ಸೆಪ್ಟೆಂಬರ್13: ಆಸ್ಕರ್ ಫರ್ನಾಂಡೀಸ್ ಪ್ರತಿಮೆ ಅನಾವರಣ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ದೆ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿವಂಗತ ಆಸ್ಕರ್ ಫರ್ನಾಂಡೀಸ್ ಅವರ ಪುಣ್ಯತಿಥಿಯ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಾಳೆ (ಸೆಪ್ಟೆಂಬರ್ 13) ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದ ವಠಾರದಲ್ಲಿ ಆಸ್ಕರ್ ಫರ್ನಾಂಡೀಸ್ ಅವರ ಪ್ರತಿಮೆ ಅನಾವರಣ, ಕಾರ್ಯಕರ್ತರಿಗಾಗಿ ಭಾಷಣ, ರಸಪ್ರಶ್ನೆ ಸ್ಪರ್ದೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 13ರಂದು ಮೃತಪಟ್ಟ ವೇಳೆಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷಾತೀತವಾಗಿ ಗೌರವಿಸಲ್ಪಟ್ಟಿದ್ದ ಆಸ್ಕರ್ ಅವರು 2021 ಜುಲೈ18ರಂದು ಮಂಗಳೂರಿನ ಮನೆಯಲ್ಲಿ ಯೋಗಾಸನ ಮಾಡುತ್ತಿದ್ದ ವೇಳೆ ಜಾರಿ ಬಿದ್ದಿದ್ದರು. ಆಗ ಅವರ ತಲೆಗೆ ಸಣ್ಣ ಗಾಯವಾಗಿತ್ತು. ಅದನ್ನವರು ನಿರ್ಲಕ್ಷಿಸಿದ್ದರು. ತದ ನಂತರ ಮಾಮೂಲಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರೆಳಿದಾಗ ತಲೆಯ ಒಳಭಾಗಕ್ಕೆ ಪೆಟ್ಟಾಗಿರುವುದು  ತಿಳಿದುಬಂದಿತ್ತು. ಆ ನಂತರ ಮಿದುಳಿನ ಶಸ್ತ್ರಚಿಕಿತ್ಸೆ ನಡೆದಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳೂರಿನ ಯನಪೋಯಾ ಆಸ್ಪತ್ರೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ 13ರಂದು ಮೃತಪಟ್ಟಿದ್ದರು.

|ನಾಲ್ಕು ದಶಕಕ್ಕೂ ಹೆಚ್ಚು ಕಾಲ ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ್ದ ಉಡುಪಿಯ ನಾಯಕ|

1941 ಮಾರ್ಚ್ 27 ರಂದು ಉಡುಪಿಯಲ್ಲಿ ಜನಿಸಿದ್ದ ಕ್ರೀಯಾಶೀಲ ವ್ಯಕ್ತಿತ್ವದ ಹಾಗೂ ಸದಾ ನಗುಮೊಗದ ಆಸ್ಕರ್ ಫರ್ನಾಂಡಿಸ್ ಅವರು ಸಂಸತ್ ಸದಸ್ಯರಾಗಿ ದಿಲ್ಲಿಯಲ್ಲಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮುಂತಾದ ಹಿರಿಯ ನಾಯಕರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದರು.  ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರದ ಆಡಳಿತ ಅವಧಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. 1980ರಿಂದ 1996ರ ವರೆಗೆ ಕರ್ನಾಟಕದ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದ ಅವರು, ಬಳಿಕ, 1998ರಲ್ಲಿ ಹಾಗೂ 2004ರಲ್ಲಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು.