Advertisement

ಉಡುಪಿ: ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ; ಕ್ರಮ ಕೈಗೊಳ್ಳುವಂತೆ ಜನಪರ ಸಂಘಟನೆಗಳ ಆಗ್ರಹ

Advertisement

ಅಹಿಂಸೆಯ ಮೂಲಕ ಈ ದೇಶಕ್ಕೆ ಬ್ರಿಟೀಷರ ದಾಸ್ಯದಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟ ಆ ಮೂಲಕ ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಮಹಾತ್ಮಾ ಗಾಂಧಿಯವರ ಹುಟ್ಟಿದ ದಿನವಾದ ಅಕ್ಟೋಬರ್ 2- ಗಾಂಧಿಜಯಂತಿಯ ದಿನದಂದು ಉಡುಪಿ ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಉಡುಪಿ ನಗರದಲ್ಲಿ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶಿಸುವ ಮೂಲಕ ಭಯದ ವಾತಾವರಣ ಮೂಡಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ವಿರುದ್ಧವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಬಗ್ಗೆ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಿಪಿಎಂ, ದಸಂಸ ಮುಂತಾದ ವಿವಿಧ ಜನಪರ ಸಂಘಟನೆಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿವೆ.

‘'ದುರ್ಗಾ ದೌಡ್ ಮೆರವಣಿಗೆಯಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡಿರುವುದು ಖಂಡನೀಯ. ಇದು ಸಂವಿಧಾನ ವಿರೋಧಿಯಾಗಿದ್ದು, ಪೊಲೀಸ್ ಇಲಾಖೆ ಕೂಡಲೇ ಸಂಘಟಕರು ಹಾಗೂ ತಲವಾರು ಪ್ರದರ್ಶನ ಮಾಡಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು’' ಎಂದು ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ.

"ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ತಲವಾರು ಝಳಪಿಸಿ ಭಯದ ವಾತಾವರಣ ಸೃಷ್ಟಿಸಿರುವವರ ಮೇಲೆ ಪ್ರಕರಣ ದಾಖಲಿಸಬೇಕು. ಸೌಹಾರ್ದ ಬದುಕಿಗೆ ಹಾಗೂ ಬಹುತ್ವದ ನೆಲವಾಗಿರುವ ಉಡುಪಿಯನ್ನು ಗೂಂಡಾ ರಾಜ್ಯ ಮಾಡಲು ಹೊರಟಿರುವ ಕೋಮುವಾದಿಗಳ ನಡೆ ಖಂಡನೀಯ" ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆಕ್ಷೇಪಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ದುರ್ಗಾದೌಡ್ ಮೆರವಣಿಗೆಯಲ್ಲಿ ಸಚಿವ ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್‌, ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್ ಸೇರಿ ಹಲವು ನಾಯಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

Advertisement
Advertisement
Recent Posts
Advertisement