Advertisement

ಕಾಂಗ್ರೆಸನ್ನು ಕಬಳಿಸಲು ಆರೆಸ್ಸೆಸ್ ಸಂಚು ಹೂಡಿತ್ತೇ?

Advertisement

ಜನಪರ ಹೋರಾಟಗಾರ, ಪ್ರಗತಿಪರ ಚಿಂತಕ ಪಣಿರಾಜ್ ಅವರ ಒಂದು ಕಿರು ಟಿಪ್ಪಣಿ

"ಕಾಂಗ್ರೆಸ್ಸಿನೊಳಗೆ ಸಂಘದ ಕರಾಮತ್ತು"

1951ರ ಅಕ್ಟೋಬರಿನಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಭಾರತೀಯ ಜನ ಸಂಘ ಹುಟ್ಟು ಹಾಕುವುದಕ್ಕೆ ಮೊದಲು ಕಾಂಗ್ರೆಸ್ಸ್ ಕಫ್ಜಕ್ಕೆ ಆರ್.ಎಸ್.ಎಸ್. ಪ್ರಯತ್ನಿಸಿದ ಕುರಿತ ಟಿಪ್ಪಣಿ. (ಆಧಾರ: ಕ್ರಿಷ್ಟೋಫ್ ಜೆಫ್ರೆಲೊಟ್, 'ದಿ ಹಿಂದು ನ್ಯಾಷನಾಲಿಸ್ಟ್ ಮೂವ್ಮೆಂಟ್ ಅಂಡ್ ಇಂಡಿಯನ್ ಪಾಲಿಟಿಕ್ಸ್', ಪೆಂಗ್ವಿನ್ ಇಂಡಿಯ, 1996, ಪುಟ 96-102)

ಕಾಂಗ್ರೆಸ್ಸ್ ಹುಟ್ಟಿನಿಂದಲೂ, ಅದರೊಳಗೆ 'ಹಿಂದು ಸಂಪ್ರದಾಯವಾದಿ' ನಾಯಕರು ಇದ್ದರು; ಕಾಂಗ್ರೆಸ್ಸಿನ ಉದಾರವಾದಿ ಬಣದ ಜೊತೆ ಅವರಿಗೆ ಭಿನ್ನಾಭಿಪ್ರಾಯಗಳೂ ಇದ್ದವು. ಆದರೆ, ಅವರಲ್ಲಿ ಬಹುಪಾಲು ಜನ, ಹಿಂದು ಮಹಾಸಭಾ ಹಾಗು ಅರ್.ಎಸ್.ಎಸ್. ಹುಟ್ಟು ಹಾಕಿದ 'ಹಿಂದು ರಾಷ್ಟ್ರೀಯವಾದ'ದ ಕಡೆ ಒಲವುಳ್ಳವರಾಗಿರಲಿಲ್ಲ. ಆದರೂ, ಆರ್.ಎಸ್.ಎಸ್. ಅವರ ಸೌಮ್ಯ ಬೆಂಬಲದಲ್ಲಿ 'ಹಿಂದು ರಾಷ್ಟ್ರೀಯವಾದ' ವನ್ನು ಪ್ರತಿಪಾದಿಸುವ ನಾಯಕರನ್ನು ಕಾಂಗ್ರೆಸ್ಸಿನಲ್ಲಿ ಬೇರಿಳಿಸಿ ತನ್ನ ಕಫ್ಜಾಕ್ಕೆ ತೆಗೆದುಕೊಳ್ಳುವ 'ರಾಜಕೀಯ'ವನ್ನು ಮಾಡುತ್ತಲೇ ಇತ್ತು.

ಗಾಂಧಿಜೀ ಯವರ ಪ್ರಾಮಾಣಿಕ ಅನುಯಾಯಿಯೂ, ವರ್ಚಸ್ವಿ ನಾಯಕರಾದ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಇಂಥಾ 'ಹಿಂದು ರಾಷ್ಟ್ರೀಯವಾದಿ'ಗಳ ಒಲವು ತಿಳಿದಿತ್ತಾದಾರೂ, ಅವರನ್ನು ಹೊರಗಿಟ್ಟು 'ಉಗ್ರಪಂಥ' ಬೆಳೆಯಲು ಬಿಡುವುದಕ್ಕಿಂತ ಒಳಗೆ ಇಟ್ಟುಕೊಂಡು, ಸೌಮ್ಯಗೊಳಿಸಿ, ಸುಧಾರಿಸುವುದು ಹೆಚ್ಚು ಸೂಕ್ತ ಎಂಬ ಅಭಿಪ್ರಾಯವಿತ್ತು. ಆದರೆ, ನೆಹರು ಅವರಿಗೆ ಈ ಧೋರಣೆ ಸರಿ ಬರುತ್ತಿರಲಿಲ್ಲ.

ಈ ಬಗೆಯ ಸನ್ನಿವೇಶದಲ್ಲಿ ಕಾಂಗ್ರೆಸ್ಸಿನಲ್ಲಿ ಬೆಳೆದ ಒಬ್ಬ ವ್ಯಕ್ತಿ, ಯನೈಟೆಡ್ ಪ್ರಾವಿನ್ಸ್ (ಈಗಿನ ಉತ್ತರ ಪ್ರದೇಶದ) ಪುರುಷೋತ್ತಮ ದಾಸ್ ಟಂಡನ್.

ಮದನಮೋಹನ್ ಮಾಳವೀಯರ ಮೂಲಕ ಕಾಂಗ್ರೆಸ್ ಪ್ರವೇಶಿಸಿದ ಟಂಡನ್, ಅವರ ಪ್ರಭಾವದಲ್ಲಿ ವೇಗವಾಗಿ ಬೆಳೆದು, ಯುನೈಟೆಡ್ ಪ್ರಾವಿನ್ಸಿನ ಕಾಂಗ್ರೆಸ್ ಅಧ್ಯಕ್ಷರೂ ಆದರು. 'ಹಿಂದು ಸಂಪ್ರದಾಯವಾದಿ' ಧೋರಣೆಗಳನ್ನು ಪ್ರತಿಪಾದಿಸುವ ನಾಯಕರಾಗಿ ಅವರಿಗೆ ಪಟೇಲರ ಬೆಂಬಲವೂ ಇತ್ತು, ಹಿಂದು ಮಹಾಸಭಾ ಹಾಗು ಆರ್.ಎಸ್.ಎಸ್.ಗೂ ಹಿತವಾಗಿದ್ದರು. 1950ರಲ್ಲಿ, ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ಸಂಖ್ಯೆಯ ನಿರಾಶ್ರಿತರು ಪಶ್ಚಿಮ ಬಂಗಾಳಕ್ಕೆ ವಲಸೆ ಬರತೊಡಗಿದ ಸನ್ನಿವೇಶವನ್ನು ಉಪಯೋಗಿಸಿಕೊಂಡು ಹಿಂದುತ್ವ ರಾಷ್ಟ್ರೀಯವಾದಿ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಕಾಂಗ್ರೆಸ್ ಉಗ್ರ ಹಿಂದುತ್ವ ರಾಜಕೀಯ ಧೋರಣೆ ತಳೆಯುವಂತೆ ನೆಹರು ಅವರ ಮೇಲೆ ಸಂಸತ್ತಿನ ಒಳಗೂ ಹೊರಗೂ ಒತ್ತಡ ಹೇರತೊಡಗಿದರು. ಆ ಹೊತ್ತಿಗೆ ಟಂಡನ್, ಮುಖರ್ಜಿ ಮಾರ್ಗದ ಪ್ರಬಲ ಬೆಂಬಲಿಗರಾಗಿ, ಬಂಗಾಳಿ ನಿರಾಶ್ರಿತರ ಸಮಾವೇಶಗಳನ್ನು ಆಯೋಜಿಸುತ್ತಾ ಆರ್.ಎಸ್.ಎಸ್.ಗೆ ಆಪ್ತರಾದರು; ಇದು ನೆಹರುಗೆ ತೀವ್ರ ಪೇಚಾಟ ಉಂಟು ಮಾಡಿ, ಬಹಿರಂಗವಾಗಿ ಟಂಡನ್ ಗೆ ಎಚ್ಚರಿಸಿದರೂ, ಪಟೇಲರ ಬೆಂಬಲವಿದ್ದುದರಿಂದ, ಟಂಡನ್ ಮತ್ತಷ್ಟೂ ಚಿಗುರಿದರು. 1950ರ ಅಗಸ್ಟ್ ಕೊನೆಯ ವಾರದಲ್ಲಿ ನಡೆಯಲಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಹೊತ್ತಿಗೆ, ಟಂಡನ್ ಪಟೇಲರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಹಂತಕ್ಕೆ ಬೆಳೆದರು. ಅಗಸ್ಟ್ 1950ರ ಕೊನೆಗೆ ನಡೆದ All India Congress Committee (AICC) ಅಧಿವೇಶನದಲ್ಲಿ ಟಂಡನ್ ಹಾಗು ನೆಹರು ಪರವಿದ್ದ ಶಂಕರ್ ದೇವ್ ಹಾಗು ಆಚಾರ್ಯ ಕೃಪಲಾನಿಯವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. 3000 ಸದಸ್ಯರು ಭಾಗವಹಿಸಿದ ಚುನಾವಣೆಯಲ್ಲಿ ಟಂಡನ್ ಕೃಪಲಾನಿಯವರನ್ನು 214 ಮತಗಳ ಅಂತರದಲ್ಲಿ ಸೋಲಿಸಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು!

'ಏಕ ಭಾಷೆ- ಏಕ ಸಂಸ್ಕೃತಿ'

ಇದು ಆರ್.ಎಸ್.ಎಸ್.ಗೆ ಬಹಳ ಸಂತಸದ ವಿಷಯವಾಗಿತ್ತು. 'ಕಾಂಗ್ರೆಸ್ ಕೃಪಲಾನಿಯವರನ್ನು ಸೋಲಿಸುವ ಮೂಲಕ ನೆಹರು+ಗಾಂಧಿ ಮಾರ್ಗವನ್ನು ತೊರೆದು ಗಾಂಧಿ+ಪಟೇಲ್ ಮಾರ್ಗಕ್ಕೆ ತಿರುಗಿದೆ' ಎಂದು ಅಧಿಕೃತವಾಗಿ ಘೋಷಿಸಿ ಅದು ಬೀಗಿತು. (ಈಗಿನ ಗುಜರಾತ್ ಸೇರಿದ್ದ) ಆಗಿನ ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗು ಉತ್ತರ ಪ್ರದೇಶಗಳ ಕಾಂಗ್ರೆಸ್ಸಿನ ಅಧ್ಯಕ್ಷರೂ ಹಾಗು ಪ್ರಭಾವಿ ನಾಯಕರೂ ಟಂಡನ್ ಥರದವರೇ ಆಗಿದ್ದು, ಅವರನ್ನೆಲ್ಲ ಸೇರಿಸಿಕೊಂಡು Congress Working Committee (CWC) ರಚಿಸುವ ಯೋಜನೆಯನ್ನು ಅಧ್ಯಕ್ಷರಾಗಿ ಆಯ್ಕೆಯಾದ ಟಂಡನ್ ರೂಪಿಸಿದ್ದರು ಹಾಗು 'ಏಕ ಭಾಷೆ- ಏಕ ಸಂಸ್ಕೃತಿ' ಯನ್ನು ಹದಿನೈದು ವರ್ಷಗಳಲ್ಲಿ ಜ್ಯಾರಿಗೆ ತರುವ 'ಹಿಂದು ರಾಷ್ಟ್ರೀಯವಾದಿ' ಅಜೆಂಡಾವನ್ನು ಕಾಂಗ್ರೆಸ್ಸಿನ ಅನುಮೋದನೆಗೆ ಸೂಚಿಸಲು ಬಹಿರಂಗ ತಯಾರಿ ಶುರುವಿಟ್ಟುಕೊಂಡರು.

ಇದು ನೆಹರು ಅವರಿಗೆ ದೊಡ್ಡ ಸವಾಲಾಗಿತ್ತು. 1950ರ ಸೆಪ್ಟಂಬರ್ ಮೊದಲ ವಾರದಲ್ಲಿ ನಾಸಿಕ ದಲ್ಲಿ ಶುರುವಾದ AICC ಅಧಿವೇಶನದಲ್ಲಿ ನೆಹರು, ಟಂಡನ್ ಮತ್ತು ಅವರ ಯೋಜನೆಗಳ ವಿರುದ್ಧ ನೇರ ಸಿದ್ಧಾಂತ ಸಮರಕ್ಕೆ ಇಳಿದರು. ಕಾಂಗ್ರೆಸ್ ಈ ಬಗೆಯ ಕೋಮುವಾದಿ ವಿಚಾರಧಾರೆಗೆ ಹೊರಳುವುದನ್ನು ತಾನು ಒಪ್ಪುದಿಲ್ಲವೆಂದೂ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಣ್ಣುಗೂಡಿಸುವ ಸಂಖ್ಯಾ ಬಲದಲ್ಲಿ ನಂಬುವ ಕಾಂಗ್ರೆಸ್ ತನ್ನದಲ್ಲವೆಂದೂ, ನೀವೇ ನನ್ನನ್ನು ಪ್ರಧಾನಿಯಾಗಿ ಮಾಡಿದ್ದೀರಿ ನೀವೇ ನನಗೊಪ್ಪದ ವಿಚ್ಛಿದ್ರಕ ಹಿತಾಸಕ್ತಿಗಳನ್ನು ಬೆಂಬಲಿಸುವಿರಾದರೆ ನಾನು ಪ್ರಧಾನಿ ಪಟ್ಟ ತ್ಯಜಿಸಿ ಮೌಲ್ಯಾಧಾರಿತ ಕಾಂಗ್ರೆಸ್ಸಿಗೆ ಸ್ವತಂತ್ರವಾಗಿ ಕೆಲಸ ಮಾಡುತ್ತೇನೆಂದೂ AICC ಸದಸ್ಯರಿಗೆ ಸವಾಲು ಹಾಕಿದರು. AICC ಸದಸ್ಯರು ನೆಹರು ಅವರನ್ನು ಒಪ್ಪಿಕೊಂಡು ಅವರ ಕಾರ್ಯ ಯೋಜನೆಗೆ ಬೆಂಬಲ ನೀಡಿದರು. ನೆಹರು ಕ್ಷಿಪ್ರವಾಗಿ ಕಾರ್ಯಕ್ಕೆ ಇಳಿದರು. ಟಂಡನ್ ತಮ್ಮ CWC ಹಾಗು ಕಾರ್ಯ ಯೋಜನೆಗಳನ್ನು ಮಂಡಿಸದೆ, ಸಮಯ ಕಾಯುತ್ತಿದ್ದರು. 1950ರ ಕೊನೆಗೆ ಪಟೇಲರ ಮರಣದೊಂದಿಗೆ ಟಂಡನ್ ಗೆ ಮಹತ್ವದ ಬೆಂಬಲ ಕುಸಿಯಿತು. ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು. ನೆಹರು ಅಧ್ಯಕ್ಷರಾದರು. ಇದನ್ನು ಕಾಂಗ್ರೆಸ್ಸಿನೊಳಗಿನ 'ಹಿಂದು ರಾಷ್ಟ್ರೀಯವಾದಿ' ಗಳಿಗೆ ಅಪಥ್ಯವಾಗಿತ್ತು.

ಮಧ್ಯಪ್ರದೇಶದ ಪ್ರಭಾವಿ ನಾಯಕ ಡಿ.ಪಿ.ಮಿಶ್ರ 'ಈಗ ದೇಶದಲ್ಲಿ ಪ್ರಬಲ ವಿರೋಧ ಪಕ್ಷ ಇಲ್ಲದೆ ಇರುವುದರಿಂದ, ನಾವೇ ವಿರೋಧ ಪಕ್ಷದ ಕೆಲಸ ಮಾಡುವುದು ಅನಿವಾರ್ಯ' ಎಂದು ಬಹಿರಂಗವಾಗಿ ಹೇಳಿದರು. ಹೇಳಿದಂತೆ, ನೆಹರು ವಿಚಾರಗಳ ವಿರುದ್ಧ ಸೇಡನ್ನು 'ಹಿಂದು ಕೋಡ್ ಬಿಲ್' ಸೋಲಿಸುವ ಮೂಲಕ ತೀರಿಸಿಕೊಂಡರು. 1960 ರಲ್ಲಿ ಮಿಶ್ರರಂಥವರ ಮರಣಗಳೊಂದಿಗೆ, ಈ ಅಧ್ಯಯವು ತಾತ್ಕಲಿಕ ಅಂತ್ಯ ಕಂಡಿತು.


•ಪಣಿರಾಜ್

Advertisement
Advertisement
Recent Posts
Advertisement