Advertisement

ಅಪರೇಷನ್ ಕಮಲಕ್ಕೆ ಕೋಟ್ಯಾಂತರ ರೂ. ಸುರಿದು ಸರ್ಕಾರ ರಚಿಸಿದವರು ಈಗ 40% ಲಂಚ ಪಡೆಯುತ್ತಿದ್ದಾರೆ: ಸಿದ್ದರಾಮಯ್ಯ

Advertisement

"ಭಾರತೀಯ ಜನತಾ ಪಕ್ಷದ ಸರ್ಕಾರ ಭ್ರಷ್ಟಾಚಾರದ ಮೂಲಕ ಶಾಸಕರನ್ನು ಖರೀದಿಸಿ ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದಿದೆ, ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಮ್ಮ ಪಕ್ಷದ ಹಾಗೂ ಜೆಡಿಎಸ್‌ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇಂದು ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ಈ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರು ಲಿಖಿತವಾಗಿ ಪತ್ರ ಬರೆದು ಪ್ರಧಾನಿಗಳಿಗೆ ಹೇಳಿದ್ದಾರೆ. ಇದೇ ವಿಚಾರವನ್ನು ನಾವು ಬೆಳಗಾವಿ ಮತ್ತು ಬೆಂಗಳೂರಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲು ನಿಲುವಳಿ ಸೂಚನೆಗೆ ಅವಕಾಶ ಕೇಳಿದರೂ ಕೂಡ ಸರ್ಕಾರ ಸಭಾಧ್ಯಕ್ಷರ ಮೇಲೆ ಒತ್ತಡ ಹಾಕಿ ಅವಕಾಶ ಸಿಗದಂತೆ ಮಾಡಿತು.
ಬಸವರಾಜ ಬೊಮ್ಮಾಯಿ ಅವರು ದಾಖಲಾತಿ ನೀಡಿ ಎಂದು ನಮಗೆ ಕೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಒಂದು ಕುಟಿಲ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರೆ.

"ಸಾಮಾನ್ಯವಾಗಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ದಾಖಲಾತಿ ಒದಗಿಸುವುದು ಕಷ್ಟ. ಆದರೂ ಗುತ್ತಿಗೆದಾರರ ಸಂಘದವರು 6-7-2021ರಲ್ಲಿ ಪ್ರಧಾನಿಗಳಿಗೆ ಪತ್ರ ಬರೆದು ದೂರಿದ್ದಾರೆ. ನ್ಯಾಯಾಂಗ ತನಿಖೆ ನಡೆಸುವುದಾದರೆ ಸೂಕ್ತ ದಾಖಲೆ ಒದಗಿಸಿವುದಾಗಿ ತಿಳಿಸಿದ್ದಾರೆ. ಆದರೆ ಮೋದಿಯವರು ಯಾವ ಕ್ರಮವನ್ನೂ ಕೈಗೊಂಡಿಲ್ಲ, ಸದನದಲ್ಲಿ ನಮಗೆ ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಕೂಡ ಅವಕಾಶ ನೀಡಿಲ್ಲ. ಒಂದು ನ್ಯಾಯಾಂಗ ಸಮಿತಿ ರಚನೆ ಮಾಡಿ ತನಿಖೆ ಮಾಡಲು ಇದಕ್ಕಿಂತ ದಾಖಲಾತಿ ಇನ್ನೇನು ಬೇಕಿದೆ? ತನಿಖೆ ಮಾಡುವ ಬದಲು ಬಿಜೆಪಿಯವರು ನಿಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರಲಿಲ್ವಾ ಎಂದು ಮರುಪ್ರಶ್ನೆ ಮಾಡುತ್ತಾರೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಆಗ ಅಧಿಕೃತವಾದ ವಿರೋಧ ಪಕ್ಷವಾಗಿದ್ದ ಬಿಜೆಪಿ ಯಾವ ವಿಚಾರಗಳನ್ನು ಪ್ರಸ್ತಾಪ ಮಾಡದೆ ಸುಮ್ಮನಿತ್ತು, ಕಳೆದ ಮೂರು ವರ್ಷಗಳಿಂದ ಸರ್ಕಾರ ನಡೆಸುತ್ತಿದೆ, ಸೂಕ್ತ ಸಾಕ್ಷ್ಯ ಇದ್ದರೆ ತನಿಖೆ ಮಾಡಿಸಬಹುದಿತ್ತು, ಅದನ್ನೂ ಮಾಡಿಲ್ಲ. ಈಗ ಬರೀ ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದೆ. ಇದೇ ಕಾರಣಕ್ಕೆ 2006 ರಿಂದ ಈ ವರೆಗಿನ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ಯಾವೆಲ್ಲಾ ಭ್ರಷ್ಟಾಚಾರ ನಡೆದಿದೆ ಅವೆಲ್ಲವನ್ನೂ ಒಂದು ಪ್ರತ್ಯೇಕ ತನಿಖಾ ಆಯೋಗ ರಚನೆ ಮಾಡಿ, ಅದಕ್ಕೆ ವಹಿಸಿಕೊಡಿ. ನಿಮ್ಮನ್ನು ನಾವು ಯಾರು ಹಿಡಿದುಕೊಂಡಿಲ್ಲ, ಈಗಲಾದರೂ ಅದನ್ನು ಮಾಡಿ ಎಂದು ಹೇಳಿದ್ದೆ, ಇದಕ್ಕೆ ಬಿಜೆಪಿಯವರು ಯಾರೂ ಉತ್ತರ ನೀಡಿಲ್ಲ" ಎಂದವರು ಹೇಳಿದ್ದಾರೆ.

"ಈ ಸರ್ಕಾರದ ಅವಧಿಯಲ್ಲಿ ನೇಮಕಾತಿಯಲ್ಲಿ, ವರ್ಗಾವಣೆಯಲ್ಲಿ, ಬಡ್ತಿ ನೀಡುವುದರಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಇದರ ಜೊತೆಗೆ ಯಾವುದೇ ಕಾಮಗಾರಿಗಳಲ್ಲಿ ಗುತ್ತಿಗೆ ಕೆಲಸ ಪಡೆಯುವಾಗ, ಕೆಲಸ ಮಾಡುವಾಗ, ಎನ್‌,ಒ,ಸಿ ಪಡೆಯುವಾಗ, ಬಿಲ್ ಪಾಸ್‌ ಆಗುವಾಗಲೂ ಲಂಚ ಕೊಡಬೇಕು. 40% ಇಂದ 50% ವರೆಗೆ ರಾಜ್ಯದಲ್ಲಿ ಲಂಚ ನಡೆಯುತ್ತಿದೆ. ಪಿಎಸ್‌ಐ ನೇಮಕಾತಿಯಲ್ಲಿ ಯಾವ ಅಕ್ರಮಗಳು ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. ಹಾಗಾದರೆ ಎಡಿಜಿಪಿ ಅಮೃತ್‌ ಪೌಲ್‌ ಅವರು ಜೈಲು ಸೇರಿದ್ದು ಯಾಕೆ? ಅವರೇನು ಜೈಲು ಹೇಗಿದೆ ಎಂದು ನೋಡಲು ಹೋಗಿದ್ದಾರ" ಎಂದವರು ಪ್ರಶ್ನಿಸಿದ್ದಾರೆ.

"ಬೆಳಗಾವಿಯ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡ ನಂತರ ಸಚಿವರಾಗಿದ್ದ ಈಶ್ವರಪ್ಪ ಸುಮ್ಮನೆ ರಾಜೀನಾಮೆ ನೀಡಿದ್ರಾ? ಮೃತ ವ್ಯಕ್ತಿ ತನ್ನ ಬಳಿ ಈಶ್ವರಪ್ಪನವರ ಕಚೇರಿಯಲ್ಲಿ 40% ಕಮಿಷನ್‌ ಕೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಡೆತ್‌ ನೋತ್‌ ಬರೆದು ಆತ್ಮಹತ್ಯೆಗೆ ಶರಣಾದ. ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಿದ್ರು. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರ ಇಲ್ಲ ಎಂದು ಆರೋಪಿ ಈಶ್ವರಪ್ಪ ಅವರಿಗೆ ಕ್ಲೀನ್‌ ಚಿಟ್‌ ನೀಡಿ 'ಬಿ ರಿಪೋರ್ಟ್‌' ಹಾಕಿದ್ದಾರೆ. ಉತ್ತರ ಕನ್ನಡದಲ್ಲಿ ಪರೇಶ್‌ ಮೇಸ್ತಾ ಸಾವಿಗೀಡಾದಾಗ ಕೊಲೆ ಆಗಿದೆ ಎಂದು ಗಲಾಟೆ ಮಾಡಿದ್ರು, ನಾನು ತಕ್ಷಣ ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದದ್ದು ಬಿಜೆಪಿ ಸರ್ಕಾರ. ಪ್ರಕರಣದ ಸಂಬಂಧ ಸಿಬಿಐ ನಿಂದ ಬಿ ರಿಪೋರ್ಟ್‌ ಬಂದಿದೆ. ಈಗ ಸಿದ್ದರಾಮಯ್ಯ ಅವರು ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಬಿಜೆಪಿಯವರು ಹೊಸ ರಾಗ ತೆಗಿದಿದ್ದಾರೆ. ಈ ಸಿಬಿಐ ಅಮಿತ್‌ ಶಾ ಅಧೀನದಲ್ಲಿ ಇರುವುದಲ್ವಾ? ಪ್ರಕರಣದ ಸಾಕ್ಷಿ ನಾಶ ಆಗಿ, ಸರಿಯಾದ ರೀತಿ ತನಿಖೆ ಆಗಿಲ್ಲ ಎಂದರೆ ಅಮಿತ್‌ ಶಾ ಅವರು ಅಸಮರ್ಥರು ಎಂದಲ್ವ? ಈ ಬಿಜೆಪಿಯವರು ಅಮಿತ್‌ ಶಾ ಅವರನ್ನೇ ದೂರಿದಂಗೆ ಆಗಲ್ವಾ? ಸಿಬಿಐ ಅವರು ಬಿ ರಿಪೋರ್ಟ್‌ ಹಾಕಿದ್ರೆ ಸಾಕ್ಷ್ಯ ನಾಶ ಮಾಡಿದ್ರು ಎನ್ನುತ್ತಾರೆ, ಅದೇ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್‌ ಹಾಕಿದ್ರೆ ಕ್ಷೀನ್‌ ಚಿಟ್‌ ಕೊಟ್ಟಿದ್ದಾರೆ ಎನ್ನುತ್ತಾರೆ. ಈ ರೀತಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ" ಎಂದವರು ಖೇದ ವ್ಯಕ್ತಪಡಿಸಿದ್ದಾರೆ.

"ಮುಖ್ಯಮಂತ್ರಿಗಳು ದೀಪಾವಳಿ ಹಬ್ಬಕ್ಕೆ ನೀಡಿರುವ ಉಡುಗೊರೆಯಲ್ಲಿ 1, 2, 3 ಲಕ್ಷ ಹಾಕಿ ಕಳಿಸಿದ್ದಾರೆ. ಇದು ಯಾವ ದುಡ್ಡು ಗೊತ್ತಾ? ಇದು ಭ್ರಷ್ಟಾಚಾರದ ಹಣ. ತಮ್ಮ ಭ್ರಷ್ಟಾಚಾರವನ್ನು ಬಯಲು ಮಾಡುತ್ತಾರೆ ಎಂದು ಲಂಚ ಕೊಟ್ಟಿರುವುದು. ಈ ಹಿಂದೆ ಪತ್ರಿಕೆಯೊಂದರಲ್ಲಿ ಪೊಲೀಸ್‌ ಇಲಾಖೆಯಲ್ಲಿ ಯಾವ ಹುದ್ದೆಯ ವರ್ಗಾವಣೆಗೆ ಎಷ್ಟು ಎಂದು ಹೊಟೇಲ್‌ ಗಳ ತಿಂಡಿ ಮೆನ್ಯುವಿನಂತೆ ಲಂಚ ನಿಗದಿ ಮಾಡಿರುವುದು ಪ್ರಕಟವಾಗಿತ್ತು, ಈ ರೀತಿ ಬರೆಯಬಾರದು ಎಂಬುದು ಅವರ ಉದ್ದೇಶ. ಆಗ ಪ್ರಕಟವಾದ ಸುದ್ದಿ ಈಗ ಎಂಟಿಬಿ ನಾಗರಾಜ್‌ ಅವರಿಂದ ಸಾಬೀತಾಗಿದೆ.
ಎಂಟಿಬಿ ನಾಗರಾಜ್‌ ಅವರು ನಂದೀಶ್‌ ಎಂಬ ಪೊಲೀಸ್‌ ಸಿಬ್ಬಂದಿಯ ಅಂತಿಮ ದರ್ಶನ ಪಡೆಯಲು ಹೋದ ಸಂದರ್ಭದಲ್ಲಿ ತನ್ನ ಪಕ್ಕದಲ್ಲಿದ್ದ ಪೊಲೀಸರೊಬ್ಬರೊಂದಿಗೆ ಮಾತನಾಡುತ್ತಾ, '70-80 ಲಕ್ಷ ಕೊಟ್ಟು ಕೆ.ಆರ್‌ ಪುರಂ ಪೊಲೀಸ್‌ ಠಾಣೆಗೆ ವರ್ಗಾವಣೆ ಪಡೆದು ಬಂದರೆ ಹೃದಯಾಘಾತ ಆಗದೆ ಇರುತ್ತದಾ?' ಎಂದು ಹೇಳಿದ್ದಾರೆ. ಇದು ಸಾಕ್ಷ್ಯ ಅಲ್ಲವಾ? ಇದಕ್ಕಿಂತ ಬೇರೆ ಸಾಕ್ಷಿ ಇನ್ನೇನು ಬೇಕು? ಈಗಿನ ಸರ್ಕಾರದಲ್ಲಿ ನಡೆಯುತ್ತಿರುವುದನ್ನು ಎಂಟಿಬಿ ಹೇಳಿದ್ದಾರೆ. ಈ ಸರ್ಕಾರ ಬಂದಮೇಲೆ ಸಂತೋಷ್‌ ಪಾಟೀಲ್‌, ನಂದೀಶ್‌ ಸತ್ತಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ನೇರ ಹೊಣೆ" ಎಂದವರು ಆರೋಪಿಸಿದ್ದಾರೆ.

