Advertisement

"ಜನರಿಂದ ಛೀಮಾರಿ ಹಾಕಿಸಿಕೊಂಡು ಆದೇಶ ವಾಪಸು ಪಡೆದ ಬೊಮ್ಮಾಯಿ ಸರ್ಕಾರ"

Advertisement

ಶಾಲಾ ಮಕ್ಕಳಿಗೆ ಸಮವಸ್ತ್ರ, ಶಾಲೆಯ ವಿದ್ಯುತ್ ಬಿಲ್ ಮತ್ತಿತರ ಪರಿಕರಗಳ ಖರೀದಿ ಮತ್ತು ನಿರ್ವಹಣೆ ಮುಂತಾದ ಖರ್ಚುವೆಚ್ಚಗಳಿಗಾಗಿ ವಿಧ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳು ರೂಪಾಯಿ 100 ದೇಣಿಗೆ ರೂಪದಲ್ಲಿ ಸಂಗ್ರಹಿಸಲು ರಾಜ್ಯದ ಬೊಮ್ಮಾಯಿ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀವ್ರ ವಿರೋಧದ ಹಿನ್ನಲೆಯಲ್ಲಿ ನಿನ್ನೆ ಹಿಂಪಡೆದಿದೆ.

ಸರ್ಕಾರಿ ಶಾಲಾ ಮಕ್ಕಳಿಂದ ದೇಣಿಗೆ ವಸೂಲಿ ಮಾಡುವ ಬೊಮ್ಮಾಯಿ ಸರ್ಕಾರದ ಸುತ್ತೋಲೆಯ ಪರಿಣಾಮವಾಗಿ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾದ ಕಡ್ಡಾಯ ಶಿಕ್ಷಣದ ಹಕ್ಕಿಗೆ ಚ್ಯುತಿ ಉಂಟಾಗುತ್ತದೆ. ದೈವ ನರ್ತಕರಿಗೆ ಮಾಸಾಸನ ನೀಡುವ ಕುರಿತು ಹೊಸ ಹೊಸ ಘೋಷಣೆಗಳನ್ನು ಮಾಡುವ ಸರ್ಕಾರ ಅದೇ ದೈವ ನರ್ತಕರಂತಹವರ ಮತ್ತಿತರ ಆರ್ಥಿಕವಾಗಿ ಹಿಂದುಳಿದವರ ಮನೆಯ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳ ಮಕ್ಕಳಿಂದ ಹಣ ವಸೂಲಿಗೆ ಮುಂದಾಗಿದ್ದು ವಿಷಾಧನೀಯ ನಿರ್ಧಾರ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಬಡ ವಿಧ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸುವ ಕುರಿತಾದ ಬೊಮ್ಮಾಯಿ ಸರ್ಕಾರದ ನಿರ್ಧಾರಕ್ಕೆ ನಿನ್ನೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಚ್.ಸಿ ಮಹಾದೇವಪ್ಪ ಸೇರಿದಂತೆ ವಿವಿಧ ಜನಪರ ಸಂಘಟನೆಗಳು, ಶಿಕ್ಷಣ ತಜ್ಞರುಗಳು, ಜನಪರ ಮಾಧ್ಯಮಗಳು ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಶಾಲೆಗಳ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಮಂಜೂರಾತಿ ಆಗದ ಸಂಧರ್ಭದಲ್ಲಿ, ಹಣದ ಕೊರತೆ ಎದುರಾದಾಗ ಹಣ ಹೊಂದಿಸುವ ಸಲುವಾಗಿ ಮಕ್ಕಳ ಪೋಷಕರು, ತಂದೆ, ತಾಯಿಯರ ಮನವೊಲಿಸಿ ಪ್ರತಿ ತಿಂಗಳು ಹಣ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿತ್ತು.

ಸುತ್ತೋಲೆಯಲ್ಲಿ ಸ್ವಇಚ್ಚೆಯಿಂದ ದೇಣಿಗೆ ನೀಡುಬೇಕು, ಬಲವಂತವಾಗಿರಬಾರದು ಎಂದು ವಿವರಿಸಲಾಗಿದ್ದರೂ ಈ ಸುತ್ತೋಲೆಯಿಂದ ಶಾಲೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗಬಹುದು. ಬೇಕಾಬಿಟ್ಟಿ ಹಣ ಸಂಗ್ರಹಿಸಿ ರಸೀದಿ ನೀಡದಿರಬಹುದು ಅಥವಾ ನಕಲಿ ರಸೀದಿ ಮುದ್ರಿಸಿ ವಂಚಿಸುವಂತಾಗಬಹುದು. ಅಥವಾ ಕೆಲ ಭ್ರಷ್ಟ ಶಿಕ್ಷಕರು ಬಲವಂತ ವಸೂಲಿಗೆ ಇಳಿಯಬಹುದು. ಹಣ ಕೊಡಲಾಗದ ಕಡುಬಡ ಪೋಷಕರ ಮನೆಯ ವಿಧ್ಯಾರ್ಥಿಗಳು ಮುಜುಗರಕ್ಕೆ ಒಳಗಾಗಿ ಶಾಲೆಗಳನ್ನು ಖಾಯಂ ಆಗಿ ತೊರೆಯಬಹುದು. ಈ ಹಿಂದೆ ವಿಧ್ಯಾರ್ಥಿಗಳ ಸಂಖ್ಯೆಯ ಕುಸಿತ, ಶಿಕ್ಷಕರ ಕೊರತೆ ಮುಂತಾದ ಕಾರಣಗಳಿಂದ ಮುಚ್ಚುವ ಹಂತ ತಲುಪಿ ಗುತ್ತಿಗೆ ಶಿಕ್ಷಕರ ನೇಮಕ, ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ ಮುಂತಾದ "ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ"ಯ ಸತತ ಪ್ರಯತ್ನದಿಂದ ವಿಧ್ಯಾರ್ಥಿಗಳ ಸಂಖ್ಯೆ ಒಂದಷ್ಟು ಒಳ್ಳೆಯ ಹಂತ ತಲುಪಿ ಉತ್ತಮವಾಗಿ ನಡೆದು ಬರುತ್ತಿದ್ದ ಸರ್ಕಾರಿ ಶಾಲೆಗಳು ಕೂಡ ಈ ಸುತ್ತೋಲೆಯ ಪರಿಣಾಮವಾಗಿ ಮುಚ್ಚುವ ಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು.

ತೀವ್ರ ವಿರೋಧದ ಬಳಿಕ ಇದೀಗ ಆ ಸುತ್ತೋಲೆಯನ್ನು ಬೊಮ್ಮಾಯಿ ಸರ್ಕಾರದ "ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ" ವಾಪಸ್‌ ಪಡೆದಿದೆ.

ಈ ವಿದ್ಯಾಮಾನದ ಕುರಿತು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ.ಎಚ್.ಸಿ ಮಹಾದೇವಪ್ಪ ಪ್ರತಿಕ್ರಿಯಿಸಿದ್ದು "ಬಾಯಿಗೆ ಬಂದಹಾಗೆ ಆದೇಶಗಳನ್ನು ಹೊರಡಿಸುವುದು, ವಿರೋಧ ಪಕ್ಷಗಳು ಮತ್ತು ಜನರಿಂದ ಛೀಮಾರಿ ಹಾಕಿಸಿಕೊಂಡ ನಂತರ, ಆದೇಶಗಳನ್ನು ಹಿಂಪಡೆಯುವ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಪ್ರಮಾಣದ ಜವಾಬ್ದಾರಿ ಇಲ್ಲ ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ" ಎಂದು ಹೇಳಿದ್ದಾರೆ.

(ಚಿತ್ರಗಳು:ಸಾಂಧರ್ಭಿಕ)

Advertisement
Advertisement
Recent Posts
Advertisement