Advertisement

ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಲಂಚ ಪ್ರಕರಣ: "ನಾ ಖಾವೂಂಗಾ, ನಾ ಖಾನೆದೂಂಗಾ" ಎಂದರೆ ಇದೇನಾ? ಎಂದ ಸಿದ್ದರಾಮಯ್ಯ

Advertisement

ಮುಂದಿನ ವರ್ಷ ಎದುರಾಗಲಿರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು, ತಮ್ಮ ಸರ್ಕಾರದ ಮೇಲಿರುವ 40%ಕಮಿಷನ್ ಆರೋಪ, ಪಕ್ಷದೊಳಗೆ ಹೊಗೆಯಾಡುತ್ತಿರುವ ಭಿನ್ನಾಭಿಪ್ರಾಯಗಳು, ಅಶ್ಲೀಲ ಸಿಡಿ ಮತ್ತು ತಡೆಯಾಜ್ಞೆ ಪ್ರಕರಣ, ಐಟಿ- ಈಡಿ- ಸಿಬಿಐ ಮೂಲಕ ಆಪರೇಷನ್ ಕಮಲದ ಆರೋಪ ಮತ್ತಿತರ ಕುಂದುಕೊರತೆಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಕೆಲವು ಪತ್ರಕರ್ತರಿಗೆ ದೀಪಾವಳಿ ಹಬ್ಬದ ನೆಪದಲ್ಲಿ, ಸಿಹಿತಿಂಡಿಗಳ ಪ್ಯಾಕೇಟ್ ಜೊತೆ ಎರಡೂವರೆ ಲಕ್ಷ ರೂ.ಗಳಷ್ಟು ಹಣವನ್ನು ಲಂಚವಾಗಿ ನೀಡಿರುವ ಕುರಿತು ಆರೋಪ ಎದುರಾಗಿದ್ದು, ಈ ಕುರಿತು ಆಕ್ರೋಶ ವ್ಯಕ್ತಪಡಿಸಿ ಪ್ರತಿಪಕ್ಷ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. "ಬಿಜೆಪಿಯ ಈ ಭ್ರಷ್ಟ ನಡೆಯಿಂದ ಪ್ರಜಾಪ್ರಭುತ್ವದ ನಾಲ್ಕನೆಯ ಸ್ಥಂಭ ಎಂದು ಬಿಂಬಿತವಾಗಿರುವ ಪತ್ರಿಕೋಧ್ಯಮವು ಇದೀಗ ಮಲೀನಗೊಂಡಿದೆ" ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿ,  #SayCM  ಹ್ಯಾಷ್‌ಟ್ಯಾಗ್‌ ನ ಅಡಿಯಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್ “ಪತ್ರಕರ್ತರಿಗೆ, ಮುಖ್ಯಮಂತ್ರಿ ಕಚೇರಿಯ ಸ್ವೀಟ್ ಬಾಕ್ಸ್- ಲಂಚ ದ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಅದು ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆಯೇ? ಕಮಿಷನ್ ಭ್ರಷ್ಟಾಚಾರದ ಪಾಪದ ಹಣವೇ? ಆ ಹಣದ ಮೂಲ ಯಾವುದು? ಎಷ್ಟು ಹಣ ಲಂಚವಾಗಿ ನೀಡಲಾಗಿದೆ, ಪಡೆದವರೆಷ್ಟು, ವಾಪಸ್ ನೀಡಿದವರೆಷ್ಟು ಎಂಬಿತ್ಯಾದಿ ಸಂಗತಿ ರಾಜ್ಯದ ಜನತೆಗೆ ತಿಳಿಯಬೇಕು” ಎಂದು ಆಗ್ರಹಿಸಿದೆ.

ಈ ಸಂಧರ್ಭದಲ್ಲಿ “ಕೆಲವು ನಿಷ್ಠಾವಂತ ಪತ್ರಕರ್ತರು, ಸಿಎಂ ಕಚೇರಿಯಿಂದ ನೀಡಲ್ಪಟ್ಟ ರೂಪಾಯಿ 2.5 ಲಕ್ಷ ಲಂಚದಷ್ಟು ಹಣವನ್ನು ವಾಪಸ್ ಮಾಡುವ ಮೂಲಕ ಪತ್ರಿಕಾಧರ್ಮವನ್ನು ಎತ್ತಿ ಹಿಡಿದಿದ್ದಾರೆ" ಎಂಬುದು ಪತ್ರಿಕೋದ್ಯಮದಲ್ಲಿ ಇಂದಿಗೂ ಒಂದಷ್ಟು ಪ್ರಾಮಾಣಿಕತೆ ಉಳಿದಿದೆ ಎಂಬಿವುದಕ್ಕೆ ಸಾಕ್ಷಿಯಾಗಿದೆ ಎಂಬುದು "ಮಾರಿಕೊಂಡ ಮಾಧ್ಯಮಗಳಲ್ಲಿ ಪ್ರಕಟವಾಗದ ಸುದ್ದಿಗಳು" ಎಂಬ ಅಡಿಬರಹದಡಿಯಲ್ಲೇ ಸುದ್ದಿಗಳನ್ನು ಪ್ರಕಟಿಸುವ "ಕನ್ನಡಮೀಡಿಯಾ ಡಾಟ್ ಕಾಂ" ಪತ್ರಿಕಾಬಳಗದ ಅಭಿಪ್ರಾಯವಾಗಿದೆ‌.

ಈ ನಡುವೆ "ಗಿಪ್ಟ್ ರೂಪದಲ್ಲಿ ವಿತರಿಸಲ್ಪಟ್ಟ ಲಕ್ಷಾಂತರ ರೂಪಾಯಿ ಲಂಚದ ಹಣ"ವನ್ನು ವಾಪಾಸು ಮಾಡಿದ ಪತ್ರಕರ್ತರನ್ನು ಕಾಂಗ್ರೆಸ್ ಅಭಿನಂದಿಸಿದ್ದು "ಕರ್ನಾಟಕದ ಪತ್ರಕರ್ತರು ಪತ್ರಿಕಾಧರ್ಮದ ಪಾವಿತ್ರ್ಯತೆಗೆ ದಕ್ಕೆ ತರುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ" ಎಂದು ಹೇಳಿದೆ.

ಈ ಕುರಿತು ಮುಂದುವರಿದು ಟ್ವೀಟ್ ಮಾಡಿರುವ ಕಾಂಗ್ರೆಸ್ "ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಸಿಹಿತಿಂಡಿಯ ಜೊತೆ ಹಣ ನೀಡಿದ್ದೇಕೆ ಎಂಬುದನ್ನು ಸಿಎಂ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದೆ.

“ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಿದ ವರದಿಯ ಬಗ್ಗೆ ತನಿಖೆಯಾಗಬೇಕು. ಆ ಹಣ ಯಾರದ್ದು? ಸರ್ಕಾರದ್ದೇ? ಬಿಜೆಪಿ ಪಕ್ಷದ್ದೇ? ಮುಖ್ಯಮಂತ್ರಿಗಳದ್ದೇ? 40% ಕಮಿಷನ್ ಆ ಹಣದ ಮೂಲವೇ? ಪಡೆದ ಲಂಚವು ಕೊಡುವ ಲಂಚವಾಗಿ ಮಾರ್ಪಟ್ಟಿದೆಯೇ? ಬೊಮ್ಮಾಯಿ ಯವರೇ ಅವರೇ, ನಿಮ್ಮ ಕಚೇರಿಯಲ್ಲಿ ನಡೆದದ್ದಕ್ಕೆ ನೀವೇ ಉತ್ತರದಾಯಿ, ತನಿಖೆಯಾಗಬೇಕಲ್ಲವೇ?” ಎಂದು ಸರಣಿ, ಸರಣಿಯಾಗಿ ಪ್ರಶ್ನೆಗಳನ್ನು ಕೇಳಿದೆ.
“ನಾವು ಸುಮ್ಮನೇ ಬೊಮ್ಮಾಯಿ ಯವರನ್ನು ಪೇಸಿಎಂ ಎಂದಿಲ್ಲ! ಈ ಸರ್ಕಾರ ಲಂಚವನ್ನು ಪಡೆಯುತ್ತದೆ, ಲಂಚವನ್ನು ನೀಡುತ್ತದೆ! ಇವೆಲ್ಲವೂ  #PayCM  ಮೂಲಕವೇ ನಡೆಯುತ್ತದೆಯೇ ಮುಖ್ಯಮಂತ್ರಿಗಳೇ? ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದಂತೆ ಮಾಧ್ಯಮಗಳನ್ನೂ ಖರೀದಿಸಿ ಅಕ್ರಮಗಳನ್ನು ಮುಚ್ಚಿಕೊಳ್ಳುವ ಹುನ್ನಾರವೇ?” ಎಂದು ವ್ಯಂಗ್ಯಭರಿತವಾಗಿ ಪ್ರಶ್ನಿಸಿದೆ.

ಈ ನಡುವೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ "ಬಿಜೆಪಿಗರು ಅಂದರೆ ಡೋಂಗಿಗಳು ಎಂದರ್ಥ. ಅದರ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಓರ್ವ ಜೋಕರ್! ನಾ ಖಾವೋಂಗಾ, ನಾ ಖಾನೆದೋಂಗಾ ಎಂದು ನರೇಂದ್ರ ಮೋದಿಯವರು ಆಗಾಗ ಹೇಳುವುದು ಇದಕ್ಕೇನಾ" ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಮಾಜಿ ಸಚಿವ, ಸಾಮಾಜಿಕ ಕಳಕಳಿಯ ಕಾಂಗ್ರೆಸ್ ನಾಯಕ ಡಾ. ಎಚ್.ಸಿ ಮಹಾದೇವಪ್ಪ ಪ್ರತಿಕ್ರಿಯಿಸಿದ್ದು "ಹಬ್ಬದ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪತ್ರಕರ್ತರಿಗೆ ನೀಡಿರುವ ಬಿಜೆಪಿಗರು ಮಾಧ್ಯಮ ವಲಯವನ್ನು ಹಾಳು ಮಾಡುವ ಮೂಲಕ ಪ್ರಜಾಪ್ರಭುತ್ವದ 4 ನೇ ಸ್ಥಂಭ ಎಂಬ ಅದರ ಪಾರಂಪರಿಕ ಗರಿಮೆಗೆ ಸಾರ್ವಜನಿಕವಾಗಿ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿ ಅದರ ಮಹತ್ವಕ್ಕೆ ಕಳಂಕ ತರಲು ಹೊರಟಿದ್ದಾರೆ. ದೂರದೃಷ್ಟಿಯಿಂದ ನೋಡಿದಾಗ ಮಾಧ್ಯಮ ವಲಯವು ಇಂತಹ ಅಪಾಯದಿಂದ ಎಚ್ಚೆತ್ತುಕೊಂಡರೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದು!" ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement