Advertisement

ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟ ಕಣ್ಣು ಬಿದ್ದಿದೆ: ಸಿದ್ದರಾಮಯ್ಯ

Advertisement

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರತಿ ವಿದ್ಯಾರ್ಥಿಗಳ ಪೋಷಕರಲ್ಲಿ ತಲಾ ನೂರು ರೂಪಾಯಿ ದೇಣಿಗೆ ಸಂಗ್ರಹಿಸಲು ರಾಜ್ಯದ ಬಿಜೆಪಿ ಸರ್ಕಾರ ಆದೇಶಿಸಿರುವ ಕುರಿತು ಅದನ್ನು ವಿರೋಧಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು "ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟ ಕಣ್ಣು ಬಿದ್ದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಖರೀದಿಸಲು ದಾನಿಗಳ ನೆರವು ಪಡೆಯುವಂತೆ ಶಾಲಾ ಶಿಕ್ಷಕರಿಗೆ ಸುತ್ತೋಲೆಯ ಮೂಲಕ ಸೂಚಿಸಿದ್ದ ರಾಜ್ಯದ ಬಿಜೆಪಿ ಸರ್ಕಾರ ಇದೀಗ ಅದೇ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಶಾಲೆಯ ವಿದ್ಯುತ್ ಬಿಲ್ ಮತ್ತಿತರ ಪರಿಕರಗಳ ಖರೀದಿ ಮತ್ತು ನಿರ್ವಹಣೆಗೆ ಮಕ್ಕಳ ಪೋಷಕರಿಂದ ಮಾಸಿಕ ಫೀಸು ಪಡೆಯುವಂತೆ ಸೂಚಿಸಿರುವುದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಮೇಲಿನ ಹೇಳಿಕೆ ಇದೀಗ ಮಹತ್ವ ಪಡೆದಿದೆ.

ಈ ಕುರಿತು ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್‌ನ ಪೂರ್ಣಪಾಠ ಇಂತಿದೆ.

"ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟ ಕಣ್ಣು ಬಿದ್ದಿದೆ. ಕಮಿಷನ್ ಹೆಸರಲ್ಲಿ ರಾಜ್ಯದ ಖಜಾನೆ ಲೂಟಿ ಆಯಿತು, ಈಗ ಬಡ ಮಕ್ಕಳ ಪೋಷಕರ ಜೇಬಿಗೂ ಕತ್ತರಿ..!
ಬಿಜೆಪಿ ಸರ್ಕಾರಕ್ಕೆ ಇಂಥಾ ದೈನೇಸಿ ಸ್ಥಿತಿ ಬರಬಾರದಿತ್ತು" ಎಂದವರು ಲೇವಡಿ ಮಾಡಿದ್ದಾರೆ.

"ವಿದ್ಯಾರ್ಥಿಗಳಿಗೆ ಹಾಲು,‌ ಬಿಸಿ ಊಟ, ಸಮವಸ್ತ್ರ-ಶೂ, ವಿದ್ಯಾಸಿರಿ, ಹಾಸ್ಟೆಲ್ ಸೌಲಭ್ಯಗಳನ್ನು ನೀಡಿದ್ದು ನಾವು. ಅವರಿಂದ ಒಂದೊಂದನ್ನೇ ಕಿತ್ತುಕೊಳ್ಳುತ್ತಿರುವ ಸರ್ಕಾರ ಈಗ ಅವರಿಂದ ದುಡ್ಡು‌ಕಿತ್ತುಕೊಳ್ಳಲು ಹೊರಟಿದೆ. ವೇದಿಕೆ ಮೇಲೆ ನಿಂತು ಧಮ್, ತಾಕತ್ ಎಂದು ಬೊಬ್ಬಿರಿಯುವವರು ವಿದ್ಯಾರ್ಥಿಗಳ ನೆರವಿನ‌ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ ತಮ್ಮ ತಾಕತ್ ತೋರಿಸಲಿ" ಎಂದು ಸಿದ್ದರಾಮಯ್ಯನವರು ಸವಾಲು ಎಸೆದಿದ್ದಾರೆ.

"ನಮ್ಮ ಸರ್ಕಾರ ವಿದ್ಯಾಸಿರಿ, ಅರಿವು,‌ಶೂ ಭಾಗ್ಯ ವಿದೇಶಿ ವ್ಯಾಸಂಗಕ್ಕೆ ಆರ್ಥಿಕ ನೆರವು, ಶೈಕ್ಷಣಿಕ ಸಾಲ ಯೋಜನೆ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡಿದರೆ, ಈಗಿನ ಬಿಜೆಪಿ ಸರ್ಕಾರ ಓದುವ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿ ಅವರ ಬದುಕನ್ನು ಕತ್ತಲಿಗೆ ದೂಡುತ್ತಿದೆ" ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ

"ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಪೋಷಕರಿಂದ ಹಣ ಸಂಗ್ರಹಿಸುವಂತೆ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಮತ್ತು ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ಎಲ್ಲಾ ಶೈಕ್ಷಣಿಕ ಯೋಜನೆಗಳಿಗೆ ಪುನರ್ ಚಾಲನೆ ನೀಡಬೇಕು" ಎಂದವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement
Advertisement
Recent Posts
Advertisement