"ಗೃಹ ಸಚಿವರು ತನ್ನನ್ನು ತಾನು ಆರ್‌,ಎಸ್‌,ಎಸ್‌ ನಿಂದ ಬಂದವ, ತಮ್ಮ ಇಲಾಖೆಯಲ್ಲಿ ಯಾವ ಹಗರಣ ನಡೆದಿಲ್ಲ ಎನ್ನುತ್ತಾರೆ. ಇವೆಲ್ಲ ಹಗರಣಗಳಲ್ಲವಾ? ಮುಖ್ಯಮಂತ್ರಿಗಳು ಪತ್ರಕರ್ತರಿಗೆ ಲಕ್ಷಾಂತರ ರೂಪಾಯಿ ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರಲ್ವಾ ಇವರಿಗೆ ಮುಖ್ಯಮಂತ್ರಿಯಾಗಿ ತನ್ನ ಹುದ್ದೆಯಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ? ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮೇಲೆ ಮೊಕದ್ದಮೆ ಹೂಡಬೇಕು ಮತ್ತು ಈ ಇಬ್ಬರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.
ನಂದೀಶ್‌ ಅವರು 70-80 ಲಕ್ಷ ಸಾಲ ಮಾಡಿ ಲಂಚ ನೀಡಿದ್ದಾರೆ. ಈ ಹಣವನ್ನು ಯಾರಿಗೆ ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕೋ? ಬೇಡ್ವೋ? ಈ ಹಣ ಮುಖ್ಯಮಂತ್ರಿಗಳಿಗೆ ಹೋಗಿದಿಯಾ? ಗೃಹ ಸಚಿವರಿಗೆ ಹೋಗಿದೆಯಾ? ಅಥವಾ ಸ್ಥಳೀಯ ಶಾಸಕರಿಗೆ ನೀಡಿದ್ದಾರ? ಎಂಬುದು ಗೊತ್ತಾಗಬೇಕು ತಾನೆ? ಸಾಲ ಮಾಡಿ ಲಂಚ ನೀಡಿದ್ದಾರೆ, ಇನ್ನೊಂದು ಕಡೆ ಕೆಲಸದಿಂದ ಅಮಾನತು ಮಾಡಿದ್ದಾರೆ, ಇದರಿಂದ ಹೃದಯಾಘಾತ ಆಗಿದೆ. ಎಂಟಿಬಿ ನಾಗರಾಜ್‌ ಅವರಿಗೆ ನಂದೀಶ ಅವರು ಚೆನ್ನಾಗಿ ಪರಿಚಯವಿರಬೇಕು ಅನ್ನಿಸುತ್ತೆ, ಇಲ್ಲದಿದ್ದರೆ ಅವರೇಕೆ ಅಂತಿಮ ದರ್ಶನಕ್ಕೆ ಹೋಗುತ್ತಿದ್ದರು? ಎಂಟಿಬಿ ನಾಗರಾಜ್‌ ಅವರ ಬಳಿ ತಾನು 70-80 ಲಕ್ಷ ಕೊಟ್ಟು ಕೆ,ಆರ್‌ ಪುರಂ ಠಾಣೆಗೆ ಬಂದಿದ್ದೀನಿ ಎಂದು ಹೇಳಿರಬಹುದು. ಇದನ್ನು ಎಂಟಿಬಿ ಬಾಯಿ ಬಿಟ್ಟಿದ್ದಾರೆ. ಇದು ಪ್ರಬಲವಾದ ಸಾಕ್ಷಿ ಕೂಡ ಹೌದು" ಎಂದು ಸಿದ್ದರಾಮಯ್ಯ ನವರು ವಿವರಿಸಿದ್ದಾರೆ.

"20-10-2022ರಲ್ಲಿ ಬಸವರಾಜ್‌ ಅಮರಗೋಳ ಎಂಬ ಗುತ್ತಿಗೆದಾರ ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಪತ್ರ ಬರೆದಿದ್ದಾರೆ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸೇರಿದಂತೆ ಹಲವು ಕಡೆ ಉಪಕರಣಗಳನ್ನು ನೀಡಿದ್ದಾರೆ. ಇದರಲ್ಲಿ 20% ಮಾತ್ರ ಬಿಲ್‌ ಅನ್ನು ನೀಡಿದ್ದಾರೆ. ಈ ಬಗ್ಗೆ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ, ಎರಡು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ, ಇದರಿಂದ ಯಾವ ಉಪಯೋಗವೂ ಆಗಿಲ್ಲ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇವರ ಬಳಿ 30 – 40% ಲಂಚ ಇದ್ದರೆ ಮಾತ್ರ ಬಿಲ್‌ ಕೊಡಲು ಸಾಧ್ಯ ಎಂದು ಹೇಳಿದ್ದಾರೆ. ಪಾಪ ಇಂಥವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿಗೆ ತಂದಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಮುಖ್ಯಮಂತ್ರಿಗಳೇ ಕರೆ ಮಾಡಿ ಈ ದೂರಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ.
ಈ ಎಲ್ಲಾ ವಿಚಾರಗಳನ್ನು ಬಸವರಾಜ ಅಮರಗೋಳ ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ. ಇಂಥಾ ಭ್ರಷ್ಟ ಸರ್ಕಾರ ಯಾವಾಗಲಾದರೂ ಬಂದಿತ್ತಾ" ಎಂದವರು ಪ್ರಶ್ನಿಸಿದ್ದಾರೆ.

"ಮುಖ್ಯಮಂತ್ರಿಗಳು ಕೊಟ್ಟ ಹಣವನ್ನು ಮಾಧ್ಯಮ ಮಿತ್ರರು ವಾಪಾಸು ಕೊಟ್ಟಿದ್ದೀರ, ಸಂತೋಷ. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸವನ್ನು ಮಾಧ್ಯಮ ಮಿತ್ರರು ಮಾಡಬೇಕು. ನಾವು ಹೇಳಿದರೆ ಸರ್ಕಾರ ನಮ್ಮ ಬಳಿ ದಾಖಲೆ ಕೇಳುತ್ತದೆ, ತನಿಖೆಯನ್ನೂ ಮಾಡುವುದಿಲ್ಲ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಆಗಬೇಕು. ನಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿದ್ದರೆ ಅದನ್ನೂ ತನಿಖೆ ನಡೆಸಲಿ.
ಆದರೆ ಈ ರೀತಿ ಅಮಾಯಕ ಜನರನ್ನು ಕೊಲ್ಲುವ ಕೆಲಸ ಮಾಡಬಾರದು, ಇದಕ್ಕಿಂತ ಅಧಿಕಾರ ಬಿಟ್ಟು ತೊಲಗುವುದು ಒಳ್ಳೆಯದು" ಎಂದವರು ಹೇಳಿದರು.

"ನಾನು ವಿವೇಕ ಅವರ ಬಳಿ ಒಂದೂವರೆ ಕೋಟಿ ಸಾಲ ಪಡೆದಿದ್ದು ನಿಜ. ಅದನ್ನು ಇನ್ನೂ ತೀರಿಸಿಲ್ಲ. ಅವರು ನನ್ನ 40 ವರ್ಷಗಳ ಗೆಳೆಯ. ನಿವೇಶನ ಖರೀದಿಗೆ ಸಾಲ ಮಾಡುವುದು ತಪ್ಪಾ? ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಆದರೆ, ಸಾಲ ಪಡೆದದ್ದಕ್ಕೂ ನೇಮಕ ಮಾಡಿದ್ದಕ್ಕೂ ಸಂಬಂಧ ಇಲ್ಲ
ಇದನ್ನು ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು ಬಸವರಾಜ ಬೊಮ್ಮಾಯಿ ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ. ರಾಜ್ಯದಲ್ಲಿ ಸರ್ಕಾರದ ಭ್ರಷ್ಟಾಚಾರದಿಂದ ಜನ ಸಾಯುತ್ತಿದ್ದಾರೆ, ಇದರ ಬಗ್ಗೆ ತನಿಖೆ ಮಾಡಿಸಿ ಎಂದರೆ ಸಿದ್ದರಾಮಯ್ಯ ಸಾಲ ಪಡೆದಿದ್ದು ತನಿಖೆ ಮಾಡಿಸುತ್ತೇವೆ ಎನ್ನುತ್ತಾರೆ. ಸಾಲ ಮಾಡುವುದು ಅಪರಾಧವಾ" ಎಂದು ಸಿದ್ದರಾಮಯ್ಯ ನವರು ಪ್ರಶ್ನಿಸಿದ್ದಾರೆ.

"ಮಾಧ್ಯಮ ಮಿತ್ರರಿಗೆ ಮುಖ್ಯಮಂತ್ರಿಗಳು 1, 2 ಲಕ್ಷ ಉಡುಗೊರೆ ನೀಡಿರುವುದು ಸತ್ಯವಾ? ಅಥವಾ ಸುಳ್ಳಾ? ಈ ಹಣ ಎಲ್ಲಿಂದ ಬಂತು ಎಂದು ತನಿಕೆಯಾಗೋದು ಬೇಡ್ವಾ? ಸುಪ್ರೀಂ ಕೋರ್ಟ್‌ ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ ಮಾಡಿಸಿ. ಎಲ್ಲಾ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಆಗಲಿ. ನಮ್ಮ ಸರ್ಕಾರದ ಅವಧಿಯಲ್ಲಿ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ, ಅವುಗಳ ವರದಿ ಬಂದು ಸತ್ಯ ಏನೆಂದು ಈಗ ಗೊತ್ತಾಗಿದೆ. ಈಗಿನ ಸರ್ಕಾರದ ಭ್ರಷ್ಟಾಚಾರದ ತನಿಖೆಯನ್ನೂ ಮಾಡಿಸಿ. ಹಿಂದಿನ ಸರ್ಕಾರಗಳ ಬಗ್ಗೆ ತನಿಖೆ ಮಾಡಿಸಿ. ಸತ್ಯ ಗೊತ್ತಾಗಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇದರ ಜೊತೆಗೆ ಒಂದು ನ್ಯಾಯಾಂಗ ಸಮಿತಿ ರಚನೆ ಮಾಡಿ ಅದರ ಅಡಿಯಲ್ಲಿ ತನಿಖೆಯೂ ಆಗಬೇಕು. ಇವು ನಮ್ಮ ಒತ್ತಾಯಗಳು" ಎಂದವರು ಹೇಳಿದರು.

"ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಸಿಕ್ಕಿದ್ದು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಆದಮೇಲೆ. ಇದನ್ನು ಮಾಡಿದ್ದು ರಾಜೀವ್‌ ಗಾಂಧಿ ಅವರು. ಇದನ್ನು ಜಾರಿಗೆ ತಂದವರು ನರಸಿಂಹರಾಯರು. ಮೀಸಲಾತಿ ನೀಡಿದ್ದನ್ನು ವಿರೋಧ ಮಾಡಿದ್ದು ರಾಮಾ ಜೋಯಿಸ್‌, ಆಗ ಬಸವರಾಜ ಬೊಮ್ಮಾಯಿ ಎಲ್ಲಿಗೆ ಹೋಗಿದ್ರು? ರಾಮಾ ಜೋಯಿಸ್‌ ಅವರು ಇದು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾಗ ಬಸವರಾಜ ಬೊಮ್ಮಾಯಿ ಎಲ್ಲಿದ್ರು? ಈ ರಾಮಾ ಜೋಯಿಸ್‌ ಅವರು ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದವರಲ್ವಾ? ಬಸವರಾಜ ಬೊಮ್ಮಾಯಿ ಹೀಗೆ ಸುಮ್ಮನೆ ಏನೋ ಹೇಳುವುದಲ್ಲ, ಇತಿಹಾಸ ಏನು ಎಂಬುದನ್ನು ತಿಳಿದುಕೊಂಡು ಮಾತನಾಡಲಿ" ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

Advertisement
Advertisement
Recent Posts
Advertisement