Advertisement

ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದು ಎಸ್ಸಿ, ಎಸ್‌ಟಿ ಸಮುದಾಯವನ್ನು ಬೊಮ್ಮಾಯಿ ಸರ್ಕಾರ ವಂಚಿಸುತ್ತಿದೆ: ಸಿದ್ದರಾಮಯ್ಯ

Advertisement

ಎಸ್ಸಿ, ಎಸ್‌ಟಿ ಸಮುದಾಯದ ಮೀಸಲಾತಿಯ ಹೆಚ್ಚಳಕ್ಕಾಗಿ ನಾಗಮೋಹನ್ ದಾಸ್ ಸಮಿತಿ ನೇಮಿಸಿ, ಸೂಕ್ತ ಕ್ರಮ ಕೈಗೊಂಡದ್ದು ಹಿಂದಿನ ಕಾಂಗ್ರೆಸ್ ಸರ್ಕಾರ. ಕೂಲಂಕುಷ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿ ಸಿದ್ದಪಡಿಸಲು ಸಹಜವಾಗಿಯೇ ಒಂದಷ್ಟು ಸಮಯ ಹಿಡಿಯುತ್ತದೆ. ಆ ಎಲ್ಲಾ ಪ್ರಕ್ರೀಯೆಗಳು ಪೂರ್ಣಗೊಂಡು ಇದೀಗ ವರದಿ ಸಂಪೂರ್ಣಗೊಂಡಿದೆ. ಸಂಪೂರ್ಣಗೊಂಡಿರುವ ವರದಿಯನ್ನು ಸ್ವೀಕರಿಸಿ ಅದರ ಅನುಷ್ಠಾನದ ಪರ ಮಾತನಾಡಿದ್ದು ಬಿಟ್ಟರೆ ಆ ಪ್ರಕ್ರಿಯೆಯಲ್ಲಿ ಈಗಿನ ಬೊಮ್ಮಾಯಿ ಸರ್ಕಾರದ ಪಾತ್ರ ಏನೇನೂ ಇಲ್ಲ.

ವರದಿ ಅನುಷ್ಠಾನದ ಕುರಿತು ಪ್ರಾಮಾಣಿಕ ಕಾಳಜಿ ಇದ್ದರೆ ಇದೀಗ ಅದರ ಮುಂದಿನ ಪ್ರಕ್ರಿಯೆಯ ಭಾಗವಾಗಿ ರಾಜ್ಯ ಸರ್ಕಾರ ಸ್ವೀಕಾರ ಮಾಡಿರುವ ಆ ವರದಿಯನ್ನು ಕೇಂದ್ರ ಸರ್ಕಾರದ ಮುಂದಿಡಬೇಕಿದೆ. ಆ ನಂತರ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದು ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಪಡೆದರೆ ಮಾತ್ರವೇ ಅದು ಜಾರಿಯಾಗಲಿದೆ.

ಏಕೆಂದರೆ ಮೀಸಲಾತಿ ಹೆಚ್ಚಳ ಮಾಡಬೇಕಿದ್ದರೆ ಸಂವಿಧಾನದಲ್ಲಿ ತಿದ್ದುಪಡಿ ಆಗಲೇಬೇಕಿದೆ. ಸಂವಿಧಾನದಲ್ಲಿನ ಈಗಿನ ನಿಯಮದ ಪ್ರಕಾರ ಮೀಸಲಾತಿ ಗರಿಷ್ಠ ಮಿತಿ 50% ದಾಟುವಂತಿಲ್ಲ. ಹಾಗಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡದೆ ಯಾವುದೇ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯವಾಗದು.

ಆದರೆ, ರಾಜ್ಯದ ಬೊಮ್ಮಾಯಿ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ಅನುಷ್ಠಾನದ ಮುಂದಿನ ಕಾನೂನು ಪ್ರಕ್ರಿಯೆಯ ಭಾಗವಾಗಿ ಆ ವರದಿಯನ್ನು ಕೇಂದ್ರದ ಮೋದಿ ಸರ್ಕಾರದ ಮುಂದಿಟ್ಟು ಒತ್ತಡ ಹೇರುವ ಕುರಿತು ಒಂದೇ ಒಂದು ಶಬ್ದವನ್ನು ಕೂಡ ಮಾತನಾಡದೆ ಈ ಮೀಸಲಾತಿ ಪ್ರಕ್ರಿಯೆ ಮುಗಿದೇ ಹೋಗಿದೆ ಮತ್ತು ಮೀಸಲಾತಿ ಸಿಕ್ಕಾಯಿತು ಎಂಬಂತೆ ಅಥವಾ ಆ ಹೆಚ್ಚಳದ ನಿರ್ಧಾರ ತಮ್ಮ ಸರ್ಕಾರದ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಆ ಸಮುದಾಯಗಳನ್ನು ವಂಚಿಸುವ ಕ್ರಮವಾಗಿದೆ. ಈ ಮೂಲಕ ಆ ಸಮುದಾಯಗಳನ್ನು ತಪ್ಪುದಾರಿಗೆಳೆಯುತ್ತಿದೆ.


(ಚಿತ್ರ: ನ್ಯಾಯಮೂರ್ತಿ ನಾಗಮೋಹನ್ ದಾಸ್)

ಈ ಕುರಿತು ಬೊಮ್ಮಾಯಿ ಸರ್ಕಾರದ ನಡವಳಿಕೆ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು "ನಿಯಮದ ಪ್ರಕಾರ ರಾಜ್ಯದಲ್ಲಿ ಒಟ್ಟು ಮೀಸಲಾತಿಯ ಮಿತಿ ಶೇ.50 ಕ್ಕಿಂತ ಹೆಚ್ಚಾಗಬೇಕಾದರೆ ಸಂವಿಧಾನದಲ್ಲಿ ತಿದ್ದುಪಡಿ ಅಗತ್ಯ. ಸಂವಿಧಾನದಲ್ಲಿ ತಿದ್ದುಪಡಿಗೆ ಯಾವುದೇ ತೆರನಾದ ಕ್ರಮ ಕೈಗೊಳ್ಳದೆ ಎಸ್ಸಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ, ಎಸ್ಟಿ ಮೀಸಲಾತಿ ಶೇ.3ರಿಂದ 7ಕ್ಕೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡುವುದು ಹಾಸ್ಯಾಸ್ಪದವಾಗಿದೆ. ಸಂವಿಧಾನದಲ್ಲಿ ತಿದ್ದುಪಡಿ ಮಾಡದೆ ಒಟ್ಟು ಮೀಸಲಾತಿ ಮಿತಿಯನ್ನು ಶೇ.56ಕ್ಕೆ ಹೇಗೆ ಹೆಚ್ಚಿಸುತ್ತೀರಿ?" ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ ನವರು "ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸಬೇಕೆಂಬ ಆ ಸಮುದಾಯದ ಮತ್ತಿತರ ಸಂಘಟನೆಗಳ ಬೇಡಿಕೆಯ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ನ್ಯಾ.ನಾಗಮೋಹನ್‌ದಾಸ್‌ ಸಮಿತಿಯನ್ನು ನೇಮಿಸಿ ಅಗತ್ಯ ಕ್ರಮ ಕೈಗೊಂಡಿತ್ತು. ಇದೀಗ ಪೂರ್ಣಗೊಂಡಿರುವ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಎಸ್ಸಿ, ಎಸ್‌ಟಿ ಮೀಸಲಾತಿಯನ್ನು ಕ್ರಮವಾಗಿ ಶೇ.17 ಮತ್ತು ಶೇ.7ಕ್ಕೆ ಹೆಚ್ಚಿಸಲು ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಈ ಮೀಸಲಾತಿ ಅನುಷ್ಠಾನಕ್ಕೆ ಮೊದಲು ರಾಜ್ಯದ ವಿಧಾನಮಂಡಲ ನಿರ್ಣಯ ಕೈಗೊಂಡು ಸಂವಿಧಾನದ ತಿದ್ದುಪಡಿಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕು. ಹೀಗಾಗಿ ಈ ಮೀಸಲಾತಿ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ದೀರ್ಘವಾದದ್ದು ಮಾತ್ರವಲ್ಲ ಅದು ಆಳುವ ಪಕ್ಷದ ರಾಜಕೀಯ ಇಚ್ಛಾಶಕ್ತಿಯನ್ನೂ ಕೂಡ ಅವಲಂಬಿಸಿದೆ. ಮೀಸಲಾತಿ ಹೆಚ್ಚಳದ ಈ ಪ್ರಕ್ರಿಯೆ ಸುಲಭದ ಕೆಲಸ ಅಲ್ಲ. ಹೀಗಾಗಿ ಹೇಗೆ ಹೆಚ್ಚಿಸುತ್ತೇವೆ ಎಂಬ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.

"ಮೀಸಲಾತಿ ಕುರಿತು ಸಂವಿಧಾನದಲ್ಲಿ ತಿದ್ದುಪಡಿ ಅನಿವಾರ್ಯ" ಎಂದಿರುವ ಸಿದ್ದರಾಮಯ್ಯನವರು "ರಾಜ್ಯದಲ್ಲಿ ಈಗ ಹಿಂದುಳಿದ ಜಾತಿಗಳಿಗೆ ಶೇ.32, ಪರಿಶಿಷ್ಟಜಾತಿಗಳಿಗೆ ಶೇ.15 ಮತ್ತು ಪರಿಶಿಷ್ಟಪಂಗಡಗಳಿಗೆ ಶೇ.3ರಷ್ಟು ಅಂದರೆ ಒಟ್ಟು ಶೇ.50ರಷ್ಟು ಮೀಸಲಾತಿ ಸೌಲಭ್ಯಗಳು ಇದೆ. ಎಸ್ಸಿ, ಎಸ್ಟಿ ಮೀಸಲು ಹೆಚ್ಚಳದಿಂದ ಈ ಪ್ರಮಾಣ ಶೇ.56 ರಷ್ಟುಆಗಲಿದೆ. ಸುಪ್ರೀಂಕೋರ್ಟ್‌ (ಇಂದಿರಾ ಸಹಾನಿ ಪ್ರಕರಣದ) ತೀರ್ಪಿನ ಪ್ರಕಾರ ಒಟ್ಟು ಮೀಸಲಾತಿ ಶೇ. 50 ಮೀರುವಂತಿಲ್ಲ. ಈ ಮಿತಿಯನ್ನು ಮೀರದೆ ಎಸ್ಸಿ, ಎಸ್ಟಿಗೆ ಶೇ.6ರಷ್ಟು ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ. ಆದ ಕಾರಣ ಆ ಮಿತಿಯನ್ನು ಮೀರಲು ಸಂವಿಧಾನದಲ್ಲಿನ ಆ ಅಂಶದ ತಿದ್ದುಪಡಿ ಅನಿವಾರ್ಯ" ಎಂದು ಹೇಳಿದ್ದಾರೆ.

Advertisement
Advertisement
Recent Posts
Advertisement