹಾಗೂ ಬಿಜೆಪಿಯ ಹಿರಿಯ, ಕಿರಿಯ ನಾಯಕರುಗಳೇ,
ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ. ಅದು ಖಂಡಿತವಾಗಿಯೂ ಶಾಶ್ವತ ಅಲ್ಲ. ಆದರೆ ಅಧಿಕಾರದಲ್ಲಿ ಇದ್ದಾಗ ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವ ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರವೇ ಆ ಯೋಜನೆಯ ಫಲಾನುಭವಿಗಳು ಆ ಯೋಜನೆ ಜಾರಿಗೊಳಿಸಿದ ನಾಯಕನನ್ನು ಹಾಗೂ ಪಕ್ಷವನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ ಮತ್ತು ಆ ಯೋಜನೆಯ ಜನಪ್ರಿಯತೆ ಕಂಡು ಸಹಿಸಲಾಗದ ವಿರೋಧಿಗಳು ಅಪಪ್ರಚಾರ ಮಾಡುವ ಮೂಲಕ ಕೂಡ ನೆನಪಿಸಿಕೊಳ್ಳುತ್ತಿರುತ್ತಾರೆ. ಅದೇ ರೀತಿಯಾಗಿ ತಾವುಗಳು ಅನ್ನಭಾಗ್ಯ ಯೋಜನೆಯ ಯಶಸ್ಸನ್ನು ಸಹಿಸಿಕೊಳ್ಳಲಾಗದೆ ಪದೇಪದೇ "ಸಿದ್ದರಾಮಯ್ಯನವರು ಆ ಯೋಜನೆಯ ಮೂಲಕ ಕೊಡುತ್ತಿದ್ದ ಅಕ್ಕಿ ಕೇಂದ್ರ ಸರ್ಕಾರದ್ದು" ಎಂದು ಬಿಂಬಿಸುತ್ತಲೇ ಬಂದಿದ್ದೀರಿ. ಆದರೆ ಈ ನಾಡಿನ ಜನರು ಖಂಡಿತವಾಗಿಯೂ ಮೂರ್ಖರಲ್ಲ.
ತಮಗೆ ಗೊತ್ತಿರಲಿ 2013ರ ಜುಲೈಯಲ್ಲಿ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಗಳಾಗಿ ಅಧಿಕಾರ ಸ್ವೀಕರಿಸಿದ ಅರ್ಧ ಗಂಟೆಯೊಳಗೆ ಘೋಷಿಸಿದ ಯೋಜನೆಯೇ ಅನ್ನಭಾಗ್ಯ ಯೋಜನೆ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದದ್ದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ. ಹಾಗೆಯೇ ಈ ಅನ್ನಭಾಗ್ಯ ಯೋಜನೆ ಅದೇ ಮನಮೋಹನ್ ಸಿಂಗ್‌ರವರ ಎರಡನೆಯ ಅವಧಿಯ (ಸೆಪ್ಟೆಂಬರ್2013)ಸರ್ಕಾರ ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆ ಅರ್ಥಾತ್ Food Security Act ನ ಅಡಿಯಲ್ಲಿ ಅನುದಾನವನ್ನು ಕೂಡ ಪಡೆದಿತ್ತು. ಅದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯಡಿ ಈ ರಾಜ್ಯದ ಹಕ್ಕು ಕೂಡ ಆಗಿತ್ತು. ಹಾಗೆಯೇ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದದ್ದು 2014ರಲ್ಲಿ. ಮೋದಿ ಅಧಿಕಾರಕ್ಕೆ ಬಂದ ನಂತರವೂ ಅದೇ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಅನುದಾನ ನೀಡಿತ್ತು ಮತ್ತು ನೀಡಲೇಬೇಕಾದ ಅನಿವಾರ್ಯತೆ ಇತ್ತು ಏಕೆಂದರೆ ಅದು ಕಾಯ್ದೆ ಯಾಗಿ ಜಾರಿಗೊಂಡಿತ್ತು. ಹಾಗೆಯೇ, ಯಾವುದೇ ಕಾಯ್ದೆಯಡಿ ಅನುದಾನ ನಿರಾಕರಿಸುವ ಅಧಿಕಾರ ಯಾವುದೇ ಚುನಾಯಿತ ಸರ್ಕಾರಕ್ಕೆ ಇರುವುದಿಲ್ಲ ಎಂಬ ಸಾಮಾನ್ಯ ವಿಚಾರ ತಮಗೆ ತಿಳಿಯದ್ದೇನೂ ಅಲ್ಲ ಬಿಡಿ. ಹಾಗೆಯೇ ಅದೇ ನಿಯಮದಡಿಯಲ್ಲಿ ರಾಜ್ಯದ ಬೊಮ್ಮಾಯಿ ಸರ್ಕಾರ ಕೂಡ ಅದೇ ಅನ್ನಭಾಗ್ಯ ಯೋಜನೆಗೆ ಅನುದಾನವನ್ನು ಈಗಲೂ ನೀಡುತ್ತಿದೆ ಅದರಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ ಎಂಬುದು ಭಾರತೀಯ ಪ್ರಜೆಯಾಗಿ ನನ್ನ ಅಭಿಪ್ರಾಯವಾಗಿದೆ.
ಅದಿರಲಿ, ಇದೀಗ ವಿಚಾರಕ್ಕೆ ಬರುವುದಾದರೆ ಇದರಲ್ಲಿ ಮೋದಿ ಸರ್ಕಾರದ ಹೆಚ್ಚುಗಾರಿಕೆ ಏನಿದೆ? ಹಾಗಾದರೆ ಬಿಜೆಪಿಗರ ಪ್ರಕಾರ ಸೆಪ್ಟೆಂಬರ್, 2013ರಲ್ಲಿ ಕೇಂದ್ರದಲ್ಲಿ "ಫುಡ್ ಸೆಕ್ಕೂರಿಟಿ ಆಕ್ಟ್" ಜಾರಿಗೊಳಿಸಿದ್ದು 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವೇ? ಅಥವಾ ಕರ್ನಾಟಕದಲ್ಲಿ ಜುಲೈ 2013ರಲ್ಲಿ ಅನ್ನಭಾಗ್ಯ ಯೋಜನೆ ಆರಂಬಿಸಿದ್ದು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವೇ? ಅಗತ್ಯವಾಗಿ ಈ ಕುರಿತಾದ ಗೊಂದಲವನ್ನು ಪರಿಹರಿಸಲಿ.
ಆ ಕುರಿತು ಗೂಗಲ್ ನಲ್ಲಿ ಲಭ್ಯವಿರುವ ಮಾಹಿತಿಗಳ ಸ್ಕ್ರೀನ್‌ಶಾಟ್: