Advertisement

ಪ್ರತಿಭಾ ಕುಳಾಯಿ ಮಾನಹಾನಿ ಪ್ರಕರಣ: ಈ ತನಕವೂ ಆರೋಪಿಗಳನ್ನು ಬಂಧಿಸದ ಪೋಲಿಸರು!

Advertisement

ಸುರತ್ಕಲ್ ಅಕ್ರಮ ಟೋಲ್ ಗೇಟ್ ನ ವಿರುದ್ಧ ಇತ್ತೀಚೆಗೆ, ಆಡಳಿತ ಪಕ್ಷ ಬಿಜೆಪಿ ಹೊರತುಪಡಿಸಿ ಪಕ್ಷಾತೀತವಾಗಿ ನಡೆದ ಬ್ರಹತ್ ಪ್ರತಿಭಟನೆಯ ವೇಳೆಯಲ್ಲಿ ಮಾಜಿ ಕಾರ್ಪೋರೇಟರ್, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಯವರು ಪೋಲಿಸರ ಬಂಧನಕ್ಕೆ ವಿರುದ್ಧವಾಗಿ, ರಸ್ತೆಯಲ್ಲಿ ಮಲಗಿ ವಿಶಿಷ್ಟವಾಗಿ ಪ್ರತಿಭಟಿಸಿದ್ದ ಸಂಧರ್ಭದ ವಿಡಿಯೋ ಬಳಸಿ ಅದಕ್ಕೆ ಅಸಹ್ಯಕರವಾದ, ಅಶ್ಲೀಲವಾಗಿ ನಿಂದಿಸುವ, ಮಹಿಳಾ ಸಮುದಾಯವನ್ನೇ ಹೀನಾಯವಾಗಿ ಅವಮಾನಿಸುವ ರೀತಿಯ ತಲೆಬರಹ ಕೊಟ್ಟು ಪ್ರಕಟಿಸಿದ ಆರೋಪದಲ್ಲಿ ಬಿಜೆಪಿಯ ಬೆಂಬಲಿಗರು ಎನ್ನಲಾದ ಶ್ಯಾಮಸುಂದರ್ ಭಟ್ ಹೊಸಮೂಲೆ ಮತ್ತು ಕೆ.ಆರ್ ಶೆಟ್ಟಿ ಅಡ್ಯಾರ್ ಪದವು ಅವರುಗಳ ಮೇಲೆ ಸ್ವತಃ ಪ್ರತಿಭಾ ಕುಳಾಯಿಯವರು ಪೋಲಿಸ್ ಇಲಾಖೆಗೆ ದೂರು ನೀಡಿದ್ದರಾದರೂ, ಪ್ರಕರಣ ನಡೆದು ಹತ್ತು ದಿನಗಳು ಕಳೆಯುತ್ತಾ ಬಂದರೂ ಈ ತನಕವೂ ಪೋಲಿಸ್ ಇಲಾಖೆ ಆರೋಪಿಗಳನ್ನು ಬಂಧಿಸದಿರುವ ಕುರಿತು ದ.ಕ ಮತ್ತು ಉಡುಪಿ ಜಿಲ್ಲೆಯಾದ್ಯಂತ ತೀವ್ರ ಅಸಮಾಧಾನ ವ್ತಕ್ತವಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆಯ ಮೂಲಕ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಾಮಾಜಿಕ ನಾಯಕರುಗಳು ಹಾಗೂ ಸಾರ್ವಜನಿಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು ಆರೋಪಿಗಳನ್ನು ಕೂಡಲೇ ಬಂದಿಸುವಂತೆ ಒತ್ತಾಯಿಸಿದ್ದಾರೆ.

ಪ್ರತಿಭಾ ಕುಳಾಯಿಯವರನ್ನು ಬೆಂಬಲಿಸಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರೆಸ್‌ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ "ಮಾಜಿ ಕಾರ್ಪೋರೇಟರ್ ಹಾಗೂ ಮಹಿಳಾ ಹೋರಾಟಗಾರ್ತಿಯೊಬ್ಬರನ್ನು ಈ ರೀತಿಯಾಗಿ ಅಪಮಾನಿಸುವುದು ಖಂಡನೀಯ" ಎಂದಿದೆ.

ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು "ಪ್ರತಿಭಾ ಕುಳಾಯಿಯವರ ವಿರುದ್ಧ ಮಾನಹಾನಿಕರ ಪೋಸ್ಟ್ ಮಾಡಿರುವುದು ಮತ್ತು ಈ ತನಕವೂ ಆರೋಪಿಗಳನ್ನು ಬಂಧಿಸದಿರುವುದು ಸುರತ್ಕಲ್ ಅಕ್ರಮ ಟೋಲ್‌ಗೇಟ್ ಹೋರಾಟವನ್ನು ಮತ್ತು ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ಕ್ರಮವಾಗಿದೆ. ಸುರತ್ಕಲ್ ಟೋಲ್ ಅಕ್ರಮ ಎಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೇ ಒಪ್ಪಿಕೊಂಡಿವೆ. ಆದರೂ ಈ ತನಕವೂ ಟೋಲ್ ತೆರವು ಮಾಡಲು ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಅಕ್ರಮ ಟೋಲ್ ಗೇಟ್ ಅನ್ನು ತೆರವುಗೊಳಿಸಬೇಕು ಮತ್ತು ಪ್ರತಿಭಾ ಅವರ ವಿರುದ್ಧ ಮಾನಹಾನಿಕರ ಪೋಸ್ಟ್ ಪ್ರಕಟಿಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರವರ ಆಪ್ತ ಶ್ಯಾಮ್ ಸುಂದರ ಭಟ್ಟ ನನ್ನು "ಮಹಿಳಾ ದೌರ್ಜನ್ಯ ಕಾಯ್ದೆ"ಯಡಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ: ವಸಂತ ಬಂಗೇರ. ಮಾಜಿ ಶಾಸಕರು, ಬೆಳ್ತಂಗಡಿ.

ಸುರತ್ಕಲ್ ಅಕ್ರಮ ಟೋಲ್‌ಗೇಟ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸುರತ್ಕಲ್ ನ ಸಾಮಾಜಿಕ ಕಾರ್ಯಕರ್ತೆ, ಪ್ರತಿಭಾ ಕುಳಾಯಿಯವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರವಾಗಿ ಪ್ರಕಟಿಸಿರುವುದು ಖಂಡನೀಯ. ಮಾತೆತ್ತಿದರೆ ನಾವು ಆರೆಸ್ಸೆಸ್ ನವರು ಸಂಸ್ಕಾರವಂತರು ಎಂದು ಬೋಂಗು‌ ಬಿಡುವ ಬಹುತೇಕ ಬಿಜೆಪಿ ನಾಯಕರುಗಳು ತಮ್ಮ ಪಕ್ಷದಲ್ಲಿ ಗುರುತಿಸಿಕೊಳ್ಳದ ಮಹಿಳೆಯರ ಕುರಿತು ಇಂತಹ ಕೀಳು ಅಭಿರುಚಿಯ ಮಾತುಗಳನ್ನು ಆಗಾಗ ಆಡುತ್ತಿರುತ್ತಾರೆ. ಇದು ಅವರ ನೈಜ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ವಿಚಾರದಲ್ಲಿ ಪ್ರತಿಭಾ ರವರು ಎಂದೆಗುಂದದೆ ದೈರ್ಯವಾಗಿ ಹೋರಾಟ ಮುಂದುವರಿಸಬೇಕು. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಬಂಗೇರ ಹೇಳಿದ್ದಾರೆ.

ಮಾನಹಾನಿ ಪ್ರಕರಣ: ಆರೋಪಿಗಳನ್ನು ಬಂಧಿಸುವಲ್ಲಿ ಯಾಕೆ ಪೊಲೀಸ್ ಇಲಾಖೆ ವಿಫಲ? ಹೆಣ್ಣುಮಕ್ಕಳನ್ನು ಭಾರತದಲ್ಲಿ ಪೂಜನೀಯ ಭಾವನೆಯಲ್ಲಿ ನೋಡುತ್ತೇವೆ. ಆದರೆ ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಮಾನಹಾನಿಕಾರವಾಗಿ ಬರೆದಿರುವ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡಸುವಂತೆ ಮಂಗಳೂರು ಪೊಲೀಸ್ ಕಮೀಷನರ್‌ಗೆ ಖುದ್ದಾಗಿ ದೂರನ್ನೂ ನೀಡಲಾಗಿದೆ. ಹಲವಾರು ಸಂಘಟನೆಗಳಿಂದ ಆಗ್ರಹಗಳೂ ಕೇಳಿ ಬಂದಿವೆ. ಇಷ್ಟಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ದುರ್ಬಲ ಆಗಿದೆಯೇ? ಆರೋಪಿಯನ್ನು ಬಂಧಿಸಲು ಯಾಕೆ ಮೀನಮೇಷ ಎಣಿಸುತ್ತಾರೆ? ಈ ಪ್ರಕರಣವನ್ನು ಇಡೀ ಸಮಾಜ ಗಮನಿಸುತ್ತಿದೆ. ಈ ಪ್ರಕರಣ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂತಿದೆ. ಪ್ರತಿಭಾ ಕುಳಾಯಿ ಮಾತ್ರವಲ್ಲ ಯಾವುದೇ ಹೆಣ್ಣುಮಕ್ಕಳಿಗೆ ಈ ರೀತಿಯ ದೌರ್ಜನ್ಯವಾದರೆ, ಸೂಕ್ತ ಕ್ರಮ‌ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಈ ಬಗ್ಗೆ ಯಾಕೆ ಸರ್ಕಾರ ಮೌನ ವಹಿಸಿದೆ? ಸಣ್ಣಪುಟ್ಟ ಘಟನೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಪೊಲೀಸ್ ಇಲಾಖೆ ಈ ಪ್ರಕರಣದ ಬಗ್ಗೆ ಯಾಕೆ ಮೌನವಹಿಸಿದೆ?
ಎಂದು ಮಂಗಳೂರಿನ ವಕೀಲರು ಮತ್ತು ಸಾಮಾಜಿಕ ಚಿಂತಕರು ಆದ ಪದ್ಮರಾಜ್ ಆರ್. ರವರು ಪ್ರಶ್ನಿಸಿದ್ದಾರೆ.

"ಸಾಮಾಜಿಕ ಕಾರ್ಯಕರ್ತೆ ಹಾಗೂ ನಮ್ಮ ಬಿಲ್ಲವ ಸಮಾಜದ ಹೆಣ್ಣು ಮಗಳಾದ ಪ್ರತಿಭಾ ಕುಳಾಯಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಸಹ್ಯ ರೀತಿಯಲ್ಲಿ ಪೋಸ್ಟ್ ಮಾಡಿದ ಕಿಡಿಗೇಡಿಗಳನ್ನು ಬಂದಿಸಿ ಕಠಿಣ ಶಿಕ್ಷೆ ವಿಧಿಸಬೇಕು‌ ಎಂದು ಬೆಳಗಾವಿ ಬಿಲ್ಲವ ಸಂಘ ಸಬೆನಡೆಸಿ ಆಗ್ರಹಿಸಿದೆ.

ಹೆಣ್ಣನು ತಾಯಿಯಾಗಿ ಪೂಜಿಸುವ ಈ ಸಮಾಜದಲ್ಲಿ ವಿಕೃತ ಮನಸಿನ ಇಂತಹ ಕಾಮುಕರಿಗೆ ನೀಡುವ ಶಿಕ್ಷೆ, ನಾಗರಿಕ ಸಮಾಜಕ್ಕೆ ಪಾಠ ಆಗಬೇಕೆಂದು ಸಂಘದ ಸದಸ್ಯರು ಅಭಿಪ್ರಾಯ ಪಟ್ಟರು ಹಾಗೂ ಪ್ರತಿಭಾ ಕುಳಾಯಿ ಅವರೊಂದಿಗೆ ಸಂಘವು ಯಾವಾಗಲೂ ಇದೆ ಎಂದು ಈ ಸಂಧರ್ಭದಲ್ಲಿ ಭರವಸೆ ನೀಡಲಾಯಿತು.

ಈ ಕುರಿತು ಭಾರತೀಯ ಮಹಿಳಾ ಒಕ್ಕೂಟ (ಎನ್ಎಫ್ಐಡಬ್ಲ್ಯು) ಇದರ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್ ಪ್ರತಿಕ್ರಿಯಿಸಿದ್ದು ಅವರ ಹೇಳಿಕೆ ಈ ಕೆಳಗಿನಂತಿದೆ:

ಹೋರಾಟಗಾರ್ತಿ ಪ್ರತಿಭಾ ಕುಳಾಯಿಯವರ ತೇಜೋವಧೆ ಮಾಡಿದ ಆರ್‌ಎಸ್‌ಎಸ್ ಪ್ರಚಾರಕ ಶ್ಯಾಮ ಸುದರ್ಶನ ಭಟ್ ಹೊಸಮಲೆ ಅವರ ದುರ್ವರ್ತನೆಗೆ ಭಾರತೀಯ ಮಹಿಳಾ ಒಕ್ಕೂಟ ಖಂಡನೆ ವ್ಯಕ್ತಪಡಿಸುತ್ತದೆ.

ದಿನಾಂಕ 18 ರಂದು‌ ಸುರತ್ಕಲ್ ಅಕ್ರಮ‌ ಟೋಲ್‌ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹೋರಾಟಗಾರ್ತಿ ಪ್ರತಿಭಾ ಕುಳಾಯಿಯವರ ವಿರುದ್ದ ಕಹಳೆ ನ್ಯೂಸ್‌ನ ಪತ್ರಕರ್ತ ಶ್ಯಾಮ‌ಸುದರ್ಶನ್ ಭಟ್ ಹೊಸಮಲೆಯವರು ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಬರೆದು ತೇಜೋವಧೆ ಮಾಡಿರುವುದನ್ನು ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ದ.ಕ. ಜಿಲ್ಲಾ ಮಂಡಳಿ ತೀವ್ರವಾಗಿ‌ ಖಂಡಿಸುತ್ತದೆ.

ಸಮಾಜದಲ್ಲಿ ಮಹಿಳೆ ಪ್ರಗತಿ ಸಾಧಿಸುವುದನ್ನು, ಅನ್ಯಾಯದ ವಿರುದ್ಧ ದನಿ ಎತ್ತುವುದನ್ನು ಮತ್ತು ಸಾಮಾಜಿಕ ರಾಜಕೀಯ ವಿಷಯಗಳ ಕುರಿತು ತನ್ನ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ದಮನಿಸುವ ಷಡ್ಯಂತ್ರ ಈ‌ ಸರಕಾರದಿಂದ ನಡೆಯುತ್ತಲೇ ಇದೆ. ಈ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಬೇಕಾದ ಪತ್ರಕರ್ತರಲ್ಲಿ ಆರ್‌ಎಸ್‌ಎಸ್ ಗೆ ಸೇರಿದ ಕೆಲವರು ಹೆಣ್ಣನ್ನು ಕೀಳಾಗಿ ಕಂಡು ಆಕೆಯನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತ ತೇಜೋವಧೆ ಮಾಡಿರುವುದು ಅಕ್ಷಮ್ಯ. ಇಂಥ ನೀಚ ಮನಸ್ಥಿತಿಯ ಪತ್ರಕರ್ತನ ವಿರುದ್ಧ ಪೋಲಿಸರು ಸ್ವಯಂಪ್ರೇರಿತರಾಗಿ ದೂರು‌‌ ದಾಖಲಿಸಬೇಕು.
ಇಲ್ಲವಾದಲ್ಲಿ ಜಿಲ್ಲೆಯ ಮಹಿಳಾ‌ ಸಂಘಟನೆಗಳು ಇವನ ವಿರುಧ್ದ ಬೀದಿಗಿಳಿಯಬೇಕಾಗುತ್ತದೆ.

ಹೋರಾಟ ಮಾಡುವ‌ ಮಹಿಳೆಯರ ಮಾನಹಾನಿ ಮಾಡಿ ಸಾರ್ವಜನಿಕವಾಗಿ‌ ಆಕೆಯ ತೇಜೋವಧೆ ಮಾಡಿ ಅವರ‌ ಹೋರಾಟವನ್ನು ಅಂತ್ಯಗೊಳಿಸಬಹುದು ಎಂದು ಯಾರಾದರೂ ಅಂದುಕೊಂಡಿದ್ದಿರೆ ಅದು ಅವರ ಭ್ರಮೆ ಎಂದಷ್ಟೇ ನಾವು ಹೇಳಬೇಕಾದೀತು. ಜನಪರವಾದ ವಿಷಯಗಳಿಗೆ ಹೋರಾಟಕ್ಕಿಳಿದ ಮಹಿಳೆಯರು ಯಾರ ಗೊಡ್ಡು ತೇಜೋವಧೆಗೂ ಹೆದರುವವರಲ್ಲ.
ಸಂಸ್ಕೃತಿ ಎಂದು ಕೊಚ್ಚಿಕೊಳ್ಳುವ ಆರ್‌ಎಸ್‌ಎಸ್ ಗೆ ಸೇರಿದ ಶ್ಯಾಮಸುದರ್ಶನ ಭಟ್ ಹೋರಾಟನಿರತ ಮಹಿಳೆಯ ಬಗ್ಗೆ ಅಶ್ಲೀಲವಾಗಿ ಬರೆದು ಪ್ರಚಾರ ಮಾಡಿರುವುದನ್ನು ಭಾರತೀಯ ಮಹಿಳಾ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ತೀವ್ರವಾಗಿ ಖಂಡಿಸುತ್ತದೆ ಮತ್ತು ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸರಲ್ಲಿ ಮನವಿ ಮಾಡುತ್ತದೆ.

"ಟೋಲ್ ಗೇಟ್ ವಿರೋಧಿ ಹೋರಾಟದ ಜನ ಬೆಂಬಲ ಕಂಡು ಬಿಜೆಪಿ ಪರಿವಾರ ಎಷ್ಟು ಕ್ಷುದ್ರ ಆಗಿದೆ ಅಂದರೆ, ಹೋರಾಟದಲ್ಲಿ ಭಾಗಿಯಾಗಿರುವ ತುಳುವ ಹೆಣ್ಣು ಮಕ್ಕಳ ಕುರಿತು ಸಭ್ಯ ಮುಖವಾಡಗಳೂ ವಿಕಾರವಾಗಿ ಅರಚಾಡತೊಡಗಿವೆ. ಸಮಾಜ ಇದನ್ನೆಲ್ಲ ಗಮನಿಸುತ್ತಿದೆ" ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಹಲವು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ "ಪ್ರತಿಭಾ ಕುಳಾಯಿ ಅವರನ್ನು ಲೈಂಗಿಕ ದೌರ್ಜನ್ಯ ಭಾಷೆಯಲ್ಲಿ ತೇಜೋವಧೆ ಮಾಡಿರುವ ಶ್ಯಾಮ ಸುದರ್ಶನ್ ಭಟ್ ನನ್ನು ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಲು ಒತ್ತಾಯಿಸಿ" ( ತಾ: 22-10-2022 ) ಪೊಲೀಸ್ ಉಪ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ನಿಯೋಗದಲ್ಲಿ ಸಾಮಾಜಿಕ ಮುಖಂಡರಾದ ಮಂಜುಳಾ ನಾಯಕ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತೀ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜಾ ಪ್ರಮೀಳಾ ದೇವಾಡಿಗ, ಡಿವೈಎಫ್ಐ ಯುವತಿಯರ ಉಪ ಸಮಿತಿ ಮುಖಂಡರಾದ ಆಶಾ ಬೋಳೂರು, ದೀಕ್ಷಿತಾ ಜಲ್ಲಿಗುಡ್ಡೆ, ಸೌಮ್ಯ ಪಂಜಿಮೊಗರು ಮುಂತಾದವರು ಉಪಸ್ಥಿತರಿದ್ದರು.

ಈ ನಡುವೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪ್ರತಿಭಾರವರು "ಹೋಯ್ ಭಟ್ರೇ, ಎಲ್ಲಿದ್ದೀರಿ ಮಾರ್ರೆ... ಮೊಬೈಲ್ ಸ್ವಿಚ್ ಆಫ್ ಮಾಡಿ ಊರು ಬಿಟ್ಟರೆ ನಾನು ನಿಮ್ಮನ್ನು ಆರಾಮಾಗಿರಲು ಬಿಡುತ್ತೇನಾ ಭಟ್ರೇ, ನಿಮಗೆ ನನ್ನ "ನಾಗವಲ್ಲಿ" "ಕಾಂತಾರ" ಎಲ್ಲಾ ನೋಡ್ಬೇಕಲ್ಲ ಭಟ್ರೇ, ನೀವೇ ಊರು ಬಿಟ್ಟು ನಾಪತ್ತೆ ಆದ್ರೆ ಹೇಗೆ? ನನ್ನ ಬಗ್ಗೆ ನೀವೊಬ್ಬ ಪತ್ರಕರ್ತ ಅನ್ನೋದನ್ನು ಮರೆತು ಕಮೆಂಟ್ಸ್ ಮಾಡುವಾಗ ನೀವು ಊರು ಬಿಡೋ ಯೋಚನೆ ಮಾಡಿಲ್ಲ ಅನಿಸುತ್ತೆ. ನಿಮ್ಮ ಸ್ನೇಹಿತ ಕೆ.ಆರ್. ಶೆಟ್ಟಿ ಕೂಡಾ ಪೊಲೀಸ್ ಬಂಧನದ ಭಯದಲ್ಲಿ ನಾಪತ್ತೆಯಾಗಿದ್ದಾನೆ. ಇದೆಲ್ಲ ಬೇಕಿತ್ತಾ ಭಟ್ರೇ?" ಎಂದು ಪ್ರಶ್ನಿಸಿದ್ದಾರೆ ಹಾಗೂ "ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದವರನ್ನು ಕ್ಷಮೆ ಕೇಳುವವರೆಗೂ ಬಿಡುವುದಿಲ್ಲ. ಕಾನೂನಾತ್ಮಕವಾಗಿ ಏನೆಲ್ಲಾ ತಯಾರಿಗಳನ್ನು ಮಾಡಬೇಕು ಅದೆಲ್ಲದಕ್ಕೂ ತಯಾರಾಗಿದ್ದೇನೆ" ಎಂದು ಹೇಳಿದ್ದಾರೆ.

Advertisement
Advertisement
Recent Posts
Advertisement